ಆಧ್ಯಾತ್ಮಿಕ ಕೋಟೆಗೆ ರವಿಯೇ ಚಿತ್ರಕಾರ
ಪ್ರತಿಯೊಂದು ಪರಿಸ್ಥಿತಿಗಳಿಂದ ಕೆಲವರಿಗೆ ಒಮ್ಮೆ ಹೊರಬಂದು ಬಿಡುವ ಎಂದೆನಿಸಿ ಅದರಿಂದ ಹೊರಬಂದು ನೋಡಿದರೆ ಆ ಪರಿಸ್ಥಿತಿ ಈ ಹಿಂದೆಗಿಂತ ಇನ್ನೂ ಕಠಿಣವಾಗಿ ಕಾಣುತ್ತದೆ. ಇನ್ನೂ ಕೆಲವರಿಗೆ ತಾವಿರುವ ಸ್ಥಿತಿಯೇ ಮೆಚ್ಚುಗೆಯಾಗುತ್ತದೆ. ಅದೇ ರೀತಿ ನೀರಿನೊಳಗಿರುವ ಮೀನಿಗೆ ಹೊರಗಿನ ಪ್ರಪಂಚವನ್ನು ನೋಡುವ ತವಕ. ಅದೇ ಉತ್ಸುಕತೆಯಿಂದ ಹೊರಚಿಮ್ಮಿದ ಮೀನಿಗೆ ತಾನಿದ್ದ ಪರಿಸ್ಥಿತಿಯೇ ಚೆಂದ ಈ ಪ್ರಪಂಚದಲ್ಲಿ ಬದುಕಲು ತನ್ನಿಂದ ಸಾಧ್ಯವಿಲ್ಲ ಎನ್ನುವ ಚಿತ್ರಣದೊಂದಿಗೆ ಮಾನವ ದಿನನಿತ್ಯ ತನ್ನದಾಗಿರುವುದನ್ನು ಬಿಟ್ಟು, ತನ್ನದಲ್ಲದ್ದಕ್ಕೆ ಪರದಾಡುವುದನ್ನು ಮಾರ್ಮಿಕವಾಗಿ ತಮ್ಮ ಚಿತ್ರದ ಮೂಲಕ ಹೇಳುತ್ತಾರೆ ಕೋಟೆಗದ್ದೆ ರವಿ.
ಮಹಾತ್ಮಗಾಂಧಿ ರಸ್ತೆಯ ನವರತನ್ ಗ್ಯಾಲರಿಯಲ್ಲಿ ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಶೀರ್ಷಿಕೆಯಡಿ ನಡೆದ ಕಲಾಪ್ರದರ್ಶನದಲ್ಲಿ ತಮ್ಮ ಆಧ್ಯಾತ್ಮಿಕ ನಿಲುವನ್ನು ಬಣ್ಣಗಳಲ್ಲಿ ತುಂಬಿಟ್ಟು, ಬಂದ ಕಲಾವಿದರನ್ನು ಮಾತಿನಿಂದ ಮತ್ತು ಮುಖದಲ್ಲಿ ನಗು ಹೊತ್ತು ಸ್ವಾಗತಿಸುವ ರವಿ ಕುಂಚಗಳಿಗೆ ಭಾಷೆ ಕಲಿಸಿದ ಕಲಾವಿದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿಕ್ಕಹಳ್ಳಿಯಿಂದ ಬಂದು ಇಂದು ನಗರ ಮಾತ್ರವಲ್ಲದೆ ರಾಜ್ಯ, ದೇಶದಾದ್ಯಂತ ಹೆಸರುವಾಸಿವಾಗಿದ್ದಾರೆ. ಬಾಲ್ಯದಿಂದಲೇ ಧ್ಯಾನ, ಪುರಾಣ, ಮಹಾಕಾವ್ಯಗಳು, ಆಧ್ಯಾತ್ಮಿಕತೆಯಲ್ಲಿ ಅಪಾರ ಒಲವು ಹೊಂದಿದ್ದ ಇವರು ತಮ್ಮ ಕುಂಚ, ಬಣ್ಣಗಳ ಆಟದಲ್ಲೂ ಆಧ್ಯಾತ್ಮಿಕತೆಯಿಂದಲೇ ಚೆಂಡಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಇದುವರೆಗೆ ದೆಹಲಿ, ಮುಂಬೈ, ಕೋಲಾರ ಮುಂತಾದ ದೇಶದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನೀಡುತ್ತಾ ಹಲವು ಕಲಾರಸಿಕರಿಗೂ ತಮ್ಮ ಆಧ್ಯಾತ್ಮದ ಬೀಜವನ್ನೂ ಬಿತ್ತಿದ್ದಾರೆ. 2017ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದ ಚಿತ್ರಕಲಾ ಕಾರ್ಯಗಾರದಲ್ಲಿ ಭಾತರದಿಂದ ಆಯ್ಕೆಯಾದ 15 ಕಲಾವಿದರಲ್ಲಿ ಒಬ್ಬರಾಗಿ ಹಾಗೂ ಕರ್ನಾಟಕದಿಂದ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾಗಿ ಜೈಲಿನಲ್ಲಿದ್ದ ಕಲಾವಿದರಾಗಿದ್ದ ಖೈದಿಗಳಿಗೂ ತಮ್ಮ ಚಿತ್ರಕಲೆಯನ್ನು ಧಾರೆ ಎರೆದಿದ್ದಾರೆ. ಇದುವರೆಗೆ ಕಲಾಪ್ರದರ್ಶನ ನೀಡಿದ ಕಡೆಯಲ್ಲೆಲ್ಲಾ ಸನ್ಮಾನಗಳನ್ನು ಮುಡಿಗೇರಿಸಿಕೊಂಡರೂ ತುಳುಕುದ ತುಂಬಿದ ಕೊಡದಂತೆ ಸಧಾ ಚೈತನ್ಯಯುಕ್ತವಾಗಿರುವ ಕಲಾರಾಧಕ.
ಪ್ರಸ್ತುತ ಬೆಂಗಳೂರಿನ ಫಿಡಿಲಿಟಸ್ ಆರ್ಟ್ ಗ್ಯಾಲರಿಯಲ್ಲಿ ಮುಖ್ಯನ ಕಲಾವಿದನಾಗಿ, ಎಲ್ಲಾ ಯುವ ಕಲಾವಿದರಿಗು ಮುಕುಟಮಣಿಯಂತಿದ್ದಾರೆ. 2013ರಲ್ಲಿ ದೇವರಾಜು ಅರಸ್ ಭವನದಲ್ಲಿ ಪ್ರಾರಂಭವಾದ ಇವರ ಕಲಾಪ್ರದರ್ಶನ ಒಂದಾದ ಮೇಲೊಂದರಂತೆ ಫಿಡಿಲಿಟಸ್ ಗ್ಯಾಲರಿಯ ನೇತೃತ್ವದಲ್ಲಿ ಹೊಸ ಮಾದರಿಗಳಲ್ಲಿ ಮುಂದುವರಿಯುತ್ತಲೇ ಇದೆ. ಮಿಸ್ಟಿಕ್ ಲೋಟಸ್, ಸ್ಪಿರಿಚುವಲ್ ಸ್ಟೋಕ್, ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಆಧ್ಯಾತ್ಮಿಕ ಶೀರ್ಷಿಕೆಗಳಡಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.
ಬಾಲ್ಯದಲ್ಲಿ ಶಾಲೆಯಲ್ಲಿ ಗುರುಗಳು ಹೇಳಿಕೊಡುತ್ತಿದ್ದ ಚಿತ್ರಕಲೆಯನ್ನು ಶ್ರದ್ಧೆಯಿಂದ ಕಲಿತು, ಸ್ಪರ್ಧೆಯಲ್ಲಿ ಬಹುಮಾನ ದೊರೆತಾಗ ಇದರಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕು, ತಾನೊಬ್ಬ ಕಲಾವಿದನಲ್ಲದೆ ಬೇರೇನು ಆಗಲು ಸಾಧ್ಯವಿಲ್ಲ ಎಂಬ ಅಚಲ ನಿರ್ಧಾರದೊಂದಿಗೆ ಪಿಯುಸಿ ಶಿಕ್ಷಣ ಮುಗಿದ ಕೂಡಲೆ ಮೈಸೂರಿನ ಡಿಎಮ್‍ಎಸ್ ಲಲಿತಕಲಾ ಮಹಾಸಂಸ್ಥಾನದಲ್ಲಿ ಚಿತ್ರಕಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಾರೆ. ಪ್ರಾರಂಭದಲ್ಲಿ ಕೊಡಗಿನ ವಿರಾಜ್‍ಪೇಟೆಯ ಮಹೀಂದ್ರ ಆ್ಯಂಡ್ ಮಹೀಂದ್ರ ಹಾಲಿಡೇ ರೆಸಾರ್ಟ್‍ನಲ್ಲಿ ಕಲಾಗಾರನಾಗಿ ಬಂದ ಅತಿಥಿಗಳ ಭಾವಚಿತ್ರಗಳನ್ನು ಬರೆದು, ಅಲ್ಲೊಂದು ಕಲಾ ಗ್ಯಾಲರಿಯನ್ನೂ ಪ್ರಾರಂಭಿಸಿ ತಮ್ಮ ಚಿತ್ರಕಲೆಗೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ನಂತರದಲ್ಲಿ ಫಿಡಿಲಿಟಸ್‍ನ ಸ್ಥಾಪಕ ಅಚ್ಚುತ್‍ಗೌಡ ಅವರ ಪ್ರೇರಣೆ, ಪ್ರೋತ್ಸಾಹದಿಂದ ಬೆಂಗಳೂರಿನಲ್ಲಿ ಕಲಾಪ್ರದರ್ಶನಗಳನ್ನು ಪ್ರಾರಂಭಿಸಿದರು.
ಗ್ರಾಹಕರಿಗೆ ಬೇಕಾದ ವಿಷಯಗಳನ್ನು ಚಿತ್ರರೂಪಕ್ಕೆ ತರುತ್ತಿದ್ದ ಕೋಟೆಗದ್ದೆ ರವಿ ಇಂದು ತಮ್ಮದೇ ಹೊಸ ಚಂತನೆ, ಆಶಯಗಳನ್ನು ಕುಂಚದಿಂದ ಕ್ಯಾನ್ವಾಸ್‍ನ ಮೇಲೆ ಬರೆಯುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಮೇಲೆ ಸ್ವಯಂ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಕಲೆಗೆ ಯಾವುದೇ ಗುರುಗಳನ್ನು ನಿಗಧಿಪಡಿಸಿಕೊಳ್ಳದೆ, ನಿರಂತರವಾಗಿ ಕಲೆಯ ತಪಸ್ಸು ಮಾಡುತ್ತಲೇ ಇದ್ದಾರೆ. ಇಂದಿಗೂ ಬಿಚ್ಚು ಮನಸ್ಸಿನಿಂದ ಕಲಾಪ್ರಕಾರಗಳಿಗೆ ತಮ್ಮನ್ನು ತೆರೆದುಕೊಂಡು, ಕಲಿಕೆ ನಿರಂತರ ಪ್ರಕ್ರಿಯೆ ಎಂಬಂತೆ, ಚಿಕ್ಕವಯಸ್ಸಿನಿಂದ ಬೇರೆ ಕಲಾವಿದರ ಚಿತ್ರಗಳನ್ನು ನೋಡಿ ಅದೇ ಥರಾ ಚಿತ್ರಗಳನ್ನು ಮಾಡುತ್ತಾ ಬಂದ ಇವರು ಎಲ್ಲಾ ಹಿರಿಯ ಕಲಾವಿದರನ್ನು ತಮ್ಮ ಗುರುಗಳಾಗಿ ನೆಚ್ಚಿಕೊಂಡ ಏಕಲವ್ಯ.
ಎಲ್ಲಾ ವೃತ್ತಿಗೂ ಒಂದು ನಿಗಧಿತ ಸಮಯವಿದೆ. ಕಲಾವಿದನಿಗೆ ಸಮಯದ ಪರಿಧಿ ಇಲ್ಲ. ಕಲಾವಿದನಿಗೆ ಕಲೆಯೆ ಜೀವನವಾಗಬೇಕು ಎನ್ನುವ ನಿಟ್ಟಿನಲ್ಲಿ ಹಳ್ಳಿಯಿಂದ ಬಂದ ಇವರಿಗೆ ಅದನ್ನು ಸಾಧಿಸುವುದು ಹೇಗೆ ಎಂಬುದು ತಿಳಿದಿರಲಿಲ್ಲ. ಆದರೆ ಫಿಡಿಲಿಟಸ್ ಸಂಸ್ಥೆ ಸಹಾಯದಿಂದ ಒಬ್ಬ ವೃತ್ತಿ ಕಲಾವಿದನಾಗಿ ಇಂದು ಹಲವಾರು ಗಣ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರತಿಯೊಬ್ಬ ಕಲಾವಿದನೂ, ಒಬ್ಬ ಕತೆಗಾರ ತನ್ನ ಪರಿಸರವನ್ನು ಅಕ್ಷರಗಳಲ್ಲಿ ತರಲು ಪ್ರಯತ್ನಿಸುವಂತೆ, ತನ್ನ ಆಲೋಚನೆಗಳನ್ನು ಬಣ್ಣಗಳಲ್ಲಿ ಮೂಡಿಸಲು ಪ್ರಯತ್ನಿಸುತ್ತಾನೆ. ಎಲ್ಲಾ ಧರ್ಮಗಳಿಗೂ ತಿರುಳು ಆಧ್ಯಾತ್ಮಿಕತೆ. ಆ ಆಧ್ಯಾತ್ಮಿಕತೆಯನ್ನೇ ಮೆಚ್ಚಿ ಅವುಗಳಿಗೆ ಬಣ್ಣಗಳಿಂದ ಸಾಂಕೇತಿಕ ರೂಪ ನೀಡಿ ರಿಯಲಿಸ್ಟಿಕ್ ಚಿತ್ರಗಳ ಬದಲಾಗಿ ಸಮಕಾಲೀನ ಶೈಲಿಯ ಮೂಲಕ ತಮ್ಮದೇ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
ಚಿತ್ರಕಲೆ ನಾವು ಮಾಡಿದ್ದಾಗಿರಬಾರದು, ನಮ್ಮ ಕೈಯ್ಯಲ್ಲಿರುವ ಕುಂಚದಿಂದ ಸಹಜವಾಗಿಯೇ ಅಲ್ಲೊಂದು ಚಿತ್ರ ಸೃಷ್ಟಿಯಾಗಬೇಕು. ಕಷ್ಟ ಪಟ್ಟು ಕಲ್ಪನೆ ಮಾಡಿ ಅದನ್ನು ಬಿಡಿಸುವ ಬದಲು, ತಾನಾಗಿಯೇ ಚಿತ್ರ ಸೃಷ್ಟಿಯಾಗುವುದೇ ಸುಂದರ ಎಂದುಕೊಂಡು, ಟೆಕ್ಸ್ಚರ್ ಮತ್ತು ಮ್ಯೂಸೆಸ್ ಶೀರ್ಷಿಕೆಯಲ್ಲಿ, ಕ್ಯಾನ್ವಾಸ್ ಮೇಲೆ ಚೆಲ್ಲಿದ ಬಣ್ಣಗಳನ್ನೇ ದಿಟ್ಟಿಸಿ ನೋಡುತ್ತಾ ಅದರೊಳಗಿಂದ ಹೊಸ ಚಿತ್ರವನ್ನು ಹೊರತೆಗೆದು ತಮ್ಮದೆ ಹೊಸ ಚಿತ್ರಣ ಶೈಲಿಯನ್ನು ಸೃಷ್ಟಿಸಿದ ಮಾಂತ್ರಿಕ ಕಲಾವಿದ ಕೋಟೆಗದ್ದೆ ರವಿ.
- ಕೋಟೆಗದ್ದೆ ರವಿ, ಚಿತ್ರಕಲಾವಿದ








No comments:
Post a Comment