ಚಳಿಯಲಿ ಜೊತೆಯಲಿ
ಇನ್ನು ನಮ್ಮಂತಹ ಕಾಲೇಜು ಹುಡುಗರಿಗಂತು ಕೇಳಲೇ ಬೇಕಿಲ್ಲ, ಚಳಿಗಾಲವೆಂದರೆ ಹೆಚ್ಚು ಮೋಜಿನ ಮಸ್ತಿನ ಕಾಲ. ಸೂರ್ಯ ಹೊರಗಿಣಿಕಿದಂತೆ ಮೋಡದ ಮೇಲೆ ಬಂಗಾರದ ಗೆರೆಗಳು ಮೂಡಿದರೂ, ಅಮ್ಮ ಬಂದು ಸಾವಿರ ಬಾರಿ ಎದ್ದೇಳು ಎಂದರೂ ಎದ್ದೇಳುವ ಮನಸ್ಸು ಮಾಡದ ಕಾಲ. ಹೊದಿಕೆಯೊಳಗೆ, ಪುಳಕ ನೀಡುವಂತಹ, ಚಿಗುರುವ ಕನಸುಗಳಲ್ಲೇ ಮೈಮರೆಯುವ ಕಾಲ. ಎದ್ದು ಕಾಲೇಜು ತಲುಪಿದರೂ ಮೈಬಿಡದ ಚಳಿ, “ಯಾರೋ ಈ ಚಳಿಗೆ ಪಾಠ ಕೇಳೋದು, ಅದೂನೂ ಫಸ್ಟ್ ಅವರ್ ಯಾರೋ ಕೂರೋದು,” ಎನ್ನುತ್ತಾ ಗೆಳೆಯ ಗೆಳತಿಯರೊಡಗೂಡಿ ಕಾಲೇಜು ಕ್ಯಾಂಟೀನ್‍ನಲ್ಲಿ ಬಿಸಿ ಬಿಸಿ ಕಾಫಿ ಲೋಟದೊಂದಿಗೆ ಹರಟೆ ಹೊಡೆಯುವುದನ್ನು ನೆನಪಿಸಿಕೊಂಡರೆ ಚಳಿಗೆ ಸ್ವೆಟ್ಟರ್ ಹೊದಿಸಿದಂತಿರುತ್ತದೆ. ಇದು ಕೆಲವು ಹುಡುಗರ ಪಾಡಾದರೆ, ಕೊಂಚ ಡಿಫರೆಂಟ್ ಆಗಿರೋರು ನಮ್ಮಲ್ಲಿದ್ದಾರೆ. ಅದೇ ಮೈ ನಡುಗುತ್ತಾ ಇರುವ ಚಳಿಯಲ್ಲಿ, ಐಸ್‍ಕ್ರೀಮ್ ತಿನ್ನುವ ಚಪಲ ಹೊಂದಿರುವವರು. ಮೈನಡುಕವನ್ನೂ ಲೆಕ್ಕಿಸದೆ ಐಸ್‍ಕ್ರೀಮ್ ತಿನ್ನುವ ಸಾಹಸ ಮಾಡುವವರು. ಇನ್ನು ಕೆಲವು ಸುಕೋಮಲ ಹುಡುಗಿಯರಿಗೆ ತಮ್ಮ ತ್ವಚೆಯ ಚಿಂತೆ. ತ್ವಚೆಯ ಅಂದವನ್ನು ಕಾಪಾಡಿಕೊಳ್ಳುವುದೇ ಅವರ ಚಿಂತೆ. ಹಾಗಾಗಿ ಈಗೆಲ್ಲಾ ರವಿಮಾಮನ ಮೇಲೆ ಯಾಕೋ ಪ್ರೀತಿ ಹೆಚ್ಚು. ಯಾಕೆಂದರೆ ಅವನಿಗೆ ಮಾತ್ರ ಗೊತ್ತು ನಮ್ಮ ಚಳಿಗೆ ಸರಿಯಾದ ಮದ್ದು.
ಅಂಗಳದಲ್ಲಿಯೋ, ಮನೆ ಮಹಡಿಯಲ್ಲಿಯೋ ನಿಂತು ತಣ್ಣನೆ ನಿಧಾನಗತಿಯಲ್ಲಿ ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ನಿಂತು ಮೋಡದ ಮರೆಯಲ್ಲಿ ಕದ್ದು ನೋಡುವ ಚುಕ್ಕಿ ಚಂದ್ರಮನನ್ನು ಕಣ್ತುಂಬಿಕೊಳ್ಳುತ್ತಿದ್ದರೆ, ಚಳಿರಾಯನಿಗೊಂದು ಸಲಾಮ್ ಹೊಡೆಯೋ ಮನಸಾಗುತ್ತದೆ. ಮಡದಿಯ ಸನಿಹವಿದ್ದರೆ ಪತಿರಾಯನಿಗಂತೂ ಆ ಬೆಳದಿಂಗಳ ತಂಪಾದ ರಾತ್ರಿ, ಹಬ್ಬದೂಟದ ರುಚಿ ನೀಡುತ್ತದೆ. ಬೆಚ್ಚನೆಯ ಅಪ್ಪುಗೆಯಲ್ಲಿ ಚಳಿ ಚಳಿ ತಾಳೆನು ಈ ಚಳಿಯಾ... ಎಂದು ಹಳೇ ಜೋಡಿಗಳು ಹಾಡಿದರೆ, ಚಳಿಯಲಿ...ಜೊತೆಯಲಿ... ಎಂದು ಹೊಸ ಕವಿತೆ ಸಾಲುಗಳನ್ನು ಹುಟ್ಟು ಹಾಕುತ್ತಾರೆ ನವ ಜೋಡಿಗಳು. ಪ್ರತಿರಾತ್ರಿಯೂ ಹೀಗೇ ಇರಲಿ ಎನ್ನುವ ಬಯಕೆಯೂ ಅವರಲ್ಲಿ ಚಿಗುರುತ್ತದೆ.
ಇದು ಒಂದು ತರಹದ ಕತೆಯಾದರೆ ಚಳಿಯನ್ನು ಇನ್ನಷ್ಟು ಇಷ್ಟ ಪಡುವವರು ಯುವಕರು, ವಿದ್ಯಾರ್ಥಿಗಳು. ಬಾಲ್ಯದಲ್ಲಂತು ಚಳಿ ಇನ್ನೂ ಮಜವಾಗಿತ್ತು. ‘ಸೂರ್ಯ ನೆತ್ತಿ ಮೇಲೆ ಬಂದಾಯ್ತು ಇನ್ನೂ ಎದ್ದಿಲ್ವಾ’ ಎನ್ನುವ ಅಮ್ಮನ ಬೈಗುಳದ ಮಾತು ಹೊದಿಕೆಯೊಳಗೆ ಅಡರಿಕೊಂಡು ಮಲಗಿದ್ದ ನಮಗೆಲ್ಲಾ ಎಲ್ಲೋ ದೂರದಲ್ಲಿ ದುಂಬಿ ಝುಂಯ್ಯಿಗುಟ್ಟಂತೆ ಕೇಳುತ್ತಿತ್ತು. ಆದರೆ ಮರುಕ್ಷಣವೇ ಅಪ್ಪನ ಅಬ್ಬರದ ಮಾತಿಗೆ ಕ್ಷಣಮಾತ್ರದಲ್ಲಿ ಹೊದಿಕೆಯನ್ನೆಲ್ಲೋ ಚೆಲ್ಲಿ ಬಚ್ಚಲ ಮನೆಯ ಒಲೆಯ ಮುಂದಿರುತ್ತಿದ್ದೆವು. ಆ ಚಳಿಗೆ ಸ್ನಾನ ಮಾಡಿ ಶಾಲೆಗೆ ಹೋಗುವ ಮನಸ್ಸೇ ಇರಲಿಲ್ಲ. ಅಪ್ಪನ ಮೇಲಿನ ಭಯಕ್ಕೇ ಶಾಲೆಗೆ ಹೋದದ್ದು ಹೆಚ್ಚು.
ಕತ್ತಲಾವರಿಸುತ್ತಿದ್ದಂತೆ, ಕತ್ತಲನ್ನು ಆವರಿಸುವ ಚಳಿಗಾಳಿ, ಬೇಗ ಬೇಗನೇ ಹೋಮ್‍ವರ್ಕ್ ಮುಗಿಸಿ ಬೆಚ್ಚನೆಯ ಹೊದಿಕೆಯೊಳಗೆ ಸೇರಿಕೊಳ್ಳುವಂತೆ ಪುಟ್ಟ ಮಕ್ಕಳಿಂದ ಹಿಡಿದು ಯುವಮನಸ್ಸುಗಳ ವರೆಗೂ ಪ್ರೇರೇಪಿಸುತ್ತದೆ. ಹೊದ್ದು ಮಲಗುವ ಹೊದಿಕೆಯೊಳಗೆ ಬಿಸಿ ಹುಡುಕುವ ಗಮ್ಮತ್ತು ವಿವರಿಸಲಸಾಧ್ಯ. ಯಾಕೆಂದರೆ ಚಳಿಗಾಳಿಯ ಸಂಘದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ತಂಪು ಗಾಳಿ ಯಾವುದೇ ಹೊದಿಕೆಯಾದರೂ ಅದೆಷ್ಟು ಗಟ್ಟಿಯಾಗಿದ್ದರೂ ಹೊದಿಕೆಯೊಳಗೆ ನುಸುಳಿಕೊಂಡು ಬಂದು ದೇಹಕ್ಕೆ ಮುತ್ತನಿಡುವ ಅವಕಾಶವನ್ನಂತು ತಪ್ಪಿಸಿಕೊಳ್ಳುವುದಂತೂ ಇಲ್ಲ, ಮರೆಯುವುದಂತು ಇಲ್ಲವೇ ಇಲ್ಲ. ಯಾಕೆಂದರೆ ಚಳಿರಾಯನಿಗಿತ್ತಿರುವ ಸಮಯವೇ ಬಲು ಕಡಿಮೆ. ಈಗೀಗಂತು ತಡವಾಗಿ ಬಂದು ಬೇಗನೆ ವಿರಮಿಸಬೇಕಾದ ಅನಿವಾರ್ಯತೆ ಚಳಿರಾಯನಿಗೆ ಬಂದೊದಗಿದೆ ಎನ್ನಬಹುದು. ಆ ಅಲ್ಪ ಸಮಯದಲ್ಲಿ ಚಳಿ ತನ್ನೆಲ್ಲಾ ಚೇಷ್ಟೆಯನ್ನು ಆಡಿ ಮುಗಿಸಬೇಕಾಗುತ್ತದೆ. ಇಲ್ಲವಾದಲ್ಲಿ ಬೇಸಿಗೆರಾಯ ಅವಕಾಶ ಕಿತ್ತುಕೊಂಡು ಬಿಡುತ್ತಾನೆ.
ನಿಜವಾಗಿಯೂ ಚಳಿಯಲ್ಲೇ ಇದೆ ಸುಖ ನಿದ್ದೆ. ರಾತ್ರಿ ಹೊದ್ದುಕೊಂಡು ಮಲಗಿದ ಹೊದಿಕೆ ನಡುರಾತ್ರಿಯಲ್ಲಿ ಮೈಮೇಲಿಂದ ಜಾರಿರುತ್ತದೆ. ಅವನ್ನು ಮತ್ತೆ ಮೈಮೇಲೆ ಎಳೆದುಕೊಂಡು ಹಾಗೆಯೇ ಸುರುಟಿಕೊಂಡು ಮಲಗುವಾಗ ಎಂಬತ್ತರ ಮುದುಕನೂ ಹೊದಿಕೆಯೊಳಗೆ ಪುಟ್ಟ ಮಗುವಾಗಿರುತ್ತಾನೆ. ಯುವಕರಿಗೆ ಹೊದಿಕೆಯೊಳಗೆ ಸಾವಿರಾರು ಬಿಸಿ ಬಿಸಿ ಕನಸುಗಳು. ಗಡ ಗಡ ನಡುಗಿದರೂ ಬೆಚ್ಚನೆಯ ಭಾವ ತುಂಬಾ ಹಿತಕರವಾಗಿರುತ್ತದೆ. ಆದರೆ ಇಬ್ಬನಿಯೊಡಗೂಡಿ ಮುಂಜಾನೆ, ಭೂಮಿಗೆ ಪಾದವಿಡುತ್ತಿದ್ದಂತೆ, ಗಾಳಿಯಲ್ಲಿದ್ದ ಹಿಮ ಹಸಿರೆಲೆಗಳಿಗೆ ಮುತ್ತಿಕ್ಕುವ ಸಮಯಕ್ಕಂತೂ ಮೈನಡುಕವೇ ಶುರುವಾಗುತ್ತದೆ. ಚಿಗುರೆಲೆಗಳಿಗೆ ಇಬ್ಬನಿಯ ಸ್ಪರ್ಶ ಹಿತವೆನಿಸಿದರೂ, ಆ ನಡುಗುವ ಚಳಿಯಲ್ಲಿ, ಕತ್ತಲ ಒಡಲನ್ನು ಸೀಳಿಕೊಂಡು ಬಾಲರವಿಯ ಹೊಂಗಿರಣಗಳು ಭೂಸ್ಪರ್ಶವಾದರೂ, ನಮ್ಮಂತವರಿಗೆಲ್ಲಾ ಹೊದಿಕೆಯೊಳಗಿಂದ ಹೊರ ಬರಲು ಮನಸ್ಸೇ ಬರುವುದಿಲ್ಲ. ಮತ್ತೆ ಮತ್ತೆ ಬೆಚ್ಚಗೆ ಸುತ್ತಿಕೊಂಡು ಮಲಗುವ ಮನಸ್ಸೇ ಹೆಚ್ಚಾಗುತ್ತದೆ.
ಅಲ್ಲಲ್ಲಿ ಕೆಲವರು ದಾರಿಯಲ್ಲಿ, ಬಯಲಲ್ಲಿ ಕಸ ಕಡ್ಡಿಗಳಿಂದ ಅಗ್ಗಿಷ್ಟಿಕೆ ಹಾಕಿ, ಅದರ ಸುತ್ತ ಕುಳಿತು ಮೈ ಬಿಸಿ ಮಾಡಿಕೊಳ್ಳುವ, ಇನ್ನು ಕೆಲವರು ಮುಂಜಾನೆ ಚುಮು ಚುಮು ಚಳಿಗೆ ಕಿವಿ ಮುಚ್ಚುವ ಟೋಪಿ ಹಾಕಿಕೊಂಡು ಬೇಡಿ ಸೇದುತ್ತಾ, ಮತ್ತೆ ಕೆಲವರು ಹಿಮ ಆವರಿತ ಬೆಳ್ಳಂ ಬೆಳಗ್ಗೆಯಲ್ಲೊಂದು ಬಿಸಿ ಬಿಸಿ ಟೀ ಲೋಟದೊಂದಿಗೆ ಚಳಿ ಕಾಯಿಸಿಕೊಳ್ಳುವ ಹಿರಿ ಜೀವಗಳ ಪರಿ ನೋಡಲು ಚಂದವೋ ಚಂದ.
ಚಳಿಗಾಲಕ್ಕೆ ಎಲ್ಲರನ್ನು ಮೋಡಿ ಮಾಡುವ ಮಾಡುವ ಮಾಂತ್ರಿಕತೆ ಇದೆ. ಚಳಿಗೆ ಮನಸೋಲದವರು ಯಾರೂ ಇಲ್ಲ. ಮರಗಿಡಗಳಿಗೂ ಚಳಿಗಾಲವೆಂದರೆ ಬಹಳ ಅಚ್ಚುಮೆಚ್ಚು. ಮಾಗಿಯ ಚಳಿಯಲ್ಲಿ ಎಲೆಗಳನ್ನೆಲ್ಲ ಸಂಪೂರ್ಣವಾಗಿ ಉದುರಿಸಿಕೊಂಡು ಬರಿದಾದ ಮರಗಳು ವಸಂತ ಋತುವಿನ ಚಳಿಗೆ ಹೊಸ ಚೈತನ್ಯದೊಂದಿಗೆ ಮತ್ತೆ ಚಿಗುರಿ ಹೊಸ ಹುಟ್ಟನ್ನು ಪಡೆದು ನಳನಳಿಸಲು ಪ್ರಾರಂಭಿಸುತ್ತದೆ. ಮುಂಜಾವಿನ ಮಂಜು ಕೂಡ ಎಲೆಗಳ ಮೇಲೆ ಹನಿ ಮುತ್ತುಗಳನ್ನಿಟ್ಟು ಚಿಗುರೋ ಹೂಗಳಿಗೆ ಕಿವಿ ಮಾತು ಹೇಳೋ ಕಾಲ. ಅದಕ್ಕೇ ಇರಬೇಕು ಎಂದಿಗಿಂತಲೂ ಮರಗಿಡಗಳು ಈ ಸಮಯದಲ್ಲೇ ಗಾಳಿಯ ಜೊತೆ ಹೆಚ್ಚು ಸರಸ ಸಲ್ಲಾಪವಾಡುತ್ತಿರುತ್ತವೆ.
ಪ್ರೇಮಿಗಳಿಗಿದುವೇ ಚೈತ್ರಕಾಲ. ಎಲ್ಲೋ ದೂರದಲ್ಲಿರುವ ಪ್ರೇಯಸಿ, ಪ್ರಿಯಕರನ ಮನಸ್ಸಿನ ಚಳಿಗೆ ತನ್ನ ಮಾತುಗಳಿಂದಲೇ ಬೆಚ್ಚಗಿನ ಹೊದಿಕೆಯಾಗುತ್ತಾಳೆ. ಇತ್ತ ಹುಡುಗನಿಗೂ ಮೈಯ ಚಳಿಗೂ ಬೆಚ್ಚನೆಯ ಅನುಭವ. ಚಳಿಗಾಲದಲ್ಲಿ ಪ್ರೇಮಿಗಳಿಗೆ ಚಳಿ ತರುವ ಸನಿಹದಲ್ಲಿರುವಷ್ಟು ಆನಂದ ಬೇರ್ಯಾವುದರಲ್ಲೂ ಇಲ್ಲ. ಭಾವನೆಗಳೇ ಇವರಿಗೆ ಬಿಸಿಲ ಶಾಖ.
ಅಂತು ಇಂತು ಚಳಿರಾಯ ಎಲ್ಲರ ಮೈ ಸವರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ. ಸೂರ್ಯ ರಥವೇರಿ ಬಂದೊಡನೆ ಚಳಿರಾಯನ ಕಣ್ಣಲ್ಲಿ ನೀರು. ಆದರೆ ಗೆಳೆಯ ಚಂದಿರನ ಮೇಲೆ ಭರವಸೆ. ತಣ್ಣಗೆ ಬೀಸಲು ಇರುಳನ್ನು ಹೊತ್ತು ತರುವವನೆಂದು. ಕಾಳದ ಕೈಯ್ಯಲ್ಲಿ ತನ್ನ ದಾಳವಿದ್ದರೂ, ಚಳಿರಾಯನಲ್ಲಿ ಹುಚ್ಚು ಆಸೆಗಳಿಗೇನೂ ಕಡಿಮೆಯಿಲ್ಲ.
No comments:
Post a Comment