ಕನಸುಗಳ ರಾಯಭಾರಿ ನೀನು...
ಇನ್ನೂ ಸೂರ್ಯನ ಕಿರಣಗಳು ತಾಗಿರದ ಮುಂಜಾನೆಯ ಮಂಜಿನ ಹನಿಯಂತಿದ್ದ ನನ್ನ ಹೃದಯಕೆ, ಹೂ ಅರಳುವಷ್ಟು ಮೆಲ್ಲಗೆ, ತಂಗಾಳಿಯಷ್ಟು ತಣ್ಣಗೆ ಹೃದಯದ ಕದ ತಟ್ಟದೇ, ಪ್ರೀತಿಯ ಕಚಗುಳಿ ಇಟ್ಟವ ನೀನು. ನಿನ್ನ ಪ್ರೀತಿಯ ಬಾಹುಬಂಧನದಲ್ಲಿ ಸಿಲುಕಿದ ಪರಿಯ ಅರಿವೇ ನನಗಾಗಿಲ್ಲ. ಪ್ರೀತಿಯ ಸವಿ ಅರಿಯೋ ಹೊತ್ತಿಗೆ ನಿನ್ನ ಪ್ರೇಮದ ಅಮಲಿನ ಕಬಂದಬಾಹುವಿನಲ್ಲಿ ನಾನು ಬಂಧಿಯಾಗಿದ್ದೆ ಗೆಳೆಯ. ಗುಲಾಬಿಗೆ ಮುತ್ತಿಟ್ಟ ಇಬ್ಬನಿಯ ಹನಿಯಂತೆ ನೀನಿಟ್ಟ ಮೊದಲ ಚುಂಬನ ನನ್ನ ಮನಸಲ್ಲಿ ಹೂ ಅರಳಿದಂತೆ, ಕನಸುಗಳ ಎಸಳುಗಳ ಪೋಣಿಸಿ ಸೊಗಸಾದ ಚೆಂಗುಲಾಬಿಯ ನನ್ನ ಮುಡಿಯೇರಿಸಿದೆ. ನಾ ಮುಡಿದಿರುವ ಗುಲಾಬಿಗೆ ಸರದಾರನೂ ನೀನು. ಅದರೊಳಗಿನ ಸಾವಿರ ಕನಸುಗಳಿಗೆ ರಾಯಭಾರಿಯೂ ನೀನು.
ಪ್ರೀತಿಯ ನಿವೇದನೆಯಿಲ್ಲ, ನಿವೇದನೆಯ ಉತ್ತರಕ್ಕಾಗಿ ಕಾದು ಕುಳಿತಿಲ್ಲ. ಮೌನದೆದೆಯಲಿ ಬಂಧಿಯಾಗಿಲ್ಲ. ವಿರಾಮವಿಲ್ಲದ ನಮ್ಮಿಬ್ಬರ ಸಂಭಾಷಣೆಯೇ ಎಲ್ಲಾ, ಪ್ರೀತಿಯ ಕೈಯ್ಯಲ್ಲಿ ನಾವು ಖೈದಿಗಳಾಗೋಕೆ. ಪ್ರತಿದಿನವೂ ಹೆಚ್ಚು ಹೆಚ್ಚೇ ಪ್ರೀತಿಸುವ, ಮುದ್ದು ಮಾಡುವ ನಿನ್ನೊಳಗೆ ನಾನು ಒಂದಾಗಲು ಹೆಚ್ಚು ಸಮಯ ತಗಲಲಿಲ್ಲ. ನನ್ನನ್ನು ಪ್ರೀಯಿಸುತ್ತೀಯ ಎಂದು ನೀನು ಕೇಳಲಿಲ್ಲ. ನಿನ್ನನ್ನು ಪ್ರೀತಿಸುತ್ತೇನೆಂದು ನಾನು ಹೇಳಲಿಲ್ಲ. ಆದರೂ ಯಾವುದೋ ಮೌನದೊಳಗೆ ಸಿಲುಕಿದ ಪ್ರೇಮಿಗಳು ನಾವು. ನೀ ನನ್ನ ಪ್ರಿಯತಮೇ, ನಾ ನಿನ್ನ ಪ್ರಿಯತಮ ಎಂದು ನಾವೆಂದೂ ಹೇಳಿಕೊಂಡಿಲ್ಲ. ಆದರೂ ಬಿಟ್ಟಿರಲಾರದಷ್ಟು ಬೆಸೆದುಕೊಂಡುಬಿಟ್ಟಿದೆ ನಮ್ಮೀರ್ವರ ಪ್ರೇಮಬಂಧನ.
ಬಂಧನ ಬೆಸೆದ ಘಳಿಗೆಯಂತು ನನಗೆ ನೆನಪಿಲ್ಲ. ಆದರೂ ಆ ಗಂಧರ್ವ ಘಳಿಗೆಗೆ ನನ್ನದೊಂದು ಸಲಾಮು. ಪ್ರೀತಿ ಎಂದರೆ ಹೇಗೆ? ಏನು? ಓದಿ ಮಾತ್ರವೇ ತಿಳಿದುಕೊಂಡಿದ್ದ ನನಗೆ, ನಿಜವಾದ ಪ್ರೀತಿಯ ಮಧು ಕುಡಿಯುವ ಭಾಗ್ಯ ನೀನಿತ್ತೆ ಇನಿಯ. ಮೊದಲ ಭೇಟಿ, ಗೆಳೆತನ, ಆತ್ಮೀಯತೆಗೆ ಬಲವಾದ ಅಡಿಪಾಯವಾಗಿತ್ತು. ಅದರ ಮೇಲೆ ಪ್ರೀತಿಯ ಅರಮನೆ ಕಟ್ಟ ಹೊರಟ ನಮಗೆ, ಆ ಅರಮನೆಗೆ ನೀನೆ ರಾಜ, ನಿನ್ನೆದೆಯಾಳುವ ಅರಸಿ ನಾನು. ನಾವು ಹೆಣೆಯುವ ಕನಸುಗಳೇ ನಮ್ಮ ರಾಜಕುಮಾರ. ಅವುಗಳ ಬೆಳವಣಿಗೆಯೇ ನಮಗಾನಂದ.
ನೆನಪಿದೆಯಾ ನಿನಗೆ ಮಾತಲ್ಲೇ ಕಳೆದ ಆ ಕ್ಷಣಗಳು. ನಾನಂತು ಮಾತಿನ ಮಲ್ಲಿ. ಮಾತುಗಳನ್ನು ಹೆಣೆಯೋದು ಕಷ್ಟದ ಕೆಲಸ ನನಗಾಗಿರಲಿಲ್ಲ. ಆದರೆ ಆ ಮಾತುಗಳ ಮುತ್ತಿನ ಹಾರದ ನಡುವೆ, ಪ್ರೀತಿಯ ಬಂಗಾರದ ಮಣಿಗಳನ್ನು ಒಂದೊಂದಾಗಿ ಪೋಣಿಸುತ್ತಾ ಬಂದೆ ನೀನು. ಬಂಗಾರದ ಮುತ್ತುಗಳನ್ನು ಪೋಣಿಸಿ ಹೆಣೆದ ಹಾರದ ಜೊತೆಗೆ, ಪ್ರೀತಿ ಎದೆ ತಾಕಲು ಹೆಚ್ಚು ಅವಧಿ ಬೇಕಾಗಿರಲಿಲ್ಲ. ನಾವಿಬ್ಬರು ದೂರವಿದ್ದರೂ ಸನಿಹವಿದ್ದಷ್ಟೇ ಸಂತೋಷವನ್ನು ನಾ ಹೆಣೆಯುತ್ತಿದ್ದ ಕನಸುಗಳು ನೀಡುತ್ತಿದ್ದವು. ನನ್ನ ಬಿಡುವಿರದ ಮಾತುಗಳೇ ನಿನಗೆ ಬಲು ಇಷ್ಟ. ನೀ ಕೊಡುವ ಮುತ್ತುಗಳಿಗೆ, ಸಲುಗೆಯಿಂದ ನನ್ನ ನಡುವನ್ನು ಬಳಸುವ ಕೈಗಳಿಗೆ, ಬಿಸಿಯಪ್ಪುಗೆಯ ಆಲಿಂಗನಕೆ, ಮಾತುಗಳೆಲ್ಲಾ ಮೌನದ ಮುಂದೆ ತಲೆಬಾಗಿದೊಡನೆ ನಿನಗೆಲ್ಲಿಲ್ಲದ ಭಯ ಆತಂಕ. ನನ್ನೀ ನಾಚಿಕೆಯ ಮೌನವನು ತಾಳಲಾರದ ನಿನ್ನ ಮನಸು ಪಟ ಪಟ ಎಂದು ನುಡಿವ ನನ್ನ ಮಾತುಗಳಿಗಾಗಿಯೇ ಹಪಹಪಿಸುತ್ತದೆಂದು ನನಗೆ ಗೊತ್ತು ಕಣೋ.
ಆ ಹಪಾಹಪಿಕೆಯ ಅರಿತು ತುಟಿಯಂಚಿನಿಂದೊಂದು ಮುಗುಳ್ನಗೆ ಬೀರಿದೆನೆಂದರೆ, ಆಗ ಮೂಡುವ ನನ್ನ ಕೆನ್ನೆ ಮೇಲಿನ ಗುಳಿಯನ್ನು ನೋಡುವುದೇ ನಿನಗೊಂಥರಾ ಖುಷಿ. ನನ್ನ ಕೆನ್ನೆ ಮೇಲೆ ಬೀಳುವ ಗುಳಿಯನ್ನು ನೋಡುವಾಸೆಯಿಂದ ಅದೆಷ್ಟೋ ಬಾರಿ ಕಚಗುಳಿಯಿಟ್ಟು ನಗಿಸಿದವ ನೀನು. ಹಣೆಗೆ ನೀನಿಡುವ ಸಿಹಿ ಮುತ್ತುಗಳೇ ನಿನ್ನ ಹೆಸರಿನ ಸಿಂಧೂರ ನನಗೆ. ಸಲುಗೆಯ ಮಾತುಗಳೇ ನನ್ನ ಕನಸುಗಳಿಗೆ ಮುಂಗಾರಿನ ಮಳೆ. ನಾ ಹೆಣೆದಿಟ್ಟಿರುವ ಕನಸುಗಳಿಗೆ ಲೆಕ್ಕವಿಲ್ಲ ಕಣೋ. ಲೆಕ್ಕವಿಲ್ಲದಷ್ಟು ಕನಸುಗಳಿಗೆ ರಾಯಭಾರಿಯಾಗಿರುವೆ ನೀನೀಗ. ನೀನಿಲ್ಲದೆ ನನ್ನ ಕನಸುಗಳಿಲ್ಲ. ಕನಸುಗಳಿಲ್ಲದೆ ಪ್ರೀತಿಯಿಲ್ಲ ಪುಟ್ಟ. ಕನಸುಗಳನ್ನು ನನಸಾಗಿಸುವ ಭರವಸೆಯೊಂದಿಗೆ ಪ್ರತಿಕ್ಷಣವೂ ನಿನ್ನೊಂದಿಗೆ ಪ್ರೀತಿಯ ಅಂಬಾರಿಯಲ್ಲಿ ಹೆಜ್ಜೆಗಳಿಗೆ ಪ್ರೀತಿ ಗೆಜ್ಜೆಯ ನಾದವಾಗಿ ಬರುತ್ತಿರುವೆ.
ಪುಟ್ಟದೊಂದು ಊರು, ಅಲ್ಲಿರುವ ಸಣ್ಣದೊಂದು ಮನೆಯಲ್ಲಿ ನಾನು ನೀನು ಮಾತ್ರವೇ ಚೊಕ್ಕದಾದ ಸಂಸಾರದ ನಾವೆಗೆ ತಿಳಿಯಾಗಿರುವ ನೀರಿನಲ್ಲಿ ಹುಟ್ಟು ಹಾಕುತ್ತಾ ಸಾಗಬೇಕು. ನನ್ನ ಮಡಿಲಲ್ಲಿ ಕಣ್ಣುಮುಚ್ಚಿ ಕೀಟಲೆ ಮಾಡುವ ಮಗು ನೀನಾಗಿ, ನಾ ಮೈಮರೆತು ತಾಯಂತೆ ಹಣೆಗೊಂದು ಮುತ್ತನಿಡಬೇಕು. ಉಕ್ಕಿ ಬರುವ ದುಃಖವನ್ನು ಬಿಗಿದಿಟ್ಟು ಚಡಪಡಿಸುವ ನನಗೆ, ನಿನ್ನೆದೆಯೆ ತೊಟ್ಟಿಲಾಗಿ, ಬಾಚಿ ತಬ್ಬುವ ತೋಳುಗಳೇ ನಿರಾಳವೆನಿಸಬೇಕು. ಬಿಗಿದಿಟ್ಟ ದುಃಖ ಕಂಬನಿಯಾಗಿಳಿವಾಗ, ನನ್ನ ಕಂಬನಿಯ ಒರೆಸುವ ನಿನ್ನ ಕೈಯ್ಯ ಬೆರಳುಗಳಿಗೆ ಮುತ್ತನಿಡಬೇಕು. ನಮ್ಮ ಪ್ರೀತಿಯ ಸಂಕೇತವಾಗಿ ನಿನ್ನ ಮಗುವಿಗೆ ನಾನು ತಾಯಿಯಾಗಬೇಕು. ನಿನ್ನ ತೋಳಲ್ಲಿ ತಲೆಯಿಟ್ಟು ನಾ ಮಾಡುವ ಸುಖನಿದ್ರೆಯ ಕನಸಲ್ಲಿ ನೀನು ಬರಬೇಕು. ಪ್ರತಿದಿನವೂ ಪ್ರೀತಿ, ಮುದ್ದು ಮುದ್ದಾದ ಮಾತುಗಳು, ಪ್ರಣಯದ ತುಂಟಾಟಗಳು ಮಾತ್ರವೇ ಇರಬೇಕು. ಊಟಕ್ಕೆ ಉಪ್ಪಿನಕಾಯಿಯಂತೆ ಸಣ್ಣ ಪುಟ್ಟ ಜಗಳಗಳು ನಮ್ಮ ಮುನಿಸಿಗೆ ಕಾರಣವಾಗಬೇಕು. ಮುನಿಸನ್ನು ಕರಗಿಸುವ ಪ್ರೀತಿಯನ್ನು ನೀನು ಹೊತ್ತು ತರಬೇಕು. ನೀ ತಂದ ಬೆಟ್ಟದಷ್ಟು ಪ್ರೀತಿಗೆ ನಾ ನಾಚಿ ನೀರಾಗಬೇಕು.
ನಡುವನ್ನು ಬಳಸುವ ನಿನ್ನ ಕೈಯ್ಯಲ್ಲಿ ನಾ ಬಂಧಿಯಾಗುವ ಆಸೆ ಕಣೋ. ಆದರೆ ಈ ಎಲ್ಲಾ ಆಸೆಗಳು ಕನಸಲ್ಲೇ ನಾಚಿ ನೀರಾಗಿಸುತ್ತವೆ ನನ್ನ. ಪ್ರತಿದಿನವೂ ನಮ್ಮ ನಡುವೆ ಮಾತಿನ ಹೊಳೆಯೇ ಹರಿದು ಬರುತ್ತದೆ. ಒಂದು ದಿನ ನಾ ಕಟ್ಟಿದ ಕನಸು ಇದ್ದೇ ಇರುತ್ತಿತ್ತು. ಮಾತಿನ ಮಧ್ಯದಲ್ಲಿ ಒಂದು ಕನಸು ಹೇಳೇ ಕೋತಿ ಎನುವಾಗ ಮನಪಟಲದಲ್ಲಿ ಪುಳಕವೊಂದು ಜನ್ಮ ತಾಳುವುದು, ಓ ನನ್ನ ಜೀವವೇ.
ನಾ ಹೇಳುವ ಕನಸುಗಳಿಗೆ ಮುತ್ತಿನ ಸುಂಕ ನೀ ತೆರುವಾಗ, ತೆರಿಗೆ ವಸೂಲಿ ಮಾಡದೆ ಬಿಡುವ ಮನಸ್ಸು ನನದಲ್ಲ. ನೀ ಕೊಡುವ ಸಿಹಿ ಮುತ್ತುಗಳ ಆಸೆಯೇ, ನಿನ್ನಲ್ಲಿ ಕನಸುಗಳ ನೆಪ ಹೇಳುವ ತುಂಟಾಟ ಸೃಸ್ಟಿಸಿದೆ. ಯಾಕೆಂದರೆ ನಿನ್ನ ಮುತ್ತುಗಳಿಗೆ ನನ್ನ ಪ್ರತ್ಯುತ್ತರ ಮುತ್ತಗಳೇ ಅಲ್ಲವೇ... ಹಾಗೋ ಹೀಗೋ ನನ್ನೊಡಲ ಕನಸುಗಳ ದೂರದ ಊರಿನ ರಾಜಕುಮಾರ ನೀನು ನನಗೆ...
No comments:
Post a Comment