Saturday 22 April 2017

ಬಹು ಬೇಡಿಕೆಯ ನೇರಳೆ

ನೇರಳೆ ಹಣ್ಣನ್ನು ಸಾಸ್, ಜಾವರ್, ಜೆಲ್ಲಿ, ಪಾನಕ, ಶರಬತ್ತು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಯನ್ನು ಜಾನುವಾರುಗಳಿಗೆ ಮೇವಾಗಿ ಮತ್ತು ರೇಷ್ಮೆಹುಳುಗಳಿಗೆ ಆಹಾರವಾಗಿಯೂ ಬಳಸುತ್ತಾರೆ.

ತನ್ನೊಳಗೆ ಔಷಧೀಯ ಗುಣಗಳನ್ನು ಹುದುಗಿಸಿಕೊಂಡಿರುವ ಈ ಮರಕ್ಕೆ ಪ್ರಸ್ತುತ ತುಂಬಾ ಬೇಡಿಕೆ ಇದೆ. ಅದರಲ್ಲೂ ಡಯಾಬಿಟಿಸ್‍ಗೆ ಇದು ರಾಮಬಾಣವಾಗಿರುವುದರಿಂದ ಇದರ ಹಣ್ಣು, ಬೀಜ, ತೊಗಟೆ, ಎಲೆ ಎಲ್ಲಾ ಭಾಗಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ತಿಂದಾಗ ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯನ್ನು ನೀಡುವ ಈ ಹಣ್ಣು ನಾಲಗೆಗೂ ರಂಗನ್ನು ನೀಡುತ್ತದೆ. ಕಪ್ಪು ವರ್ಣದ ಈ ಹಣ್ಣು ಸಿಹಿಯಾಗಿರುವುದು ಮಾತ್ರವಲ್ಲದೆ ಪೋಷಕಾಂಶ ಭರಿತವೂ ಹೌದು. ಇಂಡೋನೇಷ್ಯಾ ಮತ್ತು ಭಾರತ ಮೂಲದ ಹಣ್ಣಾಗಿರುವ ನೇರಳೆ ಹಣ್ಣು ಈಗ ದಕ್ಷಿಣ ಅಮೇರಿಕಾದ ಸುರಿನಾಮ್ ಲ್ಲಿ ಹೇರಳವಾಗಿ ಬೆಳೆಯುತ್ತದೆ. ಪಕ್ಷಿಗಳು ಇದರ ಹಣ್ಣನ್ನು ತಿಂದು ಬೀಜಗಳನ್ನು ಕೊಂಡುಹೋಗಿ ಹಾಕುವ ಕಾರಣ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಮತ್ತು ಕಾಡು ಹಣ್ಣಾಗಿಯೆ ಇತ್ತು. ಆದರೆ ಪ್ರಸ್ತುತ ನೇರಳೆ ಮರದ ಪ್ರತಿಯೊಂದು ಭಾಗಕ್ಕೂ ಬೇಡಿಕೆ ಇರುವುದರಿಂದ ಇದನ್ನು ಕೃಷಿ ಮಾಡುವುದು ಹೆಚ್ಚಾಗಿದೆ. ಕಾಡುಹಣ್ಣು ನಾಡಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಸಾಮಾನ್ಯವಾಗಿ ಜಾವಾಪ್ಲಮ್, ಜಂಬುಲ್, ಬ್ಲಾಕ್‍ಬೆರಿ, ಜ್ಯಾಂಬೋಲನ್, ಜಮೈಕಾ, ಡ್ಯಾಮನ್ಸ್ ಹಣ್ಣು, ನೇರಳೆಹಣ್ಣು ಎಂದು ಕರೆಯಲ್ಪಡುವ ಇದು ಮಿಟ್ರ್ಲ್ ಕುಟುಂಬದ ಮಿರ್ಟೇಸಿಯಾ ಜಾತಿಗೆ ಸೇರಿದ ಒಂದು ಮರ. ಇದರ ವೈಜ್ಞಾನಿಕ ಹೆಸರು ಸೈಯೀಸಿಯಂ.

ಉಷ್ಣವಲಯದ ಮರವಾದ್ದರಿಂದ ಉಷ್ಣವಲಯದ ಹವಾಮಾನದಲ್ಲಿ ಬಹುಸುಲಭವಾಗಿ ಬೆಳೆಯುತ್ತದೆ.  ನಿತ್ಯಹರಿದ್ವರ್ಣ ಉಷ್ಣವಲಯದ ಮರಗಳು 50 ರಿಂದ 100 ಅಡಿ ಎತ್ತರ ಬೆಳೆಯುತ್ತದೆ. ನೇರಳೆ ಮರದ ಎಲೆಗಳು ದಟ್ಟವಾಗಿ, ನಯವಾಗಿ, ಉದ್ದವಾಗಿರುತ್ತವೆ. ಅವುಗಳು ಒಂದು ತೆರನಾದ ಟರ್ಪಂಟೈನ್ ವಾಸನೆಯನ್ನು ಹೊಂದಿರುತ್ತದೆ. ಮರದ ಕಾಂಡ  ಅಗಲವಾಗಿ ಬೆಳೆದು ಚಿಪ್ಪುಗಳುಳ್ಳ ಬೂದು ಮಿಶ್ರಿತ ಕಂದು ದಪ್ಪ ತೊಗಟೆಗಳಿಂದ ಆವರಿಸಿರುತ್ತದೆ. ಫಿಲಿಪೈನ್ ಮಧ್ಯಭಾಗದಲ್ಲಿ ಮೇ ತಿಂಗಳಲ್ಲಿ ಹೂ ಬಿಟ್ಟು ಜೂನ್‍ನಲ್ಲಿ ಹಣ್ಣಾಗುತ್ತದೆ. ದಕ್ಷಿಣಫ್ಲೋರಿಡಾದಲ್ಲಿ ಜೂನ್ ತಿಂಗಳಲ್ಲಿ ಹೂಬಿಟ್ಟು ಜುಲೈಯಲ್ಲಿ ಹಣ್ಣಾಗುತ್ತದೆ. ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಹೂಬಿಟ್ಟು ಎಪ್ರಿಲ್ ತಿಂಗಳಲ್ಲಿ ಕಾಯಿ ಹಣ್ಣಾಗಿ ಮಾರುಕಟ್ಟೆಯಲ್ಲಿರುತ್ತದೆ. 

ಕವಲೊಡೆದ ಗೊಂಚಲುಗಳಲ್ಲಿ ಪರಿಮಳಯುಕ್ತ ಹಸಿರು ಮಿಶ್ರಿತ ಬಿಳಿ ಹೂಗಳನ್ನು ಬಿಟ್ಟು ಎರಡು ವಾರಗಳಲ್ಲಿ ಸಣ್ಣ ಕಾಯಿಗಳು ಕಾನಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಮುಂದೆ ಎರಡು ವಾರಗಳಲ್ಲಿ ಕಾಯಿ ಬೆಳೆದು ಹಸಿರು ಬಣ್ಣದಿಂದ ತಿಳಿನೇರಳೆ ಬಣ್ಣಕ್ಕೆ ಬಂದು ಕಾಯಿ ಹಣ್ಣಾಗುವಾಗ ಕಪ್ಪ ಬಣ್ಣಕ್ಕೆ ತಿರುಗುತ್ತದೆ. ರಸಭರಿತ ಹಣ್ಣಿನ ತಿರುಳು ಕಡುನೇರಳೆ ಬಣ್ಣದಲ್ಲಿದ್ದು ತಿಂದಾಗ ನಾಲಗೆಗೆ ನೇರಳೆಬಣ್ಣ ಹಚ್ಚಿದಂತಾಗುತ್ತದೆ. ಹಣ್ಣಿನ ತಿರುಳು ಗಾಲಿಕ್ ಆಮ್ಲ ಮತ್ತು ಟ್ಯಾನಿನ್ ಅಂಶವನ್ನು ಹೊಂದಿದೆ. ಹಣ್ಣು ಒಂದೇ ಬೀಜವನ್ನು ಹೊಂದಿರುತ್ತದೆ. 

ಈ ಮರದ ಎಲ್ಲಾ  ಭಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನಿಂದಲೂ ಇದು ಪರ್ಯಾಯ ಔಷಧಿಯಾಗಿ ಉಪಯೋಗಿಸಲ್ಪಡುತ್ತಿದೆ. ಪ್ರಸ್ತುತ ಡಯಾಬಿಟಿಸ್ (ಸಕ್ಕರೆಖಾಯಿಲೆ) ಬಹುಪಾಲು ಜನರನ್ನು ಭಾದಿಸುತ್ತಿರುವ ಖಾಯಿಲೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ತ್ವರಿತವಾಗಿ ಕಡಿಮೆ ಮಾಡಲು, ತೊಗಟೆ, ಬೀಜ, ಎಲೆ, ಹೂ, ಎಲ್ಲವನ್ನೂ ಉಪಯೋಗಿಸಲಾಗುತ್ತದೆ. ಹಾಗಾಗಿ ನೇರಳೆಮರಕ್ಕೆ ಅದರಲ್ಲೂ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ.

ಇದಲ್ಲದೆ ಇದರ ತೊಗಟೆ ಉರಿಯೂತಕ್ಕೆ, ರಕ್ತಹೀನತೆಗೆ, ಇದರ ಹಣ್ಣು ಬೇದಿ, ಕಿಬ್ಬೊಟ್ಟೆ ನೋವಿಗೆ, ಹಣ್ಣಿನ ರಸ ವಸಡಿನ ರಕ್ತಸ್ರಾವಕ್ಕೆ, ಎಲೆಗಳು ಜ್ವರಕ್ಕೆ ಮತ್ತು ಬೀಜ ರಕ್ತದೊತ್ತಡಕ್ಕೆ ಬಹುಪಯೋಗಿ. ಫಿಲಿಪಿನ್ಸ್ ಮತ್ತು ಸುರಿನಾಮ್ ಗಳಲ್ಲಿ ನೇರಳೆ ಹಣ್ಣಿನಿಂದ ವೈನ್ ತಯಾರಿಸುತ್ತಾರೆ. ಸುರಿನಾಮ್ ದೇಶದಲ್ಲಿ ಮಗುವಿಗೆ ಜನ್ಮನೀಡಿದ ನಂತರ ಮತ್ತು ತಿಂಗಳ ಋತುಸ್ರಾವದ ನಂತರ ಇದರ ಎಲೆಯಿಂದ ಸ್ನಾನ ಮಾಡುತ್ತಾರೆ. ಇದರಿಂದ ದೇಹದ ವಾಸನೆ ಹೋಗುತ್ತದೆ. ಹಣ್ಣಿನಲ್ಲಿ ಗ್ಲೂಕೋಸ್ ಫ್ರಕ್ಟೋಸ್ ಸಮೃದ್ಧವಾಗಿದೆ. ಹಣ್ಣು ಮತ್ತು ಎಲೆ ಬಾಯಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ. ಇದು ವೈದ್ಯಕೀಯ ಇತಿಹಾಸವನ್ನು ಹೊಂದಿದೆ. ಇಷ್ಟೇ ಅಲ್ಲದೆ ಇದು ಭಾರತದಾದ್ಯಂತ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. 

ಬೀಜರಹಿತ ಹಣ್ಣುಗಳನ್ನು ಹೊಂದಿರುವ  ಕೆಲವು ಸಧಾರಿತ ಜನಾಂಗಗಳು ಇವೆ. ಭಾರತದಲ್ಲಿ ಗುಲಾಬಿ, ಸಿಹಿತಿರುಳು ಮತ್ತು ಸಣ್ಣಬೀಜಗಳು, ಕಪ್ಪುನೇರಳೆ ಅಥವಾ ನೀಲಿ ದೊಡ್ಡ ಆಯತಾಕಾರದ ಹಣ್ಣು, ಸಣ್ಣ ಆಮ್ಲ ಹಣ್ಣುಗಳ ತಳಿಗಳು ಇವೆ. ಕೃಷಿ ಮಾಡುವವರು ಬೀಜ ಹಾಗೂ ಕಸಿ ಮಾಡಿ ಸಸಿ ಮಾಡುತ್ತಾರೆ. ಸಮಾನ್ಯವಾಗಿ ನೇರಳೆ ಹಣ್ಣಿನ ಮರ 4 ರಿಂದ 7 ವರ್ಷಗಳಲ್ಲಿ ಹಣ್ಣು ಕೊಡಲು ಪ್ರಾರಂಭಿಸುತ್ತದೆ. ಕೃಷಿ ಮಾಡುವವರಿಗೆ ಕಪ್ಪು ಎಲೆ ಚುಕ್ಕೆ, ಹಸಿರು ಪೊರೆ ಅಥವಾ ಪಾಚಿಯ ಎಲೆಚುಕ್ಕೆ, ಅಣಬೆ ಬೇರು ಕೊಳೆತ ಆಂತ್ರಾಕ್ನೋನ್ ರೋಗಗಳ ತೊಂದರೆ ಇದೆ. ಮರ ಹೂಬಿಡುವ ಕಾಲದಲ್ಲಿ ಮರಪೂರ್ತಿ ಜೇನುಹುಳುಗಳಿಂದ ತುಂಬಿರುತ್ತವೆ. ಜೇನು ಕೃಷಿಗೆ ನೇರಳೆ ಹೂಗಳು ಹೆಚ್ಚು ಮಕರಂದವನ್ನು ಒದಗಿಸುತ್ತದೆ.

ನೇರಳೆ ಹಣ್ಣನ್ನು ಸಾಸ್, ಜಾವರ್, ಜೆಲ್ಲಿ, ಪಾನಕ, ಶರಬತ್ತು ತಯಾರಿಸಲು ಉಪಯೋಗಿಸುತ್ತಾರೆ. ಇದರ ಎಲೆಯನ್ನು ಜಾನುವಾರುಗಳಿಗೆ ಮೇವಾಗಿ ಮತ್ತು ರೇಷ್ಮೆಹುಳುಗಳಿಗೆ ಆಹಾರವಾಗಿಯೂ ಬಳಸುತ್ತಾರೆ. ಮರ ಹಗುರವಾಗಿರುವುದರಿಂದ ಕೃಷಿ ಉಪಕರಣಗಳ ಮತ್ತು ಬಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಹಿಂದೂ ಸಂಪ್ರದಾಯದ ಪ್ರಕಾರ ಇದರ ಹಣ್ಣು ಕಪ್ಪಾಗಿರುವುದರಿಂದ ಇದು ಶ್ರೀಕೃಷ್ಣನಿಗೆ ಪ್ರಿಯವೆಂದು ಪರಗಣಿಸಲ್ಪಡುತ್ತದೆ. ಇದು ಹೆಚ್ಚಾಗಿ ಹಿಂದೂ ದೇವಾಲಯಗಳ ಬಳಿ ಬೆಳೆಸಲಾಗುತ್ತದೆ. ಭಾರತದಲ್ಲಿ ಇದು ಎಲ್ಲಿ ಜಂಬೂನ್ ಎಂದು ಕರೆಯಲ್ಪಡುತ್ತದೋ ಅದರಲ್ಲಿ ಗುಜರಾತ್ ಒಂದು. ಅಲ್ಲಿ ಇದು ದೇವರುಗಳ ಹಣ್ಣು ಎಂದು ಪರಿಗಣಿಸಲ್ಪಡುತ್ತಿದೆ.