Tuesday 7 August 2018

ಮಳೆಯಲಿ ಮಿಂದ ಇಳೆಯ ಮಡಿಲಲಿ ಅಣಬೆಗಳ ಚಿತ್ತಾರ

              ಬೇಸಿಗೆಯ ಬಿರು ಬಿಸಿಲಿಗೆ ಕಾದ ಭೂದೇವಿಯ ಮಡಿಲಿಗೆ ಮಳೆಯ ಸಿಂಚನ ಸ್ಫರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಬಣ್ಣ ಬಣ್ಣದಲ್ಲಿ, ಹಲವಾರು ಶೈಲಿಯಲ್ಲಿ ಕಾಣಸಿಗುವುದೇ ಈ ಅಣಬೆಗಳು. ತಂಪಾದ ವಾತಾವರಣದಲ್ಲಿ ತಣ್ಣಗೆ ತಲೆ ಎತ್ತಿ ನಿಲ್ಲುವ ಅಣಬೆಗಳು ಮನಷ್ಯನ ಆರೋಗ್ಯಕ್ಕೆ ಪ್ರಕೃತಿ ಮಾತೆ ನೀಡಿದ ಕೊಡುಗೆಯೇ ಸರಿ. ಮಳೆಗಾಲ ಶುರುವಾಯಿತೆಂದರೆ ಅಣಬೆಗಳದ್ದೇ ಕಾರುಬಾರು. ಹಳ್ಳಿಗಳಲ್ಲಿ ಯಾರ ಮನೆಯಲ್ಲಿ ಕೇಳಿದರೂ ಅಣಬೆ ಸಾಂಬಾರು, ಅಣಬೆ ಪಲ್ಯ ಎಂಬಿತ್ಯಾದಿ ಖಾದ್ಯಗಳದ್ದೇ ಹೆಸರು ಕೇಳಿಬರುವಷ್ಟು ಮಳೆಗಾಲದಲ್ಲಿ ಅಣಬೆಗಳು ಫೇಮಸ್ಸು. ತರಕಾರಿಯಂತೆ ಬಳಕೆಯಲ್ಲಿರುವ ಇದು ಮಳೆಗಾಲದಲ್ಲಿ ಮರದ ಪೊಟರೆಗಳಲ್ಲಿ, ತಂಪಾದ ಜಾಗಗಳಲ್ಲಿ ಹುಟ್ಟಿಕೊಳ್ಳುತ್ತವೆ. ನಿನ್ನೆ ಹೋದ ಜಾಗದಲ್ಲೇ ಇವತ್ತು ಹೋಗಿ ನೋಡುವಾಗ ಮುದ್ದಾದ ಆಕಾರದಲ್ಲಿ ಕಣ್ಣು ಸೆಳೆಯುವಂತಹ ಅಣಬೆಗಳು ದಿಢೀರನೆ ತಲೆ ಎತ್ತಿ ನಿಂತಿರುತ್ತವೆ. ಯಾರ ಅನುಮತಿಯನ್ನು ಕೇಳದೇ ಹುಟ್ಟಿಕೊಳ್ಳುತ್ತವೆ. ಯಾರ ಅನುಮತಿಯೂ ಇಲ್ಲದೆ ಮತ್ತೆ ಮಣ್ಣಲ್ಲಿ ಮಣ್ಣಾಗುತ್ತವೆ. 
          ಕೊಳೆಯುತ್ತಿರುವ ಸಾವಯುವ ವಸ್ತುಗಳ ಮೇಲೆ ಬೆಳೆಯುವ, ಸ್ವತಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯಗಳ ವರ್ಗಗಳಲ್ಲಿ ಅಣಬೆಯೂ ಒಂದು. ಮೈಕೋಟ ಸಾಮ್ರಾಜ್ಯದ ಯೂಕಾರ್ಯೋಟ  (Eukaryota) ಕುಟುಂಬಕ್ಕೆ ಸೇರಿದ ಫಂಗೈ(Fungi)ನ ಒಂದು ವಿಧ ಈ ಅಣಬೆಗಳು. ಮುಂಗಾರು ಮಳೆಗಾಗಿ ರೈತ ಕಾದಂತೆಯೇ ಈ ಅಣಬೆಗಳು ಮಳೆ ಸಿಡಿಲನ್ನೇ ಕಾಯುತ್ತಿರುತ್ತವೆ. ಮಳೆ ಬಂದು ನೆಲ ಇನ್ನೇನು ತೇವಭರಿತವಾಗುತ್ತಿದ್ದಂತೆ, ಅಲ್ಲಲ್ಲಿ, ಕಾಡುಗಳಲ್ಲಿ, ತುಂಡಾದ ಮರದ ದಿಮ್ಮಿಗಳ ಮೇಲೆ, ವರ್ಣಿಸಲಾಗದ ಆಕಾರಗಳಲ್ಲಿ, ಹೆಸರಿಡದ ಬಣ್ಣಗಳಲ್ಲಿ ವೈಶಿಷ್ಟ್ಯಪೂರ್ಣವಾಗಿ ಗೋಚರಿಸತೊಡಗುತ್ತವೆ. ಕ್ಷಣಮಾತ್ರದಲ್ಲಿ ನಮ್ಮ ಕಣ್ಣುಗಳನ್ನು ಆಕರ್ಷಿಬಲ್ಲ ವೈವಿಧ್ಯಮಯ ಬಣ್ಣಗಳು ಮತ್ತು ಆಕಾರಗಳಿಂದ ಕೂಡಿದ ಅಣಬೆಗಳು ಎಲ್ಲವೂ ಆಹಾರವಾಗಿ ನಮ್ಮ ಹೊಟ್ಟೆಯನ್ನು ಸೇರಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಅಣಬೆಗಳು ಉಪಯೋಗಕಾರಿಯಾದರೆ, ಇನ್ನು ಕೆಲವು ಅನುಪಯುಕ್ತಕಾರಿಗಳು.          
ಹಳ್ಳಿಯ ಜನರಿಗೆ ಎಷ್ಟು ಮಳೆ ಬಿದ್ದಾಗ ಯಾವ ರೀತಿಯ ಅಣಬೆಗಳು ಹುಟ್ಟಿಕೊಳ್ಳುತ್ತವೆ ಎಂಬ ಪೂರ್ಣ ಮಾಹಿತಿ ಇರುತ್ತವೆ. ಹಾಗಾಗಿ ಮಳೆ ಶುರುವಾದಂದಿನಿಂದ ದಿನ ಲೆಕ್ಕ ಮಾಡಿ ಅಣಬೆಗಳನ್ನು ಅರಸಿ ಪರ್ವತ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಬಯಲಿನಲ್ಲಿ ಹುಡುಕುತ್ತಾ ಹೊರಡುವವರಿದ್ದಾರೆ. ಹೀಗೆ ಅಣಬೆಗಳನ್ನು ಹುಡುಕುತ್ತಾ ಹೋಗುವುದು ಸುಲಭದ ಮಾತಲ್ಲ. ಎಲ್ಲಾ
ಅಣಬೆಗಳನ್ನು ಆಯ್ದು ತರುವಂತೆಯೂ ಇಲ್ಲ. ಆಹಾರವಾಗಿ ಉಪಯೋಗಿಸಬಲ್ಲ ಅಣಬೆಯ ಜೊತೆಗೆ ಸೇರಿಸಲೂ ಬಾರದಂತಹ ವಿಷಕಾರಿ ಅಣಬೆಗಳೂ ಸಿಗುತ್ತವೆ. ಅಮಾನಿಟಿ, ಫೆಲ್ಲಾಯ್ ಡಿನ್, ಮಾಕ್ಸೆರಿಯಾಗಳಂತಹ ವಿಷಕಾರಿ ಅಣಬೆಗಳನ್ನೂ ನಾವು ಕಾಣಬಹುದು. ಅಣಬೆಗಳನ್ನು ತರಲು ಹೋಗುವಾಗ ಪೂರ್ಣ ಮಾಹಿತಿಯಿದ್ದವರು ಅಥವಾ ಹಿರಿಯರಿಂದ ಮಾಹಿತಿ ಪಡೆದುಕೊಂಡು ಹೋಗಬೇಕಾಗುತ್ತದೆ. ಅಣಬೆ ತರಲು ಗುಡ್ಡ ಕಾಡುಗಳಿಗೆ ತೆರಳುವುದು ಅಪಾಯವೂ ಹೌದು. ಮಳೆ ಬಂದು ಮರದಡಿಯಲ್ಲಿನ ತರಗೆಲೆಗಳೆಲ್ಲಾ ಕೊಳೆತು ಹೋಗಿರುತ್ತವೆ. ಸೊಳ್ಳೆಗಳು, ಹುಳುಗಳು ಮತ್ತು ಕೀಟಗಳು ಹುಟ್ಟಿಕೊಂಡಿರುತ್ತವೆ. ಆ ಸೊಳ್ಳೆಗಳ ನಡುವೆ ಅಣಬೆಗಳನ್ನು ಹುಡುಕಿ ತರುವುದು ಒಂದು ರೀತಿಯ ಸಾಹಸವೇ ಸರಿ.         
         
ಅಣಬೆಗಳು ಹುಟ್ಟಲು ಬೇಕಾಗಿರುವುದು ತೇವಾಂಶಭರಿತ ಜಾಗ, ಕೊಳೆತ ಪ್ರದೇಶಗಳು ಹಾಗೂ ಗೊಬ್ಬರದಂತಹ ವಸ್ತುಗಳು. ವಲ್ಲಾರಿಲ್ಲಾ ವಾಲ್ಟೇಪಿ, ಮರಾಸಯಸ್, ಒರಿಡೆಸ್‍ಗಳಂತಹ ಅಣಬೆಗಳು ಇಂತಹ ಕೊಳೆತ ಪ್ರದೇಶದಲ್ಲಿ ಗೋಚರಿಸುತ್ತವೆ. ಪ್ಲುರೋಟಿಸ್ ಮತ್ತು ಲೆಂಟಿನಸ್ ಜಾತಿಯ ಅಣಬೆಗಳು ಮರದ ಮೇಲೆ ಬೆಳೆಯುತ್ತದೆ. ಇನ್ನು ಕೆಲವು ಜಾತಿಯವುಗಳು ಬದನಿಕೆಗಳಾಗಿದ್ದು ಕಾಡಿನಲ್ಲಿ ಮರಗಳ ಮೇಲೆ ಬೆಳೆಯುತ್ತದೆ. ಕೊಪ್ರಿನಸ್, ಮರಾಸಿಯಸ್ ಮತ್ತು ಅಗ್ಯಾರಿ ಕನ್ ಸಗಣಿಯ ಮೇಲೆ ಬೆಳೆಯುತ್ತದೆ. ವಾತಾವರಣದಲ್ಲಿ ದೊರೆಯುವ ಉಷ್ಣಾಂಶ, ಮಣ್ಣಿನಲ್ಲಿರುವ ಶೈತ್ಯ ಮತ್ತು ಕೊಳೆತ ರಾಸಾಯನಿಕ ಅಂಶಗಳು ಅಣಬೆಗಳ ಬೆಳವಣಿಗೆಗೆ ಬಹುಮುಖ್ಯವಾದವುಗಳು.
          ಮಳೆಗಾಲದಲ್ಲಿ ಮಾತ್ರವೇ ಹೇರಳವಾಗಿ ಸಿಗುವ ಈ ಅಣಬೆಗಳಲ್ಲಿ ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶವೆಲ್ಲಾ ತುಂಬಿಕೊಂಡಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಆರೋಗ್ಯ ಮತ್ತು ವಾಣಿಜ್ಯ ಲಾಭದಿಂದಾಗಿ ಕೃತಕವಾಗಿ ಬೆಳೆಯುವ ಪದ್ಧತಿಯೂ ಚಾಲ್ತಿಯಲ್ಲಿದೆ. ತನಗೆ ಬೇಕಾದ ಮಾರುಕಟ್ಟೆಯನ್ನೂ ಇದು ಸೃಷ್ಟಿಸಿಕೊಂಡಿದೆ. ಆದರೂ ಪ್ರತಿದಿನವೂ ದೊರೆಯುವ ಅಣಬೆಗಳಿಗಿಂತ ವರ್ಷ ಪೂರ್ತಿ ಕಾದು ಕುಳಿತು ಮಳೆಗಾಲದಲ್ಲಿ ಸಿಗುವ ಅಣಬೆಗಳನ್ನು ತಿಂದಾಗಲೇ ಅಣಬೆಯ ರುಚಿ ನಾಲಗೆಗೆ ಸಿಗುವುದು ಎಂದರೂ ತಪ್ಪಾಗಲಾರದು.          
 
          ಬಾಲ್ಯದಿಂದಲೂ ಅಣಬೆ ಎಂದರೆ ನಾಯಿ ಕೊಡೆ ಎಂದೇ ನಮ್ಮಂಥವರಿಗೆ ಪರಿಚಿತ. ಅದೇ ಕಣ್ಣಿಗೆ ಕಾಣುವ ಭಾಗದಲ್ಲಿ ಮೇಲುಗಡೆ ಛತ್ರಿಯಾಕಾರದ ಭಾಗವಿದ್ದು ಕೆಳಭಾಗದಲ್ಲಿ ಒಂದು ತೊಟ್ಟು, ಟೋಪಿಯಾಕಾರದ ಭಾಗವಿರುತ್ತದೆ. ಅದರೊಳಗೆ ಹಲವು ಪದರಗಳಿವೆ. ನೋಡಲು ಶಾಲೆಗೆ ಹೋಗುವಾಗ ಕೊಂಡೊಯ್ಯುತ್ತಿದ್ದಂತಹ ಕೊಡೆಯಂತೆಯೇ ಕಾಣುತ್ತಿತ್ತು. ಅವುಗಳು ಮಾತ್ರ ಅಣಬೆಗಳಾಗಿದ್ದವು. ಆದರೆ ಅಣಬೆಗಳು ದುಂಡಾಗಿಯೂ, ಮೊಟ್ಟಯಾಕಾರದಲ್ಲಿಯೂ ಸಣ್ಣ ಸಣ್ಣ
ಗಂಟಿನಾಕಾರದಲ್ಲಿಯೂ ಕಾಣಸಿಗುತ್ತವೆ. ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ಅಣಬೆಗಳಿವೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಹಲವಾರು ಅಣಬೆಗಳು ವಿಷಪೂರಕವಾದವುಗಳೂ ಹೌದು. ಹೆಚ್ಚಿನವು ವಿಷಕಾರಿ ಅಣಬೆಗಳಾದರೂ ಅವುಗಳ ಅಂದ ಚಂದ ಬಣ್ಣಗಳ ವೈಯ್ಯಾರಕ್ಕೆ ಮನಸೋಲದವರಿಲ್ಲ. ಅವುಗಳಿಗೆ ಅವುಗಳ ವಿವಿಧ ಆಕಾರ ಬಣ್ಣಗಳೇ ಆಸ್ತಿ. ಯಾರೂ ಅವುಗಳನ್ನು ಲೆಕ್ಕಿಸದೇ ಹೋದರೂ ಛಾಯಾಗ್ರಾಹಕರಂತೂ ಅವುಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಿಂದ ಕ್ಲಿಕ್ಕಿಸದೇ ಮುಂದೆ ಸಾಗಲು ಸಾಧ್ಯವಿಲ್ಲಂದಂತಹ ಸೃಷ್ಟಿ ಅವುಗಳದ್ದು.         
          ಇತ್ತೀಚೆಗೆ ಮಾರುಕಟ್ಟೆಯಲ್ಲೂ ಹಲವಾರು ವಿಧದ ಅಣಬೆಗಳು ಲಭ್ಯವಿದೆ. ವಿಲ್ಕಿ ಮಶ್ರೂಮ್, ಬಟನ್ ಮಶ್ರೂಮ್, ಆಯಷ್ಟಕ ಮಶ್ರೂಮ್ ತಿನ್ನಲು ಯೋಗ್ಯ ತಳಿಗಳಾಗಿವೆ. ಪಟ್ಟಣದವರು ಕೇವಲ ಅದೇ ಬಟನ್ ಮಶ್ರೂಮ್, ಮಿಲ್ಕಿ ಮಶ್ರೂಮ್ ಮಾತ್ರ ತಿನ್ನುತ್ತಾರೆ. ಆದರೆ ಹಳ್ಳಿಯವರಿಗೆ ಕಾಡಿನಂಚಿನ ದಿನಕ್ಕೊಂದು ವೈವಿಧ್ಯಮಯ ಅಣಬೆಗಳನ್ನು ದಿನಕ್ಕೊಂದು ಮಾದರಿಯಲ್ಲಿ ಪದಾರ್ಥ ಮಾಡಿ ತಿನ್ನಬಹುದು. ಆಹಾರವಾಗಿ ಉಪಯೋಗಿಸುವ ಅಣಬೆಗಳ ಪಟ್ಟಿ ಉದ್ದವಿದೆ. ಸ್ಥಳೀಯವಾಗಿ ಸಿಗುವ, ಸ್ಥಳೀಯರ ಆಹಾರವಾಗಿ ಉಪಯೋಗಿಸುವ ಅಣಬೆಗಳೂ ಕೂಡ ಲೆಕ್ಕವಿಲ್ಲದಷ್ಟಿವೆ. ಸುಮಾರು 16 ಜಾತಿಯ ಅಣಬೆಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಕಾರ್ಕಳ, ಕುದುರೆ ಮುಖ, ದಕ್ಷಿಣ ಕನ್ನಡ ಭಾಗದ ಹಳ್ಳಿಗಳಲ್ಲಿ ಇಂತಹ ಹುತ್ತದ ಅಣಬೆ, ಮೊದಲ ಮಳೆ ಬಿದ್ದಾಗ ಹುಟ್ಟುವ ಪಟ್ಟ ಅಣಬೆಗಳು, ಮರದಡಿ ಬೆಳೆಯುವ ಅಣಬೆ, ಮರದ ದಿಮ್ಮಿಗಳಲ್ಲಿ ಬೆಳೆಯುವ ಅಣಬೆಗಳು, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವಂತೆ ಬೋಗಿ ಅಣಬೆ, ಮರದ ಅಣಬೆ, ಮರಳು ಅಣಬೆ, ಕಲ್ಲಣಬೆ ಇತ್ಯಾದಿಗಳನ್ನು ಆಹಾರವಾಗಿ ಇಂದಿಗೂ ಬಳಸುವುದನ್ನು ನಾವು ಕಾಣಬಹುದು. ಮಳೆ ಬಿದ್ದ ಕೂಡಲೇ ಅಣಬೆಗಳನ್ನು ಹುಡುಕಲು ಗೆಳೆಯರ ಬಳಗದೊಂದಿಗೆ ಹೋಗುವ ಖುಷಿಯೇ ವಿಶೇಷ.         
          ವಿಶೇಷವೆಂದರೆ ಕೆಲವು ಅಣಬೆಗಳು ಅವುಗಳು ಯಾವ ಮರದ ಮೇಲೆ ಅಥವಾ ಮರದ ಕೆಳಗೆ ಹುಟ್ಟುತ್ತವೆಯೋ ಅದೇ ಮರದ ಹೆಸರಿನಿಂದ ಕರೆಯಲ್ಪಡುತ್ತವೆ. ಆದರೆ ಒಂದು ಮರದ ಹತ್ತಿರ ಬೇರೆ ವಿಷಕಾರಿ ಜಾತಿಯ ಮರಗಳಿದ್ದರೆ ಅದರಡಿ ಬೆಳೆದ ಅಣಬೆಗಳನ್ನು ತಿನ್ನಬಾರದು. ಹುತ್ತದ ಅಣಬೆಯಲ್ಲೂ ವಿಶೇಷತೆಯಿದೆ. ಎಲ್ಲೆಂದರಲ್ಲಿ ಹುತ್ತದ ಅಣಬೆ ಬೆಳೆಯುವುದಿಲ್ಲ. ಹುತ್ತದ ಅಣಬೆ ಬೆಳೆದಿದೆ ಎಂದರೆ ಅದರ ಕೆಳಗಡೆ ಹಾವು ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹುತ್ತದ ಅಣಬೆಯನ್ನು ಇವತ್ತು ಹೋಗಿ ಕೊಯ್ದು ಬಂದರೆ ಮತ್ತೆ ಅದೇ ಜಾಗದಲ್ಲಿ ನಾಳೆಯೂ ಹುಟ್ಟಿರುತ್ತದೆ. ಹೀಗೆ ಹುತ್ತದ ಅಣಬೆಯು ಮೂರು ದಿನಗಳು ಮಾತ್ರ ಹುಟ್ಟುತ್ತವೆ. ಹುತ್ತದ ಅಣಬೆಗಾಗಿಯೇ ಹಳ್ಳಿ ಜನರು ಕಾಯುವವರಿರುತ್ತಾರೆ. ಯಾಕೆಂದರೆ ಹುತ್ತದ ಅಣಬೆಯ ಸಾಂಬಾರು ತುಂಬಾ ರುಚಿಕರ. ಅದಲ್ಲದೆ ಅವುಗಳು ಉಳಿದ ತಿನ್ನುವ ಅಣಬೆಗಳಿಗಿಂತ ಆಕಾರ, ರುಚಿ ಎಲ್ಲದರಲ್ಲೂ ವಿಭಿನ್ನ. ಹುತ್ತದ ಅಣಬೆಯ ನಂತರ ವಿಶೇಷವೆಂದರೆ ಕಲ್ಲಣಬೆ. ಕಲ್ಲುಗಳ ಆಕಾರದಲ್ಲಿಯೇ ಇರುತ್ತವೆ. ಮಣ್ಣಿನ ಜೊತೆ ಕಲ್ಲುಗಳು ಬೆರೆತಿರುವಂತೆಯೇ ಈ ಅಣಬೆಗಳೂ ಕೂಡ ಮಣ್ಣಿನ ಜೊತೆ ಮಿಶ್ರಣಗೊಂಡಂತೆ ಕಾಣುತ್ತವೆ. ಹೊರಗಡೆಯಿಂದ ಕವಚವಿದ್ದು ಒಳಗಿನ ಭಾಗ ಮೃದುವಾಗಿರುತ್ತದೆ. ಗುಡುಗು ಮಿಂಚು ಜೋರಾಗಿದ್ದ ದಿನ ಹಳ್ಳಿಗರು ಮರುದಿನ ಅಣಬೆ ಹುಡುಕಲು ಹೊರಡುವ ಉತ್ಸಾಹ. ಅಂತಯೇ ಹುಡುಕಿ ರಾಶಿ ರಾಶಿ ಕಲ್ಲಣಬೆಯನ್ನು ತರುವ ಚಾಣಾಕ್ಷರು.
 ಮರಳು ಮಿಶ್ರಿತ ಗುಡ್ಡದ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುವ ಈ ಕಲ್ಲಣಬೆಗಳು ಮುಂಗಾರು ಮಳೆ ಬಂದ ಕೆಲ ದಿನಗಳಲ್ಲಿ ಕಾಣಿಸುತ್ತವೆ. ಕಲ್ಲಣಬೆಗಳು ಸಿಡಿಲಿನ ಹಿಂದೆಯೇ ಭೂಮಿಗಿಳಿಯುತ್ತವೆ. ಅವುಗಳು ಭೂಮಿಯ ಬಾಯಿ ತೆರೆದು ಆಕಾಶ ನೋಡ ಹೊರಟಾಗಲೇ ಆಯ್ದು ತರಬೇಕು. ಬದಲಾಗಿ ಎರಡು ದಿನಗಳು ಕಳೆದು ತರುತ್ತೇನೆಂದರೆ, ಒಳಗಿನ ಮೃದುಭಾಗ ಕಪ್ಪಾಗಲು
ಶುರುವಾಗಿರುತ್ತದೆ. ಒಳಗಿನ ಭಾಗ ಕಪ್ಪಾಯಿತೆಂದರೆ ನಂತರ ಅವುಗಳು ಆಹಾರವಾಗಿ ಬಳಸಲು ಉಪಯೋಗಕಾರಿಯಾಗಿರುವುದಿಲ್ಲ. ಮಳೆಗಾಲದಲ್ಲಿ ಮಾತ್ರವೇ ದೊರೆಯುವುದಾದರೂ ಕಲ್ಲಣಬೆಗೆ ಇಂದು ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ. ಮಳೆಗಾಲದಲ್ಲಿ ಕೆಲವು ಹಳ್ಳಿಗರು ಇದರ ವ್ಯಾಪಾರಕ್ಕಂತಲೇ ಕಲ್ಲಣಬೆಯನ್ನು ಹುಡುಕಿ ತರುವವರಿರುತ್ತಾರೆ. ಕಲ್ಲಣಬೆಯನ್ನು ತಂದು ಪಟ್ಟಣದಲ್ಲಿ ಮಾರಾಟ ಮಾಡಲು ಕೂರುತ್ತಾರೆ. ಪಟ್ಟಣಿಗರಿಗೆ ಇದು ವಿಶೇಷ ತರಕಾರಿ. ಮಾಂಸಾಹಾರದಷ್ಟೇ ವಿಶೇಷತೆ ಇವುಗಳಿಗಿದೆ. ಕೆ.ಜಿ.ಗೆ 200 ರಿಂದ 300 ರು ಕೊಟ್ಟು ಖರೀದಿಸುವ ಜನರೂ ನಮ್ಮಲ್ಲಿದ್ದಾರೆ. ಕೆಲವು ಕಡೆ ಈ ಅಣಬೆಯನ್ನು ಸೇರುಗಳ ಅಳತೆಯಲ್ಲಿ ಮಾರಾಟ ಮಾಡುತ್ತಾರೆ. ಯಾಕೆಂದರೆ ಮಾಂಸಾಹಾರ ಖಾದ್ಯಗಳಿಗಿಂತ ಇದರ ರುಚಿ ಕಡಿಮೆಯೇನಿಲ್ಲ. ಅತ್ಯಂತ ರುಚಿಕರ ಅಣಬೆ ಇದು.        
ಬೇರೆ ಬೇರೆ ಅಣಬೆಗಳು ಅದರದ್ದೇ ಆದ ರುಚಿಯನ್ನು ಹೊಂದಿದೆ. ಒಂದಕ್ಕಿಂತ ಒಂದು ಮಿಗಿಲು. ಲಿಲ್ಲಿಪುಟ್ ಲಲನೆಯನ್ನು ಆಹಾರವಾಗಿ ಯಾವ ಮಾದರಿಯಲ್ಲಿ ಜನರು ಇಷ್ಟ ಪಡುತ್ತಾರೋ ಅದೇ ರೀತಿ ಇದು ತನ್ನ ಔಷಧೀಯ ಗುಣಗಳಿಂದಳೂ ಜನರ ಗಮನ ಸೆಳೆದಿದೆ. ಇಂದು ಅಣಬೆಗೆ ಅದರ ಔಷಧೀಯ ಗುಣಗಳಿಂದಲೂ ಮಾರುಕಟ್ಟೆ ವೃದ್ಧಿಯಾಗಿದೆ. ತನ್ನೊಳಗೆ ಹೇರಳವಾದ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿರುವ ಅಣಬೆಯು ಮಧುಮೇಹಿಗಳಿಗೆ, ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಮತ್ತು ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಹೊಂದಿರುವುದರಿಂದ ಹೃದ್ರೋಗಿಗಳಿಗೆ ಉತ್ತಮ ಆಹಾರ. ಇಂದು ಯಾವ ಆಹಾರವನ್ನು ಸೇವಿಸಿದರೂ ನಮ್ಮಲ್ಲಿರುವ ಖಾಯಿಲೆಗಳಿಗೆ ಎಲ್ಲಿ ಅನಾಹುತ ಮಾಡುತ್ತವೆಯೋ ಎನ್ನುವ ಭಯ ಹೆಚ್ಚಿನವರಿಗೆ. ಆದರೆ ಅಣಬೆಯ ಖಾದ್ಯ ಸೇವಿಸುವುದರಿಂದ ಶುಗರ್, ಕೊಲೆಷ್ಟ್ರಾಲ್‍ನ ಭಯವಿಲ್ಲ. ಅಣಬೆಯಲ್ಲಿ ಕಬ್ಬಿಣಾಂಶ, ತರಕಾರಿ ಮಾಂಸಕ್ಕಿಂತ ಹೆಚ್ಚು ಇದೆ. ಕೊಬ್ಬು, ಸಕ್ಕರೆ ಅಂಶ ಮತ್ತು ಕ್ಯಾಲೊರಿ ಅಂಶ  ಇದರಲ್ಲಿ ಕಡಿಮೆ ಇದೆ. ಹಾಗಾಗಿ ಯಾವುದೇ ಭಯವಿಲ್ಲದೆ ಅಣಬೆಯ ಆಹಾರವನ್ನು ನಿರಾಳವಾಗಿ ಆಸ್ವಾಧಿಸುತ್ತಾ ಸೇವಿಸಬಹುದು. 
          ಅಣಬೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಟಿ2, ಡಿ ಜೀವಸತ್ವ ಹೇರಳವಾಗಿದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತರಕಾರಿಗೆ ಹೋಲಿಸಿದರೆ ಹೆಚ್ಚಿನ ಪ್ರೊಟೀನ್‍ಯುಕ್ತ ಆಹಾರ ಅಣಬೆ. ಮೂರ್ತಿ ಚಿಕ್ಕದಾರೂ ಇದರ ಕೀರ್ತಿ ಮಾತ್ರ ದೊಡ್ಡದು. ಶುದ್ಧ ಸಸ್ಯಾಹಾರಿಯಾಗಿರುವ ಅಣಬೆಯನ್ನು ಮಾಂಸಹಾರಿಗಳೇ ಹೆಚ್ಚು ಇಷ್ಟ ಪಡುತ್ತಾರೆ. ವಿಶೇಷ ಪರಿಮಳ ಹೊಂದಿರುವ ಅಣಬೆ ಖಾದ್ಯ ಸ್ವಾದಿಷ್ಟ ರುಚಿಯೊಂದಿಗೆ ದೇಹಕ್ಕೆ ಬೇಕಾಗಿರುವ ನಾರಿನಂಶವನ್ನು ಒದಗಿಸುತ್ತದೆ. ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಕನಿಷ್ಟ ಕೊಬ್ಬು ಹೊಂದಿರುವ ಇದು ದೇಹದ ಬೊಜ್ಜು ಇಳಿಸಲು, ಡಯೆಟ್ ಪ್ರಿಯರಿಗೆ ಉತ್ತಮ ಆಹಾರ. ಪೋಲಿಕ್ ಆಮ್ಲ, ವಿಟಮಿನ್ ಬಿ, ಸಿ, ಇರುವ ಅಣಬೆಯನ್ನು ಸೇವಿಸಿದರೆ ಕರುಳಿನ ತೊಂದರೆ, ಮಲಬದ್ಧತೆಯ ಸಮಸ್ಯೆಗಳು ಶಮನವಾಗುತ್ತದೆ. ಪ್ರೋಟೀನ್ ಖಜಾನೆ ಎನ್ನಲಾಗುವ ಅಣಬೆಯನ್ನು ವಾರಕ್ಕೆರಡು ಸಲ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ವೈಜ್ಞಾನಿಕರು ಹೇಳುತ್ತಾರೆ.         
ಹುತ್ತದ ಅಣಬೆ ಸ್ವಚ್ಛಂದ ಸ್ಥಳಗಳಲ್ಲಿ ಹುಟ್ಟುತ್ತದೆ. ಇದು ಹುಟ್ಟುವ ಸ್ಥಳಗಳಲ್ಲಿ ವಿಷಜಂತುಗಳ ಓಡಾಟ ಜಾಸ್ತಿ ಇರುತ್ತದೆ. ಅಲ್ಲದೆ ಅಣಬೆ ಕೀಳುವಾಗ ಜಾಗರೂಕರಾಗಿರಬೇಕು. ಹೀಗಾಗಿಯೇ ಅಣಬೆ ಕೀಳುವ ಮುಂಚೆ ಮೂರು ಬಾರಿ ಜೋರಾಗಿ ಊರಿನವರಿಗೆ ಅಣಬೆ ಎದ್ದಿರುವುದಾಗಿ ಕೂಗಿ ಹೇಳಬೇಕು ಎಂದು ಹಿರಿಯರು ಹೇಳುವುದು. ಅಣಬೆ ಪದಾರ್ಥ ಮಾಡುವಾಗ ಪದಾರ್ಥಕ್ಕೆ ಕಬ್ಬಿಣ ಮತ್ತು ಬಿಳಿಕಲ್ಲನ್ನು ಕಾಯಿಸಿ ಪದಾರ್ಥಕ್ಕೆ ಹಾಕಬೇಕು. ಇದರಿಂದ ಅಣಬೆಯಲ್ಲಿರುವ ವಿಷಕಾರಿ ಅಂಶ ನಿರ್ಮೂಲನೆಯಾಗುತ್ತದೆ ಎಂದು ಹೇಳುತ್ತಾರೆ ಹೊಸಮೊಗ್ರುವಿನ ಗೃಹಿಣಿ ಸುಮತಿ.         
ಬಾಯಿಗೆ ಬಲು ರುಚಿಕರವೆನಿಸುವ ಅಣಬೆ ಆರೋಗ್ಯಕ್ಕೂ ಅನುಕೂಲ. ಅಣಬೆಗಳಲ್ಲಿ ಕಲ್ಲಣಬೆ ಚಿಕ್ಕದಾಗಿ ದುಂಡಾಕಾರದಲ್ಲಿರುತ್ತವೆ. ಇದು ಭೋದಿ ವೃಕ್ಷಗಳಿರುವ ಕಾಡಿನಲ್ಲಿ ಹೇರಳವಾಗಿರುತ್ತವೆ. ಮಳೆಗಾಲದ ವಿಶೇಷ ಅಡುಗೆಗಳಲ್ಲಿ ಅಣಬೆಗೆ ಅಗ್ರಸ್ಥಾನ. ಪ್ರಕೃತಿದತ್ತವಾಗಿ ಹೇರಳವಾಗಿ ದೊರೆಯುತ್ತಿದ್ದ ಅಣಬೆಗಳು ಇತ್ತೀಚೆಗೆ ಅತ್ತಿಯ ಹೂವಂತಾಗಿ ಬಿಟ್ಟಿದೆ. ಅದಕ್ಕೆ ಪ್ರತಿಯಾಗಿ ಮಾರುಕಟ್ಟೆಗಳಲ್ಲಿ ರೈತರು ಕೃತಕವಾಗಿ ಬೆಳೆದ ಅಣಬೆಗಳು ದುಬಾರಿ ಬೆಲೆಗೆ ದೊರೆಯುತ್ತಿವೆ. ಗುಡ್ಡಕಾಡುಗಳಲ್ಲಿ ಅಲೆದು ಅಣಬೆಗಳನ್ನು ಕೀಳುವ ವರ್ಗವೂ ಕಡಿಮೆಯಾಗಿದೆ.        
ನಾನ್‍ವೆಜ್ ಪ್ಯಾಟರ್ನ್‍ನಲ್ಲಿ ಸಿದ್ಧ ಪಡಿಸಿದ ಇದರ ಖಾದ್ಯಗಳು ಮಾಂಸದ ಅಡುಗೆಗಿಂತ ರುಚಿ. ಉಪ್ಪಿನಕಾಯಿ, ಸೂಫ್, ಚಟ್ನಿ ಪುಡಿಗಳು, ಪಾನೀಯಗಳು, ಔಷದ ಹೀಗೆ ಎಲ್ಲದಕ್ಕೂ ಸೈ ಎನಿಸುವ ಅಣಬೆಯನ್ನು ಅನುಪಯುಕ್ತ ಸಾವಯವ ತ್ಯಾಜ್ಯಗಳಿಂದ ಹೆಚ್ಚಿನ ಖರ್ಚಿಲ್ಲದೆ ತಯಾರಿಸುವ ವಿಧಾನವೂ ಬೆಳೆದಿದೆ. ವರ್ಷದ ಎಲ್ಲಾ ದಿನಗಳಲ್ಲಿ ಲಭ್ಯ, ಆದರೆ ರುಚಿ ಮಾತ್ರ ಮಳೆಗಾಲದಲ್ಲಿ ದೊರೆಯುವ ಅಣಬೆಗಳಿಗೆ ಹೆಚ್ಚು. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆಗಳನ್ನು ತಿನ್ನುವ ಜನರು ಆರೋಗ್ಯವಂತ ಜೀವನವನ್ನು ನಡೆಸುತ್ತಿರುವುದರಲ್ಲಿ ಎರಡು ಮಾತಿಲ್ಲ.