ಕವನ

ನೆನಪಾಗುವೆ ನೀ...


ನಾ ಬರೆಯೋ ಕವಿತೆಯ ತುಂಬಾ
ನಿನ್ನ ನೆನಪಿನ ಪದಗಳ ರಾಶಿ
ಮೊಗೆದಷ್ಟು ಕೆನೆಯಂತೆ ಉಕ್ಕುತಲಿದೆಯೋ
ನಾ ನೆನೆಯೋ ಪ್ರತಿಕ್ಷಣವೂ
ನೆನಪೆಂಬ ದಾರದ ಜೊತೆ ಹೆಣೆದಿರುವೆಯೋ

ಪ್ರತಿ ನೆನಪು ನಾ ನೀನಾಗಿ
ನಿನ್ನ ಕನಸುಗಳ ರಾಯಭಾರಿಯಾಗಿ
ಕದ್ದೊಯ್ಯುವ ದುರಾಸೆ ಹೆಚ್ಚಾಗಿದೆ...

ಮುಂಜಾನೆ ಇಬ್ಬನಿ ನಾನಾಗಿ
ಇಬ್ಬನಿಯ ಕರಗಿಸೊ ರವಿ ನೀನಾಗು 
ಶಶಿ ಬಂದು ರವಿಯ ಮರೆಮಾಚಿದರೂ
ಸೂರ್ಯನ ತರುವ ನಾಳೆಯೆಂಬ ನಂಬಿಕೆ
ನನ್ನ ಪಾಲಿಗೆ ನೀನಾಗಿರು

ನೀ ನನ್ನವನೇ, ನನಗಾಗಿ ಮಾತ್ರ
ಎನ್ನುವೊಂದು ಸ್ವಾರ್ಥ ಚಿಗುರೊಡೆದಿದೆ
ಚಿಗುರು ತಳಿರಾಗಿ, ಹೂವಾದೊಡೆ
                                                             ಸ್ವಾರ್ಥಿ ನಾನಾಗಿ
                               ನನ್ನವನು ನೀನಾಗುವೆ...
                                                                                  ಕನಸು...


ಪ್ರೀತಿಮಳೆ

ಮೋಡ ಕಪ್ಪೇರಿ ಸಂಜೆ ಕತ್ತಲು
ಬಾನು ಭೂಮಿಯ ಸಮ್ಮಿಲನಕೆ
ನವಿಲ ನರ್ತನ
ಕಣ್ಣಲ್ಲಿ ಅಂಕುರಿಸಿದ ಪ್ರೇಮದ ಮಿಂಚು
ಹೃದಯಗಳ ಬೆಸೆದು
ಮುಗಿಲ ಕೆಣಕಿತು ಮಣ್ಣಿನ ವಿರಹ
ಆಸೆ ಅತಿಯಾಗಿ ಮುಗಿಲ ತಲ್ಲಣ
ಬಡಿಯಿತು ಗುಡುಗು
ಗಾಳಿ ತಿಳಿಸಿತು ಬೀಸುತ ಪ್ರೇಮ ಸಂದೇಶ
ಸನಿಹ ಬಯಸಿದೆ ಮಣ್ಣು
ಕೂಗಿ ಕರೆಯಿತು ಮಳೆಯ
ಮೋಡ ಕರಗಿತು ಪ್ರೀತಿಗೆ
ಇಳಿಯಿತು ಮೊದಲ ವರ್ಷಧಾರೆ
ಮಣ್ಣ ಮಿಲನವಾಯಿತು ಮಳೆಹನಿಯ ಜೊತೆಗೆ
ಇಳೆಯ ಸಂತೋಷ ಘಮ್ಮೆಂತು ಮಣ್ಣಿನ ಪರಿಮಳ
ಗಿಡ ಮರಗಳೇ ಸಾಕ್ಷಿ
ಧರೆಯ ತಟ್ಟಿದ ಮೊದಲ ಹನಿಗಳ ಶುಭಮಿಲನಕೆ...


1 comment: