Saturday 3 February 2018

ಕ್ರಿಸ್‍ಮಸ್‍ನೊಂದಿಗೆ ಬೆಸೆದ ಕೇಕ್‍ನ ಬಾಂಧವ್ಯ



          ಡಿಸೆಂಬರ್ ಎಂದರೆ ಕ್ರಿಸ್‍ಮಸ್, ಕ್ರಿಸ್‍ಮಸ್ ಎಂದರೆ ಕೇಕ್ ಅನ್ನುವಷ್ಟು ಪ್ರಸಿದ್ಧಿಯಾಗಿರುವ ಗ್ಲೋಬಲ್ ಫೆಸ್ಟಿವಲ್ ಕ್ರಿಸ್‍ಮಸ್ ಆಚರಣೆಗೆ ಜಗತ್ತೇ ತಯಾರಾಗಿ ನಿಂತಿದೆ. ವಿಶ್ವದಾದ್ಯಂತ ಜನರ ಸಾಮರಸ್ಯದ ದ್ಯೋತಕವಾಗಿ ಆಚರಿಸಲ್ಪಡುತ್ತಿರುವ ಕ್ರಿಸ್‍ಮಸ್ ಹಬ್ಬವೆಂದರೆ ಜಗದ ಮೂಲೆ ಮೂಲೆಯಲ್ಲೂ ಸಡಗರದ ವಾತಾವರಣ.
ಕ್ರಿಸ್‍ಮಸ್ ತಿಂಗಳು ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ನಕ್ಷತ್ರಗಳು, ಕ್ರಿಸ್‍ಮಸ್ ಟ್ರೀ, ಹೊಸ ಬಟ್ಟೆ ಖರೀದಿ, ಹಂಚಿ ತಿನ್ನುವ ಸಂಭ್ರಮ. ಇಡೀ ಜಗತ್ತೇ ಕ್ರಿಸ್‍ಮಸ್ ಹಬ್ಬ ಆಚರಿಸಿದರೂ ಕ್ರೈಸ್ತ ಸಮುದಾಯಕ್ಕೆ ಮಾತ್ರ ಕ್ರಿಸ್‍ಮಸ್ ಬಹಳ ಶ್ರೇಷ್ಠ ಹಬ್ಬ. ಯೇಸುವಿನ ಜನ್ಮದಿನವನ್ನು ಕ್ರಿಸ್‍ಮಸ್ ಹಬ್ಬವಾಗಿ ಆಚರಿಸುವ ಕ್ರೈಸ್ತ ಸಮುದಾಯ ಕ್ರಿಸ್‍ಮಸ್‍ನ ಮೂರು ವಾರಗಳ ಕಾಲ ಕ್ರೈಸ್ತನ ಆಗಮನದ ಸಂಕೇತದ ಕಾಲಮಾನವಾಗಿದ್ದು, ಈ ಕಾಲಾವಧಿಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮಗಳನ್ನು ಆಚರಿಸದೆ, ಆ ನಂಬಿಕೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. 
          ಎಲ್ಲಾ ಧರ್ಮಗಳಲ್ಲಿ ಇರುವಂತೆಯೇ ಕ್ರೈಸ್ತಧರ್ಮದಲ್ಲಿಯೂ ಈ ಕ್ರಿಸ್‍ಮಸ್ ಹಬ್ಬ ಕುಟುಂಬ ಮತ್ತು ಸ್ನೇಹಿತರ ಒಡಗೂಡಿ ಆಚರಿಸುವ ಮೂಲಕ ಬಾಂಧವ್ಯ ಬೆಳೆಸುವ ಹಬ್ಬವಾಗಿದೆ. ಹಬ್ಬವೆಂದರೆ ಪೂಜೆ, ಭಕ್ತಿ, ಶ್ರದ್ಧೆ, ನಂಬಿಕೆ, ಆಚರಣೆ, ತಿಂಡಿ ತಿನಿಸು, ಎಲ್ಲವನ್ನೂ ಒಳಗೊಂಡಿರುತ್ತದೆ. ವಿಶ್ವದ ವಿವಿಧ ರಾಷ್ಟ್ರಗಳು ಮಾತ್ರವಲ್ಲದೇ, ಭಾರತದ ವಿವಿಧ ಭಾಗಗಳಲ್ಲಿಯೂ ಕ್ರಿಸ್‍ಮಸ್ ಆಚರಣೆ, ತಿಂಡಿ ತಿನಿಸುಗಳಲ್ಲಿ ಅದರದ್ದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ.  
          ನಕ್ಷತ್ರಗಳು, ಕ್ರಿಸ್‍ಮಸ್ ಟ್ರೀ, ಬೆಳಕಿನಿಂದ ಮದುವಣಗಿತ್ತಿಯಂತೆ ತಯಾರಾದ ಚರ್ಚ್‍ಗಳು ವಿವಿಧ ಬಗೆಯ ಕೇಕ್‍ಗಳ ಮೂಲಕ ಜನರನ್ನು ಸ್ವಾಗತ ಕೋರುತ್ತವೆ. ಪೂಜೆ, ಪ್ರಾರ್ಥನೆಗಳಿಂದ ಚರ್ಚ್ ಜನರಿಂದ ತುಂಬಿದರೆ, ಮನಸ್ಸು ಹಬ್ಬದ ಸಂಭ್ರಮದಿಂದ ತುಂಬುತ್ತದೆ. ಎಲ್ಲಾ ವಯಸ್ಸಿನ ಮನಸ್ಸುಗಳನ್ನು ಯಾವುದೇ ಬೇಧ ಭಾವಗಳಿಲ್ಲದೇ ಹಬ್ಬಗಳು ಆಕರ್ಷಿಸುತ್ತವೆಯೆಂದರೆ ಅದು ಹಬ್ಬದ ತಿಂಡಿ ತಿನಿಸುಗಳಿಂದ ಮಾತ್ರ. ಹಬ್ಬ ಎಷ್ಟೇ ಅದ್ದೂರಿಯಾಗಿ ನಡೆದರೂ ಅದರ ಕೇಂದ್ರ ಬಿಂದು ಮಾತ್ರ ತಿಂಡಿ ತಿನಿಸುಗಳಾಗಿರುತ್ತವೆ.
          ಕ್ರಿಸ್‍ಮಸ್ ಎಂದರೆ ಅಲ್ಲಿ ಮೊದಲ ಆದ್ಯತೆ ತಿಂಡಿ ತಿನಿಸುಗಳಿಗೆ. ಅದರಲ್ಲೂ ಕ್ರಿಸ್ ಮಸ್ ಬಂತೆಂದರೆ ಕೇಕ್‍ಗಳದ್ದೇ ರಾಯಭಾರ. ಅಷ್ಟರ ಮಟ್ಟಿಗೆ ಕ್ರಿಸ್‍ಮಸ್ ಹಾಗೂ ಕೇಕ್‍ನ ಸಂಬಂಧ ಗಟ್ಟಿಯಾಗಿದೆ. ಕ್ರಿಸ್‍ಮಸ್ ಆಚರಣೆ ಕ್ರೈಸ್ತ ಧರ್ಮಿಯರಿಗೆ ಸೀಮಿತವಾದರೆ ತಿಂಡಿ ತಿನಿಸುಗಳು ಮಾತ್ರ ಸರ್ವಧರ್ಮದವರಿಗೂ ಅಚ್ಚುಮೆಚ್ಚು. ಕ್ರಿಸ್‍ಮಸ್ ಹತ್ತಿರವಾಗುತ್ತಿದ್ದಂತೆ ಒಂದು ತಿಂಗಳ ಮೊದಲೇ ತಿಂಡಿ, ಕೇಕ್, ವೈನ್‍ಗಳ ತಯಾರಿ ಶುರುವಾಗುತ್ತದೆ. ಹೆಚ್ಚಿನವರು ತಮ್ಮ ಮನೆಯಲ್ಲಿಯೇ ತಿಂಡಿ, ಕೇಕ್, ವೈನ್‍ಗಳನ್ನು ತಯಾರಿಸುತ್ತಾರೆ. ತಿಂಡಿಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಅಕ್ಕಿ ಉಂಡೆ, ಗರ್ಜಿಕಾಯಿ, ಕುಕ್ಕೀಸ್‍ಗಳು, ನ್ಯೂರಿಸ್ ಫೇಮಸ್. ವಿವಿಧ ಪ್ರಾಂತಗಳಲ್ಲಿ ಸ್ವಲ್ಪ ಭಿನ್ನತೆಯಿದ್ದು, ಕುಲ್ಕಲ್ಸ್, ಕೊರ್ಮಾಲಸ್, ಪೆರಾಡ್, ಡೊಡೊಲ್, ಬಹುಪದರಿನ ಬೆವಿಂಕಾಗಳನ್ನು ಕಾಣಬಹುದು. ಪೋರ್ಚುಗೀಸರಿಗೆ ಪ್ರಭಾವಿತಗೊಂಡ ಗೋವಾದಲ್ಲಿ ಸಾರ್ಪಥೆಲ್, ಪೋರ್ಚುಗೀಸ್ ಮೂಲದ ಸ್ಪೈಸಿ ವಿನೆಜೆರಿ ಮಿಟ್ಸ್ಯೂ, ಕ್ರಿಸ್‍ಮಸ್ ಭೋಜನ ಮತ್ತು ಕಸ್ಟಮರಿ ಪ್ಲಾಟರ್ ಸ್ವೀಟ್ಸ್ ಇಲ್ಲದೆ ಕ್ರಿಸ್‍ಮಸ್ ಅಪೂರ್ಣ. ಬ್ರಿಟಿಷರಿಗೆ ಪ್ರಭಾವಿತಗೊಂಡ ಪೂರ್ವಭಾರತದಲ್ಲಿ ಸಿಹಿತಿಂಡಿಗಳಲ್ಲಿ ಸಮಾನವಾದ ಶೈಲಿ ಕಾಣಬಹುದು. ಕಿಲ್ಕುಲ್ಸ್, ಜುಜುಲ್ಸ್, ನ್ಯೂರಿಸ್ ಮರ್ಜಿಪ್ಯಾನ್ಸ್ ಮುಂತಾದವು. ಸಾಂಪ್ರದಾಯಿಕವಾಗಿ ಕ್ರಿಸ್‍ಮಸ್‍ನ ಹೆಚ್ಚಿನ ತಿಂಡಿತಿನಿಸುಗಳು ತೆಂಗಿನಕಾಯಿ ಹಾಗೂ ಅಕ್ಕಿಭರಿತವಾಗಿರುತ್ತದೆ. ವಿವಿಧ ಭಾಗಗಳಲ್ಲಿ ಎಷ್ಟೇ ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆಯಿದ್ದರೂ ಎಲ್ಲಾ ಭಾಗದಲ್ಲೂ ಕೇಕ್ ಮಾತ್ರ ಪ್ರಧಾನ ತಿನಿಸು. ಕ್ರಿಸ್‍ಮಸ್‍ಗೆ ಕೇಕ್ ಇಲ್ಲದೆ ಕ್ರಿಸ್‍ಮಸ್ ಅರ್ಥಹೀನ. ಈಗೆಲ್ಲಾ ಕೇಕ್ ಮಾಡುವುದು ಕಷ್ಟದ ಕೆಲಸವಲ್ಲ. ಕೇಕ್‍ಗೆ ಬೇಕಾದ ಪಾಕವಸ್ತುಗಳೆಲ್ಲಾ ಮಾರುಕಟ್ಟೆಯಲ್ಲಿಯೇ ಲಭ್ಯವಿದೆ. ಮಾಡಲು ನುರಿತ ಕೈಗಳಿದ್ದರೆ ಮನೆಯಲ್ಲಿಯೇ ಕೇಕ್ ಮಾಡಿ ತಿನ್ನಬಹುದು. ಇದೇ ಹಬ್ಬದ ವಿಶೇಷತೆ. ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕೇಕ್ ಮಾಡಿ ಸವಿಯುವ ಕೈಗಳು ಕಡಿಮೆಯಾಗಿದೆ. ಬ್ಯುಸಿ ಲೈಫ್‍ಲ್ಲಿ ಎಲ್ಲರೂ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಹಾಗಾಗಿ ಕ್ರಿಸ್‍ಮಸ್ ಸೀಸನ್ ಬಂತೆಂದರೆ ಎಲ್ಲಾ ಬೇಕರಿಗಳು ಕೇಕ್ ತಯಾರಿಯಲ್ಲಿ ಬ್ಯುಸಿಯಾಗಿರುತ್ತವೆ. ಮಾರುಕಟ್ಟೆಯೂ ವಿಧವಿಧದ ಕೇಕ್‍ಗಳಿಂದ ಗ್ರಾಹಕರನ್ನು ಸೆಳೆಯಲೆಂದೇ ತಯಾರಾಗಿರುತ್ತವೆ. 

          ಕೆಲವರು ಮನೆಯಲ್ಲಿಯೇ ಸಣ್ಣ ಸಣ್ಣ ಕೇಕ್‍ಗಳನ್ನು ಮಾಡುವ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ. ಅಂತೂ ಇಂತೂ ಪ್ರತೀ ಮನೆಯಲ್ಲೂ ಕೇಕ್‍ಗಳದ್ದೇ ಘಮಘಮ. ಕೇಕ್‍ಗಳನ್ನು ತಿನ್ನೋದಷ್ಟೇ ಅಲ್ಲ ಅದನ್ನು ತಯಾರಿಸೋದರಲ್ಲೂ ಈ ಕ್ರಿಸ್‍ಮಸ್ ತುಂಬಾ ಸ್ಪೆಷಲ್. ಸಿಹಿ ಹಂಚಿ ತಿನ್ನುವ ಜನರಿಗೆ ಕೇಕ್ ಮಾಡೋದು ಕೂಡಾ ಒಂಥರಾ ಕ್ರೇಝ್. ಮನೆಯ ಗೃಹಿಣಿಯರೂ ಕೂಡ ವರುಷ ವರುಷಕ್ಕೆ ಕೇಕ್ ತಯಾರಿಯಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ, ಕ್ರಿಸ್‍ಮಸ್‍ಗೆ ಸ್ಪೆಷಲ್ ಆಗಿ ಎಗ್‍ಲೆಸ್ ಕೇಕ್, ಕ್ಯಾರೆಟ್ ಕೇಕ್‍ಗಳನ್ನು ತಯಾರಿಸುತ್ತಾ, ಕ್ರಿಸ್‍ಮಸ್ ಹಬ್ಬವನ್ನು ವಿಶೇಷತೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಸ್ಥೆಗಳು, ಮಾಲ್‍ಗಳು ಕ್ರಿಸ್‍ಮಸ್ ಹಬ್ಬವನ್ನು ಕೇಕ್‍ಗಾಗಿಯೇ ಮೀಸಲಿಟ್ಟಿವೆ. ಇನ್ಸ್‍ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್‍ನಂತಹ ಸಂಸ್ಥೆಗಳು ಹಲವಾರು ವರ್ಷಗಳಿಂದ ಕೇಕ್‍ನಿಂದ ವಿಭಿನ್ನ ಕಲಾಕೃತಿಗಳನ್ನು ತಯಾರಿಸುತ್ತಿವೆ. 
ಕೇಕ್ ಎಂದರೆ ಅದರ ಗಾತ್ರ, ವಿನ್ಯಾಸ, ಬಣ್ಣಗಳ ಬಗ್ಗೆ ಜನರಲ್ಲಿ ಒಂದು ಕಲ್ಪನೆ ಇತ್ತು. ಕೇಕ್ ಎಂದರೆ ಅಷ್ಟೇ ಅಲ್ಲ, ಕೇಕ್ ಎಂದರೆ ಇಂದು ಜನರ ಕಲ್ಪನೆಗೂ ವೀರಿ ನಿಂತು ಕೇಕ್‍ಶೋ ಎಂಬ ಹೊಸ ಕಾನ್ಸೆಪ್ಟ್ ಬೆಳೆದಿದೆ. ಗೇಟ್ ವೇ ಆಫ್ ಇಂಡಿಯಾ ಕೂಡಾ ಕೇಕ್ ಆಗಬಹುದು ಎಂಬುದನ್ನು ಕೇಕ್ ಶೋಗಳು ಸಾಬೀತುಪಡಿಸುತ್ತಿವೆ. ಮತ್ಸ್ಯಲೋಕದ ಮತ್ಸ್ಯಕನ್ಯೆಯೂ ಕೇಕ್ ಮೂಲಕ ಪ್ರತಿಕೃತಿಯಾಗುತ್ತಾಳೆ. ಈಗ ಕೇಕ್ ಮೂಲಕ ಬಾಯಿಗೆ ಸಿಹಿ ಹಂಚುವ ಕಾಲ ಮುಗಿದು, ವಿಭಿನ್ನ ಕಲಾಕೃತಿ ಕೇಕ್ ಮೂಲಕ ಜನರ ಕಣ್ಣಿಗೆ ಸಿಹಿ ಹಂಚುವ ಮೂಲಕ ನೋಡುಗರ ಬಾಯಲ್ಲಿ ನೀರೂರಿಸುವ ಕಾಲ ಬೆಳೆದು ನಿಂತಿದೆ. ಇಂತಹ ಕೇಕ್‍ಗಳನ್ನು ತಿನ್ನುವುದರಲ್ಲಿ ಇರುವ ಖುಷಿಗಿಂತ ನೋಡುವುದರಲ್ಲೇ ಸಂತೋಷ ಹೆಚ್ಚು. ಒಂದು ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಹಲವೆಡೆ ಕೇಕ್ ಜಾತ್ರೆಯೇ ನಡೆಯುತ್ತದೆ.          
           ಯಾವುದೇ ದೇಶ ಕಾಲದ ಚೌಕಟ್ಟಿಲ್ಲದೇ, ಭಾಷೆ ಬಣ್ಣಗಳನ್ನು ವೀರಿ ಈ ಕೇಕ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್‍ಮಸ್ ಹಬ್ಬ ಎಂದರೆ ಕ್ರಿಶ್ಚಿಯನ್ನರಿಗೆ ಎನ್ನುವ ಕಾಲವೊಂದಿತ್ತು. ಆದರೆ ಇಂದು ಈ ಕೇಕ್ ಹಬ್ಬ ಯಾವುದೇ ಜಾತಿ, ಭಾಷೆ, ಜನಾಂಗಕ್ಕೆ ಸೀಮಿತವಾಗದೆ, ಸಂತೋಷ, ಖುಷಿ, ಹಬ್ಬದ ವಾತಾವರಣಕ್ಕೆ, ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಕ್ರಿಸ್‍ಮಸ್ ಹಾಗೂ ಹೊಸವರ್ಷಕ್ಕೆ ನಾಂದಿ ಹಾಡುವ ಮೆತ್ತನೆಯ ಹಾಸಿಗೆಯಂತಿದ್ದ ಕೇಕ್‍ಗಳ ಬಿಳಿಬಣ್ಣದ ಮೇಲೆ ವರ್ಣಚಿತ್ತಾರಗಳು ಮೂಡಿ ಆಕರ್ಷಕ ರೂಪಗಳನ್ನು ಪಡೆಯುತ್ತಿದೆ ಕೇಕ್‍ಲೋಕ. ಕ್ರಿಸ್‍ಮಸ್ ಹಾಗೂ ಹೊಸವರ್ಷಕ್ಕೆ ಪರಿಪೂರ್ಣತೆ ಈ ಕೇಕ್‍ನಿಂದಲೇ ಎಂದರೂ ತಪ್ಪಾಗಲಾರದು. 
          ಕ್ರಿಸ್‍ಮಸ್ ಸಮಯದಲ್ಲಿ ಕೇಕ್ ಉದ್ದಿಮೆಗಳಿಗೆ, ಬೇಕರಿಗಳಿಗೆ ಬಿಡುವಿಲ್ಲದ ಕೆಲಸ. ಇವರುಗಳಿಗೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು, ಮಾಲ್‍ಗಳು, ಹೋಟೆಲ್‍ಗಳಿಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ತರಾತುರಿ. ಸಾವಿರಾರು ಕೆಜಿ ತೂಕದ, 20ರಿಂದ 30 ಅಡಿಗಳಷ್ಟು ಉದ್ದ, ಅಗಲಗಳ ವಿಭಿನ್ನ ಕಲಾಕೃತಿಗಳನ್ನು, ಉದಾಹರಣೆಗೆ ಎಫೆಲ್‍ಟವರ್, ಗೂಳಿ ಕರಡಿ, ಆ್ಯಂಗ್ರಿಬರ್ಡ್, ಸ್ಕೂಟರ್, ಡೈನೋಸಾರ್‍ಗಳನ್ನು ಕೇಕ್‍ನಲ್ಲಿ ತಯಾರಿಸುವ ಚತುರರೂ ಇದ್ದಾರೆ. ಈ ಮೂಲಕ ಕೇಕ್ ಕೇವಲ ಹಬ್ಬಕ್ಕೆ ವಿಶೇಷ ತಿನಿಸು ಮಾತ್ರವಲ್ಲದೆ, ಒಂದು ಕಲೆಯಾಗಿಯೂ ಕಲಾಕಾರನ ಚಮತ್ಕಾರವನ್ನು ಪ್ರದರ್ಶನಕ್ಕೆ ಕ್ರಿಸ್‍ಮಸ್‍ಕೇಕ್ ವೇದಿಕೆಯಾಗಿದೆ. ಕೇಕ್ ತಯಾರಿ ಒಬ್ಬ ಶಿಲ್ಪಿಯ ಕೆಲಸವೇ ಸರಿ. ಇದರ ತಯಾರಿಗೆ ಶ್ರಮ, ತಾಳ್ಮೆ, ಜ್ಞಾನ, ಶ್ರದ್ಧೆ, ಎಲ್ಲವೂ ಅಗತ್ಯವಿದೆ. ಶಿಲ್ಪಕ್ಕೆ ಉಳಿಯಿಂದ ವಿನ್ಯಾಸ ಕೊಟ್ಟಂತೆಯೇ ಇದಿಕ್ಕೂ ಸೂಕ್ಷ್ಮ ವಿನ್ಯಾಸದ ಕುಸುರಿ ಕೆಲಸವೇ ಬೇಕು. ಈ ರೀತಿಯ ಕೇಕ್‍ನ ಅಲಂಕಾರ 17ನೇ ಶತಮಾನದ ಮಧ್ಯಭಾಗದಿಂದ ಉತ್ತರ ಯುರೋಪ್‍ನ ಇತಿಹಾಸದಿಂದಲೇ ದೊರೆಯುತ್ತದೆ. ಯುರೋಪ್‍ನ ವಾಯವ್ಯ ಪ್ರಾಂತದಲ್ಲೂ ಕೇಕ್ ಅಲಂಕಾರ ಸಾಮಾನ್ಯವಾಗಿತ್ತು. ಇಂದು ಇಡೀ ಜಗತ್ತನ್ನೇ ಆವರಿಸಿರುವ ಕೇಕ್ ಅಲಂಕಾರ ಅಧ್ಯಯನದ ಒಂದು ಕೋರ್ಸ್ ಆಗಿಯೂ ಮುಂಚೂಣಿಯಲ್ಲಿದೆ. ದಲ್ಲದೆ ಪ್ರಸ್ತುತ ಲಾಭದಾಯಕ ಉದ್ದಿಮೆಯಾಗಿಯೂ ಬೆಳೆದಿದೆ. 
            ಡಿಸೆಂಬರ್ ಮೊದಲ ವಾರದಿಂದ ಹೊಸವರ್ಷಾಚರಣೆಯ ಜನವರಿಯ ಮೊದಲ ವಾರದವರೆಗೂ ವಿಸ್ತರಿಸುವ ಈ ಕೇಕ್ ಸಂಭ್ರಮದಲ್ಲಿ ವೈಟ್ ಚಾಕೋಲೇಟ್ ರಾಸ್ಬೆರಿ ಚೀಸ್‍ಕೇಕ್, ರೆಡ್‍ವೆಲ್ವೆಟ್ ಕೇಕ್, ಫ್ರುಟ್‍ಕೇಕ್, ಫಿಗ್ಗಿ ಪುಡ್ಡಿಂಗ್, ಡೇಟ್‍ನಟ್ ಲೋಫ್ ಕೇಕ್, ಇಟಾಲಿಯ ಕ್ರೀಮ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಫ್ಲಮ್ ಕೇಕ್ ವೈವಿಧ್ಯಮಯ ಕೇಕ್‍ಗಳೇ ರಾರಾಜಿಸುತ್ತವೆ. ಇಷ್ಟೆಲ್ಲಾ ವೆರೈಟಿಗಳು ಕಣ್ಣ ಮುಂದಿದ್ದರೂ ಜನರನ್ನು ಹೆಚ್ಚು ಆಕರ್ಷಿಸಿದ ಮತ್ತು ಹೆಚ್ಚು ಆಪ್ತವೆನಿಸಿದ ಕೇಕ್ ಎಂದರೆ ಪ್ಲಮ್‍ಕೇಕ್. ಪ್ರಚಲಿತದಲ್ಲೂ ಪ್ಲಮ್ ಕೇಕ್‍ಗೆ ಹೆಚ್ಚು ಆದ್ಯತೆ ಕೂಡ. ಪ್ಲಮ್‍ಕೇಕ್‍ನ ತಯಾರಿ ಒಂದೂವರೆ ತಿಂಗಳ ಮೊದಲೇ ಪ್ರಾರಂಭವಾಗುತ್ತದೆ. ಕೇಕ್‍ಗೆ ಹೆಚ್ಚು ರುಚಿಕೊಡುವ ನಿಟ್ಟಿನಲ್ಲಿ ಪ್ಲಮ್‍ಕೇಕ್ ತಯಾರಿಸುವ ಒಂದೂವರೆ ತಿಂಗಳು ಮೊದಲು ಅದಕ್ಕೆ ಬೇಕಾದ ಪದಾರ್ಥಗಳಾದ ಡ್ರೈಫ್ರಟ್ಸ್, ನಟ್ಸ್, ಮಸಾಲೆ ಪದಾರ್ಥಗಳನ್ನೆಲ್ಲಾ ಸೇರಿಸಿ ಒಂದು ದೊಡ್ಡ ಟ್ರೇಯೊಳಗೆ ತುಂಬಿ ಅದಕ್ಕೆ ಬ್ರ್ಯಾಂಡಿ ಮತ್ತು ವೈನ್‍ಗಳನ್ನು ಸುರಿದು ಒಂದು ತಿಂಗಳು ಇಡಲಾಗುತ್ತದೆ. ಹೀಗೆ ಇಟ್ಟ ಪಾಕದಿಂದ ಅದಕ್ಕೆ ಅಗತ್ಯವಿರುವ ಇತರ ವಸ್ತುಗಳನ್ನು ಸೇರಿಸಿ ಹಬ್ಬಕ್ಕೆ ಪ್ಲಮ್‍ಕೇಕ್ ತಯಾರಿಸಲಾಗುತ್ತದೆ.

ಕೇಕ್‍ನ ಇತಿಹಾಸ
          ಇತಿಹಾಸದಿಂದಲೂ ಪ್ಲಮ್‍ಕೇಕ್ ಕ್ರಿಸ್‍ಮಸ್ ಸಂಭ್ರಮದಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಪ್ಲಮ್‍ಕೇಕ್‍ನ ಇತಿಹಾಸ ಮಧ್ಯಕಾಲೀನ ಇಂಗ್ಲೆಂಡ್‍ನಲ್ಲಿ ಪ್ರಾರಂಭವಾಗುತ್ತದೆ. ಆಗಿನ ಸಂಪ್ರದಾಯದ ಪ್ರಕಾರ ಕ್ರಿಸ್‍ಮಸ್ ಸಮಯದಲ್ಲಿ ಓಟ್ಸ್, ಡ್ರೈಫ್ರುಟ್ಸ್, ಮಸಾಲೆ, ಜೇನುತುಪ್ಪ ಹಾಕಿ ತಯಾರಿಸಿದ ಗಂಜಿ ತಿನ್ನಲಾಗುತ್ತಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮಾಂಸದಿಂದಲೂ ಗಂಜಿ ತಯಾರಿಸುತ್ತಿದ್ದರು. ಕಾಲ ಉರುಳಿದಂತೆ, ಕ್ರಿಸ್‍ಮಸ್ ಗಂಜಿಗೆ ಹೆಚ್ಚು ಪದಾರ್ಥಗಳನ್ನು ಸೇರಿಸುತ್ತಾ ಪ್ರಸ್ತುತ ಇರುವ ಕೇಕ್‍ಗಳ ಮಾದರಿಗೆ ರೂಪಾಂತರಗೊಂಡವು.
          16ನೇ ಶತಮಾನದಲ್ಲಿ ಓಟ್ಸ್‍ನ ಬದಲಿಗೆ ಹಿಟ್ಟು ಬಳಸಿ ಅದಕ್ಕೆ ಬೆಣ್ಣೆ ಮತ್ತು ಮೊಟ್ಟೆ ಸೇರಿಸಿ, ಗಂಜಿಯಲ್ಲಿ ಮಾಂಸದ ಬಳಕೆ ಕಡಿಮೆ ಮಾಡಲಾಯಿತು. ಈ ಮಿಶ್ರಣವನ್ನು ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಒಂದು ಮಡಕೆಯೊಳಗೆ ಕುದಿಯುವ ನೀರಿನಲ್ಲಿ ಹಾಕಿ ಹಲವು ಗಂಟೆವರೆಗೆ ಬೇಯಿಸಿ ಅದರಿಂದ ಫಿರಂಗಿ ಚೆಂಡಿನಂಥ ದೊಡ್ಡ ಮಿಠಾಯಿಉಂಡೆ ದೊರೆಯುತ್ತಿತ್ತು. ಆ ಕಾಲದಲ್ಲಿ ವೊವೆನ್ ಹೊಂದಿದ್ದ ಶ್ರೀಮಂತ ಕುಟುಂಬಗಳಲ್ಲಿ ಮಾತ್ರ ನೀರಿನಲ್ಲಿ ಬೇಯಿಸುವ ಬದಲು ಆ ಮಿಶ್ರಣವನ್ನು ವೊವೆನ್‍ನಲ್ಲಿ ಬೇಕ್ ಮಾಡುತ್ತಿದ್ದರು. ಬೇರೆ ಬೇರೆ ಮನೆಯಲ್ಲಿ ಆ ಮನೆಗಳಿಗೆ ಹೊಂದುವಂತೆ ಕೇಕ್‍ನ ಪಾಕವಿಧಾನಗಳಿರುತ್ತಿತ್ತು. ಕ್ರಿಸ್‍ಮಸ್‍ನ ಒಂದು ವಾರದ ಹಿಂದೆ ತಯಾರಿಸುತ್ತಿದ್ದ ಈ ಪುಡ್ಡಿಂಗ್‍ನ್ನು ಕ್ರಿಸ್‍ಮಸ್‍ನ ಹನ್ನೆರಡನೇ ದಿನದವರೆಗೂ ಅಥವಾ ಕೊನೆಯದಿನದವರೆಗೂ ಸಂಗ್ರಹಿಸಿಡಲಾಗುತ್ತಿತ್ತು. ಹಬ್ಬದ ಅಂತಿಮ ಊಟದ ನಂತರ ಇದನ್ನು ಎಲ್ಲರಿಗೂ ಪ್ರಸಾದದಂತೆ ನೀಡುತ್ತಿದ್ದರು.
          ಇಂಗ್ಲೇಂಡ್‍ನಲ್ಲಿ ಒಣದ್ರಾಕ್ಷಿಗೆ ಪ್ಲಮ್ ಎಂದು ಕರೆಯಲಾಗುತ್ತಿತ್ತು. ಗಂಜಿ ಪಾಕದಲ್ಲಿ ಒಣದ್ರಾಕ್ಷಿ ಹೇರಳವಾಗಿದ್ದ ಕಾರಣ ಪ್ಲಮ್ ಎಂಬ ಹೆಸರು ಕೇಕ್‍ಗೂ ಬಂತು. ಕಾಲಕ್ರಮೇಣದಲ್ಲಿ, ಒಣದ್ರಾಕ್ಷಿಯ ಪ್ರಮಾಣ ಕಡಿಮೆಯಾಗಿ, ಬೇರೆ ಬೇರೆ ಡ್ರೈಫ್ರುಟ್ಸ್ ಬಂದವು. ಆದರೆ ಪ್ಲಮ್ ಎಂಬ ಹೆಸರು ಮಾತ್ರ ಕೇಕ್‍ಗೆ ಅಂಟಿಕೊಂಡೇ ಮುಂದುವರಿಯಿತು. ಈಗಲೂ ಪ್ಲಮ್‍ಕೇಕ್ ಎಂದೇ ಪ್ರಸಿದ್ಧಿ ಪಡೆದಿದೆ.
19ನೇ ಶತಮಾನದ ಅಂತ್ಯದಲ್ಲಿ ವಿಕ್ಟೋರಿಯಾ ರಾಣಿ ಹನ್ನೆರಡನೇ ರಾತ್ರಿಯ ಹಬ್ಬವನ್ನು ನಿಷೇಧಿಸಿದಾಗಲೂ ಕೇಕ್ ಮಾತ್ರ ಹಾಗೇ ಉಳಿಯಿತು. ಅಂಗಡಿಯವರು ಹನ್ನೆರಡನೆ ರಾತ್ರಿಗೆ ತಯಾರಿಸಿಟ್ಟ ಪ್ಲಮ್‍ನ್ನು ಕ್ರಿಸ್‍ಮಸ್ ದಿನಕ್ಕೆ ಬಳಸಿದರು. ವ್ಯಾಪಾರವಾಗಿಯೂ ಇದೇ ಸಂಪ್ರದಾಯ ಮುಂದುವರಿಯಿತು.
ಅದೇ ಸಮಯಕ್ಕೆ ಬ್ರಿಟಿಷ್ ವಸಾಹತುಗಳಾದ ಆಸ್ಟ್ರೇಲಿಯಾ, ಅಮೇರಿಕಾ, ಕೆನಡಾ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮನೆಯವರಿಗೆ ಒಂದು ತಿಂಗಳು ಮುಂಚಿತವಾಗಿಯೇ ಕೇಕ್ ತಯಾರಿಸಿ, ವೈನ್ ಮತ್ತು ಉಡುಗೊರೆಗಳೊಂದಿಗೆ ಕಳುಹಿಸಿಕೊಡುತ್ತಿದ್ದರಿಂದ ಕೇಕ್ ಸಂಪ್ರದಾಯ ಇಂಗ್ಲೆಂಡ್‍ನಿಂದ ಹೊರದೇಶಗಳಿಗೂ ಲಗ್ಗೆಯಿಟ್ಟವು.  ಇಂಗ್ಲೆಂಡ್‍ನಿಂದ ಹೊರಬಂದ ಈ ಪ್ಲಮ್‍ಕೇಕ್ ದೇಶ, ಪ್ರದೇಶ, ಕುಟುಂಬಗಳಿಗನುಗುಣವಾಗಿ ಬೇರೆ ಬೇರೆ ರೀತಿಯ ರೆಸಿಪಿಗಳನ್ನು ಪಡೆಯುತ್ತಾ ಬಂದವು.
          ಪ್ಲಮ್‍ಕೇಕ್‍ನೊಂದಿಗೆ ಸಿಹಿ ಹಣ್ಣುಗಳಿಂದ ತಯಾರಿಸಿದ ಫ್ರುಟ್‍ಕೇಕ್ ಕೂಡ ಚಾಲ್ತಿಯಲ್ಲಿದ್ದವು. ಆದರೆ ಫ್ರುಟ್‍ಕೇಕ್ ದುಬಾರಿಯಾಗಿದ್ದರಿಂದ ಇದನ್ನು ಬಳಸುವುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಸಿಹಿಹಣ್ಣುಗಳು, ಡ್ರೈಫ್ರುಟ್ಸ್, ಮಸಾಲೆ ಬೆರೆಸಿ, ಕೆಲವೊಮ್ಮೆ ಸ್ಪಿರಿಟ್ ಪಾನೀಯಗಳಲ್ಲಿ ನೆನೆಸಿ ಕೇಕ್ ತಯಾರಿಸಲಾಗುತ್ತಿತ್ತು. ಇದು ಸಾಮಾನ್ಯವಾಗಿ ಕ್ರಿಸ್‍ಮಸ್ ಹಬ್ಬಗಳಿಗೇ ಸೀಮಿತವಾಗಿತ್ತು. ಪ್ರಾಚೀನ ರೋಮ್‍ನ ಮೊದಲ ಪಾಕವಿಧಾನ ದಾಳಿಂಬೆ ಬೀಜಗಳು, ಪೈನ್‍ನಟ್ಸ್ ಮತ್ತು ಒಣದ್ರಾಕ್ಷಿಯನ್ನು ಬಾರ್ಲಿ ಮ್ಯಾಶ್‍ನಲ್ಲಿ ಮಿಶ್ರಣ ಮಾಡಿ ಫ್ರುಟ್‍ಕೇಕ್ ಮಾಡಲಾಗುತ್ತಿತ್ತು. ಈ ಫ್ರುಟ್ ಕೇಕ್ ಯುರೋಪ್‍ನಾದ್ಯಂತ ಅತೀವೇಗವಾಗಿ ಪಸರಿಸಿ ಆಯಾದೇಶಗಳಲ್ಲಿ ದೊರೆಯುವ ಪಾಕವಸ್ತುಗಳಿಗನುಗುಣವಾಗಿ ವಿಭಿನ್ನತೆಯನ್ನು ಪಡೆಯಿತು. 16ನೇ ಶತಮಾನದಲ್ಲಿ ಸಕ್ಕರೆ, ಹಣ್ಣುಗಳನ್ನು ಹೆಚ್ಚು ಕಾಲ ಕೆಡದಂತೆ ಇಡುತ್ತದೆ ಎಂಬುದನ್ನು ಕಂಡುಕೊಂಡದ್ದರಿಂದ ನಂತರದಲ್ಲಿ ಫ್ರುಟ್‍ಕೇಕ್‍ನಲ್ಲಿ ಸಕ್ಕರೆಯನ್ನು ಹೆಚ್ಚು ಬಳಸಲಾಯಿತು.
          ಕೆನಡಾದಲ್ಲಿ ಫ್ರುಟ್‍ಕೇಕ್‍ನ್ನು ಕ್ರಿಸ್‍ಮಸ್‍ಕೇಕ್ ಎಂದೇ ಕೆರಯಲಾಗುತ್ತದೆ. ಪೋರ್ಚುಗಲ್‍ನಲ್ಲಿ ಬೋಲೋರೈ ಎಂಬ ಫ್ರುಟ್‍ಕೇಕ್‍ನ್ನು ಕ್ರಿಸ್‍ಮಸ್‍ಗೆಂದೇ ತಯಾರಿಸಲಾಗುತ್ತದೆ. ಹೀಗೆ ಡಿಸೆಂಬರ್‍ನ ಚಳಿಗೆ ಕ್ರಿಸ್‍ಮಸ್ ಕೇಕ್ ಜಗತ್ತಿನಾದ್ಯಂತ ಹಬ್ಬದ ಬಿಸಿ ನೀಡುತ್ತದೆ.


ಫ್ರ್ಯಾಂಕ್ಲಿನ ಡಿ'ಸೋಜ, ಬೆಂಗಳೂರು
          ಕ್ರಿಸ್‍ಮಸ್ ಎಂದರೆ ನಮಗೆ ತುಂಬಾ ಸಡಗರ. ಚರ್ಚ್‍ನಲ್ಲಿ ಪ್ರಾರ್ಥನೆ, ಹೊಸ ಬಟ್ಟೆ ಖರೀದಿಸುವುದಕ್ಕಿಂತಲೂ ಆ ಸಮಯದಲ್ಲಿ ಹಲವಾರು ತಿಂಡಿಗಳು ಸಿಗುತ್ತವೆ ಎನ್ನುವುದೇ ಖುಷಿ. ಅದಕ್ಕಿಂತ ನಾವು ಮನೆಯವರೆಲ್ಲಾ ಒಟ್ಟಿಗೆ ಸೇರಿ, ತಿಂಡಿಗೆ, ಕೇಕ್‍ಗೆ ಪಾಕ ಮಿಶ್ರಣ ಮಾಡಿ, ಅದನ್ನು ತಯಾರಿಸುವುದು, ಅದರೊಂದಿಗೆ ಮಾತು, ನಗು ಕೂಡ ಸೇರಿ, ಸಂತೋಷ ಸಡಗರ ದುಪ್ಪಾಟ್ಟಾಗುತ್ತಿತ್ತು. ಆ ಡಿಸೆಂಬರ್ ತಿಂಗಳಿಗಾಗಿಯೇ ಕಾದು ಕೂರುವ ಕ್ಷಣಗಳೇ ಚೆನ್ನಾಗಿರುತ್ತಿತ್ತು. ಆದರೆ, ಈಗ ಎಲ್ಲರೂ ಬ್ಯುಸಿಯಾಗಿಒದ್ದಾರೆ. ಇತ್ತೀಚೆಗೆ ತಿಂಡಿ, ಕೇಕ್‍ಗಳನ್ನು ಮನೆಯಲ್ಲಿ ಮಾಡುವುದಕ್ಕಿಂತ ಅಂಗಡಿ, ಬೇಕರಿಗಳಿಂದ ಖರೀದಿಸುವುದೇ ಹೆಚ್ಚಾಗಿದೆ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುವ ಖುಷಿಯೂ ಕಡಿಮೆಯಾಗಿದೆ.