Tuesday 7 August 2018

ಮಳೆಯಲಿ ಮಿಂದ ಇಳೆಯ ಮಡಿಲಲಿ ಅಣಬೆಗಳ ಚಿತ್ತಾರ

              ಬೇಸಿಗೆಯ ಬಿರು ಬಿಸಿಲಿಗೆ ಕಾದ ಭೂದೇವಿಯ ಮಡಿಲಿಗೆ ಮಳೆಯ ಸಿಂಚನ ಸ್ಫರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಬಣ್ಣ ಬಣ್ಣದಲ್ಲಿ, ಹಲವಾರು ಶೈಲಿಯಲ್ಲಿ ಕಾಣಸಿಗುವುದೇ ಈ ಅಣಬೆಗಳು. ತಂಪಾದ ವಾತಾವರಣದಲ್ಲಿ ತಣ್ಣಗೆ ತಲೆ ಎತ್ತಿ ನಿಲ್ಲುವ ಅಣಬೆಗಳು ಮನಷ್ಯನ ಆರೋಗ್ಯಕ್ಕೆ ಪ್ರಕೃತಿ ಮಾತೆ ನೀಡಿದ ಕೊಡುಗೆಯೇ ಸರಿ. ಮಳೆಗಾಲ ಶುರುವಾಯಿತೆಂದರೆ ಅಣಬೆಗಳದ್ದೇ ಕಾರುಬಾರು. ಹಳ್ಳಿಗಳಲ್ಲಿ ಯಾರ ಮನೆಯಲ್ಲಿ ಕೇಳಿದರೂ ಅಣಬೆ ಸಾಂಬಾರು, ಅಣಬೆ ಪಲ್ಯ ಎಂಬಿತ್ಯಾದಿ ಖಾದ್ಯಗಳದ್ದೇ ಹೆಸರು ಕೇಳಿಬರುವಷ್ಟು ಮಳೆಗಾಲದಲ್ಲಿ ಅಣಬೆಗಳು ಫೇಮಸ್ಸು. ತರಕಾರಿಯಂತೆ ಬಳಕೆಯಲ್ಲಿರುವ ಇದು ಮಳೆಗಾಲದಲ್ಲಿ ಮರದ ಪೊಟರೆಗಳಲ್ಲಿ, ತಂಪಾದ ಜಾಗಗಳಲ್ಲಿ ಹುಟ್ಟಿಕೊಳ್ಳುತ್ತವೆ. ನಿನ್ನೆ ಹೋದ ಜಾಗದಲ್ಲೇ ಇವತ್ತು ಹೋಗಿ ನೋಡುವಾಗ ಮುದ್ದಾದ ಆಕಾರದಲ್ಲಿ ಕಣ್ಣು ಸೆಳೆಯುವಂತಹ ಅಣಬೆಗಳು ದಿಢೀರನೆ ತಲೆ ಎತ್ತಿ ನಿಂತಿರುತ್ತವೆ. ಯಾರ ಅನುಮತಿಯನ್ನು ಕೇಳದೇ ಹುಟ್ಟಿಕೊಳ್ಳುತ್ತವೆ. ಯಾರ ಅನುಮತಿಯೂ ಇಲ್ಲದೆ ಮತ್ತೆ ಮಣ್ಣಲ್ಲಿ ಮಣ್ಣಾಗುತ್ತವೆ. 
          ಕೊಳೆಯುತ್ತಿರುವ ಸಾವಯುವ ವಸ್ತುಗಳ ಮೇಲೆ ಬೆಳೆಯುವ, ಸ್ವತಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯಗಳ ವರ್ಗಗಳಲ್ಲಿ ಅಣಬೆಯೂ ಒಂದು. ಮೈಕೋಟ ಸಾಮ್ರಾಜ್ಯದ ಯೂಕಾರ್ಯೋಟ  (Eukaryota) ಕುಟುಂಬಕ್ಕೆ ಸೇರಿದ ಫಂಗೈ(Fungi)ನ ಒಂದು ವಿಧ ಈ ಅಣಬೆಗಳು. ಮುಂಗಾರು ಮಳೆಗಾಗಿ ರೈತ ಕಾದಂತೆಯೇ ಈ ಅಣಬೆಗಳು ಮಳೆ ಸಿಡಿಲನ್ನೇ ಕಾಯುತ್ತಿರುತ್ತವೆ. ಮಳೆ ಬಂದು ನೆಲ ಇನ್ನೇನು ತೇವಭರಿತವಾಗುತ್ತಿದ್ದಂತೆ, ಅಲ್ಲಲ್ಲಿ, ಕಾಡುಗಳಲ್ಲಿ, ತುಂಡಾದ ಮರದ ದಿಮ್ಮಿಗಳ ಮೇಲೆ, ವರ್ಣಿಸಲಾಗದ ಆಕಾರಗಳಲ್ಲಿ, ಹೆಸರಿಡದ ಬಣ್ಣಗಳಲ್ಲಿ ವೈಶಿಷ್ಟ್ಯಪೂರ್ಣವಾಗಿ ಗೋಚರಿಸತೊಡಗುತ್ತವೆ. ಕ್ಷಣಮಾತ್ರದಲ್ಲಿ ನಮ್ಮ ಕಣ್ಣುಗಳನ್ನು ಆಕರ್ಷಿಬಲ್ಲ ವೈವಿಧ್ಯಮಯ ಬಣ್ಣಗಳು ಮತ್ತು ಆಕಾರಗಳಿಂದ ಕೂಡಿದ ಅಣಬೆಗಳು ಎಲ್ಲವೂ ಆಹಾರವಾಗಿ ನಮ್ಮ ಹೊಟ್ಟೆಯನ್ನು ಸೇರಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಅಣಬೆಗಳು ಉಪಯೋಗಕಾರಿಯಾದರೆ, ಇನ್ನು ಕೆಲವು ಅನುಪಯುಕ್ತಕಾರಿಗಳು.          
ಹಳ್ಳಿಯ ಜನರಿಗೆ ಎಷ್ಟು ಮಳೆ ಬಿದ್ದಾಗ ಯಾವ ರೀತಿಯ ಅಣಬೆಗಳು ಹುಟ್ಟಿಕೊಳ್ಳುತ್ತವೆ ಎಂಬ ಪೂರ್ಣ ಮಾಹಿತಿ ಇರುತ್ತವೆ. ಹಾಗಾಗಿ ಮಳೆ ಶುರುವಾದಂದಿನಿಂದ ದಿನ ಲೆಕ್ಕ ಮಾಡಿ ಅಣಬೆಗಳನ್ನು ಅರಸಿ ಪರ್ವತ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಬಯಲಿನಲ್ಲಿ ಹುಡುಕುತ್ತಾ ಹೊರಡುವವರಿದ್ದಾರೆ. ಹೀಗೆ ಅಣಬೆಗಳನ್ನು ಹುಡುಕುತ್ತಾ ಹೋಗುವುದು ಸುಲಭದ ಮಾತಲ್ಲ. ಎಲ್ಲಾ
ಅಣಬೆಗಳನ್ನು ಆಯ್ದು ತರುವಂತೆಯೂ ಇಲ್ಲ. ಆಹಾರವಾಗಿ ಉಪಯೋಗಿಸಬಲ್ಲ ಅಣಬೆಯ ಜೊತೆಗೆ ಸೇರಿಸಲೂ ಬಾರದಂತಹ ವಿಷಕಾರಿ ಅಣಬೆಗಳೂ ಸಿಗುತ್ತವೆ. ಅಮಾನಿಟಿ, ಫೆಲ್ಲಾಯ್ ಡಿನ್, ಮಾಕ್ಸೆರಿಯಾಗಳಂತಹ ವಿಷಕಾರಿ ಅಣಬೆಗಳನ್ನೂ ನಾವು ಕಾಣಬಹುದು. ಅಣಬೆಗಳನ್ನು ತರಲು ಹೋಗುವಾಗ ಪೂರ್ಣ ಮಾಹಿತಿಯಿದ್ದವರು ಅಥವಾ ಹಿರಿಯರಿಂದ ಮಾಹಿತಿ ಪಡೆದುಕೊಂಡು ಹೋಗಬೇಕಾಗುತ್ತದೆ. ಅಣಬೆ ತರಲು ಗುಡ್ಡ ಕಾಡುಗಳಿಗೆ ತೆರಳುವುದು ಅಪಾಯವೂ ಹೌದು. ಮಳೆ ಬಂದು ಮರದಡಿಯಲ್ಲಿನ ತರಗೆಲೆಗಳೆಲ್ಲಾ ಕೊಳೆತು ಹೋಗಿರುತ್ತವೆ. ಸೊಳ್ಳೆಗಳು, ಹುಳುಗಳು ಮತ್ತು ಕೀಟಗಳು ಹುಟ್ಟಿಕೊಂಡಿರುತ್ತವೆ. ಆ ಸೊಳ್ಳೆಗಳ ನಡುವೆ ಅಣಬೆಗಳನ್ನು ಹುಡುಕಿ ತರುವುದು ಒಂದು ರೀತಿಯ ಸಾಹಸವೇ ಸರಿ.         
         
ಅಣಬೆಗಳು ಹುಟ್ಟಲು ಬೇಕಾಗಿರುವುದು ತೇವಾಂಶಭರಿತ ಜಾಗ, ಕೊಳೆತ ಪ್ರದೇಶಗಳು ಹಾಗೂ ಗೊಬ್ಬರದಂತಹ ವಸ್ತುಗಳು. ವಲ್ಲಾರಿಲ್ಲಾ ವಾಲ್ಟೇಪಿ, ಮರಾಸಯಸ್, ಒರಿಡೆಸ್‍ಗಳಂತಹ ಅಣಬೆಗಳು ಇಂತಹ ಕೊಳೆತ ಪ್ರದೇಶದಲ್ಲಿ ಗೋಚರಿಸುತ್ತವೆ. ಪ್ಲುರೋಟಿಸ್ ಮತ್ತು ಲೆಂಟಿನಸ್ ಜಾತಿಯ ಅಣಬೆಗಳು ಮರದ ಮೇಲೆ ಬೆಳೆಯುತ್ತದೆ. ಇನ್ನು ಕೆಲವು ಜಾತಿಯವುಗಳು ಬದನಿಕೆಗಳಾಗಿದ್ದು ಕಾಡಿನಲ್ಲಿ ಮರಗಳ ಮೇಲೆ ಬೆಳೆಯುತ್ತದೆ. ಕೊಪ್ರಿನಸ್, ಮರಾಸಿಯಸ್ ಮತ್ತು ಅಗ್ಯಾರಿ ಕನ್ ಸಗಣಿಯ ಮೇಲೆ ಬೆಳೆಯುತ್ತದೆ. ವಾತಾವರಣದಲ್ಲಿ ದೊರೆಯುವ ಉಷ್ಣಾಂಶ, ಮಣ್ಣಿನಲ್ಲಿರುವ ಶೈತ್ಯ ಮತ್ತು ಕೊಳೆತ ರಾಸಾಯನಿಕ ಅಂಶಗಳು ಅಣಬೆಗಳ ಬೆಳವಣಿಗೆಗೆ ಬಹುಮುಖ್ಯವಾದವುಗಳು.
          ಮಳೆಗಾಲದಲ್ಲಿ ಮಾತ್ರವೇ ಹೇರಳವಾಗಿ ಸಿಗುವ ಈ ಅಣಬೆಗಳಲ್ಲಿ ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶವೆಲ್ಲಾ ತುಂಬಿಕೊಂಡಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಆರೋಗ್ಯ ಮತ್ತು ವಾಣಿಜ್ಯ ಲಾಭದಿಂದಾಗಿ ಕೃತಕವಾಗಿ ಬೆಳೆಯುವ ಪದ್ಧತಿಯೂ ಚಾಲ್ತಿಯಲ್ಲಿದೆ. ತನಗೆ ಬೇಕಾದ ಮಾರುಕಟ್ಟೆಯನ್ನೂ ಇದು ಸೃಷ್ಟಿಸಿಕೊಂಡಿದೆ. ಆದರೂ ಪ್ರತಿದಿನವೂ ದೊರೆಯುವ ಅಣಬೆಗಳಿಗಿಂತ ವರ್ಷ ಪೂರ್ತಿ ಕಾದು ಕುಳಿತು ಮಳೆಗಾಲದಲ್ಲಿ ಸಿಗುವ ಅಣಬೆಗಳನ್ನು ತಿಂದಾಗಲೇ ಅಣಬೆಯ ರುಚಿ ನಾಲಗೆಗೆ ಸಿಗುವುದು ಎಂದರೂ ತಪ್ಪಾಗಲಾರದು.          
 
          ಬಾಲ್ಯದಿಂದಲೂ ಅಣಬೆ ಎಂದರೆ ನಾಯಿ ಕೊಡೆ ಎಂದೇ ನಮ್ಮಂಥವರಿಗೆ ಪರಿಚಿತ. ಅದೇ ಕಣ್ಣಿಗೆ ಕಾಣುವ ಭಾಗದಲ್ಲಿ ಮೇಲುಗಡೆ ಛತ್ರಿಯಾಕಾರದ ಭಾಗವಿದ್ದು ಕೆಳಭಾಗದಲ್ಲಿ ಒಂದು ತೊಟ್ಟು, ಟೋಪಿಯಾಕಾರದ ಭಾಗವಿರುತ್ತದೆ. ಅದರೊಳಗೆ ಹಲವು ಪದರಗಳಿವೆ. ನೋಡಲು ಶಾಲೆಗೆ ಹೋಗುವಾಗ ಕೊಂಡೊಯ್ಯುತ್ತಿದ್ದಂತಹ ಕೊಡೆಯಂತೆಯೇ ಕಾಣುತ್ತಿತ್ತು. ಅವುಗಳು ಮಾತ್ರ ಅಣಬೆಗಳಾಗಿದ್ದವು. ಆದರೆ ಅಣಬೆಗಳು ದುಂಡಾಗಿಯೂ, ಮೊಟ್ಟಯಾಕಾರದಲ್ಲಿಯೂ ಸಣ್ಣ ಸಣ್ಣ
ಗಂಟಿನಾಕಾರದಲ್ಲಿಯೂ ಕಾಣಸಿಗುತ್ತವೆ. ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ಅಣಬೆಗಳಿವೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಹಲವಾರು ಅಣಬೆಗಳು ವಿಷಪೂರಕವಾದವುಗಳೂ ಹೌದು. ಹೆಚ್ಚಿನವು ವಿಷಕಾರಿ ಅಣಬೆಗಳಾದರೂ ಅವುಗಳ ಅಂದ ಚಂದ ಬಣ್ಣಗಳ ವೈಯ್ಯಾರಕ್ಕೆ ಮನಸೋಲದವರಿಲ್ಲ. ಅವುಗಳಿಗೆ ಅವುಗಳ ವಿವಿಧ ಆಕಾರ ಬಣ್ಣಗಳೇ ಆಸ್ತಿ. ಯಾರೂ ಅವುಗಳನ್ನು ಲೆಕ್ಕಿಸದೇ ಹೋದರೂ ಛಾಯಾಗ್ರಾಹಕರಂತೂ ಅವುಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಿಂದ ಕ್ಲಿಕ್ಕಿಸದೇ ಮುಂದೆ ಸಾಗಲು ಸಾಧ್ಯವಿಲ್ಲಂದಂತಹ ಸೃಷ್ಟಿ ಅವುಗಳದ್ದು.         
          ಇತ್ತೀಚೆಗೆ ಮಾರುಕಟ್ಟೆಯಲ್ಲೂ ಹಲವಾರು ವಿಧದ ಅಣಬೆಗಳು ಲಭ್ಯವಿದೆ. ವಿಲ್ಕಿ ಮಶ್ರೂಮ್, ಬಟನ್ ಮಶ್ರೂಮ್, ಆಯಷ್ಟಕ ಮಶ್ರೂಮ್ ತಿನ್ನಲು ಯೋಗ್ಯ ತಳಿಗಳಾಗಿವೆ. ಪಟ್ಟಣದವರು ಕೇವಲ ಅದೇ ಬಟನ್ ಮಶ್ರೂಮ್, ಮಿಲ್ಕಿ ಮಶ್ರೂಮ್ ಮಾತ್ರ ತಿನ್ನುತ್ತಾರೆ. ಆದರೆ ಹಳ್ಳಿಯವರಿಗೆ ಕಾಡಿನಂಚಿನ ದಿನಕ್ಕೊಂದು ವೈವಿಧ್ಯಮಯ ಅಣಬೆಗಳನ್ನು ದಿನಕ್ಕೊಂದು ಮಾದರಿಯಲ್ಲಿ ಪದಾರ್ಥ ಮಾಡಿ ತಿನ್ನಬಹುದು. ಆಹಾರವಾಗಿ ಉಪಯೋಗಿಸುವ ಅಣಬೆಗಳ ಪಟ್ಟಿ ಉದ್ದವಿದೆ. ಸ್ಥಳೀಯವಾಗಿ ಸಿಗುವ, ಸ್ಥಳೀಯರ ಆಹಾರವಾಗಿ ಉಪಯೋಗಿಸುವ ಅಣಬೆಗಳೂ ಕೂಡ ಲೆಕ್ಕವಿಲ್ಲದಷ್ಟಿವೆ. ಸುಮಾರು 16 ಜಾತಿಯ ಅಣಬೆಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಕಾರ್ಕಳ, ಕುದುರೆ ಮುಖ, ದಕ್ಷಿಣ ಕನ್ನಡ ಭಾಗದ ಹಳ್ಳಿಗಳಲ್ಲಿ ಇಂತಹ ಹುತ್ತದ ಅಣಬೆ, ಮೊದಲ ಮಳೆ ಬಿದ್ದಾಗ ಹುಟ್ಟುವ ಪಟ್ಟ ಅಣಬೆಗಳು, ಮರದಡಿ ಬೆಳೆಯುವ ಅಣಬೆ, ಮರದ ದಿಮ್ಮಿಗಳಲ್ಲಿ ಬೆಳೆಯುವ ಅಣಬೆಗಳು, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವಂತೆ ಬೋಗಿ ಅಣಬೆ, ಮರದ ಅಣಬೆ, ಮರಳು ಅಣಬೆ, ಕಲ್ಲಣಬೆ ಇತ್ಯಾದಿಗಳನ್ನು ಆಹಾರವಾಗಿ ಇಂದಿಗೂ ಬಳಸುವುದನ್ನು ನಾವು ಕಾಣಬಹುದು. ಮಳೆ ಬಿದ್ದ ಕೂಡಲೇ ಅಣಬೆಗಳನ್ನು ಹುಡುಕಲು ಗೆಳೆಯರ ಬಳಗದೊಂದಿಗೆ ಹೋಗುವ ಖುಷಿಯೇ ವಿಶೇಷ.         
          ವಿಶೇಷವೆಂದರೆ ಕೆಲವು ಅಣಬೆಗಳು ಅವುಗಳು ಯಾವ ಮರದ ಮೇಲೆ ಅಥವಾ ಮರದ ಕೆಳಗೆ ಹುಟ್ಟುತ್ತವೆಯೋ ಅದೇ ಮರದ ಹೆಸರಿನಿಂದ ಕರೆಯಲ್ಪಡುತ್ತವೆ. ಆದರೆ ಒಂದು ಮರದ ಹತ್ತಿರ ಬೇರೆ ವಿಷಕಾರಿ ಜಾತಿಯ ಮರಗಳಿದ್ದರೆ ಅದರಡಿ ಬೆಳೆದ ಅಣಬೆಗಳನ್ನು ತಿನ್ನಬಾರದು. ಹುತ್ತದ ಅಣಬೆಯಲ್ಲೂ ವಿಶೇಷತೆಯಿದೆ. ಎಲ್ಲೆಂದರಲ್ಲಿ ಹುತ್ತದ ಅಣಬೆ ಬೆಳೆಯುವುದಿಲ್ಲ. ಹುತ್ತದ ಅಣಬೆ ಬೆಳೆದಿದೆ ಎಂದರೆ ಅದರ ಕೆಳಗಡೆ ಹಾವು ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹುತ್ತದ ಅಣಬೆಯನ್ನು ಇವತ್ತು ಹೋಗಿ ಕೊಯ್ದು ಬಂದರೆ ಮತ್ತೆ ಅದೇ ಜಾಗದಲ್ಲಿ ನಾಳೆಯೂ ಹುಟ್ಟಿರುತ್ತದೆ. ಹೀಗೆ ಹುತ್ತದ ಅಣಬೆಯು ಮೂರು ದಿನಗಳು ಮಾತ್ರ ಹುಟ್ಟುತ್ತವೆ. ಹುತ್ತದ ಅಣಬೆಗಾಗಿಯೇ ಹಳ್ಳಿ ಜನರು ಕಾಯುವವರಿರುತ್ತಾರೆ. ಯಾಕೆಂದರೆ ಹುತ್ತದ ಅಣಬೆಯ ಸಾಂಬಾರು ತುಂಬಾ ರುಚಿಕರ. ಅದಲ್ಲದೆ ಅವುಗಳು ಉಳಿದ ತಿನ್ನುವ ಅಣಬೆಗಳಿಗಿಂತ ಆಕಾರ, ರುಚಿ ಎಲ್ಲದರಲ್ಲೂ ವಿಭಿನ್ನ. ಹುತ್ತದ ಅಣಬೆಯ ನಂತರ ವಿಶೇಷವೆಂದರೆ ಕಲ್ಲಣಬೆ. ಕಲ್ಲುಗಳ ಆಕಾರದಲ್ಲಿಯೇ ಇರುತ್ತವೆ. ಮಣ್ಣಿನ ಜೊತೆ ಕಲ್ಲುಗಳು ಬೆರೆತಿರುವಂತೆಯೇ ಈ ಅಣಬೆಗಳೂ ಕೂಡ ಮಣ್ಣಿನ ಜೊತೆ ಮಿಶ್ರಣಗೊಂಡಂತೆ ಕಾಣುತ್ತವೆ. ಹೊರಗಡೆಯಿಂದ ಕವಚವಿದ್ದು ಒಳಗಿನ ಭಾಗ ಮೃದುವಾಗಿರುತ್ತದೆ. ಗುಡುಗು ಮಿಂಚು ಜೋರಾಗಿದ್ದ ದಿನ ಹಳ್ಳಿಗರು ಮರುದಿನ ಅಣಬೆ ಹುಡುಕಲು ಹೊರಡುವ ಉತ್ಸಾಹ. ಅಂತಯೇ ಹುಡುಕಿ ರಾಶಿ ರಾಶಿ ಕಲ್ಲಣಬೆಯನ್ನು ತರುವ ಚಾಣಾಕ್ಷರು.
 ಮರಳು ಮಿಶ್ರಿತ ಗುಡ್ಡದ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುವ ಈ ಕಲ್ಲಣಬೆಗಳು ಮುಂಗಾರು ಮಳೆ ಬಂದ ಕೆಲ ದಿನಗಳಲ್ಲಿ ಕಾಣಿಸುತ್ತವೆ. ಕಲ್ಲಣಬೆಗಳು ಸಿಡಿಲಿನ ಹಿಂದೆಯೇ ಭೂಮಿಗಿಳಿಯುತ್ತವೆ. ಅವುಗಳು ಭೂಮಿಯ ಬಾಯಿ ತೆರೆದು ಆಕಾಶ ನೋಡ ಹೊರಟಾಗಲೇ ಆಯ್ದು ತರಬೇಕು. ಬದಲಾಗಿ ಎರಡು ದಿನಗಳು ಕಳೆದು ತರುತ್ತೇನೆಂದರೆ, ಒಳಗಿನ ಮೃದುಭಾಗ ಕಪ್ಪಾಗಲು
ಶುರುವಾಗಿರುತ್ತದೆ. ಒಳಗಿನ ಭಾಗ ಕಪ್ಪಾಯಿತೆಂದರೆ ನಂತರ ಅವುಗಳು ಆಹಾರವಾಗಿ ಬಳಸಲು ಉಪಯೋಗಕಾರಿಯಾಗಿರುವುದಿಲ್ಲ. ಮಳೆಗಾಲದಲ್ಲಿ ಮಾತ್ರವೇ ದೊರೆಯುವುದಾದರೂ ಕಲ್ಲಣಬೆಗೆ ಇಂದು ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ. ಮಳೆಗಾಲದಲ್ಲಿ ಕೆಲವು ಹಳ್ಳಿಗರು ಇದರ ವ್ಯಾಪಾರಕ್ಕಂತಲೇ ಕಲ್ಲಣಬೆಯನ್ನು ಹುಡುಕಿ ತರುವವರಿರುತ್ತಾರೆ. ಕಲ್ಲಣಬೆಯನ್ನು ತಂದು ಪಟ್ಟಣದಲ್ಲಿ ಮಾರಾಟ ಮಾಡಲು ಕೂರುತ್ತಾರೆ. ಪಟ್ಟಣಿಗರಿಗೆ ಇದು ವಿಶೇಷ ತರಕಾರಿ. ಮಾಂಸಾಹಾರದಷ್ಟೇ ವಿಶೇಷತೆ ಇವುಗಳಿಗಿದೆ. ಕೆ.ಜಿ.ಗೆ 200 ರಿಂದ 300 ರು ಕೊಟ್ಟು ಖರೀದಿಸುವ ಜನರೂ ನಮ್ಮಲ್ಲಿದ್ದಾರೆ. ಕೆಲವು ಕಡೆ ಈ ಅಣಬೆಯನ್ನು ಸೇರುಗಳ ಅಳತೆಯಲ್ಲಿ ಮಾರಾಟ ಮಾಡುತ್ತಾರೆ. ಯಾಕೆಂದರೆ ಮಾಂಸಾಹಾರ ಖಾದ್ಯಗಳಿಗಿಂತ ಇದರ ರುಚಿ ಕಡಿಮೆಯೇನಿಲ್ಲ. ಅತ್ಯಂತ ರುಚಿಕರ ಅಣಬೆ ಇದು.        
ಬೇರೆ ಬೇರೆ ಅಣಬೆಗಳು ಅದರದ್ದೇ ಆದ ರುಚಿಯನ್ನು ಹೊಂದಿದೆ. ಒಂದಕ್ಕಿಂತ ಒಂದು ಮಿಗಿಲು. ಲಿಲ್ಲಿಪುಟ್ ಲಲನೆಯನ್ನು ಆಹಾರವಾಗಿ ಯಾವ ಮಾದರಿಯಲ್ಲಿ ಜನರು ಇಷ್ಟ ಪಡುತ್ತಾರೋ ಅದೇ ರೀತಿ ಇದು ತನ್ನ ಔಷಧೀಯ ಗುಣಗಳಿಂದಳೂ ಜನರ ಗಮನ ಸೆಳೆದಿದೆ. ಇಂದು ಅಣಬೆಗೆ ಅದರ ಔಷಧೀಯ ಗುಣಗಳಿಂದಲೂ ಮಾರುಕಟ್ಟೆ ವೃದ್ಧಿಯಾಗಿದೆ. ತನ್ನೊಳಗೆ ಹೇರಳವಾದ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿರುವ ಅಣಬೆಯು ಮಧುಮೇಹಿಗಳಿಗೆ, ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಮತ್ತು ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಹೊಂದಿರುವುದರಿಂದ ಹೃದ್ರೋಗಿಗಳಿಗೆ ಉತ್ತಮ ಆಹಾರ. ಇಂದು ಯಾವ ಆಹಾರವನ್ನು ಸೇವಿಸಿದರೂ ನಮ್ಮಲ್ಲಿರುವ ಖಾಯಿಲೆಗಳಿಗೆ ಎಲ್ಲಿ ಅನಾಹುತ ಮಾಡುತ್ತವೆಯೋ ಎನ್ನುವ ಭಯ ಹೆಚ್ಚಿನವರಿಗೆ. ಆದರೆ ಅಣಬೆಯ ಖಾದ್ಯ ಸೇವಿಸುವುದರಿಂದ ಶುಗರ್, ಕೊಲೆಷ್ಟ್ರಾಲ್‍ನ ಭಯವಿಲ್ಲ. ಅಣಬೆಯಲ್ಲಿ ಕಬ್ಬಿಣಾಂಶ, ತರಕಾರಿ ಮಾಂಸಕ್ಕಿಂತ ಹೆಚ್ಚು ಇದೆ. ಕೊಬ್ಬು, ಸಕ್ಕರೆ ಅಂಶ ಮತ್ತು ಕ್ಯಾಲೊರಿ ಅಂಶ  ಇದರಲ್ಲಿ ಕಡಿಮೆ ಇದೆ. ಹಾಗಾಗಿ ಯಾವುದೇ ಭಯವಿಲ್ಲದೆ ಅಣಬೆಯ ಆಹಾರವನ್ನು ನಿರಾಳವಾಗಿ ಆಸ್ವಾಧಿಸುತ್ತಾ ಸೇವಿಸಬಹುದು. 
          ಅಣಬೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಟಿ2, ಡಿ ಜೀವಸತ್ವ ಹೇರಳವಾಗಿದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತರಕಾರಿಗೆ ಹೋಲಿಸಿದರೆ ಹೆಚ್ಚಿನ ಪ್ರೊಟೀನ್‍ಯುಕ್ತ ಆಹಾರ ಅಣಬೆ. ಮೂರ್ತಿ ಚಿಕ್ಕದಾರೂ ಇದರ ಕೀರ್ತಿ ಮಾತ್ರ ದೊಡ್ಡದು. ಶುದ್ಧ ಸಸ್ಯಾಹಾರಿಯಾಗಿರುವ ಅಣಬೆಯನ್ನು ಮಾಂಸಹಾರಿಗಳೇ ಹೆಚ್ಚು ಇಷ್ಟ ಪಡುತ್ತಾರೆ. ವಿಶೇಷ ಪರಿಮಳ ಹೊಂದಿರುವ ಅಣಬೆ ಖಾದ್ಯ ಸ್ವಾದಿಷ್ಟ ರುಚಿಯೊಂದಿಗೆ ದೇಹಕ್ಕೆ ಬೇಕಾಗಿರುವ ನಾರಿನಂಶವನ್ನು ಒದಗಿಸುತ್ತದೆ. ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಕನಿಷ್ಟ ಕೊಬ್ಬು ಹೊಂದಿರುವ ಇದು ದೇಹದ ಬೊಜ್ಜು ಇಳಿಸಲು, ಡಯೆಟ್ ಪ್ರಿಯರಿಗೆ ಉತ್ತಮ ಆಹಾರ. ಪೋಲಿಕ್ ಆಮ್ಲ, ವಿಟಮಿನ್ ಬಿ, ಸಿ, ಇರುವ ಅಣಬೆಯನ್ನು ಸೇವಿಸಿದರೆ ಕರುಳಿನ ತೊಂದರೆ, ಮಲಬದ್ಧತೆಯ ಸಮಸ್ಯೆಗಳು ಶಮನವಾಗುತ್ತದೆ. ಪ್ರೋಟೀನ್ ಖಜಾನೆ ಎನ್ನಲಾಗುವ ಅಣಬೆಯನ್ನು ವಾರಕ್ಕೆರಡು ಸಲ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ವೈಜ್ಞಾನಿಕರು ಹೇಳುತ್ತಾರೆ.         
ಹುತ್ತದ ಅಣಬೆ ಸ್ವಚ್ಛಂದ ಸ್ಥಳಗಳಲ್ಲಿ ಹುಟ್ಟುತ್ತದೆ. ಇದು ಹುಟ್ಟುವ ಸ್ಥಳಗಳಲ್ಲಿ ವಿಷಜಂತುಗಳ ಓಡಾಟ ಜಾಸ್ತಿ ಇರುತ್ತದೆ. ಅಲ್ಲದೆ ಅಣಬೆ ಕೀಳುವಾಗ ಜಾಗರೂಕರಾಗಿರಬೇಕು. ಹೀಗಾಗಿಯೇ ಅಣಬೆ ಕೀಳುವ ಮುಂಚೆ ಮೂರು ಬಾರಿ ಜೋರಾಗಿ ಊರಿನವರಿಗೆ ಅಣಬೆ ಎದ್ದಿರುವುದಾಗಿ ಕೂಗಿ ಹೇಳಬೇಕು ಎಂದು ಹಿರಿಯರು ಹೇಳುವುದು. ಅಣಬೆ ಪದಾರ್ಥ ಮಾಡುವಾಗ ಪದಾರ್ಥಕ್ಕೆ ಕಬ್ಬಿಣ ಮತ್ತು ಬಿಳಿಕಲ್ಲನ್ನು ಕಾಯಿಸಿ ಪದಾರ್ಥಕ್ಕೆ ಹಾಕಬೇಕು. ಇದರಿಂದ ಅಣಬೆಯಲ್ಲಿರುವ ವಿಷಕಾರಿ ಅಂಶ ನಿರ್ಮೂಲನೆಯಾಗುತ್ತದೆ ಎಂದು ಹೇಳುತ್ತಾರೆ ಹೊಸಮೊಗ್ರುವಿನ ಗೃಹಿಣಿ ಸುಮತಿ.         
ಬಾಯಿಗೆ ಬಲು ರುಚಿಕರವೆನಿಸುವ ಅಣಬೆ ಆರೋಗ್ಯಕ್ಕೂ ಅನುಕೂಲ. ಅಣಬೆಗಳಲ್ಲಿ ಕಲ್ಲಣಬೆ ಚಿಕ್ಕದಾಗಿ ದುಂಡಾಕಾರದಲ್ಲಿರುತ್ತವೆ. ಇದು ಭೋದಿ ವೃಕ್ಷಗಳಿರುವ ಕಾಡಿನಲ್ಲಿ ಹೇರಳವಾಗಿರುತ್ತವೆ. ಮಳೆಗಾಲದ ವಿಶೇಷ ಅಡುಗೆಗಳಲ್ಲಿ ಅಣಬೆಗೆ ಅಗ್ರಸ್ಥಾನ. ಪ್ರಕೃತಿದತ್ತವಾಗಿ ಹೇರಳವಾಗಿ ದೊರೆಯುತ್ತಿದ್ದ ಅಣಬೆಗಳು ಇತ್ತೀಚೆಗೆ ಅತ್ತಿಯ ಹೂವಂತಾಗಿ ಬಿಟ್ಟಿದೆ. ಅದಕ್ಕೆ ಪ್ರತಿಯಾಗಿ ಮಾರುಕಟ್ಟೆಗಳಲ್ಲಿ ರೈತರು ಕೃತಕವಾಗಿ ಬೆಳೆದ ಅಣಬೆಗಳು ದುಬಾರಿ ಬೆಲೆಗೆ ದೊರೆಯುತ್ತಿವೆ. ಗುಡ್ಡಕಾಡುಗಳಲ್ಲಿ ಅಲೆದು ಅಣಬೆಗಳನ್ನು ಕೀಳುವ ವರ್ಗವೂ ಕಡಿಮೆಯಾಗಿದೆ.        
ನಾನ್‍ವೆಜ್ ಪ್ಯಾಟರ್ನ್‍ನಲ್ಲಿ ಸಿದ್ಧ ಪಡಿಸಿದ ಇದರ ಖಾದ್ಯಗಳು ಮಾಂಸದ ಅಡುಗೆಗಿಂತ ರುಚಿ. ಉಪ್ಪಿನಕಾಯಿ, ಸೂಫ್, ಚಟ್ನಿ ಪುಡಿಗಳು, ಪಾನೀಯಗಳು, ಔಷದ ಹೀಗೆ ಎಲ್ಲದಕ್ಕೂ ಸೈ ಎನಿಸುವ ಅಣಬೆಯನ್ನು ಅನುಪಯುಕ್ತ ಸಾವಯವ ತ್ಯಾಜ್ಯಗಳಿಂದ ಹೆಚ್ಚಿನ ಖರ್ಚಿಲ್ಲದೆ ತಯಾರಿಸುವ ವಿಧಾನವೂ ಬೆಳೆದಿದೆ. ವರ್ಷದ ಎಲ್ಲಾ ದಿನಗಳಲ್ಲಿ ಲಭ್ಯ, ಆದರೆ ರುಚಿ ಮಾತ್ರ ಮಳೆಗಾಲದಲ್ಲಿ ದೊರೆಯುವ ಅಣಬೆಗಳಿಗೆ ಹೆಚ್ಚು. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆಗಳನ್ನು ತಿನ್ನುವ ಜನರು ಆರೋಗ್ಯವಂತ ಜೀವನವನ್ನು ನಡೆಸುತ್ತಿರುವುದರಲ್ಲಿ ಎರಡು ಮಾತಿಲ್ಲ.
 



Saturday 3 February 2018

ಕ್ರಿಸ್‍ಮಸ್‍ನೊಂದಿಗೆ ಬೆಸೆದ ಕೇಕ್‍ನ ಬಾಂಧವ್ಯ



          ಡಿಸೆಂಬರ್ ಎಂದರೆ ಕ್ರಿಸ್‍ಮಸ್, ಕ್ರಿಸ್‍ಮಸ್ ಎಂದರೆ ಕೇಕ್ ಅನ್ನುವಷ್ಟು ಪ್ರಸಿದ್ಧಿಯಾಗಿರುವ ಗ್ಲೋಬಲ್ ಫೆಸ್ಟಿವಲ್ ಕ್ರಿಸ್‍ಮಸ್ ಆಚರಣೆಗೆ ಜಗತ್ತೇ ತಯಾರಾಗಿ ನಿಂತಿದೆ. ವಿಶ್ವದಾದ್ಯಂತ ಜನರ ಸಾಮರಸ್ಯದ ದ್ಯೋತಕವಾಗಿ ಆಚರಿಸಲ್ಪಡುತ್ತಿರುವ ಕ್ರಿಸ್‍ಮಸ್ ಹಬ್ಬವೆಂದರೆ ಜಗದ ಮೂಲೆ ಮೂಲೆಯಲ್ಲೂ ಸಡಗರದ ವಾತಾವರಣ.
ಕ್ರಿಸ್‍ಮಸ್ ತಿಂಗಳು ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ನಕ್ಷತ್ರಗಳು, ಕ್ರಿಸ್‍ಮಸ್ ಟ್ರೀ, ಹೊಸ ಬಟ್ಟೆ ಖರೀದಿ, ಹಂಚಿ ತಿನ್ನುವ ಸಂಭ್ರಮ. ಇಡೀ ಜಗತ್ತೇ ಕ್ರಿಸ್‍ಮಸ್ ಹಬ್ಬ ಆಚರಿಸಿದರೂ ಕ್ರೈಸ್ತ ಸಮುದಾಯಕ್ಕೆ ಮಾತ್ರ ಕ್ರಿಸ್‍ಮಸ್ ಬಹಳ ಶ್ರೇಷ್ಠ ಹಬ್ಬ. ಯೇಸುವಿನ ಜನ್ಮದಿನವನ್ನು ಕ್ರಿಸ್‍ಮಸ್ ಹಬ್ಬವಾಗಿ ಆಚರಿಸುವ ಕ್ರೈಸ್ತ ಸಮುದಾಯ ಕ್ರಿಸ್‍ಮಸ್‍ನ ಮೂರು ವಾರಗಳ ಕಾಲ ಕ್ರೈಸ್ತನ ಆಗಮನದ ಸಂಕೇತದ ಕಾಲಮಾನವಾಗಿದ್ದು, ಈ ಕಾಲಾವಧಿಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮಗಳನ್ನು ಆಚರಿಸದೆ, ಆ ನಂಬಿಕೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. 
          ಎಲ್ಲಾ ಧರ್ಮಗಳಲ್ಲಿ ಇರುವಂತೆಯೇ ಕ್ರೈಸ್ತಧರ್ಮದಲ್ಲಿಯೂ ಈ ಕ್ರಿಸ್‍ಮಸ್ ಹಬ್ಬ ಕುಟುಂಬ ಮತ್ತು ಸ್ನೇಹಿತರ ಒಡಗೂಡಿ ಆಚರಿಸುವ ಮೂಲಕ ಬಾಂಧವ್ಯ ಬೆಳೆಸುವ ಹಬ್ಬವಾಗಿದೆ. ಹಬ್ಬವೆಂದರೆ ಪೂಜೆ, ಭಕ್ತಿ, ಶ್ರದ್ಧೆ, ನಂಬಿಕೆ, ಆಚರಣೆ, ತಿಂಡಿ ತಿನಿಸು, ಎಲ್ಲವನ್ನೂ ಒಳಗೊಂಡಿರುತ್ತದೆ. ವಿಶ್ವದ ವಿವಿಧ ರಾಷ್ಟ್ರಗಳು ಮಾತ್ರವಲ್ಲದೇ, ಭಾರತದ ವಿವಿಧ ಭಾಗಗಳಲ್ಲಿಯೂ ಕ್ರಿಸ್‍ಮಸ್ ಆಚರಣೆ, ತಿಂಡಿ ತಿನಿಸುಗಳಲ್ಲಿ ಅದರದ್ದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ.  
          ನಕ್ಷತ್ರಗಳು, ಕ್ರಿಸ್‍ಮಸ್ ಟ್ರೀ, ಬೆಳಕಿನಿಂದ ಮದುವಣಗಿತ್ತಿಯಂತೆ ತಯಾರಾದ ಚರ್ಚ್‍ಗಳು ವಿವಿಧ ಬಗೆಯ ಕೇಕ್‍ಗಳ ಮೂಲಕ ಜನರನ್ನು ಸ್ವಾಗತ ಕೋರುತ್ತವೆ. ಪೂಜೆ, ಪ್ರಾರ್ಥನೆಗಳಿಂದ ಚರ್ಚ್ ಜನರಿಂದ ತುಂಬಿದರೆ, ಮನಸ್ಸು ಹಬ್ಬದ ಸಂಭ್ರಮದಿಂದ ತುಂಬುತ್ತದೆ. ಎಲ್ಲಾ ವಯಸ್ಸಿನ ಮನಸ್ಸುಗಳನ್ನು ಯಾವುದೇ ಬೇಧ ಭಾವಗಳಿಲ್ಲದೇ ಹಬ್ಬಗಳು ಆಕರ್ಷಿಸುತ್ತವೆಯೆಂದರೆ ಅದು ಹಬ್ಬದ ತಿಂಡಿ ತಿನಿಸುಗಳಿಂದ ಮಾತ್ರ. ಹಬ್ಬ ಎಷ್ಟೇ ಅದ್ದೂರಿಯಾಗಿ ನಡೆದರೂ ಅದರ ಕೇಂದ್ರ ಬಿಂದು ಮಾತ್ರ ತಿಂಡಿ ತಿನಿಸುಗಳಾಗಿರುತ್ತವೆ.
          ಕ್ರಿಸ್‍ಮಸ್ ಎಂದರೆ ಅಲ್ಲಿ ಮೊದಲ ಆದ್ಯತೆ ತಿಂಡಿ ತಿನಿಸುಗಳಿಗೆ. ಅದರಲ್ಲೂ ಕ್ರಿಸ್ ಮಸ್ ಬಂತೆಂದರೆ ಕೇಕ್‍ಗಳದ್ದೇ ರಾಯಭಾರ. ಅಷ್ಟರ ಮಟ್ಟಿಗೆ ಕ್ರಿಸ್‍ಮಸ್ ಹಾಗೂ ಕೇಕ್‍ನ ಸಂಬಂಧ ಗಟ್ಟಿಯಾಗಿದೆ. ಕ್ರಿಸ್‍ಮಸ್ ಆಚರಣೆ ಕ್ರೈಸ್ತ ಧರ್ಮಿಯರಿಗೆ ಸೀಮಿತವಾದರೆ ತಿಂಡಿ ತಿನಿಸುಗಳು ಮಾತ್ರ ಸರ್ವಧರ್ಮದವರಿಗೂ ಅಚ್ಚುಮೆಚ್ಚು. ಕ್ರಿಸ್‍ಮಸ್ ಹತ್ತಿರವಾಗುತ್ತಿದ್ದಂತೆ ಒಂದು ತಿಂಗಳ ಮೊದಲೇ ತಿಂಡಿ, ಕೇಕ್, ವೈನ್‍ಗಳ ತಯಾರಿ ಶುರುವಾಗುತ್ತದೆ. ಹೆಚ್ಚಿನವರು ತಮ್ಮ ಮನೆಯಲ್ಲಿಯೇ ತಿಂಡಿ, ಕೇಕ್, ವೈನ್‍ಗಳನ್ನು ತಯಾರಿಸುತ್ತಾರೆ. ತಿಂಡಿಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಅಕ್ಕಿ ಉಂಡೆ, ಗರ್ಜಿಕಾಯಿ, ಕುಕ್ಕೀಸ್‍ಗಳು, ನ್ಯೂರಿಸ್ ಫೇಮಸ್. ವಿವಿಧ ಪ್ರಾಂತಗಳಲ್ಲಿ ಸ್ವಲ್ಪ ಭಿನ್ನತೆಯಿದ್ದು, ಕುಲ್ಕಲ್ಸ್, ಕೊರ್ಮಾಲಸ್, ಪೆರಾಡ್, ಡೊಡೊಲ್, ಬಹುಪದರಿನ ಬೆವಿಂಕಾಗಳನ್ನು ಕಾಣಬಹುದು. ಪೋರ್ಚುಗೀಸರಿಗೆ ಪ್ರಭಾವಿತಗೊಂಡ ಗೋವಾದಲ್ಲಿ ಸಾರ್ಪಥೆಲ್, ಪೋರ್ಚುಗೀಸ್ ಮೂಲದ ಸ್ಪೈಸಿ ವಿನೆಜೆರಿ ಮಿಟ್ಸ್ಯೂ, ಕ್ರಿಸ್‍ಮಸ್ ಭೋಜನ ಮತ್ತು ಕಸ್ಟಮರಿ ಪ್ಲಾಟರ್ ಸ್ವೀಟ್ಸ್ ಇಲ್ಲದೆ ಕ್ರಿಸ್‍ಮಸ್ ಅಪೂರ್ಣ. ಬ್ರಿಟಿಷರಿಗೆ ಪ್ರಭಾವಿತಗೊಂಡ ಪೂರ್ವಭಾರತದಲ್ಲಿ ಸಿಹಿತಿಂಡಿಗಳಲ್ಲಿ ಸಮಾನವಾದ ಶೈಲಿ ಕಾಣಬಹುದು. ಕಿಲ್ಕುಲ್ಸ್, ಜುಜುಲ್ಸ್, ನ್ಯೂರಿಸ್ ಮರ್ಜಿಪ್ಯಾನ್ಸ್ ಮುಂತಾದವು. ಸಾಂಪ್ರದಾಯಿಕವಾಗಿ ಕ್ರಿಸ್‍ಮಸ್‍ನ ಹೆಚ್ಚಿನ ತಿಂಡಿತಿನಿಸುಗಳು ತೆಂಗಿನಕಾಯಿ ಹಾಗೂ ಅಕ್ಕಿಭರಿತವಾಗಿರುತ್ತದೆ. ವಿವಿಧ ಭಾಗಗಳಲ್ಲಿ ಎಷ್ಟೇ ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆಯಿದ್ದರೂ ಎಲ್ಲಾ ಭಾಗದಲ್ಲೂ ಕೇಕ್ ಮಾತ್ರ ಪ್ರಧಾನ ತಿನಿಸು. ಕ್ರಿಸ್‍ಮಸ್‍ಗೆ ಕೇಕ್ ಇಲ್ಲದೆ ಕ್ರಿಸ್‍ಮಸ್ ಅರ್ಥಹೀನ. ಈಗೆಲ್ಲಾ ಕೇಕ್ ಮಾಡುವುದು ಕಷ್ಟದ ಕೆಲಸವಲ್ಲ. ಕೇಕ್‍ಗೆ ಬೇಕಾದ ಪಾಕವಸ್ತುಗಳೆಲ್ಲಾ ಮಾರುಕಟ್ಟೆಯಲ್ಲಿಯೇ ಲಭ್ಯವಿದೆ. ಮಾಡಲು ನುರಿತ ಕೈಗಳಿದ್ದರೆ ಮನೆಯಲ್ಲಿಯೇ ಕೇಕ್ ಮಾಡಿ ತಿನ್ನಬಹುದು. ಇದೇ ಹಬ್ಬದ ವಿಶೇಷತೆ. ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕೇಕ್ ಮಾಡಿ ಸವಿಯುವ ಕೈಗಳು ಕಡಿಮೆಯಾಗಿದೆ. ಬ್ಯುಸಿ ಲೈಫ್‍ಲ್ಲಿ ಎಲ್ಲರೂ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಹಾಗಾಗಿ ಕ್ರಿಸ್‍ಮಸ್ ಸೀಸನ್ ಬಂತೆಂದರೆ ಎಲ್ಲಾ ಬೇಕರಿಗಳು ಕೇಕ್ ತಯಾರಿಯಲ್ಲಿ ಬ್ಯುಸಿಯಾಗಿರುತ್ತವೆ. ಮಾರುಕಟ್ಟೆಯೂ ವಿಧವಿಧದ ಕೇಕ್‍ಗಳಿಂದ ಗ್ರಾಹಕರನ್ನು ಸೆಳೆಯಲೆಂದೇ ತಯಾರಾಗಿರುತ್ತವೆ. 

          ಕೆಲವರು ಮನೆಯಲ್ಲಿಯೇ ಸಣ್ಣ ಸಣ್ಣ ಕೇಕ್‍ಗಳನ್ನು ಮಾಡುವ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ. ಅಂತೂ ಇಂತೂ ಪ್ರತೀ ಮನೆಯಲ್ಲೂ ಕೇಕ್‍ಗಳದ್ದೇ ಘಮಘಮ. ಕೇಕ್‍ಗಳನ್ನು ತಿನ್ನೋದಷ್ಟೇ ಅಲ್ಲ ಅದನ್ನು ತಯಾರಿಸೋದರಲ್ಲೂ ಈ ಕ್ರಿಸ್‍ಮಸ್ ತುಂಬಾ ಸ್ಪೆಷಲ್. ಸಿಹಿ ಹಂಚಿ ತಿನ್ನುವ ಜನರಿಗೆ ಕೇಕ್ ಮಾಡೋದು ಕೂಡಾ ಒಂಥರಾ ಕ್ರೇಝ್. ಮನೆಯ ಗೃಹಿಣಿಯರೂ ಕೂಡ ವರುಷ ವರುಷಕ್ಕೆ ಕೇಕ್ ತಯಾರಿಯಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ, ಕ್ರಿಸ್‍ಮಸ್‍ಗೆ ಸ್ಪೆಷಲ್ ಆಗಿ ಎಗ್‍ಲೆಸ್ ಕೇಕ್, ಕ್ಯಾರೆಟ್ ಕೇಕ್‍ಗಳನ್ನು ತಯಾರಿಸುತ್ತಾ, ಕ್ರಿಸ್‍ಮಸ್ ಹಬ್ಬವನ್ನು ವಿಶೇಷತೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಸ್ಥೆಗಳು, ಮಾಲ್‍ಗಳು ಕ್ರಿಸ್‍ಮಸ್ ಹಬ್ಬವನ್ನು ಕೇಕ್‍ಗಾಗಿಯೇ ಮೀಸಲಿಟ್ಟಿವೆ. ಇನ್ಸ್‍ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್‍ನಂತಹ ಸಂಸ್ಥೆಗಳು ಹಲವಾರು ವರ್ಷಗಳಿಂದ ಕೇಕ್‍ನಿಂದ ವಿಭಿನ್ನ ಕಲಾಕೃತಿಗಳನ್ನು ತಯಾರಿಸುತ್ತಿವೆ. 
ಕೇಕ್ ಎಂದರೆ ಅದರ ಗಾತ್ರ, ವಿನ್ಯಾಸ, ಬಣ್ಣಗಳ ಬಗ್ಗೆ ಜನರಲ್ಲಿ ಒಂದು ಕಲ್ಪನೆ ಇತ್ತು. ಕೇಕ್ ಎಂದರೆ ಅಷ್ಟೇ ಅಲ್ಲ, ಕೇಕ್ ಎಂದರೆ ಇಂದು ಜನರ ಕಲ್ಪನೆಗೂ ವೀರಿ ನಿಂತು ಕೇಕ್‍ಶೋ ಎಂಬ ಹೊಸ ಕಾನ್ಸೆಪ್ಟ್ ಬೆಳೆದಿದೆ. ಗೇಟ್ ವೇ ಆಫ್ ಇಂಡಿಯಾ ಕೂಡಾ ಕೇಕ್ ಆಗಬಹುದು ಎಂಬುದನ್ನು ಕೇಕ್ ಶೋಗಳು ಸಾಬೀತುಪಡಿಸುತ್ತಿವೆ. ಮತ್ಸ್ಯಲೋಕದ ಮತ್ಸ್ಯಕನ್ಯೆಯೂ ಕೇಕ್ ಮೂಲಕ ಪ್ರತಿಕೃತಿಯಾಗುತ್ತಾಳೆ. ಈಗ ಕೇಕ್ ಮೂಲಕ ಬಾಯಿಗೆ ಸಿಹಿ ಹಂಚುವ ಕಾಲ ಮುಗಿದು, ವಿಭಿನ್ನ ಕಲಾಕೃತಿ ಕೇಕ್ ಮೂಲಕ ಜನರ ಕಣ್ಣಿಗೆ ಸಿಹಿ ಹಂಚುವ ಮೂಲಕ ನೋಡುಗರ ಬಾಯಲ್ಲಿ ನೀರೂರಿಸುವ ಕಾಲ ಬೆಳೆದು ನಿಂತಿದೆ. ಇಂತಹ ಕೇಕ್‍ಗಳನ್ನು ತಿನ್ನುವುದರಲ್ಲಿ ಇರುವ ಖುಷಿಗಿಂತ ನೋಡುವುದರಲ್ಲೇ ಸಂತೋಷ ಹೆಚ್ಚು. ಒಂದು ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಹಲವೆಡೆ ಕೇಕ್ ಜಾತ್ರೆಯೇ ನಡೆಯುತ್ತದೆ.          
           ಯಾವುದೇ ದೇಶ ಕಾಲದ ಚೌಕಟ್ಟಿಲ್ಲದೇ, ಭಾಷೆ ಬಣ್ಣಗಳನ್ನು ವೀರಿ ಈ ಕೇಕ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್‍ಮಸ್ ಹಬ್ಬ ಎಂದರೆ ಕ್ರಿಶ್ಚಿಯನ್ನರಿಗೆ ಎನ್ನುವ ಕಾಲವೊಂದಿತ್ತು. ಆದರೆ ಇಂದು ಈ ಕೇಕ್ ಹಬ್ಬ ಯಾವುದೇ ಜಾತಿ, ಭಾಷೆ, ಜನಾಂಗಕ್ಕೆ ಸೀಮಿತವಾಗದೆ, ಸಂತೋಷ, ಖುಷಿ, ಹಬ್ಬದ ವಾತಾವರಣಕ್ಕೆ, ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಕ್ರಿಸ್‍ಮಸ್ ಹಾಗೂ ಹೊಸವರ್ಷಕ್ಕೆ ನಾಂದಿ ಹಾಡುವ ಮೆತ್ತನೆಯ ಹಾಸಿಗೆಯಂತಿದ್ದ ಕೇಕ್‍ಗಳ ಬಿಳಿಬಣ್ಣದ ಮೇಲೆ ವರ್ಣಚಿತ್ತಾರಗಳು ಮೂಡಿ ಆಕರ್ಷಕ ರೂಪಗಳನ್ನು ಪಡೆಯುತ್ತಿದೆ ಕೇಕ್‍ಲೋಕ. ಕ್ರಿಸ್‍ಮಸ್ ಹಾಗೂ ಹೊಸವರ್ಷಕ್ಕೆ ಪರಿಪೂರ್ಣತೆ ಈ ಕೇಕ್‍ನಿಂದಲೇ ಎಂದರೂ ತಪ್ಪಾಗಲಾರದು. 
          ಕ್ರಿಸ್‍ಮಸ್ ಸಮಯದಲ್ಲಿ ಕೇಕ್ ಉದ್ದಿಮೆಗಳಿಗೆ, ಬೇಕರಿಗಳಿಗೆ ಬಿಡುವಿಲ್ಲದ ಕೆಲಸ. ಇವರುಗಳಿಗೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು, ಮಾಲ್‍ಗಳು, ಹೋಟೆಲ್‍ಗಳಿಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ತರಾತುರಿ. ಸಾವಿರಾರು ಕೆಜಿ ತೂಕದ, 20ರಿಂದ 30 ಅಡಿಗಳಷ್ಟು ಉದ್ದ, ಅಗಲಗಳ ವಿಭಿನ್ನ ಕಲಾಕೃತಿಗಳನ್ನು, ಉದಾಹರಣೆಗೆ ಎಫೆಲ್‍ಟವರ್, ಗೂಳಿ ಕರಡಿ, ಆ್ಯಂಗ್ರಿಬರ್ಡ್, ಸ್ಕೂಟರ್, ಡೈನೋಸಾರ್‍ಗಳನ್ನು ಕೇಕ್‍ನಲ್ಲಿ ತಯಾರಿಸುವ ಚತುರರೂ ಇದ್ದಾರೆ. ಈ ಮೂಲಕ ಕೇಕ್ ಕೇವಲ ಹಬ್ಬಕ್ಕೆ ವಿಶೇಷ ತಿನಿಸು ಮಾತ್ರವಲ್ಲದೆ, ಒಂದು ಕಲೆಯಾಗಿಯೂ ಕಲಾಕಾರನ ಚಮತ್ಕಾರವನ್ನು ಪ್ರದರ್ಶನಕ್ಕೆ ಕ್ರಿಸ್‍ಮಸ್‍ಕೇಕ್ ವೇದಿಕೆಯಾಗಿದೆ. ಕೇಕ್ ತಯಾರಿ ಒಬ್ಬ ಶಿಲ್ಪಿಯ ಕೆಲಸವೇ ಸರಿ. ಇದರ ತಯಾರಿಗೆ ಶ್ರಮ, ತಾಳ್ಮೆ, ಜ್ಞಾನ, ಶ್ರದ್ಧೆ, ಎಲ್ಲವೂ ಅಗತ್ಯವಿದೆ. ಶಿಲ್ಪಕ್ಕೆ ಉಳಿಯಿಂದ ವಿನ್ಯಾಸ ಕೊಟ್ಟಂತೆಯೇ ಇದಿಕ್ಕೂ ಸೂಕ್ಷ್ಮ ವಿನ್ಯಾಸದ ಕುಸುರಿ ಕೆಲಸವೇ ಬೇಕು. ಈ ರೀತಿಯ ಕೇಕ್‍ನ ಅಲಂಕಾರ 17ನೇ ಶತಮಾನದ ಮಧ್ಯಭಾಗದಿಂದ ಉತ್ತರ ಯುರೋಪ್‍ನ ಇತಿಹಾಸದಿಂದಲೇ ದೊರೆಯುತ್ತದೆ. ಯುರೋಪ್‍ನ ವಾಯವ್ಯ ಪ್ರಾಂತದಲ್ಲೂ ಕೇಕ್ ಅಲಂಕಾರ ಸಾಮಾನ್ಯವಾಗಿತ್ತು. ಇಂದು ಇಡೀ ಜಗತ್ತನ್ನೇ ಆವರಿಸಿರುವ ಕೇಕ್ ಅಲಂಕಾರ ಅಧ್ಯಯನದ ಒಂದು ಕೋರ್ಸ್ ಆಗಿಯೂ ಮುಂಚೂಣಿಯಲ್ಲಿದೆ. ದಲ್ಲದೆ ಪ್ರಸ್ತುತ ಲಾಭದಾಯಕ ಉದ್ದಿಮೆಯಾಗಿಯೂ ಬೆಳೆದಿದೆ. 
            ಡಿಸೆಂಬರ್ ಮೊದಲ ವಾರದಿಂದ ಹೊಸವರ್ಷಾಚರಣೆಯ ಜನವರಿಯ ಮೊದಲ ವಾರದವರೆಗೂ ವಿಸ್ತರಿಸುವ ಈ ಕೇಕ್ ಸಂಭ್ರಮದಲ್ಲಿ ವೈಟ್ ಚಾಕೋಲೇಟ್ ರಾಸ್ಬೆರಿ ಚೀಸ್‍ಕೇಕ್, ರೆಡ್‍ವೆಲ್ವೆಟ್ ಕೇಕ್, ಫ್ರುಟ್‍ಕೇಕ್, ಫಿಗ್ಗಿ ಪುಡ್ಡಿಂಗ್, ಡೇಟ್‍ನಟ್ ಲೋಫ್ ಕೇಕ್, ಇಟಾಲಿಯ ಕ್ರೀಮ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಫ್ಲಮ್ ಕೇಕ್ ವೈವಿಧ್ಯಮಯ ಕೇಕ್‍ಗಳೇ ರಾರಾಜಿಸುತ್ತವೆ. ಇಷ್ಟೆಲ್ಲಾ ವೆರೈಟಿಗಳು ಕಣ್ಣ ಮುಂದಿದ್ದರೂ ಜನರನ್ನು ಹೆಚ್ಚು ಆಕರ್ಷಿಸಿದ ಮತ್ತು ಹೆಚ್ಚು ಆಪ್ತವೆನಿಸಿದ ಕೇಕ್ ಎಂದರೆ ಪ್ಲಮ್‍ಕೇಕ್. ಪ್ರಚಲಿತದಲ್ಲೂ ಪ್ಲಮ್ ಕೇಕ್‍ಗೆ ಹೆಚ್ಚು ಆದ್ಯತೆ ಕೂಡ. ಪ್ಲಮ್‍ಕೇಕ್‍ನ ತಯಾರಿ ಒಂದೂವರೆ ತಿಂಗಳ ಮೊದಲೇ ಪ್ರಾರಂಭವಾಗುತ್ತದೆ. ಕೇಕ್‍ಗೆ ಹೆಚ್ಚು ರುಚಿಕೊಡುವ ನಿಟ್ಟಿನಲ್ಲಿ ಪ್ಲಮ್‍ಕೇಕ್ ತಯಾರಿಸುವ ಒಂದೂವರೆ ತಿಂಗಳು ಮೊದಲು ಅದಕ್ಕೆ ಬೇಕಾದ ಪದಾರ್ಥಗಳಾದ ಡ್ರೈಫ್ರಟ್ಸ್, ನಟ್ಸ್, ಮಸಾಲೆ ಪದಾರ್ಥಗಳನ್ನೆಲ್ಲಾ ಸೇರಿಸಿ ಒಂದು ದೊಡ್ಡ ಟ್ರೇಯೊಳಗೆ ತುಂಬಿ ಅದಕ್ಕೆ ಬ್ರ್ಯಾಂಡಿ ಮತ್ತು ವೈನ್‍ಗಳನ್ನು ಸುರಿದು ಒಂದು ತಿಂಗಳು ಇಡಲಾಗುತ್ತದೆ. ಹೀಗೆ ಇಟ್ಟ ಪಾಕದಿಂದ ಅದಕ್ಕೆ ಅಗತ್ಯವಿರುವ ಇತರ ವಸ್ತುಗಳನ್ನು ಸೇರಿಸಿ ಹಬ್ಬಕ್ಕೆ ಪ್ಲಮ್‍ಕೇಕ್ ತಯಾರಿಸಲಾಗುತ್ತದೆ.

ಕೇಕ್‍ನ ಇತಿಹಾಸ
          ಇತಿಹಾಸದಿಂದಲೂ ಪ್ಲಮ್‍ಕೇಕ್ ಕ್ರಿಸ್‍ಮಸ್ ಸಂಭ್ರಮದಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಪ್ಲಮ್‍ಕೇಕ್‍ನ ಇತಿಹಾಸ ಮಧ್ಯಕಾಲೀನ ಇಂಗ್ಲೆಂಡ್‍ನಲ್ಲಿ ಪ್ರಾರಂಭವಾಗುತ್ತದೆ. ಆಗಿನ ಸಂಪ್ರದಾಯದ ಪ್ರಕಾರ ಕ್ರಿಸ್‍ಮಸ್ ಸಮಯದಲ್ಲಿ ಓಟ್ಸ್, ಡ್ರೈಫ್ರುಟ್ಸ್, ಮಸಾಲೆ, ಜೇನುತುಪ್ಪ ಹಾಕಿ ತಯಾರಿಸಿದ ಗಂಜಿ ತಿನ್ನಲಾಗುತ್ತಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮಾಂಸದಿಂದಲೂ ಗಂಜಿ ತಯಾರಿಸುತ್ತಿದ್ದರು. ಕಾಲ ಉರುಳಿದಂತೆ, ಕ್ರಿಸ್‍ಮಸ್ ಗಂಜಿಗೆ ಹೆಚ್ಚು ಪದಾರ್ಥಗಳನ್ನು ಸೇರಿಸುತ್ತಾ ಪ್ರಸ್ತುತ ಇರುವ ಕೇಕ್‍ಗಳ ಮಾದರಿಗೆ ರೂಪಾಂತರಗೊಂಡವು.
          16ನೇ ಶತಮಾನದಲ್ಲಿ ಓಟ್ಸ್‍ನ ಬದಲಿಗೆ ಹಿಟ್ಟು ಬಳಸಿ ಅದಕ್ಕೆ ಬೆಣ್ಣೆ ಮತ್ತು ಮೊಟ್ಟೆ ಸೇರಿಸಿ, ಗಂಜಿಯಲ್ಲಿ ಮಾಂಸದ ಬಳಕೆ ಕಡಿಮೆ ಮಾಡಲಾಯಿತು. ಈ ಮಿಶ್ರಣವನ್ನು ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಒಂದು ಮಡಕೆಯೊಳಗೆ ಕುದಿಯುವ ನೀರಿನಲ್ಲಿ ಹಾಕಿ ಹಲವು ಗಂಟೆವರೆಗೆ ಬೇಯಿಸಿ ಅದರಿಂದ ಫಿರಂಗಿ ಚೆಂಡಿನಂಥ ದೊಡ್ಡ ಮಿಠಾಯಿಉಂಡೆ ದೊರೆಯುತ್ತಿತ್ತು. ಆ ಕಾಲದಲ್ಲಿ ವೊವೆನ್ ಹೊಂದಿದ್ದ ಶ್ರೀಮಂತ ಕುಟುಂಬಗಳಲ್ಲಿ ಮಾತ್ರ ನೀರಿನಲ್ಲಿ ಬೇಯಿಸುವ ಬದಲು ಆ ಮಿಶ್ರಣವನ್ನು ವೊವೆನ್‍ನಲ್ಲಿ ಬೇಕ್ ಮಾಡುತ್ತಿದ್ದರು. ಬೇರೆ ಬೇರೆ ಮನೆಯಲ್ಲಿ ಆ ಮನೆಗಳಿಗೆ ಹೊಂದುವಂತೆ ಕೇಕ್‍ನ ಪಾಕವಿಧಾನಗಳಿರುತ್ತಿತ್ತು. ಕ್ರಿಸ್‍ಮಸ್‍ನ ಒಂದು ವಾರದ ಹಿಂದೆ ತಯಾರಿಸುತ್ತಿದ್ದ ಈ ಪುಡ್ಡಿಂಗ್‍ನ್ನು ಕ್ರಿಸ್‍ಮಸ್‍ನ ಹನ್ನೆರಡನೇ ದಿನದವರೆಗೂ ಅಥವಾ ಕೊನೆಯದಿನದವರೆಗೂ ಸಂಗ್ರಹಿಸಿಡಲಾಗುತ್ತಿತ್ತು. ಹಬ್ಬದ ಅಂತಿಮ ಊಟದ ನಂತರ ಇದನ್ನು ಎಲ್ಲರಿಗೂ ಪ್ರಸಾದದಂತೆ ನೀಡುತ್ತಿದ್ದರು.
          ಇಂಗ್ಲೇಂಡ್‍ನಲ್ಲಿ ಒಣದ್ರಾಕ್ಷಿಗೆ ಪ್ಲಮ್ ಎಂದು ಕರೆಯಲಾಗುತ್ತಿತ್ತು. ಗಂಜಿ ಪಾಕದಲ್ಲಿ ಒಣದ್ರಾಕ್ಷಿ ಹೇರಳವಾಗಿದ್ದ ಕಾರಣ ಪ್ಲಮ್ ಎಂಬ ಹೆಸರು ಕೇಕ್‍ಗೂ ಬಂತು. ಕಾಲಕ್ರಮೇಣದಲ್ಲಿ, ಒಣದ್ರಾಕ್ಷಿಯ ಪ್ರಮಾಣ ಕಡಿಮೆಯಾಗಿ, ಬೇರೆ ಬೇರೆ ಡ್ರೈಫ್ರುಟ್ಸ್ ಬಂದವು. ಆದರೆ ಪ್ಲಮ್ ಎಂಬ ಹೆಸರು ಮಾತ್ರ ಕೇಕ್‍ಗೆ ಅಂಟಿಕೊಂಡೇ ಮುಂದುವರಿಯಿತು. ಈಗಲೂ ಪ್ಲಮ್‍ಕೇಕ್ ಎಂದೇ ಪ್ರಸಿದ್ಧಿ ಪಡೆದಿದೆ.
19ನೇ ಶತಮಾನದ ಅಂತ್ಯದಲ್ಲಿ ವಿಕ್ಟೋರಿಯಾ ರಾಣಿ ಹನ್ನೆರಡನೇ ರಾತ್ರಿಯ ಹಬ್ಬವನ್ನು ನಿಷೇಧಿಸಿದಾಗಲೂ ಕೇಕ್ ಮಾತ್ರ ಹಾಗೇ ಉಳಿಯಿತು. ಅಂಗಡಿಯವರು ಹನ್ನೆರಡನೆ ರಾತ್ರಿಗೆ ತಯಾರಿಸಿಟ್ಟ ಪ್ಲಮ್‍ನ್ನು ಕ್ರಿಸ್‍ಮಸ್ ದಿನಕ್ಕೆ ಬಳಸಿದರು. ವ್ಯಾಪಾರವಾಗಿಯೂ ಇದೇ ಸಂಪ್ರದಾಯ ಮುಂದುವರಿಯಿತು.
ಅದೇ ಸಮಯಕ್ಕೆ ಬ್ರಿಟಿಷ್ ವಸಾಹತುಗಳಾದ ಆಸ್ಟ್ರೇಲಿಯಾ, ಅಮೇರಿಕಾ, ಕೆನಡಾ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮನೆಯವರಿಗೆ ಒಂದು ತಿಂಗಳು ಮುಂಚಿತವಾಗಿಯೇ ಕೇಕ್ ತಯಾರಿಸಿ, ವೈನ್ ಮತ್ತು ಉಡುಗೊರೆಗಳೊಂದಿಗೆ ಕಳುಹಿಸಿಕೊಡುತ್ತಿದ್ದರಿಂದ ಕೇಕ್ ಸಂಪ್ರದಾಯ ಇಂಗ್ಲೆಂಡ್‍ನಿಂದ ಹೊರದೇಶಗಳಿಗೂ ಲಗ್ಗೆಯಿಟ್ಟವು.  ಇಂಗ್ಲೆಂಡ್‍ನಿಂದ ಹೊರಬಂದ ಈ ಪ್ಲಮ್‍ಕೇಕ್ ದೇಶ, ಪ್ರದೇಶ, ಕುಟುಂಬಗಳಿಗನುಗುಣವಾಗಿ ಬೇರೆ ಬೇರೆ ರೀತಿಯ ರೆಸಿಪಿಗಳನ್ನು ಪಡೆಯುತ್ತಾ ಬಂದವು.
          ಪ್ಲಮ್‍ಕೇಕ್‍ನೊಂದಿಗೆ ಸಿಹಿ ಹಣ್ಣುಗಳಿಂದ ತಯಾರಿಸಿದ ಫ್ರುಟ್‍ಕೇಕ್ ಕೂಡ ಚಾಲ್ತಿಯಲ್ಲಿದ್ದವು. ಆದರೆ ಫ್ರುಟ್‍ಕೇಕ್ ದುಬಾರಿಯಾಗಿದ್ದರಿಂದ ಇದನ್ನು ಬಳಸುವುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಸಿಹಿಹಣ್ಣುಗಳು, ಡ್ರೈಫ್ರುಟ್ಸ್, ಮಸಾಲೆ ಬೆರೆಸಿ, ಕೆಲವೊಮ್ಮೆ ಸ್ಪಿರಿಟ್ ಪಾನೀಯಗಳಲ್ಲಿ ನೆನೆಸಿ ಕೇಕ್ ತಯಾರಿಸಲಾಗುತ್ತಿತ್ತು. ಇದು ಸಾಮಾನ್ಯವಾಗಿ ಕ್ರಿಸ್‍ಮಸ್ ಹಬ್ಬಗಳಿಗೇ ಸೀಮಿತವಾಗಿತ್ತು. ಪ್ರಾಚೀನ ರೋಮ್‍ನ ಮೊದಲ ಪಾಕವಿಧಾನ ದಾಳಿಂಬೆ ಬೀಜಗಳು, ಪೈನ್‍ನಟ್ಸ್ ಮತ್ತು ಒಣದ್ರಾಕ್ಷಿಯನ್ನು ಬಾರ್ಲಿ ಮ್ಯಾಶ್‍ನಲ್ಲಿ ಮಿಶ್ರಣ ಮಾಡಿ ಫ್ರುಟ್‍ಕೇಕ್ ಮಾಡಲಾಗುತ್ತಿತ್ತು. ಈ ಫ್ರುಟ್ ಕೇಕ್ ಯುರೋಪ್‍ನಾದ್ಯಂತ ಅತೀವೇಗವಾಗಿ ಪಸರಿಸಿ ಆಯಾದೇಶಗಳಲ್ಲಿ ದೊರೆಯುವ ಪಾಕವಸ್ತುಗಳಿಗನುಗುಣವಾಗಿ ವಿಭಿನ್ನತೆಯನ್ನು ಪಡೆಯಿತು. 16ನೇ ಶತಮಾನದಲ್ಲಿ ಸಕ್ಕರೆ, ಹಣ್ಣುಗಳನ್ನು ಹೆಚ್ಚು ಕಾಲ ಕೆಡದಂತೆ ಇಡುತ್ತದೆ ಎಂಬುದನ್ನು ಕಂಡುಕೊಂಡದ್ದರಿಂದ ನಂತರದಲ್ಲಿ ಫ್ರುಟ್‍ಕೇಕ್‍ನಲ್ಲಿ ಸಕ್ಕರೆಯನ್ನು ಹೆಚ್ಚು ಬಳಸಲಾಯಿತು.
          ಕೆನಡಾದಲ್ಲಿ ಫ್ರುಟ್‍ಕೇಕ್‍ನ್ನು ಕ್ರಿಸ್‍ಮಸ್‍ಕೇಕ್ ಎಂದೇ ಕೆರಯಲಾಗುತ್ತದೆ. ಪೋರ್ಚುಗಲ್‍ನಲ್ಲಿ ಬೋಲೋರೈ ಎಂಬ ಫ್ರುಟ್‍ಕೇಕ್‍ನ್ನು ಕ್ರಿಸ್‍ಮಸ್‍ಗೆಂದೇ ತಯಾರಿಸಲಾಗುತ್ತದೆ. ಹೀಗೆ ಡಿಸೆಂಬರ್‍ನ ಚಳಿಗೆ ಕ್ರಿಸ್‍ಮಸ್ ಕೇಕ್ ಜಗತ್ತಿನಾದ್ಯಂತ ಹಬ್ಬದ ಬಿಸಿ ನೀಡುತ್ತದೆ.


ಫ್ರ್ಯಾಂಕ್ಲಿನ ಡಿ'ಸೋಜ, ಬೆಂಗಳೂರು
          ಕ್ರಿಸ್‍ಮಸ್ ಎಂದರೆ ನಮಗೆ ತುಂಬಾ ಸಡಗರ. ಚರ್ಚ್‍ನಲ್ಲಿ ಪ್ರಾರ್ಥನೆ, ಹೊಸ ಬಟ್ಟೆ ಖರೀದಿಸುವುದಕ್ಕಿಂತಲೂ ಆ ಸಮಯದಲ್ಲಿ ಹಲವಾರು ತಿಂಡಿಗಳು ಸಿಗುತ್ತವೆ ಎನ್ನುವುದೇ ಖುಷಿ. ಅದಕ್ಕಿಂತ ನಾವು ಮನೆಯವರೆಲ್ಲಾ ಒಟ್ಟಿಗೆ ಸೇರಿ, ತಿಂಡಿಗೆ, ಕೇಕ್‍ಗೆ ಪಾಕ ಮಿಶ್ರಣ ಮಾಡಿ, ಅದನ್ನು ತಯಾರಿಸುವುದು, ಅದರೊಂದಿಗೆ ಮಾತು, ನಗು ಕೂಡ ಸೇರಿ, ಸಂತೋಷ ಸಡಗರ ದುಪ್ಪಾಟ್ಟಾಗುತ್ತಿತ್ತು. ಆ ಡಿಸೆಂಬರ್ ತಿಂಗಳಿಗಾಗಿಯೇ ಕಾದು ಕೂರುವ ಕ್ಷಣಗಳೇ ಚೆನ್ನಾಗಿರುತ್ತಿತ್ತು. ಆದರೆ, ಈಗ ಎಲ್ಲರೂ ಬ್ಯುಸಿಯಾಗಿಒದ್ದಾರೆ. ಇತ್ತೀಚೆಗೆ ತಿಂಡಿ, ಕೇಕ್‍ಗಳನ್ನು ಮನೆಯಲ್ಲಿ ಮಾಡುವುದಕ್ಕಿಂತ ಅಂಗಡಿ, ಬೇಕರಿಗಳಿಂದ ಖರೀದಿಸುವುದೇ ಹೆಚ್ಚಾಗಿದೆ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುವ ಖುಷಿಯೂ ಕಡಿಮೆಯಾಗಿದೆ.

Wednesday 31 January 2018

ಕಲಾಸಕ್ತಿಯೇ ಗುರು

         
          ಕೈಯಲ್ಲಿ ಪೆನ್ಸಿಲ್, ಕುಂಚ ಹಿಡಿದೊಡನೆ ಎಲ್ಲರೂ ಕಲಾವಿದರಾಗಲು ಸಾದ್ಯವಿಲ್ಲ. ಜೀವನದ ಏಳು ಬೀಳಿನ ಅನುಭವ, ಶ್ರಮ, ಪ್ರಯತ್ನ, ಶ್ರದ್ಧೆ, ತಾಳ್ಮೆ, ಏಕಾಗ್ರತೆಯಿಂದ ಮಾತ್ರ ವಿನೂತನ ಕಲೆ ಹುಟ್ಟಲು ಸಾಧ್ಯ. ಇವೆಲ್ಲದರ ಜೊತೆಗೆ ಕಲೆಯ ಮೇಲಿರುವ ಆಸಕ್ತಿ ಪ್ರಮುಖವಾಗುತ್ತದೆ. ಹೀಗೆ ಆಸಕ್ತಿಯಿಂದ ತಮ್ಮಲ್ಲಿದ್ದ ಹವ್ಯಾಸಗಳತ್ತ ಹೆಚ್ಚು ಒಲವು ಹರಿಸಿ ಕಲಾಶಾರದೆಯನ್ನು ಒಲಿಸಿಕೊಂಡವರು ಧನಂಜಯ ಮರ್ಕಂಜ.
          ತಮ್ಮ ಬಾಲ್ಯದ ಆಟಗಳಲ್ಲೇ ಇದ್ದ ಸೃಜನಶೀಲತೆ ಇಂದು ಕಲೆಯ ರೂಪದಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಕಲಾರಾಧನೆಯಲ್ಲಿ ಹೊಸ ಹೊಸ ಕ್ರಿಯಾತ್ಮಕ ಕಲೆಗಳನ್ನು ಕಲಿತು, ಅವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸಂಪೂರ್ಣವಾಗಿ ಕಲೆಗೆ ಮೀಸಲಿಟ್ಟದ್ದಾರೆ. ಇವರಿಗೆ ಇವರ ಕಲೆಯ ಮೇಲಿನ ಆಸಕ್ತಿಯೇ ಗುರು. ಒಬ್ಬರನ್ನು ಚಿತ್ರಕಲಾವಿದನೆಂದರೆ, ಇನ್ನೊಬ್ಬರನ್ನು ನೃತ್ಯಕಲಾವಿದನೆಂದರೆ, ಇವರನ್ನು ಮಾತ್ರ ಚಿತ್ರಕಲಾವಿದನೆಂದು ಒಂದು ಕ್ಷೇತ್ರಕ್ಕೆ ಸೀಮಿತವಾಗಿರಿಸಲು ಸಾಧ್ಯವಿಲ್ಲ. ಯಾಕೆಂದರೆ ತಮ್ಮ ಅಂಗೈಯಲ್ಲಿ ಹಲವಾರು ಕಲಾರೇಖೆಗಳನ್ನು ತಾವೇ ಎಳೆದುಕೊಂಡಿದ್ದಾರೆ. ಹೊಳೆಯ ಬದಿಯ ಮಣ್ಣಿನಲ್ಲಿ, ಮರದ ಬೇರುಗಳಲ್ಲಿ ಆಕೃತಿಗಳನ್ನು ಮಾಡುತ್ತಾ ಸೃಜನಶೀಲತೆಯನ್ನು ಹೆಚ್ಚಿಸಿಕೊಂಡ ಇವರಿಗೆ ಒಲಿದ ಕಲೆಗಳು ಹಲವಾರು.          
ಯಾರಲ್ಲೂ ಹುಟ್ಟಿನಿಂದ ಕಲೆ ಅರಳಲು ಸಾಧ್ಯವಿಲ್ಲ. ದನಿವರಿಯದ ಅಭ್ಯಾಸ ಕೆಲಸಗಳಿಂದ ಮಾತ್ರ ಅವುಗಳನ್ನು ತಮ್ಮ ಅಂಕುಶಕ್ಕೆ ತರಲು ಸಾಧ್ಯ ಎನ್ನುವುದುಕ್ಕೆ ಧನಂಜಯ ಅವರು ಸ್ಪಷ್ಟ ಉದಾಹರಣೆ ಎಂದರೆ ತಪ್ಪಾಗಲಾರದು. ತಮ್ಮ ಅನಿರತ ಪ್ರಯತ್ನದಿಂದ ಗಳಿಸಿಕೊಂಡ ಕಲಾಕೌಶಲ್ಯಗಳನ್ನು ನೋಡಿದರೆ ಒಮ್ಮೆ ಅಚ್ಚರಿಯಾಗುವುದು ಸಹಜ. ಕುಂಚದಿಂದ ಬಣ್ಣ ಚೆಲ್ಲುವುದು ಮಾತ್ರವಲ್ಲದೆ, ಪೆನ್ಸಿಲ್‍ನ ರೇಖೆಗಳಿಂದ ಮೂಡುವ ಅಬ್ದುಲ್ ಕಲಾಂನಂತವರ ಚಿತ್ರಗಳಿಂದ ಹಿಡಿದು, ಮಣ್ಣಿನಲ್ಲಿ ಕೈ ಮೆದ್ದಿ ಕ್ಲೇಮಾಡೆಲ್‍ಗಳನ್ನು, ಯೋಚನೆಗೆ ನಿಲುಕದ ಗೆರೆಟೆ ಶಿಲ್ಪ, ಕ್ವೆಲ್ಲಿಂಗ್ ಆರ್ಟ್, ಎಸ್.ಒ.ಪಿ.ಡಬ್ಲ್ಯೂ. ಕಸದಿಂದ ರಸ, ಬೊಂಬೆಗಳ ತಯಾರಿ, ಸಿಮೆಂಟ್ ಕಲಾಕೃತಿ, ವರ್ಲಿ ಆರ್ಟ್‍ಗಳಲ್ಲೂ ತಮ್ಮ ಕೌಶಲ್ಯ ಮೆರೆದಿದ್ದಾರೆ.          
          ಪ್ರಸ್ತುತ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವ ಧನಂಜಯ ಮರ್ಕಂಜ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ. ಮಕ್ಕಳ ಪ್ರತಿಭೆಗಳಿಗೆ ನೀರೆರೆಯುವಲ್ಲಿ ಸಫಲರು. ಅನೇಕ ಕಲಾಶಿಬಿರಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಾಗಿ ಮಕ್ಕಳಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿದವರು. ಕಡಿದು ಬರಿದಾಗಿದ್ದ ಮರದ ಟೊಂಗೆಗೆ ಸಂಗೀತ ಉಪಕರಣವಾದ ತಬಲದ ಹೊಳಪನ್ನು ಕೊಟ್ಟ ಅಪರೂಪದ ಕಲೆಗಾರ ಇವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ್ಥಳೀಯ ಮರ್ಕಂಜದಲ್ಲಿ ಮುಗಿಸಿ ನಂತರ ಇಲೆಕ್ಟ್ರಿಕ್‍ನಲ್ಲಿ ಡಿಪೆÇ್ಲಮೊ ಪದವಿ ಪಡೆದು ನಂತರ ಮಂಗಳೂರಿನ ಮಹಾಲಸ ಚಿತ್ರಕಲಾ ಕಾಲೇಜಿನಲ್ಲಿ ಡಿ.ಎಂ.ಸಿ. ಡ್ರಾಯಿಂಗ್ ಮಾಸ್ಟರ್ ಕೋರ್ಸ್ ನಂತರ ಮೈಸೂರ್ ವಿಶ್ವವಿದ್ಯಾಲಯದಲ್ಲಿ ಬಿ.ಎಫ್.ಎ ಪದವಿ ಪಡೆದಿರುವರು. ಹವ್ಯಾಸವಾಗಿ ರೂಪುಗೊಂಡ ಕಲೆ ಈಗ ವೃತ್ತಿಯಾಗಿ ಕಲಾಸಿರಿಯನ್ನು ಇನ್ನಷ್ಟು ಬೆಳೆಸಿ ಶ್ರೀಮಂತಗೊಳಿಸುವ ಔದಾರ್ಯ ಇವರದು.         
           ಸನ್ಮಾನಗಳಿಗಾಗಿ ಕಲೆಯ ಮೊರೆ ಹೋದವರಲ್ಲ ಇವರು. ಆದರೆ ಸನ್ಮಾನಗಳು ಇವರ ಕಲಾಸೇವೆಯನ್ನು ಅಭಿನಂದಿಸುವುದನ್ನು ಮಾತ್ರ ಮರೆಯಲಿಲ್ಲ. ಮರದ ಮೇಲೆ ಚಿತ್ತಾರ ಬರೆದು ಕ್ರಿಯಾತ್ಮಕ ಕಲೆಗಳಿಗೆ ಬೆಳಕು ಚೆಲ್ಲುವ ಮೂಲಕ ವಿಶೇಷವೆನಿಸಿರುವ ಇವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ತಯಾರಿಸಿದ ಗೆರಟೆ ಶಿಲ್ಪ ಹಾಗೂ ಇತರ ಕರಕುಶಲ ಕಲೆಗೆ, ಫ್ರೆಂಡ್ಸ್ ಕ್ಲಬ್ ಪೈಲೂರು, ಜಿಲ್ಲಾ ಮಟ್ಟದ ಯುವಜನೋತ್ಸವ ಮೇಳದಲ್ಲಿ, ಸುಳ್ಯದ ವಿಕಾಸ ಸ್ಕೂಲ್ ಆಫ್ ಆಟ್ರ್ಸ್ ಇವರಿಂದ ಸನ್ಮಾನಗಳು ಸಂದಿವೆ. ಪಿಳಿಕುಳದಲ್ಲಿ ನಡೆದ ಥರ್ಮೋ.ಪೋಂ ಆರ್ಟ್ ಕಾರ್ಯಾಗಾರದಲ್ಲಿ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ನಲಿ ಕಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕಲಾ ನೈಪುಣ್ಯತೆಗೆ ಮಾದರಿಯಾಗಿದ್ದಾರೆ.       
          ಥರ್ಮೋಕೋಲ್‍ನಿಂದ ಇವರು ತಯಾರಿಸಿದ ಬೋಧನಾ ಉಪಕರಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. ವಿಜ್ಞಾನ ಮಾದರಿ ತಯಾರಿ, ಬೊಂಬೆ ತಯಾರಿ, ಬೆರಳು ಬೊಂಬೆ ತಯಾರಿ, ಒರಿಗಾಮಿ ಕಲೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲೂ ಈ ಎಲ್ಲಾ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಕಲೆಗಾರ.         
          ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿದ್ದ ಇವರು ಕೃಷಿ ಮೇಳ, ಸಾಹಿತ್ಯ ಸಮ್ಮೇಳನ, ಪ್ರತಿಭಾ ಕಾರಂಜಿ, ಯುವಜನೋತ್ಸವ, ಯುವಜನಮೇಳ, ಬ್ರಹ್ಮಕಳಸಗಳಲ್ಲಿ ತಮ್ಮದೇ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡುವ ಮೂಲಕ ಜನಮಾನಸದಲ್ಲೂ ಪ್ರವೇಶಿಸಿದವರು. ಕಿನ್ನರ ಮೇಳ ತುಮರಿಯಲ್ಲಿ ನಾಟಕ ಟ್ರೈನಿಂಗ್, ಪ್ರತಿಭಾ ಕಾರಂಜಿ ಹಾಗೂ ನಾಟಕ ನಿರ್ದೇಶನ ಹಾಗೂ ರಂಗ ಪರಿಕರಗಳನ್ನು ತಯಾರಿಸುವ ಮಾಡುವ ಮೂಲಕ ನಾಟಕ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ನಿರ್ದೇಶಿಸಿದ ‘ಎ ಮ್ಯಾನ್’ ಇಂಗ್ಲೀಷ್ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. 
 ಪ್ರೌಢ ಶಿಕ್ಷಣದ ವರೆಗೆ ಆಸಕ್ತಿಯನ್ನೇ ಗುರುವಾಗಿಸಿಕೊಂಡು ಹವ್ಯಾಸವಾಗಿದ್ದ ಕಲೆಗೆ ಪ್ರಭಾವ ಬೀರಿದವರು ಕಲಾವಿದ ಗೋಪಾಡ್ಕರ್. ಅವರಿಂದ ಪ್ರಭಾವಿತಗೊಂಡು ಥರ್ಮೋ.ಪೋಂ ಆರ್ಟ್‍ನ್ನು ಕಲಿತರು. ಕಲಾಶಿಕ್ಷಕನಾಗಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿಯಲ್ಲಿ 3 ವರ್ಷ ಹಾಗೂ ವಿದ್ಯಾರಶ್ಮಿ ಡಿ.ಎಡ್ ಕಾಲೇಜಿನಲ್ಲಿ 17 ವರುಷಗಳ ಸೇವೆ ಸಲ್ಲಿಸಿರುವರು. ವಿಶೇಷ ಕಲೆಯಾದ ಗೆರಟೆ ಶಿಲ್ಪ ತಯಾರಿಗೆ ಹಲವು ಸನ್ಮಾನಗಳು ಬಂದಿವೆ. ಮುಖವಾಡ ತಯಾರಿ, ಯಕ್ಷಗಾನ, ನಾಟಕ, ಬೀದಿ ನಾಟಕ, ಛದ್ಮವೇಷ, ಲೋಗೋ ತಯಾರಿ, ಮುಖಪುಟ ವಿನ್ಯಾಸ ಹೀಗೆ ಹಲವಾರು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡು ಕಲಾಸೇವೆ ಗೈದಿರುವರು. ಪ್ರತಿಭಾ ಕಾರಂಜಿಗಳಲ್ಲಿ, ಯುವಜನ ಮೇಳಗಳಲ್ಲಿ, ಯಕ್ಷಗಾನದಲ್ಲಿ, ನಾಟಕಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿರುವ ಇವರನ್ನು, ಹಲವಾರು ಪ್ರಶಂಸೆಗಳು ಹರಸಿ ಬಂದಿವೆ. ಕಲಾಶಿಕ್ಷಕ ರತ್ನ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿರುವರು. 

Friday 12 January 2018

ಆಧ್ಯಾತ್ಮಿಕ ಕೋಟೆಗೆ ರವಿಯೇ ಚಿತ್ರಕಾರ

         

          ಪ್ರತಿಯೊಂದು ಪರಿಸ್ಥಿತಿಗಳಿಂದ ಕೆಲವರಿಗೆ ಒಮ್ಮೆ ಹೊರಬಂದು ಬಿಡುವ ಎಂದೆನಿಸಿ ಅದರಿಂದ ಹೊರಬಂದು ನೋಡಿದರೆ ಆ ಪರಿಸ್ಥಿತಿ ಈ ಹಿಂದೆಗಿಂತ ಇನ್ನೂ ಕಠಿಣವಾಗಿ ಕಾಣುತ್ತದೆ. ಇನ್ನೂ ಕೆಲವರಿಗೆ ತಾವಿರುವ ಸ್ಥಿತಿಯೇ ಮೆಚ್ಚುಗೆಯಾಗುತ್ತದೆ. ಅದೇ ರೀತಿ ನೀರಿನೊಳಗಿರುವ ಮೀನಿಗೆ ಹೊರಗಿನ ಪ್ರಪಂಚವನ್ನು ನೋಡುವ ತವಕ. ಅದೇ ಉತ್ಸುಕತೆಯಿಂದ ಹೊರಚಿಮ್ಮಿದ ಮೀನಿಗೆ ತಾನಿದ್ದ ಪರಿಸ್ಥಿತಿಯೇ ಚೆಂದ ಈ ಪ್ರಪಂಚದಲ್ಲಿ ಬದುಕಲು ತನ್ನಿಂದ ಸಾಧ್ಯವಿಲ್ಲ ಎನ್ನುವ ಚಿತ್ರಣದೊಂದಿಗೆ ಮಾನವ ದಿನನಿತ್ಯ ತನ್ನದಾಗಿರುವುದನ್ನು ಬಿಟ್ಟು, ತನ್ನದಲ್ಲದ್ದಕ್ಕೆ ಪರದಾಡುವುದನ್ನು ಮಾರ್ಮಿಕವಾಗಿ ತಮ್ಮ ಚಿತ್ರದ ಮೂಲಕ ಹೇಳುತ್ತಾರೆ ಕೋಟೆಗದ್ದೆ ರವಿ.         
           ಮಹಾತ್ಮಗಾಂಧಿ ರಸ್ತೆಯ ನವರತನ್ ಗ್ಯಾಲರಿಯಲ್ಲಿ ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಶೀರ್ಷಿಕೆಯಡಿ ನಡೆದ ಕಲಾಪ್ರದರ್ಶನದಲ್ಲಿ ತಮ್ಮ ಆಧ್ಯಾತ್ಮಿಕ ನಿಲುವನ್ನು ಬಣ್ಣಗಳಲ್ಲಿ ತುಂಬಿಟ್ಟು, ಬಂದ ಕಲಾವಿದರನ್ನು ಮಾತಿನಿಂದ ಮತ್ತು ಮುಖದಲ್ಲಿ ನಗು ಹೊತ್ತು ಸ್ವಾಗತಿಸುವ ರವಿ ಕುಂಚಗಳಿಗೆ ಭಾಷೆ ಕಲಿಸಿದ ಕಲಾವಿದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿಕ್ಕಹಳ್ಳಿಯಿಂದ ಬಂದು ಇಂದು ನಗರ ಮಾತ್ರವಲ್ಲದೆ ರಾಜ್ಯ, ದೇಶದಾದ್ಯಂತ ಹೆಸರುವಾಸಿವಾಗಿದ್ದಾರೆ. ಬಾಲ್ಯದಿಂದಲೇ ಧ್ಯಾನ, ಪುರಾಣ, ಮಹಾಕಾವ್ಯಗಳು, ಆಧ್ಯಾತ್ಮಿಕತೆಯಲ್ಲಿ ಅಪಾರ ಒಲವು ಹೊಂದಿದ್ದ ಇವರು ತಮ್ಮ ಕುಂಚ, ಬಣ್ಣಗಳ ಆಟದಲ್ಲೂ ಆಧ್ಯಾತ್ಮಿಕತೆಯಿಂದಲೇ ಚೆಂಡಾಡಿದ್ದಾರೆ.         
ಕಳೆದ ನಾಲ್ಕು ವರ್ಷಗಳಿಂದ ಇದುವರೆಗೆ ದೆಹಲಿ, ಮುಂಬೈ, ಕೋಲಾರ ಮುಂತಾದ ದೇಶದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನೀಡುತ್ತಾ ಹಲವು ಕಲಾರಸಿಕರಿಗೂ ತಮ್ಮ ಆಧ್ಯಾತ್ಮದ ಬೀಜವನ್ನೂ ಬಿತ್ತಿದ್ದಾರೆ. 2017ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದ ಚಿತ್ರಕಲಾ ಕಾರ್ಯಗಾರದಲ್ಲಿ ಭಾತರದಿಂದ ಆಯ್ಕೆಯಾದ 15 ಕಲಾವಿದರಲ್ಲಿ ಒಬ್ಬರಾಗಿ ಹಾಗೂ ಕರ್ನಾಟಕದಿಂದ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾಗಿ ಜೈಲಿನಲ್ಲಿದ್ದ ಕಲಾವಿದರಾಗಿದ್ದ ಖೈದಿಗಳಿಗೂ ತಮ್ಮ ಚಿತ್ರಕಲೆಯನ್ನು ಧಾರೆ ಎರೆದಿದ್ದಾರೆ. ಇದುವರೆಗೆ ಕಲಾಪ್ರದರ್ಶನ ನೀಡಿದ ಕಡೆಯಲ್ಲೆಲ್ಲಾ ಸನ್ಮಾನಗಳನ್ನು ಮುಡಿಗೇರಿಸಿಕೊಂಡರೂ ತುಳುಕುದ ತುಂಬಿದ ಕೊಡದಂತೆ ಸಧಾ ಚೈತನ್ಯಯುಕ್ತವಾಗಿರುವ ಕಲಾರಾಧಕ.
ಪ್ರಸ್ತುತ ಬೆಂಗಳೂರಿನ ಫಿಡಿಲಿಟಸ್ ಆರ್ಟ್ ಗ್ಯಾಲರಿಯಲ್ಲಿ ಮುಖ್ಯನ ಕಲಾವಿದನಾಗಿ, ಎಲ್ಲಾ ಯುವ ಕಲಾವಿದರಿಗು ಮುಕುಟಮಣಿಯಂತಿದ್ದಾರೆ. 2013ರಲ್ಲಿ ದೇವರಾಜು ಅರಸ್ ಭವನದಲ್ಲಿ ಪ್ರಾರಂಭವಾದ ಇವರ ಕಲಾಪ್ರದರ್ಶನ ಒಂದಾದ ಮೇಲೊಂದರಂತೆ ಫಿಡಿಲಿಟಸ್ ಗ್ಯಾಲರಿಯ ನೇತೃತ್ವದಲ್ಲಿ ಹೊಸ ಮಾದರಿಗಳಲ್ಲಿ ಮುಂದುವರಿಯುತ್ತಲೇ ಇದೆ. ಮಿಸ್ಟಿಕ್ ಲೋಟಸ್, ಸ್ಪಿರಿಚುವಲ್ ಸ್ಟೋಕ್, ಟೆಕ್ಸ್ಚರ್ ಆ್ಯಂಡ್ ಮ್ಯೂಸೆಸ್ ಎನ್ನುವ ಆಧ್ಯಾತ್ಮಿಕ ಶೀರ್ಷಿಕೆಗಳಡಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.         
          ಬಾಲ್ಯದಲ್ಲಿ ಶಾಲೆಯಲ್ಲಿ ಗುರುಗಳು ಹೇಳಿಕೊಡುತ್ತಿದ್ದ ಚಿತ್ರಕಲೆಯನ್ನು ಶ್ರದ್ಧೆಯಿಂದ ಕಲಿತು, ಸ್ಪರ್ಧೆಯಲ್ಲಿ ಬಹುಮಾನ ದೊರೆತಾಗ ಇದರಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕು, ತಾನೊಬ್ಬ ಕಲಾವಿದನಲ್ಲದೆ ಬೇರೇನು ಆಗಲು ಸಾಧ್ಯವಿಲ್ಲ ಎಂಬ ಅಚಲ ನಿರ್ಧಾರದೊಂದಿಗೆ ಪಿಯುಸಿ ಶಿಕ್ಷಣ ಮುಗಿದ ಕೂಡಲೆ ಮೈಸೂರಿನ ಡಿಎಮ್‍ಎಸ್ ಲಲಿತಕಲಾ ಮಹಾಸಂಸ್ಥಾನದಲ್ಲಿ ಚಿತ್ರಕಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಾರೆ. ಪ್ರಾರಂಭದಲ್ಲಿ ಕೊಡಗಿನ ವಿರಾಜ್‍ಪೇಟೆಯ ಮಹೀಂದ್ರ ಆ್ಯಂಡ್ ಮಹೀಂದ್ರ ಹಾಲಿಡೇ ರೆಸಾರ್ಟ್‍ನಲ್ಲಿ ಕಲಾಗಾರನಾಗಿ ಬಂದ ಅತಿಥಿಗಳ ಭಾವಚಿತ್ರಗಳನ್ನು ಬರೆದು, ಅಲ್ಲೊಂದು ಕಲಾ ಗ್ಯಾಲರಿಯನ್ನೂ ಪ್ರಾರಂಭಿಸಿ ತಮ್ಮ ಚಿತ್ರಕಲೆಗೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ನಂತರದಲ್ಲಿ ಫಿಡಿಲಿಟಸ್‍ನ ಸ್ಥಾಪಕ ಅಚ್ಚುತ್‍ಗೌಡ ಅವರ ಪ್ರೇರಣೆ, ಪ್ರೋತ್ಸಾಹದಿಂದ ಬೆಂಗಳೂರಿನಲ್ಲಿ ಕಲಾಪ್ರದರ್ಶನಗಳನ್ನು ಪ್ರಾರಂಭಿಸಿದರು.
          ಗ್ರಾಹಕರಿಗೆ ಬೇಕಾದ ವಿಷಯಗಳನ್ನು ಚಿತ್ರರೂಪಕ್ಕೆ ತರುತ್ತಿದ್ದ ಕೋಟೆಗದ್ದೆ ರವಿ ಇಂದು ತಮ್ಮದೇ ಹೊಸ ಚಂತನೆ, ಆಶಯಗಳನ್ನು ಕುಂಚದಿಂದ ಕ್ಯಾನ್ವಾಸ್‍ನ ಮೇಲೆ ಬರೆಯುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಮೇಲೆ ಸ್ವಯಂ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಕಲೆಗೆ ಯಾವುದೇ ಗುರುಗಳನ್ನು ನಿಗಧಿಪಡಿಸಿಕೊಳ್ಳದೆ, ನಿರಂತರವಾಗಿ ಕಲೆಯ ತಪಸ್ಸು ಮಾಡುತ್ತಲೇ ಇದ್ದಾರೆ. ಇಂದಿಗೂ ಬಿಚ್ಚು ಮನಸ್ಸಿನಿಂದ ಕಲಾಪ್ರಕಾರಗಳಿಗೆ ತಮ್ಮನ್ನು ತೆರೆದುಕೊಂಡು, ಕಲಿಕೆ ನಿರಂತರ ಪ್ರಕ್ರಿಯೆ ಎಂಬಂತೆ, ಚಿಕ್ಕವಯಸ್ಸಿನಿಂದ ಬೇರೆ ಕಲಾವಿದರ ಚಿತ್ರಗಳನ್ನು ನೋಡಿ ಅದೇ ಥರಾ ಚಿತ್ರಗಳನ್ನು ಮಾಡುತ್ತಾ ಬಂದ ಇವರು ಎಲ್ಲಾ ಹಿರಿಯ ಕಲಾವಿದರನ್ನು ತಮ್ಮ ಗುರುಗಳಾಗಿ ನೆಚ್ಚಿಕೊಂಡ ಏಕಲವ್ಯ.      
          ಎಲ್ಲಾ ವೃತ್ತಿಗೂ ಒಂದು ನಿಗಧಿತ ಸಮಯವಿದೆ. ಕಲಾವಿದನಿಗೆ ಸಮಯದ ಪರಿಧಿ ಇಲ್ಲ. ಕಲಾವಿದನಿಗೆ ಕಲೆಯೆ ಜೀವನವಾಗಬೇಕು ಎನ್ನುವ ನಿಟ್ಟಿನಲ್ಲಿ ಹಳ್ಳಿಯಿಂದ ಬಂದ ಇವರಿಗೆ ಅದನ್ನು ಸಾಧಿಸುವುದು ಹೇಗೆ ಎಂಬುದು ತಿಳಿದಿರಲಿಲ್ಲ. ಆದರೆ ಫಿಡಿಲಿಟಸ್ ಸಂಸ್ಥೆ ಸಹಾಯದಿಂದ ಒಬ್ಬ ವೃತ್ತಿ ಕಲಾವಿದನಾಗಿ ಇಂದು ಹಲವಾರು ಗಣ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರತಿಯೊಬ್ಬ ಕಲಾವಿದನೂ, ಒಬ್ಬ ಕತೆಗಾರ ತನ್ನ ಪರಿಸರವನ್ನು ಅಕ್ಷರಗಳಲ್ಲಿ ತರಲು ಪ್ರಯತ್ನಿಸುವಂತೆ, ತನ್ನ ಆಲೋಚನೆಗಳನ್ನು ಬಣ್ಣಗಳಲ್ಲಿ ಮೂಡಿಸಲು ಪ್ರಯತ್ನಿಸುತ್ತಾನೆ. ಎಲ್ಲಾ ಧರ್ಮಗಳಿಗೂ ತಿರುಳು ಆಧ್ಯಾತ್ಮಿಕತೆ. ಆ ಆಧ್ಯಾತ್ಮಿಕತೆಯನ್ನೇ ಮೆಚ್ಚಿ ಅವುಗಳಿಗೆ ಬಣ್ಣಗಳಿಂದ ಸಾಂಕೇತಿಕ ರೂಪ ನೀಡಿ ರಿಯಲಿಸ್ಟಿಕ್ ಚಿತ್ರಗಳ ಬದಲಾಗಿ ಸಮಕಾಲೀನ ಶೈಲಿಯ ಮೂಲಕ ತಮ್ಮದೇ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
          ಚಿತ್ರಕಲೆ ನಾವು ಮಾಡಿದ್ದಾಗಿರಬಾರದು, ನಮ್ಮ ಕೈಯ್ಯಲ್ಲಿರುವ ಕುಂಚದಿಂದ ಸಹಜವಾಗಿಯೇ ಅಲ್ಲೊಂದು ಚಿತ್ರ ಸೃಷ್ಟಿಯಾಗಬೇಕು. ಕಷ್ಟ ಪಟ್ಟು ಕಲ್ಪನೆ ಮಾಡಿ ಅದನ್ನು ಬಿಡಿಸುವ ಬದಲು, ತಾನಾಗಿಯೇ ಚಿತ್ರ ಸೃಷ್ಟಿಯಾಗುವುದೇ ಸುಂದರ ಎಂದುಕೊಂಡು, ಟೆಕ್ಸ್ಚರ್ ಮತ್ತು ಮ್ಯೂಸೆಸ್ ಶೀರ್ಷಿಕೆಯಲ್ಲಿ, ಕ್ಯಾನ್ವಾಸ್ ಮೇಲೆ ಚೆಲ್ಲಿದ ಬಣ್ಣಗಳನ್ನೇ ದಿಟ್ಟಿಸಿ ನೋಡುತ್ತಾ ಅದರೊಳಗಿಂದ ಹೊಸ ಚಿತ್ರವನ್ನು ಹೊರತೆಗೆದು ತಮ್ಮದೆ ಹೊಸ ಚಿತ್ರಣ ಶೈಲಿಯನ್ನು ಸೃಷ್ಟಿಸಿದ ಮಾಂತ್ರಿಕ ಕಲಾವಿದ ಕೋಟೆಗದ್ದೆ ರವಿ. 

  •   ಕೋಟೆಗದ್ದೆ ರವಿ, ಚಿತ್ರಕಲಾವಿದ
ಕಲೆಗೆ ಒಂದು ವ್ಯಾಕರಣವಿರುತ್ತದೆ. ಒಂದು ಭಾಷೆಯ ವ್ಯಾಕರಣವನ್ನು ಚೆನ್ನಾಗಿ ಕಲಿತರೆ ಆ ಭಾಷೆಯನ್ನು ಹೇಗೆ ಬೇಕಾದರೂ ಒಬ್ಬ ಬರಹಗಾರ ಬಳಸಬಹುದು. ಕಲಾವಿದ ಕಲೆಯ ವ್ಯಾಕರಣವನ್ನು ಅರ್ಥ ಮಾಡಿಕೊಂಡು, ಪ್ರಾರಂಭದಲ್ಲೇ ಒಂದು ಶೈಲಿಗೆ ಸೀಮಿತವಾಗದೆ, ಎಲ್ಲಾ ಶೈಲಿಯ ಚಿತ್ರಕಲೆಯನ್ನು ಮಾಡಿ ಕಲಿಯಬೇಕು. ನಿರಂತರ ಅಭ್ಯಾಸದಿಂದ ತಾನಾಗಿಯೇ ಅವರದ್ದೇ ಒಂದು ಶೈಲಿಯ ಚಿತ್ರಕಲೆಯ ಹುಟ್ಟು ಸಾಧ್ಯವಾಗುತ್ತದೆ. 

                                                                 

Tuesday 2 January 2018

          ನನ್ನ ಹೆಜ್ಜೆಗೆ ಗೆಜ್ಜೆಯಾಗೋ ಓ ಇನಿಯ...

          ಪ್ರತಿ ಹೆಣ್ಣು ತನ್ನ ಬಾಳಿಗೆ ಜತೆಯಾಗಿ ಬರುವ ಹುಡುಗನ ಬಗ್ಗೆ ಹೀಗೇ ಇರಬೇಕು ಎನ್ನುವ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದರೆ ಎಲ್ಲವೂ ಈಡೇರುವುದು ಕನಸಿನ ಮಾತೇ ಬಿಡಿ. ಒಂದು ಮರಕ್ಕೆ ಅಂಕುಡೊಂಕುಗಳಿಲ್ಲದೆ ರೆಂಬೆಗಳಿರಲು ಹೇಗೆ ಸಾಧ್ಯವಿಲ್ಲವೋ ಹಾಗೇಯೇ ಮಾನವನಾದವನು ಎಲ್ಲಾ ರೀತಿಯಲ್ಲು ಪರ್ಫೆಕ್ಟ್ ಆಗಿರಲು ಸಾಧ್ಯವೇ ಇಲ್ಲ. ಹೆಚ್ಚಿನವರಿಗೆ ಬಾಳ ಸಂಗಾತಿಯಾಗುವವ ಹಾಗಿರಬೇಕು ಹೀಗಿರಬೇಕು ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಆಸೆಯಿರುತ್ತದೆ. ಅಷ್ಟು ದೊಡ್ಡ ಆಸೆ ನನಗಿಲ್ಲ. ನನ್ನ ಜತೆಗಾರ ವಿಶಾಲವಾದ ಆಕಾಶದಲ್ಲಿ ಎಲ್ಲರನ್ನು ಕೇಂದ್ರಿಕರಿಸುವ ಚಂದಿರನೇ ಆಗಿರಬೇಕಿಲ್ಲ. ಚಂದಿರನಿಲ್ಲದ ರಾತ್ರಿಗೆ ಆಕಾಶಕ್ಕೆ ಬೆಳಕು ತುಂಬುವ ಕೋಟಿ ನಕ್ಷತ್ರಗಳಲ್ಲಿ ಒಂದು ನಕ್ಷತ್ರ ನನ್ನವನಾಗಿದ್ದರೆ, ಆ ಕ್ಷಣಕ್ಕೆ ಮುದ್ದಾಗಿ ಅರಳೋ ನೈದಿಲೆ ನಾನಾಗಿರ್ತೀನಿ ಅಷ್ಟೆ. 
          ಎಲ್ಲಾ ವಿಷಯಗಳ ಕುರಿತು ಒಂದೇ ರೀತಿಯ ಭಾವನೆ, ಯೋಚನೆಗಳಿರುವ ಹುಡುಗ ಹುಡುಗಿ ಜೋಡಿಯಾಗುವುದು ಅಪರೂಪದ ಮಾತು. ಹಾಗಿರುವಾಗ ಎಲ್ಲಾ ರೀತಿಯಲ್ಲೂ ನನ್ನ ಯೋಚನೆಯಂತೆಯೇ ಅವನ ಯೋಚನೆಯೂ ಇರಬೇಕು ಎಂಬ ಆಸೆಯಿಲ್ಲ. ಯೋಚನೆಗಳು ವಿಭಿನ್ನವಾಗಿದ್ದು, ಚರ್ಚೆಯಾಗಬೇಕು, ಕೋಪ ನೆತ್ತಿಗೇರಿ, ಊಟಕ್ಕೆ ಉಪ್ಪಿನಕಾಯಿ ರುಚಿಕೊಡುವಂತೆ ಜಗಳವೂ ಆಗಬೇಕು. ಆಗ ಮಾತ್ರ ನನ್ನ ಮುನಿಸಿಗೆ ಮುಲಾಮು ಹಚ್ಚುವ ಅವನ ಪ್ರೀತಿ ಮಾತುಗಳು ಏನೋ ವಿಶೇಷವಾಗಿರುತ್ತೆ. ಜೀವನದಲ್ಲಿ ಖುಷಿಯೊಂದೇ ಇದ್ದರೆ ಆ ಖುಷಿಯ ಮಹತ್ವ ನಮಗರಿವಾಗುವುದೇ ಇಲ್ಲವಂತೆ. ಅದೇ ಕಷ್ಟದ ರುಚಿಯುಂಡವನಿಗೆ ಒಮ್ಮೆ ಸಿಗುವ ಸಂತೋಷ ಮೃಷ್ಟಾನ್ನ ಭೋಜನವೇ ಆಗಿರುತ್ತದೆ. ದಿನವಿಡೀ ಪ್ರೀತಿಯಮಳೆ ಸುರಿಸುವುದು ಬೇಡ. ಅಬ್ಬರದ ಗುಡುಗು ಸಿಡಿಲಿನ ಮಧ್ಯೆ ಸುರಿಯುವ ಪ್ರೀತಿಮಳೆ ನನಗೆ ಬೇಕು. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ, ಅದು ಗೊತ್ತಿದ್ದರೂ ನನ್ನ ಕೈಹಿಡಿಯುವ ಹುಡುಗನ ಬಗ್ಗೆ ಅದೇನೋ ಹುಚ್ಚು ಕನಸುಗಳು. ನನಗಾಗಿ ಅವನ ರುಚಿ, ಅಭಿರುಚಿಗಳನ್ನು ಬದಲಾಯಿಸಬೇಕೆಂದಿಲ್ಲ. ನನ್ನ ಅಭಿರುಚಿಯನ್ನು ಗೌರವಿಸುವವನಾಗಿರಬೇಕು.
ಮದುವೆ ದಿನ ನಾವಿಡುವ ಸಪ್ತಪದಿ, ನಮ್ಮ ಏಳು ಜನ್ಮಗಳು ಇತ್ಯಾದಿ ಇತ್ಯಾದಿ. ಆ ಏಳು ಹೆಜ್ಜೆಗಳಲ್ಲಿ ಏಳು ಜನ್ಮಗಳಲ್ಲಿ ಜತೆಯಿರುವ ಭರವಸೆ ಸಾಲದು ನನಗೆ, ಜೀವನ ಪಯಣದ ಏಳು ಬೀಳಿನ ನನ್ನ ಪ್ರತಿಯೊಂದು ಹೆಜ್ಜೆಗೂ ಜತೆಯಾಗಿ ಹೆಜ್ಜೆಯಿಟ್ಟು, ಆ ಹೆಜ್ಜೆಗಳಿಗೆ ಪ್ರೀತಿ ಗೆಜ್ಜೆನಾದವ ತುಂಬುವ ಇನಿಯನಾಗಿರಬೇಕು. ಅಗೋ ಓ ಅಲ್ಲಿದೆ ನೋಡು ಎಂದು ಕಾಣದ ಧ್ರುವತಾರೆಯ ತೋರಿಸುತ್ತಾ ಪ್ರತಿದಿನ ತೋಳ ತುಂಬ ಪ್ರೀತಿಯ ಅಪ್ಪುಗೆಯನಿಟ್ಟರೆ ಸಾಕು ನನ್ನವನು. 
          ನನ್ ಬರ್ತ್‍ಡೇಗೆ ಅದ್ದೂರಿ ಗಿಫ್ಟ್ ಕೊಡಲೇಬೇಕು ಎನ್ನುವ ಹಠ ನನಗಿಲ್ಲ. ನನಗೆ ದೇಶ ಸುತ್ತೋದು ಕೋಶ ಓದೋದು ಅಂದ್ರೆ ಬಹಳ ಅಚ್ಚು ಮೆಚ್ಚು. ಮನಸ್ಸಿನ ನಿರಾಳಕ್ಕೋ, ಜ್ಞಾನ ವೃದ್ಧಿಗೋ ತಿಂಗಳಿಗೆ ಒಂದಲ್ಲದಿದ್ದರೂ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ, ಪುಟ್ಟ ಪ್ರವಾಸ, ನನ್ ಬರ್ತ್‍ಡೇಗೆ ಪುಸ್ತಕವನ್ನೇ ಗಿಫ್ಟ್ ಕೊಡಬೇಕು. ಎದೆಚಿಪ್ಪಿನೊಳಗೆ ಕನಸಿನ ಹುಡುಗನೆ ಬಗ್ಗೆ ಸಾವಿರಾರು ಕನಸುಗಳು ಇಲ್ಲವೇ ಇಲ್ಲ. ನನ್ನ ಬಾಳಿಗೂ ಒಬ್ಬ ಸಂಗಾತಿ ಬೇಕು ಎನ್ನುವ ಆಸೆ ಇದೆ. ಆ ಹುಡುಗ ಅಂದಕ್ಕೆ ಇನ್ನೊಂದು ಹೆಸರಾಗಿರಬೇಕೆಂದೇನಿಲ್ಲ,  ನನ್ನ ಮನಸ್ಸಿನ ಭಾವನೆಗಳಿಗೆ ಪ್ರತಿರೂಪ ಅವನಾಗಿರಬೇಕು. 
                                                                                                                                    
                                                                                                                                  ಮೇಘದೀಪ...

Wednesday 2 August 2017

ಚಳ್ಳೆಹಣ್ಣು ತಿಂದಿದ್ದೀರಾ!

          ಹಣ್ಣಿನ ಗೊಂಚಲುಗಳ ಭಾರಕ್ಕೆ ಬಾಗಿದ್ದ ರೆಂಬೆ. ಸಣ್ಣ ಸಣ್ಣ ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಗಳು, ನೋಡಲಂತು ತುಂಬಾ ಆಕರ್ಷಣೀಯವಾಗಿದ್ದವು. ಕುತೂಹಲದಿಂದ ಹಣ್ಣು ತಿಂದು ನೋಡಿದರೆ, ಒಗರು, ಹುಳಿ, ಸಿಹಿ ಮಿಶ್ರಿತ ಅಂಟು ರುಚಿ. ಇದರ ಹೆಸರೇ ಹೇಳುವಂತೆ ಒಂದು ಕ್ಷಣ ಚಳ್ಳೆ ಹಣ್ಣು ತಿಂದಂತೇ ಆಯಿತು! ಆದರೆ ತಿನ್ನುವುದರಲ್ಲಿ ಯಾವುದೇ ದೋಷವಿಲ್ಲ.
          ಹತ್ತರಿಂದ ಹದಿನೈದು ಮೀಟರ್ ಎತ್ತರ ಬೆಳೆಯುವ ಈ ಮರವನ್ನು ಮಣ್ಣಡಕೆ, ಕಿರಿಚೆಳ್ಳೆ ಮರ, ತುಳುವಿನಲ್ಲಿ ಉರ್ಸಲ್ಲೆ, ಇಂಗ್ಲಿಷ್‍ನಲ್ಲಿ ಸೆಬೆಸ್ಟನ್ ಪ್ಲಮ್ (Sebestan Plum), ಆಸ್ಸಿರಿಯನ್ ಪ್ಲಮ್ (Assyrian Plum) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಚೆಡ್ಲು, ಚಳ್ಳಂಟ ಎಂದು ಸಂಸ್ಕøತದಲ್ಲಿ ಉದ್ಖಾಲಕ, ಬೌವರಕ ಎಂತಲೂ ಕರೆಯುತ್ತಾರೆ. ಬೊರಾಜಿನೇಸಿ (Boraginaceae) ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಕಾರ್ಡಿಯಾ ಮಿಕ್ಸ ಎಲ್. ಸಿ. (Cordia myxa L. C.)
          ಏಷ್ಯಾ ಮೂಲದ ಗಿಡವಾಗಿರುವ ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದಾಗಿದೆ. ನಯವಾದ ಕಾಂಡವನ್ನು ಹೊಂದಿರುವ ಮರ. ತಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು 6-10 ಸೆಂ.ಮೀ ಉದ್ದವಿರುತ್ತವೆ. ಎಪ್ರಿಲ್ ಮೇ ತಿಂಗಳಲ್ಲಿ ಮರ ಹೂ ಬಿಡುತ್ತದೆ.  ತೊಟ್ಟನ್ನು ಹೊಂದಿಲ್ಲದ, ನಸು ಹಳದಿ ಅಥವಾ ಬಿಳಿಯ ಬಣ್ಣದ ಚಿಕ್ಕ ಹೂಗಳ ಗೊಂಚಲುಗಳು ಹಸಿರು ಕಾಯಿಗಳಾಗಿ ಜುಲೈ ಹೊತ್ತಿಗೆ ಮಾಗಿದ ಹಣ್ಣುಗಳಾಗಿರುತ್ತವೆ. ಹಣ್ಣಗಳು ತಿಳಿ ಹಳದಿ ಅಥವಾ ತಿಳಿ ಕೆಂಪು ಬಣ್ಣದಿಂದಲೂ ಕೂಡಿರುತ್ತವೆ.
          ಹಣ್ಣಿನೊಳಗೊಂದು ಬೀಜವಿದ್ದು, ಬೀಜವು ಅರೆಪಾರದರ್ಶಕವಾದ ಸಿಹಿ ಮತ್ತು ಅಂಟು ತಿರುಳಿನಿಂದ ಸುತ್ತುವರೆದಿರುತ್ತದೆ. ತಿರುಳಿಗೆ ಸಿಪ್ಪೆಯು ರಕ್ಷಾ ಕವಚವಾಗಿ ರಚನೆಗೊಂಡಿದೆ. ಸಿಪ್ಪೆಯಿಂದ ಹಣ್ಣನ್ನು ಹೊರತೆಗೆದು ತಿನ್ನಲಾಗುತ್ತದೆ. ಹಣ್ಣಿನ ತುದಿಯಲ್ಲಿ ಎರಡು ಬೆರಳುಗಳಿಂದ ಒತ್ತಿದರೆ, ಹಣ್ಣು ಸಿಪ್ಪೆಯ ಒಳಗಿಂದ ಒಮ್ಮೆಲೆ ಹೊರ ಬರುತ್ತದೆ. ಒಳಗೆ ಅಂಟು ನೀರು ಇರುವುದರಿಂದ ಕೈಗೆ ಲೋಳೆಯ ಅನುಭವ ನೀಡುತ್ತದೆ. ಹಲವಾರು ಔಷಧೀಯ ಗುಣಗಳುಳ್ಳ ಈ ಅಂಟು ತಿರುಳು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ, ಕಫ, ಕೆಮ್ಮು, ಕರುಳುರೋಗ, ಪಿತ್ತಕೋಶದ ಕಾಯಿಲೆಗಳಿಗೆ ಉತ್ತಮ ಶಮನಕಾರಿ ಎನ್ನುತ್ತಾರೆ ತಜ್ಞರು. ಹಣ್ಣು ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟ್ಯಾಷಿಯಂ, ಮೆಗ್ನೇಷಿಯಂಗಳಂತಹ ಅಂಶಗಳಿಂದ ಪೌಷ್ಟಿಕಾಂಶಯುಕ್ತವಾಗಿದೆ. ಹಣ್ಣು ಒಗರಾಗಿರುವುದರಿಂದ ಹೆಚ್ಚಿನವರು ತಿನ್ನಲು ಹಿಂಜರಿಯುತ್ತಾರೆ. ತಿನ್ನುವವರ ನಾಲಗೆ ಇದು ಸಿಹಿಯ ಅನುಭವವನ್ನೂ ನೀಡುತ್ತದೆ. ಬೀಜದೊಂದಿಗೆ ಹಣ್ಣನು ನುಂಗುವ ಮೂಲಕ ಹಣ್ಣು ತಿನ್ನಬಹುದು. ಕೆಲವರು ಹಣ್ಣಿನ ತಿರುಳನ್ನು ನಾಲಗೆಯಿಂದ ಚಪ್ಪರಿಸಿ ಬೀಜವನ್ನು ಉಗುಳುತ್ತಾರೆ.
          ಮಣ್ಣಡಕೆ ಮರದ ಸೊಪ್ಪನ್ನು ಪಶುಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಮರದ ತೊಗಟೆಯಿಂದ ಮಾಡಿದ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖವಾಗುವುದು. ಗಾಯಗಳಿದ್ದಲ್ಲಿ ಅದಕ್ಕೆ ಮರದ ತೊಗಟೆಯಿಂದ ಮಾಡಿದ ಗಂಧವನ್ನು ಲೇಪಿಸಿದರೆ ಗಾಯ ಕಡಿಮೆಯಾಗುವುದು. ಚಳ್ಳೆಹಣ್ಣಿನ ಎಳೆಮಿಡಿಗಳಿಂದ ಉಪ್ಪಿನಕಾಯಿ ತಯಾರಿಸಲಾಗುವುದು. ಹಣ್ಣಿನಿಂದ ಮದ್ಯ ತಯಾರಿಕೆ ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಅಕ್ಕಿಹಿಟ್ಟಿನೊಂದಿಗೆ ಮಣ್ಣಡಕೆ ಹಣ್ಣನ್ನು ಸೇರಿಸಿ ದೋಸೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಣ್ಣಡಕೆ ಮರ ಎಲ್ಲೂ ಕಾಣದಾಗಿದೆ. ಅಳಿವಿನತ್ತ ಸಾಗುತ್ತಿದೆ. ಇದರ ರೆಂಬೆಗಳಿಂದ ಅಥವಾ ಬೀಜಗಳಿಂದ ಹೊಸ ಗಿಡಗಳನ್ನು ಪಡೆಯಬಹುದು. ಕೋತಿ, ಪಕ್ಷಿಗಳು ಇದರ ಹಣ್ಣನ್ನು ತಿಂದು ಬೀಜಗಳನ್ನು ಪಸರಿಸುವ ಮೂಲಕ ಗಿಡಗಳ ಅಭಿವೃದ್ಧಿಗೆ ಕಾರಣವಾಗುತ್ತಿವೆ. ಹಣ್ಣಿನಲ್ಲಿರುವ ಗಮ್‍ನಂತಹ ಪದಾರ್ಥವನ್ನು ಕಾಗದಗಳನ್ನು ಅಂಟಿಸಲು ಉಪಯೋಗಿಸುತ್ತಾರೆ. ಕೃಷಿ ಪುಕರಣಗಳಿಗಾಗಿ ಮತ್ತು ಕೆಲವು ಕೆತ್ತನೆ ಕೆಲಸಗಳಿಗಾಗಿ ಈ ಮರ ಬಳಕೆಯಾಗುತ್ತದೆ.