Tuesday 28 February 2017

ಕಂಬನಿಯೊರೆಸುವ ಒಲವಿನ ಹೃದಯಕೆ


          ಹೌದು! ನೀನೆ ನನ್ನ ಮನದ ಭಾವನೆಗಳ ಸರದಾರ. ನೀನಾರೋ ನಾನಾರೋ ಜೊತೆಯಾದದ್ದೇ ಅಪರೂಪ. ನಿಜವಾದ ಪ್ರೀತಿ, ಸ್ನೇಹ ಎಂದರೆ ಏನು ಎಂದು ಅರ್ಥೈಸಿದವನೇ ನೀನು. ನಾವಿಬ್ಬರು ಮೊದಲ ಹೆಜ್ಜೆ ಇಟ್ಟದ್ದು ಸ್ನೇಹಿತರಾಗಿ. ಆದರೆ ಆ ಸ್ನೇಹ ಯಾವ ರೀತಿ ಪ್ರೀತಿಯ ಹೊಳಪನ್ನು ಪಡೆದುಕೊಂಡಿತೋ ಗೊತ್ತಿಲ್ಲ. ನಮ್ಮಿಬ್ಬರ ಅತಿಯಾದ ನಿಶ್ಕಲ್ಮಶ ಸ್ನೇಹದ ಸಲುಗೆಯೇ ಸ್ನೇಹಕ್ಕೆ ಪ್ರೀತಿಯ ಹೊಳಪನ್ನು ನೀಡುವ ಕೆಲಸ ಮಾಡಿರಬಹುದು ಅಲ್ಲವೇ? ಒಬ್ಬರಿಗೊಬ್ಬರ ಮುಖ ಪರಿಚಯವಿಲ್ಲದೆಯೇ ಸ್ನೇಹ ಗಾಢವಾಗಿ ಬೇರೂರಿತ್ತು. ನಮ್ಮಿಬ್ಬರ ನಡುವಿನ ಗೆಳೆತನದ ಭಾವಕ್ಕೆ ಮೊಬೈಲ್ ಕರೆಗಳು ಬಿಟ್ಟರೆ ಮೆಸ್ಸೇಜ್‍ಗಳು ಮಾತ್ರವೇ ಗಟ್ಟಿ ಸೇತುವೆಯಾಗಿದ್ದವು. ಯಾವುದೇ ಮೋಸ ಕಪಟವಿಲ್ಲದ ಸ್ನೇಹದಲ್ಲಿ ಯಾವುದನ್ನೂ ಮುಚ್ಚಿಡದೆ ನಿನ್ನ ಕೆಲಸ, ಮನೆ ಬಗ್ಗೆ, ಕಷ್ಟ ಸುಖ ನೋವುಗಳನ್ನೆಲ್ಲಾ ಮುಕ್ತವಾಗಿ ನನ್ನೊಡನೆ ಹಂಚಿಕೊಳ್ಳುತ್ತಿದ್ದೆ. ಎಷ್ಟೋ ಸಾರಿ ನೀನೇ ಹೇಳಿದ್ದಿದೆ ‘ನಾನು ಬೆಂಗಳೂರಿಗೆ ಕೆಲಸಕ್ಕೆಂದು ಬರುವ ಮುನ್ನ ಮನಸ್ಸಿಗೇನೇ ಬೇಜಾರಾದ್ರು ಅಮ್ಮನ ಮಡಿಲು ನಿರಾಳತೆಯನ್ನು ಒದಗಿಸುತ್ತಿತ್ತು. ಅದೇ ರೀತಿ ನನ್ನ ನೋವುಗಳಿಗೆ ನಿನ್ನ ಸಾಂತ್ವನದ ನುಡಿಗಳು ಅಮ್ಮಾ ಎನ್ನುವ ಬೆಚ್ಚನೆಯ ಭಾವವನ್ನು ನೀಡುತ್ತಿದೆ’ ಎಂದು ಆಗೆಲ್ಲಾ ನನಗೆ ನಾನೇ ಬೆನ್ನು ತಟ್ಟಿ ಬೀಗುತ್ತಿದ್ದೆ.
          ಮಾತಲ್ಲೇ ಮನೆಮಾಡುವ ಈ ಸ್ನೇಹಿತೆಯನ್ನು ನೋಡಬೇಕೆಂದು ಬೆಂಗಳೂರಿಂದ ಊರಿಗೆ ಬಂದಾಗ ನಮ್ಮಿಬ್ಬರ ಭೇಟಿಗೆ ಸಾಕ್ಷಿಯದದ್ದು ಶಿವ ಪರಮಾತ್ಮನ ದೇವಸ್ಥಾನ. ಭಗವಂತನ ಸಾನಿಧ್ಯದಲ್ಲಿ ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಹೊಸರೂಪ ಪಡೆಯಿತು. ಅದುವರೆಗೆ ಮೊಬೈಲ್‍ನಲ್ಲೇ ಗಂಟೆಗಳ ಸಮಯ ಪಟಾಕಿಯಂತೆ ಮಾತಿನ ಮುತ್ತುಗಳನ್ನೇ ಉದುರಿಸುತ್ತಿದ್ದ ನಮ್ಮಿಬ್ಬರಲ್ಲಿ ನೀರವ ಮೌನ. ಒಂದು ಹಂತದಲ್ಲಿ ಮೌನ ಉತ್ತರ ನಮ್ಮನ್ನು ತಡೆಹಿಡಿದಿತ್ತು. ಚಿಟಪಟ ಸುರಿಯುವ ಮಳೆಹನಿಯಂತೆ, ಮುತ್ತು ಪೋಣಿಸಿದಂತೆ ಸಾಲಾಗಿ ಸುರಿವ ಮಾತುಗಳೆಲ್ಲಾ ನಾಲಗೆ ತುದಿಯಲ್ಲಿ ಹಿಡಿದಿಟ್ಟಂತಾಗಿತ್ತು. ಪರಮೇಶ್ವರನ ಮುಂದೆ ನಾನೊಂದು ಕೊಡುವೆ ಅದನ್ನು ಜೋಪಾನವಾಗಿ ಕಾಪಾಡುತ್ತೀಯ ಎಂದು ಹಾರ್ಟ್‍ನ ಆಕಾರದ ಪೆಂಡೆಂಟನ್ನು, ಹೃದಯವನ್ನೇ ನನ್ನ ಕೈಯ್ಯಲ್ಲಿಡುವಂತೆ ನನ್ನ ಕೈಗಿತ್ತು, ನನ್ನನ್ನು ಮದುವೆಯಾಗುತ್ತೀಯ ಎಂದಾಗ ಮಾತಿನ ಮುತ್ತುಗಳೆಲ್ಲವೂ ಚಿಪ್ಪೊಳಗೆ ಮುದುಡಿ ಬಚ್ಚಿಟ್ಟುಕೊಂಡಂತಾಗಿತ್ತು. ನಿನಗೆ ಪ್ರೀತಿನಿವೇದನೆಯ ಚಡಪಡಿಕೆಯಾದರೆ ನನಗೆ ನಿನ್ನ ಭಾವನೆಗಳನ್ನು ಎದುರಿಸುವ ತಳಮಳ. ಆ ಮೌನದಲ್ಲಿ ನನ್ನ ಕಣ್ಣುಗಳೇ ನಿನಗೆ ಉತ್ತರ ನೀಡಿದ್ದವು. ನನ್ನ ಕಣ್ಣುಗಳ ಉತ್ತರಕ್ಕೆ ನಿನ್ನ ತುಟಿಗಳು ‘ಐ ಲವ್ ಯೂ’ ಎಂದು ಸಂತೋಷ ವ್ಯಕ್ತಪಡಿಸಿದ್ದವು. ಅದಕ್ಕೆ ನನ್ನ ತುಟಿಯಂಚಿನ ನಗು ಪ್ರತ್ಯುತ್ತರ.
          ಅದೇ ದಿನ ನೀನು ಬೆಂಗಳೂರಿಗೆ ಹೊರಡುವವನಿದ್ದೆ. ಆದರೆ ಆಗ ನನ್ನ ಪರಿಸ್ಥಿತಿ ಅದೆಷ್ಟು ಸಂದಿಗ್ಧ ಎಂದರೆ ನಿನ್ನನ್ನು ಬಿಟ್ಟು ತೆರಳಲು ಮನಸ್ಸೇ ಇರಲಿಲ್ಲ. ನಿನಗೂ ಹಾಗೇ ಆಗಿತ್ತು ಅನಿಸುತ್ತೆ. ಆದರೆ ನಿನಗದು ಅನಿವಾರ್ಯ. ನಿನ್ನ ಅನಿವಾರ್ಯವನ್ನು ಅರಿತೋ ಅರಿಯದೆಯೋ ಹೇಗೋ ಮನಸಿಲ್ಲದ ಮನಸಿನಲ್ಲಿ ಬೀಳ್ಕೊಟ್ಟು ಮನೆಗೆ ಬಂದಾಗ ಮನಸ್ಸಿನ ಭಾವನೆಗಳ  ಭಾರದಿಂದ ಕಣ್ಣಿಗೆ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲಾಗದೆ, ಕೆನ್ನೆಯ ಪ್ರೀತಿ ಮಾತುಗಳಿಗೆ ಕಣ್ಣೀರು ಕೆನ್ನೆ ಜೊತೆ ಮಿಲನವಾಗಿತ್ತು. ಆ ಕಣ್ಣಿರಿಗಿದ್ದ ಭಾಗ್ಯ ಆಗ ನನಗಿಲ್ಲದಾಗಿತ್ತು.
          ನಾನು ಭಾವನಾಜೀವಿ. ಎದುರಿಸಲಾಗದ ನೋವುಗಳಿಗೆ ಮನಸ್ಸಲ್ಲೇ ಅತ್ತು ಕಂಬನಿ ಸುರಿಸುವುದಷ್ಟೇ ಗೊತ್ತು. ಆದರೆ ನೀನು ನಗುತ್ತಲೇ ಬದುಕುವವನು, ನೋವು ಮರೆಯುವವನು, ನೋವು ಮರೆಸುವವನು. ಅರಳುವ ಹೂಗಳ ಚಂದವನ್ನು ಬಣ್ಣಿಸುತ್ತಾ ನಿನ್ನ ಮಾತುಗಳಲ್ಲೇ, ಬೊಗಸೇ ಪ್ರೀತಿಯ ಸ್ಪರ್ಶದಲ್ಲೇ ನನ್ನ ನೋವುಗಳನ್ನೆಲ್ಲಾ ಮರೆಸುತ್ತಿರುವವನು. ಅಲ್ಲೆಲ್ಲೋ ದೂರದಲ್ಲಿರುವ ನಿನ್ನನ್ನು ನನ್ನ ವಿಶಾಲವಾದ ಹೃದಯಮಂದಿರದಲ್ಲಿ ಹಂತ ಹಂತವಾಗಿ ಬೆರೆಸುವ ಕೆಲಸ ಮಾಡಿದ್ದು ಈ ಮೊಬೈಲ್ ನಮ್ಮಿಬ್ಬರ ನಡುವಿನ ಪ್ರೀತಿ ಸೇತುವೆಯಾಗಿ ಮೊಬೈಲ್ ಅದೆಂಥಾ ಮಹತ್ಕಾರ್ಯ ಮಾಡಿದೆ ಅಲ್ವಾ!
ಅಂದಿನಿಂದ ನನಗೆ ಚಾತಕ ಪಕ್ಷಿಯ ಕೆಲಸ. ಸುರಿವ ಮಳೆಹನಿಗಾಗಿ ಭೂಮಿ ಕಾದಂತೆ, ಅರಳುವ ಹೂಗಳಿಗಾಗಿ ದುಂಬಿ ಕಾದಂತೆ ನನ್ನೊಳಗಿರುವ ನೀನು, ಹೊತ್ತು ತರುವ ಆ ಪ್ರೀತಿಯ ಮಹಾಪೂರಕ್ಕಾಗಿ ನಾನು ಹಾತೊರೆಯುತ್ತಿದ್ದೇನೆ. ಅದೊಂದು ದಿನ ಸರ್‍ಪ್ರೈಸ್ ಕೊಡುವ ನೆಪದಲ್ಲಿ ನೆನೆಯದೆ ಊರಿಗ ಬಂದಾಗ, ಆ ಕ್ಷಣದಲ್ಲಿ ನಿನ್ನನ್ನು ಕಂಡ ನನ್ನ ಕಂಗಳಿಗೆ, ತುಡಿಯುತ್ತಿದ್ದ ಮನದ ಭಾವನೆಗಳಿಗೆ, ಮರುಭೂಮಿಯಲ್ಲಿ ನೀರಿನ ಚಿಲುಮೆ ಪುಟಿದಂತಾಯಿತು. ಆಗಿನ ನನ್ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
          ನಿಜ ಪ್ರೀತಿಯ ಭಾಷೆ ಅರಿಯೋಕ್ಕಾಗದ್ದು, ವಿವರಿಸಲಾಗದ್ದು ಅದನ್ನು ಅನುಭವಿಸಿಯೇ ತೀರಬೇಕು. ಅದು ನಿನ್ನಿಂದಲೇ ನನಗೆ ಅರಿವಾದದ್ದು. ನನ್ನದು ಹುಚ್ಚು ಮನಸ್ಸು. ಪ್ರೀತಿ ಎಂದರೆ ಕನಸಿನಲೋಕ. ಅದರಲ್ಲಿ ಎಲ್ಲವೂ ಸಂತೋಷ. ಎಂದೇ ನಾನು ಭಾವಿಸಿದ್ದೆ. ಅದಕ್ಕೆ ಕಾರಣವೂ ಇತ್ತು. ಕಾಲೇಜು ಓದುತ್ತಿರುವ ಹುಡುಗಿ ನಾನು. ಗೆಳೆಯ ಗೆಳತಿಯರ ಪ್ರೀತಿ ಪ್ರೇಮ ಸಲ್ಲಾಪಗಳ ಅರಿವು ಮಾತ್ರವೇ ಇತ್ತು. ಮೊದಮೊದಲಿಗೆ ನಿನ್ನ ಪ್ರತಿಯೊಂದು ಪ್ರೀತಿ ತುಂಬಿದ ಮಾತುಗಳು ನನ್ನಲ್ಲಿ ಸಂತೋಷವನ್ನು ಇಮ್ಮಡಿಯಾಗಿಸುತ್ತಿತ್ತು. ಅವುಗಳೆಡೆಯಲ್ಲಿ ನಿನ್ನ ಒಂದು ಬೈಗುಳದ ಮಾತು ಇಡೀ ದಿನ ನನ್ನನ್ನು ಕಣ್ಣಿರಿಡುತ್ತಾ ಕೂರುವಂತೆ ಮಾಡುತ್ತಿತ್ತು. ನನ್ನ ಮೂಗಿನ ಮೇಲಿನ ಕೋಪ, ನಿನ್ನ ಸಮಾಧಾನಿಸುವ ಮಾತುಗಳಿಗೆ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಆಗ ನನ್ನನ್ನು ಮುದ್ದಿಸುವ ನಿನ್ನ ಮುದ್ದು ಮನಸು ಅಮ್ಮನಂತೆ ಕಂಡಿತ್ತು. ‘ಪ್ರೀತಿ ಭಾವನೆಗಳ ಬಂಧನ ನಿಜ. ಆದರೆ ಜೀವನ ಹಾಗಲ್ಲ. ಜೀವನ ಎಂದರೆ ಕಷ್ಟ ಸುಖಗಳ ಸಮ್ಮಿಲನ ಆ ಕಷ್ಟ ಸುಖಗಳ ಸಾಗರದಲ್ಲಿ ನಾವಿಬ್ಬರು ಜೊತೆಯಾಗಿ ಈಜಿ ದಡ ಸೇರಬೇಕು. ಆಗಲೇ ನಮ್ಮ ಪ್ರೀತಿಗೆ ನಮ್ಮ ಜೀವನಕ್ಕೊಂದು ಸಾರ್ಥಕತೆ. ಮನಸ್ಸನ್ನು ಭಾವನೆಗಳ ಕೈಯ್ಯಲ್ಲಿ ಕೊಡಬೇಡ. ಬುದ್ಧಿಯಿಂದ ಮನಸ್ಸನ್ನು ಭಾವನೆಗಳಿಂದ ಹಿಡಿತದಲ್ಲಿಟ್ಟುಕೊಳ್ಳಬೇಕು. ಭಾವನೆಗಳ ಜೊತೆ ಬೆರೆತು ಓದಿಗೆ ಘಾಸಿ ಮಾಡಿಕೊಳ್ಳಬೇಡ. ನಾನೆಂದಿಗೂ ನಿನ್ನವನು. ನಾನು ನಿನ್ನನ್ನು ಮರೆತುಬಿಡುವುದಿಲ್ಲ. ಅದೇ ರೀತಿ ನೀನು ನನ್ನನ್ನು ತೊರೆದು ಬಿಡುವುದಿಲ್ಲ ಎಂಬ ನಂಬಿಕೆ ಇನಗಿದೆ ತಾನೇ? ಆ ನಂಬಿಕೆಯೊಂದಿದ್ದರೆ ಅದೇ ನಿಜವಾದ ಪ್ರೀತಿ. ಏಳು ಸಾಗರದಾಚೆ ಇದ್ದರೂ ನಮ್ಮನ್ನೆಂದೂ ಬೇರೆ ಆಗಲು ಬಿಡುವುದಿಲ್ಲ. ಪ್ರತಿಕ್ಷಣವೂ ನಾನು ನಿನ್ನ ಬಗ್ಗೆ, ನೀನು ನನ್ನ ಬಗ್ಗೆ ಕನಸು ಕಾಣುತ್ತಾ, ಯೋಚಿಸುತ್ತಿರುವುದು ಪ್ರೀತಿಯಲ್ಲ. ಆ ಪ್ರೀತಿಯಲ್ಲಿ ಭದ್ರತೆ ಇಲ್ಲ. ಕನಸು ಖಾಲಿಯಾದಾಗ ಪ್ರೀತಿ ಮರೆಯಾಗಿರುತ್ತದೆ. ನನ್ನ ಹೃದಯವನ್ನು ನಿನ್ನ ಹೃದಯದೊಳಗೆ ಆ ದಿನವೇ ಬಂಧಿಸಿ ಬೀಗ ಹಾಕಿ ಕೀಲಿಕೈ ಎಸೆದಾಗಿದೆ. ಬೆರೆತ ನಮ್ಮಿಬ್ಬರ ಹೃದಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಓದಿನತ್ತ ಗಮನ ಕೊಡು.’ ಎನ್ನುವಾ ನಿನ್ನ ಮಾತುಗಳು. ಆಗೆಲ್ಲಾ ನಿನ್ನ ಬುದ್ಧಿಮಾತುಗಳು ನಿನ್ನ ಮೇಲಿನ ಗೌರವವನ್ನು ದುಪ್ಪಟ್ಟು ಮಾಡುತ್ತಿತ್ತು.
          ನಿನ್ನದು ಮಗುವಿನಂಥಾ ಮನಸ್ಸು ಕಣೋ ನಾ ನೊಂದುಕೊಂಡರೆ ನೀನು ಕಣ್ಣೀರು ಸುರಿಸುವೆ. ನಿನ್ನ ಮನಸ್ಸಲ್ಲಿ ಮಡುಗಿರುವ ನೋವುಗಳನ್ನೆಲ್ಲಾ ಮರೆಮಾಚಿ ನಿಲ್ಲುವೆ. ಎಲ್ಲಿ ನಿನ್ನ ನೋವುಗಳಿಗೆ ನನ್ನ ಮನಸ್ಸು ಅಳುವುದೋ ಎಂದು ನಗು ನಗುತ್ತಲೇ ಮಾತಾಡಿಸುವೆ. ನಿನಗೋ ನನ್ನ ಮಡಿಲಲ್ಲಿ ಬೆಚ್ಚಗೆ ಮಲಗುವಾಸೆ. ನನಗೋ ನಿನ್ನ ಹೆಗಲಿಗೊರಗಿ ನಿಶ್ಚಿಂತೆಯಾಗಿ ನಿದ್ದೆ ಮಾಡುವಾಸೆ. ಪ್ರೀತಿ ಅನಿಯಮಿತವಾದಾಗ ಕೋಪ ಸಹಜವಂತೆ. ಆ ನಿನ್ನ ಕೋಪ ಕೆಂಡದಂತಿದ್ದರೂ ಅದು ಕ್ಷಣಿಕ ಅಷ್ಟೇ. ತಕ್ಷಣವೇ ಮುದ್ದು ಪೆದ್ದು ಪ್ರೀತಿ ಮಾತುಗಳಿಂದ ನಿನ್ನ ಕೆಂಡದಂಥ ಕೋಪದ ಮೇಲೋ ಅಥವಾ ನನ್ನ ಬಾಡಿದ ಮನಸ್ಸಿಗೋ ನೀರೆರೆಯುವ ಕೆಲಸ ಮಾಡುವೆ. ಈ ನಿನ್ನ ಅತಿಯಾದ ಮೌನದ ಪ್ರೀತಿಯ ಮುಂದೆ ನಾನು ಕುಬ್ಜಳು ಕಣೋ.
          ಮುಡಿಗೆ ಮಲ್ಲಿಗೆ ಮುಡಿಸಿದ, ನನ್ನೆದೆಯ ಸರದಾರ ನೀನು. ಅಂದು ಫೆಬ್ರವರಿ 14 ಪ್ರೇಮಿಗಳ ದಿನ. ಬೆಳ್ಳಂಬೆಳಗ್ಗೆಯೇ ಪ್ರೇಮಿಗಳ ದಿನಾಚರಣೆಯ ಶುಭಾಶಯದೊಂದಿಗೆ ಪ್ರೀತಿಯ ಮಾತುಗಳು ಹಾಗೂ ಸಿಹಿಮುತ್ತುಗಳು ರವಾನೆಯಾಗಿದ್ದವು. ದೂರವಿದ್ದರೂ ನಮ್ಮ ಆಚರಣೆಯೇನು ಕಡಿಮೆ ಇರಲಿಲ್ಲ.  ಜೊತೆಗೆ ಒಂದು ಶರತ್ತೂ ನಮ್ಮಿಬ್ಬರಲ್ಲಿ ರುಜುವಾಗಿತ್ತು ನೆನಪಿದೆ ತಾನೇ? ನೀನೆ ಹೇಳಿದಂತೆ ಪ್ರೇಮಿಗಳ ದಿನದಂದು ಇಬ್ಬರೂ ಒಂದೊಂದು ಉಡುಗೊರೆ ತೊಗೊಂಡು, ಯಾವ ಉಡುಗೊರೆಯೆಂದು ತಿಳಿಸದೆ, ನೀನು ಊರಿಗೆ ಬಂದಾಗ ವಿನಿಮಯ ಮಾಡಿಕೊಳ್ಳುವುದು. ಅದರಂತೆ ತೃತೀಯ ವರ್ಷದ ತರಗತಿಗಳೆಲ್ಲಾ ಮುಗಿದಿದೆ, ಪರೀಕ್ಷಾ ತಯಾರಿಯ ಜೊತೆ, ನಾನೊಂದು ಪುಟ್ಟ ಪ್ರೇಮದ ಕಾಣಿಕೆಯೊಂದನ್ನು ಹಿಡಿದು ಭಾವನೆಗಳನ್ನೆಲ್ಲ ಅದರಲ್ಲಿ ತುಂಬಿ, ನೀ ಹೊತ್ತು ತರುವ ಶೃತಿ ತುಂಬಿದ ಪೇಮದ ಕಾಣಿಕೆಯನ್ನು ಸ್ವೀಕರಿಸಿ ನನ್ನ ಭಾವನೆಗಳಿಗೆ ನಿನ್ನ ಶೃತಿ ಸೇರಿ ಭಾವಗೀತೆಯಾಗುವ ಆ ಘಳಿಗೆಗೆ ಕಾತರದಿಂದ ತುದಿಗಾಲಲ್ಲಿ ಕಾದು ನಿಂತಿರುವೆ. ನೀನು ನನ್ನ ಪ್ರೇಮದ ಕಾಣಿಕೆಗಾಗಿ ಓಡೋಡಿ ಬರುವೆ ತಾನೇ ಇನಿಯ...
ಇಂತಿ ನಿನ್ನೆದೆಯರಸಿ.

ಹನಿಯುದುರೋ ಮೋಡದಂತೆ...


          ನಿಜ. ಮೊದಲ ಪ್ರೀತಿ ಮೋಡದೊಳಗೆ ಮರೆಯಾದ ಸೂರ್ಯನಂತೆ. ಸೂರ್ಯ ಮರೆಯಾಗಿ ನೆರಳು ಆವರಿಸುತ್ತಿದ್ದಂತೆ, ಮೋಡವನ್ನು ಸರಿಸಿಕೊಂಡು ಸೂರ್ಯ ಮತ್ತೆ ಪ್ರಖರವಾಗಿ ಉರಿಯಲಾರಂಭಿಸುತ್ತಿದ್ದ. ಅದೇ ರೀತಿ ಪ್ರತಿಯೊಬ್ಬ ಹುಡುಗ ಹುಡುಗಿಯರು ಹೇಳುವುದು ಮೊದಲ ಪ್ರೀತಿಯನ್ನು ಮರೆತು ಬಿಡುವುದು ಅಸಾಧ್ಯದ ಮಾತು. ಈ ಪ್ರಪಂಚದಲ್ಲಿ ಮೊದಲ ಪ್ರೀತಿಯ ನೆನಪುಗಳನ್ನು ಏದೆಯೊಳಗೆ ಮೂಟೆಕಟ್ಟಿಟ್ಟು, ಬಿಚ್ಚಿಡಲು ಆಗದೆ ಇರುವವರು ಸಾವಿರಾರು. ಮೊದ ಮೊದಲು ಮತ್ತೊಂದು ಮನಸ್ಸಿಗಾಗಿ, ನಮ್ಮ ಪುಟ್ಟ ಮನಸ್ಸಿನ ಪ್ರೀತಿಯ ಕವಲುಗಳನ್ನು ಬಿಚ್ಚಿಟ್ಟುಕೊಂಡ, ಆ ಸವಿ ಸವಿ ನೆನಪುಗಳು ಸಾವಿರ ಕಾಲಕ್ಕೂ ಮರೆಯಲಾರದ ನೆನಪು. ಬಿಟ್ಟು ಬಿಟ್ಟು ಹನಿಯುದುರಿಸುವ ಕಾರ್ಮೋಡದಂತೆ. ಬೇಡ ಬೇಡವೆಂದರೂ ಪದೇಪದೇ ಕಾಡುತ್ತಿರುತ್ತವೆ. ಆದರೆ ಈ ಎಲ್ಲಾ ಭಾವನೆಗಳು, ಮೊದಲ ಪ್ರೀತಿ ಕೈಗೆಟುಕದೆ ಹೋದರೆ ಮಾತ್ರವೇ, ಪ್ರಥಮ ಪ್ರೇಮದ ನೋವು, ನಲಿವು ತಿಳಿಯಲು ಸಾಧ್ಯ.
          ಪ್ರಥಮ ಪ್ರೀತಿ ಜೊತೆಯಾಗೆದೆ ಇರಲು ಕಾರಣ ಬೇರೆ ಬೇರೆಯಾದರೂ ಅದರ ಹಿಂದಿನ ವೇದನೆ ಒಂದೇ. ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ಸರಿ ತೋರದೆ, ಅಲ್ಲಿ ಪ್ರೇಮಿಗಳನ್ನು ಬೇರ್ಪಡಿಸುವ ವೈರಿಗಳು ಅಪ್ಪ ಅಮ್ಮ. ಇದು ಒಂದಾದರೆ, ಮತ್ತೊಂದೆಡೆ ಹುಡುಗ ಹುಡುಗಿಯರ ಮನಸ್ಸುಗಳ ನಡುವಿನ ಬಿರುಕು, ಅವರಿಗವರೇ ನಂತರ ವೈರಿಗಳು. ಇನ್ನೊಂದೆಡೆ ಜಾತಿ ಅಡ್ಡ ಬಂದುಬಿಡುವುದು. ಇದೆಂಥಾ ವಿಪರ್ಯಾಸ.
          ಆದರೆ ನಮ್ಮಿಬ್ಬರ ನಡುವಿನ ಅಂತರಕ್ಕೆ ಕಾರಣ ಏನೆಂದು ತಿಳಿಯಲು ನಾನು ಈ ನಿಮಿಷದವೆರೆಗೂ ಅಸಮರ್ಥಳು. ಯಾವ ಕ್ಷಣದಲ್ಲಿ ನಮ್ಮಿಬ್ಬರ ಪ್ರೀತಿ ವಿನಿಮಯಕ್ಕೆ ಪೂರ್ಣ ವಿರಾಮ ಬಿತ್ತೋ ನಾನರಿಯೆ.
          ಮೇಘಗಳ ಸಮ್ಮಿಲನಕೆ ಅರುಣರಾಗ ಮಿಡಿದ ಘಳಿಗೆ ನಮ್ಮಿಬ್ಬರ ಮನದಿಳೆಯಲ್ಲಿ ಪ್ರೇಮವರ್ಷಧಾರೆಯ ಸ್ಪರ್ಶವಾಗಿತ್ತು. ಆ ಮುಂಜಾನೆ ಸೂರ್ಯನಿಂದಲೇ ಪ್ರೇಮದಾವರೆಯ ದಳಗಳು ಚಿಗುರೊಡೆದಿದ್ದವು. ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲೇ ನನ್ನೆದೆಯಲ್ಲಿ ಪ್ರೇಮಾಂಕುರವಾಗಿತ್ತು. ನಿನಗದು ಮೊದಲ ಪ್ರೀತಿ ಅಲ್ಲದೇ ಇರಬಹುದು. ಆದರೆ ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವನು ನೀನೇ ಮೊದಲಿಗ.
          ನಮ್ಮಿಬ್ಬರ ಭೇಟಿ ಒಡನಾಟವು ಹತ್ತರ ಹರೆಯಕ್ಕೆ ಕಾಲಿಟ್ಟಿದ್ದರೂ ಪ್ರೀತಿಯ ಸ್ವಾತಿ ಮಳೆ ಸುರಿದೇ ಇರಲಿಲ್ಲ. ಅದ್ಯಾವ ಘಳಿಗೆಯಲ್ಲಿ ಸ್ವಾತಿಹನಿಯೊಂದು ಚಿಪ್ಪೊಳಗೆ ಬಿತ್ತೋ, ಹನಿಯನ್ನು ಚಿಪ್ಪು ಬಚ್ಚಿಟ್ಟುಕೊಂಡ ಕ್ಷಣವೇ ಪ್ರೀತಿಯ ಮುತ್ತಿನ ಜನನವಾಗಿತ್ತು. ನಮ್ಮಿಬ್ಬರ ನಡುವಿದ್ದ ಸಲಿಗೆಯ ಮರೆಮಾಚಿ ನಾಚಿಕೆ ಮನೆಮಾಡಿತ್ತು. ಪ್ರಥಮದ ಮಾತುಗಳಿಗೆ ತಡವರಿಸುತ್ತಿದ್ದ ತುಟಿಗಳು, ಅಂತರವನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುತ್ತಾ ಬಂದವು. ಅಂತರ ಸರಿಯುತ್ತಿದ್ದಂತೆ ಮನಸ್ಸಲ್ಲಿ ಸಾವಿರಾರು ಆಸೆ, ಕನಸುಗಳ ಗೋಪುರವೇ ಸೃಸ್ಟಿಯಾಗಿತ್ತು. ತಡವರಿಸುತ್ತಿದ್ದ ತುಟಿಗಳಿಗೆ ನಂತರದಲ್ಲಿ ಮಾತುಗಳನ್ನು ಮಿತಗೊಳಿಸಲು ಗೊತ್ತಿರಲೇ ಇಲ್ಲ. ವಿರಾಮವಿಲ್ಲದೇ ಸಾಗುತ್ತಿದ್ದ ಮಾತು ಕೊನೆಗೊಂದು ದಿನ ಮಾತಿಗೂ ಸೇರಿಸಿ ಪ್ರೀತಿಗೂ ಪೂರ್ಣವಿರಾಮವಿಟ್ಟುಕೊಳ್ಳುತ್ತೇ ಎನ್ನುವ ಸತ್ಯದ ಅರಿವು ನನಗಾಗಲೇ ಇಲ್ಲ. ಮಿಂಚು ಹೊಡೆದಂತೆ, ಸುಳಿವಿಲ್ಲದಂತೆ ಘಟಿಸಿ ಹೋಗಿತ್ತು.
          ನಮಗರಿವಿಲ್ಲದಂತೆ ದಿನದಲ್ಲಿ ಅದೆಷ್ಟು ಸಂದೇಶಗಳು ರವಾನೆಯಾಗುತ್ತಿದ್ದವೋ, ಅದೆಷ್ಟು ಹೊತ್ತು ಮಾತಿನ ಹರಟೆ ನಡೆಯುತ್ತಿತ್ತೋ ಗೊತ್ತಿಲ್ಲ. ಮೌನದೊಳಗೆ ಸೇರದೆಯೇ ಮಾತನಾಡುತ್ತಲೇ ನನ್ನೊಳಗೆ ಒಂದಾಗುವ ನೀನು, ಹೊತ್ತು ತರುವ ಆ ಪ್ರೀತಿಯ ಕೆನೆಗಾಗಿ ಕೃಷ್ಣನಂತೆ ತವಕಿಸುತ್ತಿದ್ದೆ. ಆಗೆಲ್ಲಾ ವಿಶಾಲವಾದ ಈ ನನ್ನ ಹೃದಯದಲ್ಲಿ ನಿನ್ನದೇ ಸಿಂಹಪಾಲು.
ದೂರ ದೂರವಿದ್ದರೂ ಮಾತು, ಗಲಾಟೆ, ಹುಸಿ ಮುನಿಸು, ಚರ್ಚೆ, ಮತ್ತದೇ ಪ್ರೀತಿಯ ಮಹಾಪೂರಗಳಿಗೆಲ್ಲಾ ಎಡೆಯಿತ್ತು. ಆದರೆ ಈಗ ಅದೆಲ್ಲಾ ನನ್ನ ಕಣ್ಣೆದುರೆ ಮತ್ತೊಬ್ಬರ ಪಾಲಾಗಿದೆ. ಪ್ರೀತಿಯ ಒಂದು ವರ್ಷದಲ್ಲಿ ಕೇವಲ ಮೂರು ಭಾರಿಯ ನಮ್ಮಿಬ್ಬರ ಮುಖಾಮುಖಿ ಭೇಟಿ ಇಷ್ಟು ಗಾಢತೆಯನ್ನು ಸೃಷ್ಟಿಸಿದ್ದು ನಿಜಕ್ಕೂ ವಿಸ್ಮಯ. ಆ ಮೂರು ದಿನಗಳನ್ನು ಕೇವಲ ಎನ್ನುವ ಹಾಗಿಲ್ಲ. ಯಾಕೆಂದರೆ ಆ ಮೂರು ದಿನಗಳಲ್ಲಿ ನಾವಿಬ್ಬರು ಮಾತನಾಡಲು ಪಟ್ಟ ಪಾಡು ಮರೆಯಲಾರದ ನೆನಪು. ಆ ಮೂರು ಭೇಟಿ ನನ್ನ, ನಿನ್ನ ಮನೆಯಲ್ಲಿಯೇ ಆಗಿದ್ದ ಕಾರಣ ಮನೆಯವರ ಕಣ್ಣು ತಪ್ಪಿಸಿ ಮಾತನಾಡಲು ಹರಸಾಹಸ ಪಟ್ಟಿದ್ದೆವು, ನಮ್ಮಿಬ್ಬರ ಮೊದಲ ಭೇಟಿಯಲ್ಲಿ ನೀ ನೀಡಿದ ಪ್ರೇಮದ ಕಾಣಿಕೆ ತಾಳಿಭಾಗ್ಯವನ್ನೇ ನೀಡಿದಂತ್ತಿತ್ತು. ಆ ಮೂರು ದಿನಗಳು ನಮ್ಮಿಬ್ಬರ  ಪ್ರೀತಿಗೆ ಪುಷ್ಠಿಯನ್ನು ಒದಗಿಸಿದ್ದವು, ನಿನಗಿದು ನೆನಪಿದೆಯೋ ನಾನರಿಯೆ.
          ನೀ ಹರಿಸಿದ ಪ್ರೀತಿಯ ಧಾರೆ, ನನ್ನೆದೆಯಲ್ಲಿ ಅದೆಷ್ಟು ಹಸಿರನ್ನು ಚಿಗುರಿಸಿದ್ದವು, ಮದುವೆ ಎಂಬ ದೊಡ್ಡ ಕನಸನ್ನೇ ಸೃಷ್ಟಿಸಿ, ಬೆಳೆಸಿ ಪೋಷಣೆ ಮಾಡುತ್ತಾ ಬಂದಿತ್ತು. ನಾ ನಿನ್ನ ಮಡದಿಯಾಗಿ ಕನಸುಗಳ ಕವಲುಗಳನ್ನೇ ಹೆಣೆದಿದ್ದೆ. ಪ್ರೀತಿಗದುವೇ ಬೇರು. ಮದುವೆ ಎಂಬ ಬಂಧನ ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುತ್ತದೆ, ಆ ಮದುವೆ, ನಾ ನಿನ್ನ ಮಡದಿ ಎಂಬ ಕನಸುಗಳನ್ನೇ ಹೆಣೆಯುತ್ತಾ ಪ್ರೀತಿಯನ್ನು ಪೋಷಿಸಿದವಳು ನಾನು. ಆದರೆ ನಿನಗದು ತಿಳಿಯಲೇ ಇಲ್ಲ. ನೀ ಹರಿಸಿದ ಪ್ರೀತಿಯ ಧಾರೆ ನನ್ನೆದೆಯಲ್ಲಿ ಬತ್ತಿಹೋದರೂ, ಮಳೆ ಸುರಿದಿದೆ ಎನ್ನುವುದಕ್ಕೆ ಕುರುಹು ಈಗಲೂ ಇದೆ.
ಖಾಲಿಯಾದ ಬರಡು ಭೂಮಿಯಲ್ಲೂ ಈ ಪ್ರೀತಿ ಹರುಷದ ಬೀಜ ಬಿತ್ತುವುದಂತೆ, ಹಸಿರ ಹರಿಸುವುದಂತೆ, ಆದರೆ ಅದ್ಯಾಕೋ ನನ್ನ ಜೀವನದಲ್ಲಿ ಸುಳ್ಳಾಗಿ ಹೋಯ್ತು, ಮರುಭೂಮಿಯಲ್ಲಿ ನೀರ ಚಿಲುಮೆಯಂತೆ ಬಂದ ಪ್ರೀತಿ, ಕೊನೆಗೆ ಬರಡಾಗಿ ಹೋಯಿತು.
         ಬಿಡುವಿಲ್ಲದೆ ಮಾತನಾಡುತ್ತಿದ್ದವರಿಗೆ ಅಂತರ ನಿರಂತರವಾಗಿ, ಮಾತು ಮೌನವಾಗಿ ಹೋಯ್ತು. ಸುರಿಯುವ ಮಳೆಹನಿಗಾಗಿ ಭೂಮಿ ಕಾದಂತೆ, ಸೇರುವ ನದಿಗಳಿಗಾಗಿ ಸಾಗರ ತವಕಿಸಿದಂತೆ, ಬಿಡುವಿಲ್ಲದೆ ಹರಟುವ ದಿನ ಮತ್ತೆ ಬರುತ್ತವೆ ಎಂದು ಕಾಯುತ್ತಿದ್ದ ನನಗೆ, ನಿನ್ನ ಪ್ರೀತಿ ಮರೀಚಿಕೆಯಾಗಿಯೇ ಉಳಿಯಿತು. ಆ ದಿನಗಳಲ್ಲಿ ತಲೆದಿಂಬುಗಳೊರೆಸಿದ ನನ್ನ ಕಣ್ಣ ಹನಿಗಳೆಷ್ಟೋ, ಕಣ್ಣೆವೆ ಮುಚ್ಚದ ರಾತ್ರಿಗಳೆಷ್ಟೋ, ಮೈಮರೆತು ದುಃಖಿಸಿದ ಕ್ಷಣಗಳೆಷ್ಟೋ ಅಗಣಿತ. ಅರಳುವ ಹೂವಿಗೂ ಕೂಡ ದುಂಬಿಯ ಜೊತೆ ನಂಟಿದೆಯಂತೆ, ಆದರೆ ಅದೆಷ್ಟು ಹೊತ್ತು? ಹೂವು ಬಾಡಿ ಮುದುಡುವವರೆಗೆ, ಅಥವಾ ಹೂವಲ್ಲಿರೋ ಮಕರಂದ ಕರಗುವವರೆಗೆ, ಅದೇ ರೀತಿ ನನ್ನ ಬಾಳು.
          ನಿನಗದು ಸಂತಸದ ದಿನಗಳು. ಅಪ್ಪ ಅಮ್ಮ ಸೇರಿ ಚಂದದೊಂದು ಹುಡುಗಿಯನ್ನು ಹುಡುಕಿ ಮದುವೆ ನಿಶ್ಚಿತಾರ್ಥವನ್ನು ಮಾಡಿಬಿಟ್ಟರು. ಆದರೆ ನನಗದು ಹೃದಯ ಕರಗುವ ವಿಷಯ. ಅತ್ತು ಅತ್ತು ಕಣ್ಣೀರಿಟ್ಟು, ಕಣ್ಣೀರನ್ನು ಮರೆಮಾಚಿ, ಹೃದಯವ ಬಿಗಿಹಿಡಿದು ಅತ್ತರೂ, ನೀನಿನ್ನು ನನ್ನವನಲ್ಲ, ಎನ್ನುವ ಸತ್ಯ ಅರಗಿಸಿಕೊಳ್ಳುವ ಹೊತ್ತಿಗೆ ಕಣ್ಣೀರು ಬತ್ತಿಹೋಗಿತ್ತು. ನನ್ನ ಸ್ಥಾನದಲ್ಲಿ ಮತ್ತೊಬ್ಬಳನ್ನು ಕನಸಿನಲ್ಲಿಯೂ ಸಹಿಸದ ನನಗೆ ನೈಜತೆಯಲ್ಲಿ ಒಪ್ಪಿಕೊಳ್ಳುವುದು ಅನಿವಾರ್ಯ. ಅತ್ತು ರಂಪಾಟ ಮಾಡಿ ನನ್ನವನನ್ನು ಅಲ್ಲಲ್ಲ ನಿನ್ನನ್ನು ಪಡೆದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲವೆನಿಸಿತ್ತು.
          ನನ್ನ ಕಣ್ಣೆದುರೇ ಮತ್ತೊಂದು ಹುಡುಗಿಗೆ ತಾಳಿ ಕಟ್ಟುವ ಘಳಿಗೆ ನನ್ನೆದೆಯ ನೆನಪುಗಳಿಗೆ ಕಾವು ಕೊಟ್ಟಂತಾಗಿತ್ತು. ಆ ಸಪ್ತಪದಿ ತುಳಿದು ನಿನ್ನೆದೆಯ ಅರಸಿಯಾಗಬೇಕಿದ್ದ ನಾನು, ಅವಳೋಂದಿಗಿನ ನಿನ್ನ ಸಪ್ತಪದಿಗೆ ಸಾಕ್ಷಿಯಾಗಿ ನಿಂತಿದ್ದೆ. ಉಕ್ಕಿ ಬರುತ್ತಿದ್ದ ಅಳೂವಿಗೂ, ಜಿನುಗುತ್ತಿದ್ದ ಕಣ್ಣೀರಿಗೂ ಹೊರಬರುವ ಸ್ವಾತಂತ್ರಯವೇ ಇರಲಿಲ್ಲ. ಬಿಗಿದಿಟ್ಟ ಕಣ್ಣೀರಿಗೂ ಬೇಸರವಾಗಿತ್ತು.
          ನಿಜ ತಾನೇ, ಆ ದಿನಗಳನ್ನು, ನೆನಪುಗಳನ್ನು ಮರೆತುಬಿಡಲು ಸಾಧ್ಯನಾ...? ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲೂ ನಾನು ಸೋತು ಹೋದೆ. ನಿನ್ನೊಂದಿಗಿನ ಎಲ್ಲಾ ನೆನಪುಗಳನ್ನು ಮೂಟೆ ಕಟ್ಟಿ ಬೀಗ ಜಡಿದು ಸಾಗರದ ಪಾತಾಳಕ್ಕೆಸೆದರೂ ಅವುಗಳು ನನ್ನನ್ನು ಕಾಡುವುದನ್ನು ಬಿಡಲೇ ಇಲ್ಲ. ಯಾವುದೂ ಬೇಡವೆಂದು ಕ್ಷಣಹೊತ್ತು ಮರೆತರೆ, ಕಪ್ಪೇರಿದ ಮೋಡ ಮತ್ತೆ ಹನಿಯುದುರಿಸಿ, ನೆನಪುಗಳನ್ನು ಕೆದಕತೊಡಗುತ್ತವೆ. ನಾ ಭೂಮಿ ಮೇಲಿರುವವರೆಗೂ, ಕಪ್ಪೇರಿದ ಮೋಡ, ಅರುಣರಾಗಕೆ ನವಿಲು ಗರಿಬಿಚ್ಚಿ ನಲಿಯುವುದು ಸಹಜವಾದಷ್ಟು...ನನ್ನೆದೆಯ ನೆನಪುಗಳು ಮೊಳಕೆಯೊಡೆಯುದು ಅಷ್ಟೇ ಸಹಜ...

ಪ್ರೇಮವೊಂದು ಚಿಗುರಿದೆ ಮನದಲಿ


          ಹುಣ್ಣಿಮೆಯ ದಿನದ ತಣ್ಣನೆಯ ಗಾಳಿ ಮೈಯ ಬಳಸಲು ಬೀಸಿ ಸುಳಿಯುತಿದೆ. ಚಳಿಯನ್ನು ಸಹಿಸದೆ ಬೆಚ್ಚನೆಯ ಹೊದಿಕೆ ಹೊದ್ದು ಮಲಗೋಣವೆಂದರೆ ಕಣ್ಣಿಗೆ ನಿದ್ದೆಯೇ ಆವರಿಸುತ್ತಿಲ್ಲ. ಅತ್ತ ತಿರುಗಿ ಇತ್ತ ತಿರುಗಿ, ಒತ್ತಾಯಪೂರ್ವಕವಾಗಿ ಕಣ್ಣು ಮುಚ್ಚಿ ನಿದ್ರಾದೇವಿಯನ್ನು ಬಳಿ ಸೆಳೆಯಲು ಪ್ರಯತ್ನಿಸಿದರೂ ನಿದ್ರೆ ನನ್ನ ಬಳಿಗೆ ಸುಳಿಯತ್ತಿಲ್ಲ. ಯಾಕೆ? ಏನಾಗಿದೆ ನನಗೆ? ಮನದ ಅಚಲ ನಿರ್ಧಾರಗಳಿಗೆ ಎನೋ ಹೊಡೆತ ಬಿದ್ದಂತೆ. ಯಾಕೆ ಹೀಗಾಯಿತು ನನಗೆ? ಮನಸಿನಲ್ಲಿ ಸಾವಿರಾರು ಆಲೋಚನೆಗಳ ಕಳವಳ ತುಂಬಿದೆ. ಅಂಗಳದಲ್ಲಿ ನಿಂತು ನಕ್ಷತ್ರ ಎಣಿಸೋಣವೆಂದರೆ ಬೆಳ್ಳನೆಯ ಬೆಳಕನ್ನು ಚೆಲ್ಲುತ್ತಿರುವ ತುಂಟ ಚಂದಿರ ನನ್ನನ್ನೇ ನೋಡಿ ತುಟಿಯಂಚಿನಲಿ ಸಣ್ಣನೆಯ ನಗು ಬೀರುವಂತೆ ತೋರುತ್ತಿದೆ. ಮನ ಅತ್ತ ಸೆಳೆದು ಹಿಡಿದಿದೆ. ನಿದ್ದೆಯ ಪರಿವೇ ಇಲ್ಲದೆ, ಮೌನದ ಗೊಂಬೆಯಾಗಿ ಮನಸು, ಕನಸುಗಳನ್ನು ಹೆಣೆಯುತ್ತಾ ಬಾಳ ಚಂದಿರನೆಡೆಗೆ ಜಾರಿತ್ತು. ಒಮ್ಮೆಲೆ ಕಲ್ಪನಾಲೋಕದಿಂದ ಹೊರಬಂದವಳು ಮಲಗೋಣವೆಂದು ಹೊರಟೆರೆ ರೆಪ್ಪೆ ಮುಚ್ಚಲು ಆ ಸುಂದರವಾದ ವದನ ಬಿಡದೇ ಕಚಗುಳಿ ಇಡುತ್ತಿದೆ. ಯಾಕೆ ಹೀಗೆ? ನನ್ನ ಕೊಠಡಿಯ ಬಿಟ್ಟು ಹೊರ ನಡೆಯಲು ಮನಸ್ಸಾಗುತ್ತಿಲ್ಲ. ಒಂದೆಡೆ ನಿಂತರೆ ಕೂತರೆ ಅಲ್ಲೇ ಶಿಲೆಯಾಗಿ ಬಿಡುವೆನು. ಏನೋ ಗಾಢ ಆಲೋಚನೆ.
           ಪ್ರತಿದಿನವಿದ್ದಂತೆ ಕಂಪ್ಯೂಟರ್ ಬೇಡ, ಫೇಸ್ ಬುಕ್ ಬೇಡ, ಊಟ ಬೇಡವೆನಿಸಿವೆ. ಮಧುರವಾದ ಭಾವನೆಗಳ ಲೋಕದಲ್ಲೇ ಮೈಮರೆತರೆ ಸಾಕು ಎನಿಸಿದೆ. ಅದೇನಾಯ್ತು ನಾ ಕಾಣೆ. ಪ್ರೀತಿ ಪ್ರೇಮವೆಂದರೆ ಕೋಪ ಮಾಡಿಕೊಳ್ಳುತ್ತಿದ್ದ ನಾನು, ಪ್ರೀತಿಯಲ್ಲಿ ಬಿದ್ದ ಸ್ನೇಹಿತ ಸ್ನೇಹಿತೆಯರಿಗೆ ಬುದ್ಧಿ ಹೇಳುತ್ತಿದ್ದೆ, ಅವರತ್ತ ಹಾಸ್ಯವನ್ನೂ ಮಾಡುತ್ತಿದ್ದೆ, ಅವರ ಪಿಸುಪಿಸು ಮಾತುಗಳನ್ನು ಕೇಳಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ಗೆಳತಿಯರ ಜೊತೆಗೂಡಿ ನಗುತ್ತಿದ್ದವಳು ನಾನು. ಆದರೆ ಹಾಗಿದ್ದ ನನ್ನನ್ನೇ ಅದೇ ಆ ಪ್ರೀತಿ ಕರಗಿಸಿ ಬಿಟ್ಟಿತೇ? ಪ್ರೀತಿಗೆ ನನ್ನಲ್ಲೂ ಪ್ರೇಮವಾಯಿತೇ? ಪ್ರೀತಿಯೇ ನನ್ನನ್ನು ತನ್ನ ಬಳಿ ಸೆಳೆಯಿತೋ, ನಾನೇ ಪ್ರೀತಿಗೆ ಶರಣಾದೆನೋ... ಒಂದೂ ಅರಿಯೆ.
          ನನ್ನ ಮನದಲ್ಲಿ ಪ್ರೀತಿಯ ಬೀಜ ಬಿತ್ತಿದ ಆ ಚೋರ ಯಾರು? ಹಾ... ಅವನೇ ಅವನೇ ಅದೇ ಆ ಪರೀಕ್ಷಾದಿನ ನಾನು ಓದುವುದರಲ್ಲಿ ಮಗ್ನವಾಗಿದ್ದೆ. ಒಂದು ಕ್ಷಣ ಪುಸ್ತಕದಿಂದ ಕಣ್ತೆಗೆದು ತಲೆಯೆತ್ತಿ ನೋಡಿದಾಗ, ಕಣ್ಣ ಮುಂದೆ ದೂರದಲ್ಲಿ ಕಂಡವನು ಅವನು. ನನ್ನತ್ತ ನೋಡಿ ಪರಿಚಯದ ನಗು ಚೆಲ್ಲಿದ. ಆದರೆ ನಾ ಕಾಣೆ ಆತ ಯಾರೋ... ಆ ನಗುವಲ್ಲೇನೋ ಸೆಳೆತ ಇತ್ತು. ಆಗ ಅಲ್ಲಿಂದ ಮರೆಯಾದ ನಗು ನನ್ನಲ್ಲಿ ಮತ್ತೆ ಆ ನಗು ಮೊಗವನ್ನು ನೋಡುವ ತವಕ ಹೆಚ್ಚಿಸುತ್ತಾ ಬಂತು. ಅತ್ತಿತ್ತ ಬೇರಾವುದೋ ಕಾರ್ಯದ ನಿಮಿತ್ತ ಹೋದರೂ ನನ್ನ ಕಣ್ಣುಗಳು  ಅವನನ್ನೇ ಹುಡುಕುತ್ತಿದ್ದವು. ಅವನನ್ನು ಕಾಣುವ ಆಸೆ ಸುಳ್ಳು ನೆಪವನ್ನು ಸೃಷ್ಟಿಸುತ್ತಿತ್ತು. ದಿನದಲ್ಲೊಂದು ಬಾರಿ ನೋಡಿದೆನೆಂದರೆ ಅದೇನೋ ಸಂತೋಷ ನೆಮ್ಮದಿ ಮನಸ್ಸಿಗೆ. ಮುಖ ನೋಡುವುದರಲ್ಲೇ ದಿನಗಳೆದ ನನಗೆ ಮತ್ತೆ ಮನೆಗೆ ತೆರಳಿದಾಗ ಸಾವಿರ ಪ್ರಶ್ನೆಗಳು ಮನಸ್ಸನ್ನು ಕೆದಕಲು ಆರಂಭಿಸುವುದು. ಅವನ್ಯಾರು? ಹೆಸರೇನು? ಏನೊಂದನೂ ನಾ ತಿಳಿಯೆನು. ಆದರೆ ಪ್ರೀತಿಯೊಂದು ಅರಳಿದೆ ಮನದಲಿ ಎಂಬುದನ್ನೊಂದು ನಾನರಿತೆ. ಚಿಗುರಿ ಮೊಗ್ಗು ಹೂವಾಗಿ ಅರಳಿದ ಪ್ರೀತಿಯ ದೇವನಿಗೆಂತು ಅರ್ಪಿಸುವೆನೋ ನನಗಂತು ಅರಿತ್ತಿಲ್ಲ.
          ಪ್ರೀತಿ ಹೇಳುವ ಮುನ್ನ, ಒಂದು ಮಾತಾದರೂ ಆಡಬೇಕು. ಮಾತಿಲ್ಲದೆ ಪ್ರೇಮ ಶುರುವಾಗುವುದೆಂತು? ಹೆಸರ ತಿಳಿಯುವ ಪ್ರಯತ್ನದಲಿ ನಾ ಸೋತುಹೋದೆ. ಹೇಗೆ ತಿಳಿಯಲಿ ಹೃದಯದಲಿ ಮನೆ ಮಾಡಿರುವವನ ನಾಮಧೇಯ? ಎದುರು ನೀ ಬಂದಾಗ ಕೇಳುವೆನೆಂದರೆ ಅತಿಯಾದ ಹೃದಯದ ಬಡಿತ ಬಾಯಿ ತೆರೆಯಲು ಬಿಡುವಂತಿಲ್ಲ. ನಾನೇನು ಮಾಡಲಿ? ಕೊನೆಗೆ ಫೇಸ್ ಬುಕ್ ಮೊರೆ ಹೋದೆ ಆದರೂ ಹೇಗೆ  ಪ್ರಶ್ನೆ ಮೂಡಿತು. ತರಗತಿಯ ನನ್ನ ಸಹಪಾಠಿಯ ಗೆಳೆಯ ಅವನು ಎಂಬುದನ್ನೊಂದು ಅರಿತುಕೊಂಡೆ. ಫೇಸ್ ಬುಕ್ ನಲ್ಲಿ ನನ್ನ ಸಹಪಾಠಿಯ ಗೆಳ್ಯರ ಗುಂಪಿನಲ್ಲಿ ಅವನ ಛಾಯಾಚಿತ್ರವನ್ನು ನೋಡುತ್ತಾ, ಹುಡುಕುತ್ತಾ ಹಿಡಿದೇ ಬಿಟ್ಟೆ ನನ್ನ ಮನಗೆದ್ದ ಚೆಲುವನ.  ಸೆಳೆದಾಯಿತು ನನ್ನ ಸ್ನೇಹಜಾಲಕ್ಕೆ. ಮಾತುಗಳು ಸಂದೇಶಗಳ ರೂಪದಲ್ಲಿ ಪ್ರಾರಂಭವಾದವು. ಅವನಿಗೆ ನನ್ನ ಮುಖ ಪರಿಚಯವಿಲ್ಲದೆಯೇ, ಫೇಸ್ ಬುಕ್ ಸಂದೇಶದಲ್ಲಿಯೇ ನಮ್ಮ ಸ್ನೇಹ ಬೆಳೆಯಿತು.
           ಕಾಲೇಜಿನಲ್ಲಿ ಎದುರಿಗೆ ಬಂದರೂ ಮಾತನಾಡಲು ಭಯ. ಏನೆಂದು ಮಾತು ಪ್ರಾರಂಭಿಸುವುದು, ನಾನು ಯಾರೆಂದು ಪರಿಚಯ ಮಾಡಿಸಿಕೊಳ್ಳಲಿ ಎಂಬುದರಲ್ಲಿ ದ್ವಂದ್ವ ನಿರ್ಣಯಗಳು. ನನ್ನಲ್ಲೇನೋ ಅಳುಕು. ಕೊನೆಗೊಂದು ದಿನ ನಾ ಧೈರ್ಯ ಮಾಡಿ ಶುಭಮುಹೂರ್ತದಲ್ಲಿ ಮಾತು ಆರಂಭಿಸಿ ನನ್ನಲ್ಲೇ ನೆಮ್ಮದಿ ತಂದುಕೊಂಡೆ. ಆದರೆ ಆ ಹೊತ್ತಿಗಾಗಲೇ ನಮ್ಮಿಬ್ಬರ ಸ್ನೇಹದ ಬೇರು ಭೂಮಿಯಾಳಕ್ಕೆ ಇಳಿದಾಗಿತ್ತು. ಮತ್ತೆ ಸ್ನೇಹದ ಬೇರನ್ನು ಕಿತ್ತು ಪ್ರೀತಿಯ ಬೀಜವನ್ನು ಬಿತ್ತಲು ಧೈರ್ಯ ಸಾಲದು ನನಗೆ. ಪ್ರೀತಿ ಹೇಳಲು ಹೋಗಿ, ಆತನ ಸ್ನೇಹವು ನನ್ನಿಂದ ಮರೆಯಾಗಿ ಹೋದರೆ ಆ ನೋವನ್ನು ತಾಳುವ ಗಟ್ಟಿ ಹೃದಯ ನನ್ನದಲ್ಲ. ದೂರದಲ್ಲೇ ನಿಂತು ಅವನ ಮೊಗವನ್ನು, ನಗುವನ್ನು ನೋಡುತ್ತಾ ನಿಂತರೆ ಅಲ್ಲೇ ಮೈಮರೆಯುವೆನು. ಸ್ನೇಹವೋ, ಪ್ರೀತಿಯೋ ಎಂಬ ಉಭಯಸಂಕಟ. ಮನಸ್ಸುಗಳ ಬೆಸೆಯುವ ಪ್ರೀತಿಗಿಂತ, ಆತ್ಮೀಯತೆ ಬೆಳೆಸುವ ಪವಿತ್ರ ಸ್ನೇಹವೇ ಶ್ರೇಷ್ಠವೆಂದೆನಿಸಿ, ಮನದಲಿ ಚಿಗುರಿರುವ ಪ್ರೀತಿಯನ್ನು ಹೊಸಕಿ ಹಾಕಲು ಆಗದೆ ಪ್ರೀತಿಯನ್ನು ಎದೆಯ ಗೂಡಿನಲ್ಲೇ ಬಚ್ಚಿಟ್ಟುಕೊಂಡು ಸ್ನೇಹವನ್ನು ಮೆರೆಯುವ ಪ್ರಯತ್ನದಲ್ಲಿ ನಾನಿರುವೆ.
ಕಾಲೇಜು ದಿನಗಳು ಮುಗಿಯುವ ವರೆಗೆ ಸ್ನೇಹಿತನಾಗಿರದೆ, ಜೀವನದುದ್ದಕ್ಕೂ ನೋವಲ್ಲೂ, ನಲಿವಲ್ಲೂ ಸಮನಾಗಿ ಬೆರೆತು ಜೊತೆ ಬರುವೆ ತಾನೆ...?
                                                                                                                                    ಇಂತಿ,
                                                                                                                                              ಕನಸು...


             

Sunday 19 February 2017

ಹನಿ ಜಾರಿ ಇಳೆ ಸೇರುವ ಮುನ್ನ...


          ಹೆಲೋ... ಹಾಯ್ ಹೇಗಿದ್ದೀಯೆ ದಿವ್ಯ? ನಿನ್ನೆ ನಾ ನಿಮ್ಮ ಊರಿಗೆ ಬಂದಿದ್ದೆ. ಎಂಬ ಮಾತುಗಳ ಮಧುರವಾದ ದನಿ ನನ್ನ ಮೊಬೈಲ್‍ಗೆ ಯಾವುದೋ ಅಪರಿಚಿತ ನಂಬರ್ ನಿಂದ ಬಂದ ಕರೆಯನ್ನು ಸ್ವೀಕರಿಸಿದಾಗ ಕೇಳಿ ಬಂತು. ನಾ ಆಶ್ಚರ್ಯಚಕಿತಳಾಗಿ ಯಾರು ನೀವು? ಯಾವ ದಿವ್ಯ ಬೇಕಿತ್ತು? ಎಂದಾಗ, ನೀವು ದಿವ್ಯ ತಾನೆ? ಎನ್ನುವ ದನಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸೃಷ್ಟಿಸುತ್ತಾ ಹೋಯಿತು. ತಪ್ಪಾದ ನಂಬರ್‍ಗೆ ಕಾಲ್ ಮಾಡಿದ್ದೀರಿ ಎಂದು ತಿಳಿಸಿ ಕರೆ ಕಡಿತಗೊಳಿಸಿ ಆಲೋಚನೆಯಲ್ಲಿ ಮುಳುಗಿದೆ. ಅಂದು ಬೆಳಗ್ಗಿನ ಹತ್ತು ಗಂಟೆಯ ಸಮಯ ಸುತ್ತಲೂ ಶಾಂತವಾದ ಪರಿಸರವಿತ್ತು. ಮತ್ತೆ ಎಚ್ಚರಿಸಿತು ನನ್ನ ಮೊಬೈಲ್ ಕರೆಗಂಟೆ ಮತ್ತೆ ನಿನ್ನದೇ ಧ್ವನಿ. ಆದರೆ ವ್ಯಕ್ತಿ ಯಾರೆಂದು ಖಚಿತವಾಗಿ ತಿಳಿದುಕೊಳ್ಳುವ ಬದಲು ನನ್ನ ಸ್ನೇಹವನ್ನು ಬಯಸಿದ್ದೆ ನೀನು.
          ಯಾವುದೋ ಅಪರಿಚಿತ ನಂಬರ್‍ನಿಂದ ಬಂದ ಕರೆಯನ್ನು ಸ್ನೇಹವನ್ನಾಗಿ ಸ್ವೀಕರಿಸುವುದು ಪ್ರಸ್ತುತ ಸಮಾಜದಲ್ಲಿ ತಪ್ಪಾಗಿ ಬಿಟ್ಟೀತು ಎಂಬ ಅಳುಕು. ಆದರೆ ಮೊದಲೇ ನಿನ್ನ ಅಪರಿಚಿಯ ಧ್ವನಿಗೆ ನಾನು ಮಾರುಹೋಗಿದ್ದೆ. ಆ ಧ್ವನಿಯನ್ನೇ ಮತ್ತೆ ಮತ್ತೆ ಕೇಳಬೇಕೆಂಬ ಹಂಬಲ ನನ್ನಲ್ಲಿ ಸೃಷ್ಟಿಯಾಗಿತ್ತು. ಬಯಸಿ ಬಂದ ಸ್ನೇಹವನ್ನು ತಿರಸ್ಕರಿಸಲಾಗದೆ ನಿನ್ನ ಸ್ನೇಹಕ್ಕೆ ಶರಣಾಗಿಯೇ ಬಿಟ್ಟೆ. ನಾನೆಷ್ಟು ಧೈರ್ಯವಂತೆ ನೋಡು! ಯಾರೆಂದು ತಿಳಿಯದ, ಯಾವುದೋ ಊರಿನಿಂದ ಬಂದ ನಿನ್ನ ಕೇವಲ ಒಂದು ಫೋನ್ ಕರೆಯಿಂದ ಬಂದ ಸ್ನೇಹದ ಅಪ್ಲಿಕೇಶನನ್ನು ಸ್ವೀಕರಿಸಿದ್ದೆ. ಮುಖಪರಿಚಯವಿಲ್ಲದೆ ನಮ್ಮ ಸೇಹ ಎತ್ತರೆತ್ತರಕ್ಕೆ ಬೆಳೆಯಿತು. ಕಾಲ್ ಮಾಡಿದಾಗ, ಮೆಸ್ಸೇಜ್ ಮಾಡಿದಾಗ ಪ್ರತಿಕ್ರಿಯಿಸದೆ ಹೋದಾಗ, ಕೋಪ ಮಾಡಿಕೊಂಡು ಗಲಾಟೆ ಮಾಡಿಕೊಳ್ಳುವಷ್ಟು ಆಪ್ತವಾಗಿ ನಮ್ಮ ಸ್ನೇಹ ಬೆಳೆಯತೊಡಗಿತು. ನಮ್ಮ ಸ್ನೇಹ ಮತ್ತು ಕೋಪದ ಜಿದ್ದಾಜಿದ್ದಿಯಲ್ಲಿ ಯಾವಾಗಲೂ ಸ್ನೇಹವೇ ಮೇಲುಗೈ ಸಾಧಿಸುತಿತ್ತು.
          ನೆನಪಿದೆಯಾ ನಿನಗೆ? ನಾನು ಹತ್ತು ಬಾರಿ ಕಾಲ್ ಮಾಡಿದಾಗಲೂ ನೀನು ಸ್ವೀಕರಿಸಲೇ ಇಲ್ಲ. ಅದಲ್ಲದೆ ಬೇರೆ ಆ ದಿನ ಭಾನುವಾರ, ನಿನಗೆ ರಜಾದಿನವಾಗಿತ್ತು. ಆದರೂ ನೀನು ನನ್ನ ಕರೆಗೆ ಸ್ಪಂಧಿಸಲೇ ಇಲ್ಲ. ನನ್ನ ಕೋಪ ಮಿತಿಮೀರಿತ್ತು. ನನ್ನ ಬುದ್ಧಿಯನ್ನು ಕೋಪದ ಕೈಗೆ ಕೊಟ್ಟು ನಿನ್ನ ನಂಬರನ್ನು ಡಿಲಿಟ್ ಮಾಡಿಯೇ ಬಿಟ್ಟಿದ್ದೆ. ಮತ್ತೆ ನೀನು ನನಗೆ ಯಾವುದೇ ಕಾಲ್ ಮೆಸ್ಸೇಜ್ ಮಾಡದೆ ಹದಿನೈದು ದಿನಗಳನ್ನು ಮುಂದೂಡಿದ್ದೆ. ಆದರೆ ಆ ದಿನಗಳಲ್ಲಿ ನಾನು ಎಷ್ಟೊಂದು ಚಡಪಡಿಸಿದ್ದೆ. ನಿನ್ನ ಒಂದೇ ಒಂದು ಕಾಲ್‍ಗಾಗಿ ಹಾತೊರೆಯುತ್ತಿದ್ದೆ ಗೊತ್ತಾ...? ಕೊನೆಗೊಂದು ದಿನ ನಿನ್ನಿಂದ ಬಂದ ಹಾಯ್... ಎಂಬ ಮೆಸ್ಸೇಜ್ ನನ್ನಲ್ಲಿ ಜೀವವೇ ತುಂಬಿತ್ತು. ನಂತರದ ದಿನಗಳಲ್ಲಿ ಯಾವುದೇ ಕಲ್ಮಶವಿಲ್ಲದ ಸ್ನೇಹ ನಮ್ಮಿಬ್ಬರದಾಯಿತು. ಎಲ್ಲೋ ಇರುವ ನೀನು ಇಲ್ಲಿರುವ ನನ್ನನ್ನು ನಮ್ಮಿಬ್ಬರ ಫೋನ್ ಸಂಭಾಷಣೆಯಲ್ಲೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ. ನನ್ನ ಅಳುವಿಗೆ ಮಾತಿನಲ್ಲೇ ತೋಳಿನ ಆಸರೆಂiÀi ಸಮಾಧಾನವನ್ನು ಕೊಡುತ್ತಿದ್ದವನು ನೀನು. ಯಾಕೋ ಗೊತ್ತಿಲ್ಲ ಕಣೋ ನಿನ್ನ ಪ್ರತಿಯೊಂದು ಮಾತುಗಳು ನನಗೆ ಒಂದಲ್ಲಾ ಒಂದು ರೀತಿಯಲ್ಲಿ ಮುನ್ನಡೆಯುವ ಹುರುಪನ್ನೇ ನೀಡುತ್ತಿದ್ದವು. ನಾ ಬಲ್ಲೆ ನನ್ನ ಮಾತುಗಳು ನಿನಗೆ ಎಷ್ಟು ಸ್ಪೂರ್ತಿದಾಯಕವಾಗಿದ್ದವು ಮತ್ತು ಮುಖ್ಯವಾಗಿದ್ದವು ಎಂದು. ಅಪ್ಪ ಅಮ್ಮ ಇಲ್ಲದೆ ಒಬ್ಬಂಟಿಯಾಗಿದ್ದ ನಿನಗೆ ನನ್ನ ಮಾತುಗಲೇ ಜೊತೆಯಾಗಿದ್ದವು. ಎಷ್ಟೋ ಸಾರಿ ನೀನೇ ಹೇಳುವ “ ನೀನು ನನ್ನ ಅಮ್ಮ ಕಣೇ, ಹುಷಾರಿಲ್ಲ ಎನ್ನುವುದೇ ತಡ ಮಾತಿನಲ್ಲೇ ಉಪಚರಿಸುತ್ತಿದ್ದೆ, ಕೋಪ ಮಾಡಿಕೊಂಡಾಗ ಮುದ್ದು ಮಾಡಿ ಕೋಪವನ್ನು ಕರಗಿಸುತ್ತಿದೆ, ನನ್ನನ್ನು ನಿಜವಾಗಿಯು ಅರಿತುಕೊಂಡವಳು ನೀನೇ ಕಣೇ...” ಈ ಮಾತುಗಳು ನನ್ನನ್ನು ಅಟ್ಟಕ್ಕೇರಿಸುತ್ತಿದ್ದವು.
ಅದೇನೇ ಇರಲಿ ನಿಜ ಹೇಳೋ ನಿನಗೇನಾಯಿತು? ಈ ಥರಾ ಏಕೆ ಹಠಾತ್ತಾಗಿ ನನ್ನ ಮೇಲಿನ ಭಾವನೆಗಳೇ ಬದಲಾಗಿ ಹೋದವು? ಆ ಕ್ಷಣ ನಾ ಮರೆಯುವಂತಿಲ್ಲ... ನಾನೇನೋ ಸಂಭ್ರಮದ ವಿಷಯ ಹೇಳಿ ನಕ್ಕು, ಇಬ್ಬರೂ ಸೇರಿ ಸಂತೋಷ ಪಡೋಣವೆಂದು ಕಾಲ್ ಮಾಡಿದಾಗ ನಿನ್ನ ಧ್ವನಿಯಲ್ಲೇನೋ ಬದಲಾವಣೆ. ಅದೇನೋ ನಾಚಿಕೆಯೋ, ಭಯವೋ, ಅಧಿಕಾರದ ಧ್ವನಿಯೋ ನನಗಂತು ಗೊತ್ತಿಲ್ಲ. ಆ ತಕ್ಷಣ “ ದಿವ್ಯ ನನ್ನನ್ನು ಮದುವೆ ಆಗ್ತಿಯೆನೇ” ಎನ್ನುವ ಪ್ರಶ್ನೆ ನನ್ನಲ್ಲಿದ್ದ ಸಂತಸವನ್ನು ಮರೆಮಾಚಿ, ಮೌನವೇ ಆವರಿಸಿ ಬಿಟ್ಟಿತು. ಆ ಕ್ಷಣ ನನ್ನನ್ನು ನಿರ್ಭಾವುಕಳನ್ನಾಗಿ ಮಾಡಿದ್ದೆ ಕಣೋ ನೀನು. ನಿನ್ನ ಆ ಪ್ರಶ್ನೆಗೆ ಏನೆಂದು ಉತ್ತರಿಸಲಿ ಎಂಬ ತಳಮಳ. ಒಂದು ವಾರಗಳ ಪರ್ಯಂತ ನಮ್ಮಿಬ್ಬರದು ಮೌನವ್ರತ ನಡೆದಿತ್ತು. ಗೊತ್ತಿದೆಯಾ? ಮರೆಯುವವನು ನೀನಲ್ಲ ಕಣೋ, ನನಗೂ ಗೊತ್ತು. ನಮ್ಮಿಬ್ಬರ ಮೌನ ಮುರಿಯಲು ಇಬ್ಬರಲ್ಲೂ ಚಡಪಡಿಕೆ. ಆದರೆ ಈಗ ನಮ್ಮಿಬ್ಬರ ಹರಟೆಗೆ ಮಿತಿಯೇ ಇಲ್ಲ. ನನ್ನ ಮಾತುಗಳಿಗೆ ಸಾಕ್ಷಿಯಾಗಿರುವ ನಮ್ಮ ಮನೆಯ ಹಟ್ಟಿ, ದನ, ಕರುಗಳಿಗೆ ಮಾತ್ರ ಗೊತ್ತು. ನಮ್ಮ ಪ್ರೀತಿಯ ಮಾತುಗಳು, ನಾನು ನಿನ್ನ ಪ್ರೀತಿಗೆ ಸಮ್ಮತಿಸಿದ ಪರಿ. ಆ ನಿನ್ನ ಪ್ರಶ್ನೆಗೆ ಉತ್ತರಿಸಿ ಸ್ನೇಹಲೋಕದಿಂದ ಪ್ರೇಮಲೋಕಕ್ಕೆ ಅಂಬೆಗಾಲಿಟ್ಟಿದ್ದೇವೆ. ಆದರೆ ಪ್ರೇಮಿಗಳನ್ನೆಲ್ಲಾ ದೂರ ಮಾಡುತ್ತಿರುವ ಈ ಸಮಾಜದ ಜಾತಿ ಎಂಬ ಚಕ್ರವ್ಯೂಹವನ್ನು ನಾವೆಂತು ಭೇದಿಸುವೆವು? ದೂರದ ಊರುಗಳಲ್ಲಿರುವ ನಾವು ಪರಸ್ಪರ ನೋಡದೆ ಪ್ರೀತಿಯ ಲೋಕದಲ್ಲಿ ಮೈಮರೆಯುತ್ತಿದೇವಲ್ಲೋ... ಇನ್ನೂ ಎಷ್ಟು ದಿನ ನಾನೊಂದು ತೀರ, ನೀನೊಂದು ತೀರವಾಗಿರುವುದು? ನಾವಿಬ್ಬರು ಮುಖಾಮುಖಿಯಾಗುವು ಆ ದಿನವೆಲ್ಲಿದೆ? ನೀನೇ ಹೇಳಬೇಕು... ಬಂದೇ ಬರುವೆ ಎನ್ನುವ ಆಶಾಭಾವನೆ ಹುಟ್ಟಿಸಿರುವೆ ನೀನು. ಹನಿ ಜಾರಿ ಇಳೆ ಸೇರುವ ಮುನ್ನ, ಹೂ ಬಾಡಿ ಹೋಗುವ ಮುನ್ನ ಬರುವೆ ತಾನೇ? ನಿನ್ನ ಕಂಗಳಲಿ ನನ್ನ ಪ್ರತಿಬಿಂಬ ನೋಡುವ ದಿನ ಬೇಗ ಬರಲಿ...
ನಿನಗಾಗಿಯೇ ಕಾಯುತ್ತಿರುವ...
                   ನಿನ್ನ ಮನದರಸಿ...          

ಚಳಿಯಲಿ ಜೊತೆಯಲಿ


        ಮಳೆರಾಯ ತನ್ನ ಕಾರುಬಾರು ಮುಗಿಸುತ್ತಿದ್ದಂತೆ ಚಳಿರಾಯನ ಆಗಮನ. ತನ್ನದೇ ಸಾಮ್ರಾಜ್ಯದ ಆಳ್ವಿಕೆ ನಡೆಸಲು ಹೊಸ ರಾಜನ ಪಟ್ಟಾಭಿಷೇಕ. ಯಾಕಪ್ಪಾ ಬಂತು ಈ ಚಳಿ ಎಂದಕೊಂಡರೂ ಅದರ ಅನುಭವವೇ ಒಂಥರಾ ಖುಷಿ. ಚಳಿಗಾಲ ಬಂತೆಂದರೆ ಉಳಿದವರಿಗಿಂತ ಯುವಮನಸ್ಸುಗಳಿಗೆ ಆನಂದ ಹೆಚ್ಚು. ಹಿರಿಯ ಜೀವಗಳಿಗೆ ಮೈನಡುಕವನ್ನು ಕೊಟ್ಟರೆ ತರುಣ ತರುಣಿಯರಿಗೆ ಅವರೊಳಗಿನ ಭಾವಕ್ಕೆ ಬೆಚ್ಚಗಿನ ಹೊದಿಕೆಯಾಗುತ್ತದೆ ಈ ಚಳಿ. ಪ್ರೇಮಿಗಳಿಗಂತೂ ಹೇಳಿ ಮಾಡಿಸಿಟ್ಟ ಕಾಲ. ಈ ಕಾರ್ತಿಕ- ಮಾರ್ಗಶಿರದ ಮುಂಜಾನೆ, ಇರುಗಳು ಪ್ರತಿಯೊಬ್ಬ ಪ್ರೇಮಿಯನ್ನೂ ಕವಿಯನ್ನಾಗಿಸುತ್ತದೆ. ದೇಹ ಮನಸ್ಸಗಳಿಗಡರುವ ತಂಪಾಗಿ ಬೀಸುವ ಚಳಿಗಾಳಿ ಬೆಚ್ಚನೆಯ ಭಾವಗಳಿಗೆ ನಾಂದಿ ಹಾಡಿ ಕಾವ್ಯಮಯ ಸಾಲುಗಳಿಂದ ಅಗ್ಗಿಷ್ಟಿಕೆಯ ಕಾವು ಕೊಟ್ಟಂತಿರುತ್ತದೆ.
        ಇನ್ನು ನಮ್ಮಂತಹ ಕಾಲೇಜು ಹುಡುಗರಿಗಂತು ಕೇಳಲೇ ಬೇಕಿಲ್ಲ, ಚಳಿಗಾಲವೆಂದರೆ  ಹೆಚ್ಚು ಮೋಜಿನ ಮಸ್ತಿನ ಕಾಲ. ಸೂರ್ಯ ಹೊರಗಿಣಿಕಿದಂತೆ ಮೋಡದ ಮೇಲೆ ಬಂಗಾರದ ಗೆರೆಗಳು ಮೂಡಿದರೂ, ಅಮ್ಮ ಬಂದು ಸಾವಿರ ಬಾರಿ ಎದ್ದೇಳು ಎಂದರೂ ಎದ್ದೇಳುವ ಮನಸ್ಸು ಮಾಡದ ಕಾಲ. ಹೊದಿಕೆಯೊಳಗೆ, ಪುಳಕ ನೀಡುವಂತಹ, ಚಿಗುರುವ ಕನಸುಗಳಲ್ಲೇ ಮೈಮರೆಯುವ ಕಾಲ. ಎದ್ದು ಕಾಲೇಜು ತಲುಪಿದರೂ ಮೈಬಿಡದ ಚಳಿ, “ಯಾರೋ ಈ ಚಳಿಗೆ ಪಾಠ ಕೇಳೋದು, ಅದೂನೂ ಫಸ್ಟ್ ಅವರ್ ಯಾರೋ ಕೂರೋದು,”  ಎನ್ನುತ್ತಾ ಗೆಳೆಯ ಗೆಳತಿಯರೊಡಗೂಡಿ ಕಾಲೇಜು ಕ್ಯಾಂಟೀನ್‍ನಲ್ಲಿ ಬಿಸಿ ಬಿಸಿ ಕಾಫಿ ಲೋಟದೊಂದಿಗೆ ಹರಟೆ ಹೊಡೆಯುವುದನ್ನು ನೆನಪಿಸಿಕೊಂಡರೆ ಚಳಿಗೆ ಸ್ವೆಟ್ಟರ್ ಹೊದಿಸಿದಂತಿರುತ್ತದೆ. ಇದು ಕೆಲವು ಹುಡುಗರ ಪಾಡಾದರೆ, ಕೊಂಚ ಡಿಫರೆಂಟ್ ಆಗಿರೋರು ನಮ್ಮಲ್ಲಿದ್ದಾರೆ. ಅದೇ ಮೈ ನಡುಗುತ್ತಾ ಇರುವ ಚಳಿಯಲ್ಲಿ, ಐಸ್‍ಕ್ರೀಮ್ ತಿನ್ನುವ ಚಪಲ ಹೊಂದಿರುವವರು. ಮೈನಡುಕವನ್ನೂ ಲೆಕ್ಕಿಸದೆ ಐಸ್‍ಕ್ರೀಮ್ ತಿನ್ನುವ ಸಾಹಸ ಮಾಡುವವರು. ಇನ್ನು ಕೆಲವು ಸುಕೋಮಲ ಹುಡುಗಿಯರಿಗೆ ತಮ್ಮ ತ್ವಚೆಯ ಚಿಂತೆ. ತ್ವಚೆಯ ಅಂದವನ್ನು ಕಾಪಾಡಿಕೊಳ್ಳುವುದೇ ಅವರ ಚಿಂತೆ. ಹಾಗಾಗಿ ಈಗೆಲ್ಲಾ ರವಿಮಾಮನ ಮೇಲೆ ಯಾಕೋ ಪ್ರೀತಿ ಹೆಚ್ಚು.  ಯಾಕೆಂದರೆ ಅವನಿಗೆ ಮಾತ್ರ ಗೊತ್ತು ನಮ್ಮ ಚಳಿಗೆ ಸರಿಯಾದ ಮದ್ದು.
        ಅಂಗಳದಲ್ಲಿಯೋ, ಮನೆ ಮಹಡಿಯಲ್ಲಿಯೋ ನಿಂತು ತಣ್ಣನೆ ನಿಧಾನಗತಿಯಲ್ಲಿ ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ನಿಂತು ಮೋಡದ ಮರೆಯಲ್ಲಿ ಕದ್ದು ನೋಡುವ ಚುಕ್ಕಿ ಚಂದ್ರಮನನ್ನು ಕಣ್ತುಂಬಿಕೊಳ್ಳುತ್ತಿದ್ದರೆ, ಚಳಿರಾಯನಿಗೊಂದು ಸಲಾಮ್ ಹೊಡೆಯೋ ಮನಸಾಗುತ್ತದೆ. ಮಡದಿಯ ಸನಿಹವಿದ್ದರೆ ಪತಿರಾಯನಿಗಂತೂ ಆ ಬೆಳದಿಂಗಳ ತಂಪಾದ ರಾತ್ರಿ, ಹಬ್ಬದೂಟದ ರುಚಿ ನೀಡುತ್ತದೆ. ಬೆಚ್ಚನೆಯ ಅಪ್ಪುಗೆಯಲ್ಲಿ ಚಳಿ ಚಳಿ ತಾಳೆನು ಈ ಚಳಿಯಾ... ಎಂದು ಹಳೇ ಜೋಡಿಗಳು ಹಾಡಿದರೆ, ಚಳಿಯಲಿ...ಜೊತೆಯಲಿ... ಎಂದು ಹೊಸ ಕವಿತೆ ಸಾಲುಗಳನ್ನು ಹುಟ್ಟು ಹಾಕುತ್ತಾರೆ ನವ ಜೋಡಿಗಳು. ಪ್ರತಿರಾತ್ರಿಯೂ ಹೀಗೇ ಇರಲಿ ಎನ್ನುವ ಬಯಕೆಯೂ ಅವರಲ್ಲಿ ಚಿಗುರುತ್ತದೆ.
        ಇದು ಒಂದು ತರಹದ ಕತೆಯಾದರೆ ಚಳಿಯನ್ನು ಇನ್ನಷ್ಟು ಇಷ್ಟ ಪಡುವವರು ಯುವಕರು, ವಿದ್ಯಾರ್ಥಿಗಳು. ಬಾಲ್ಯದಲ್ಲಂತು ಚಳಿ ಇನ್ನೂ ಮಜವಾಗಿತ್ತು. ‘ಸೂರ್ಯ ನೆತ್ತಿ ಮೇಲೆ ಬಂದಾಯ್ತು ಇನ್ನೂ ಎದ್ದಿಲ್ವಾ’ ಎನ್ನುವ ಅಮ್ಮನ ಬೈಗುಳದ ಮಾತು ಹೊದಿಕೆಯೊಳಗೆ ಅಡರಿಕೊಂಡು ಮಲಗಿದ್ದ ನಮಗೆಲ್ಲಾ ಎಲ್ಲೋ ದೂರದಲ್ಲಿ ದುಂಬಿ ಝುಂಯ್ಯಿಗುಟ್ಟಂತೆ ಕೇಳುತ್ತಿತ್ತು. ಆದರೆ ಮರುಕ್ಷಣವೇ ಅಪ್ಪನ ಅಬ್ಬರದ ಮಾತಿಗೆ ಕ್ಷಣಮಾತ್ರದಲ್ಲಿ ಹೊದಿಕೆಯನ್ನೆಲ್ಲೋ ಚೆಲ್ಲಿ ಬಚ್ಚಲ ಮನೆಯ ಒಲೆಯ ಮುಂದಿರುತ್ತಿದ್ದೆವು. ಆ ಚಳಿಗೆ ಸ್ನಾನ ಮಾಡಿ ಶಾಲೆಗೆ ಹೋಗುವ ಮನಸ್ಸೇ ಇರಲಿಲ್ಲ. ಅಪ್ಪನ ಮೇಲಿನ ಭಯಕ್ಕೇ ಶಾಲೆಗೆ ಹೋದದ್ದು ಹೆಚ್ಚು.
        ಕತ್ತಲಾವರಿಸುತ್ತಿದ್ದಂತೆ, ಕತ್ತಲನ್ನು ಆವರಿಸುವ ಚಳಿಗಾಳಿ, ಬೇಗ ಬೇಗನೇ ಹೋಮ್‍ವರ್ಕ್ ಮುಗಿಸಿ ಬೆಚ್ಚನೆಯ ಹೊದಿಕೆಯೊಳಗೆ ಸೇರಿಕೊಳ್ಳುವಂತೆ ಪುಟ್ಟ ಮಕ್ಕಳಿಂದ ಹಿಡಿದು ಯುವಮನಸ್ಸುಗಳ ವರೆಗೂ ಪ್ರೇರೇಪಿಸುತ್ತದೆ. ಹೊದ್ದು ಮಲಗುವ ಹೊದಿಕೆಯೊಳಗೆ ಬಿಸಿ ಹುಡುಕುವ ಗಮ್ಮತ್ತು ವಿವರಿಸಲಸಾಧ್ಯ. ಯಾಕೆಂದರೆ ಚಳಿಗಾಳಿಯ ಸಂಘದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ತಂಪು ಗಾಳಿ ಯಾವುದೇ ಹೊದಿಕೆಯಾದರೂ ಅದೆಷ್ಟು ಗಟ್ಟಿಯಾಗಿದ್ದರೂ  ಹೊದಿಕೆಯೊಳಗೆ ನುಸುಳಿಕೊಂಡು ಬಂದು ದೇಹಕ್ಕೆ ಮುತ್ತನಿಡುವ ಅವಕಾಶವನ್ನಂತು ತಪ್ಪಿಸಿಕೊಳ್ಳುವುದಂತೂ ಇಲ್ಲ, ಮರೆಯುವುದಂತು ಇಲ್ಲವೇ ಇಲ್ಲ. ಯಾಕೆಂದರೆ ಚಳಿರಾಯನಿಗಿತ್ತಿರುವ ಸಮಯವೇ ಬಲು ಕಡಿಮೆ. ಈಗೀಗಂತು ತಡವಾಗಿ ಬಂದು ಬೇಗನೆ ವಿರಮಿಸಬೇಕಾದ ಅನಿವಾರ್ಯತೆ ಚಳಿರಾಯನಿಗೆ ಬಂದೊದಗಿದೆ ಎನ್ನಬಹುದು. ಆ ಅಲ್ಪ ಸಮಯದಲ್ಲಿ ಚಳಿ ತನ್ನೆಲ್ಲಾ ಚೇಷ್ಟೆಯನ್ನು ಆಡಿ ಮುಗಿಸಬೇಕಾಗುತ್ತದೆ. ಇಲ್ಲವಾದಲ್ಲಿ ಬೇಸಿಗೆರಾಯ ಅವಕಾಶ ಕಿತ್ತುಕೊಂಡು ಬಿಡುತ್ತಾನೆ.
ನಿಜವಾಗಿಯೂ ಚಳಿಯಲ್ಲೇ ಇದೆ ಸುಖ ನಿದ್ದೆ. ರಾತ್ರಿ ಹೊದ್ದುಕೊಂಡು ಮಲಗಿದ ಹೊದಿಕೆ ನಡುರಾತ್ರಿಯಲ್ಲಿ ಮೈಮೇಲಿಂದ ಜಾರಿರುತ್ತದೆ. ಅವನ್ನು ಮತ್ತೆ ಮೈಮೇಲೆ ಎಳೆದುಕೊಂಡು ಹಾಗೆಯೇ ಸುರುಟಿಕೊಂಡು ಮಲಗುವಾಗ ಎಂಬತ್ತರ ಮುದುಕನೂ ಹೊದಿಕೆಯೊಳಗೆ ಪುಟ್ಟ ಮಗುವಾಗಿರುತ್ತಾನೆ. ಯುವಕರಿಗೆ ಹೊದಿಕೆಯೊಳಗೆ ಸಾವಿರಾರು ಬಿಸಿ ಬಿಸಿ ಕನಸುಗಳು. ಗಡ ಗಡ ನಡುಗಿದರೂ ಬೆಚ್ಚನೆಯ ಭಾವ ತುಂಬಾ ಹಿತಕರವಾಗಿರುತ್ತದೆ. ಆದರೆ ಇಬ್ಬನಿಯೊಡಗೂಡಿ ಮುಂಜಾನೆ, ಭೂಮಿಗೆ ಪಾದವಿಡುತ್ತಿದ್ದಂತೆ, ಗಾಳಿಯಲ್ಲಿದ್ದ ಹಿಮ ಹಸಿರೆಲೆಗಳಿಗೆ ಮುತ್ತಿಕ್ಕುವ ಸಮಯಕ್ಕಂತೂ ಮೈನಡುಕವೇ ಶುರುವಾಗುತ್ತದೆ. ಚಿಗುರೆಲೆಗಳಿಗೆ ಇಬ್ಬನಿಯ ಸ್ಪರ್ಶ ಹಿತವೆನಿಸಿದರೂ, ಆ ನಡುಗುವ ಚಳಿಯಲ್ಲಿ, ಕತ್ತಲ ಒಡಲನ್ನು ಸೀಳಿಕೊಂಡು ಬಾಲರವಿಯ ಹೊಂಗಿರಣಗಳು ಭೂಸ್ಪರ್ಶವಾದರೂ, ನಮ್ಮಂತವರಿಗೆಲ್ಲಾ  ಹೊದಿಕೆಯೊಳಗಿಂದ ಹೊರ ಬರಲು ಮನಸ್ಸೇ ಬರುವುದಿಲ್ಲ. ಮತ್ತೆ ಮತ್ತೆ ಬೆಚ್ಚಗೆ ಸುತ್ತಿಕೊಂಡು ಮಲಗುವ ಮನಸ್ಸೇ ಹೆಚ್ಚಾಗುತ್ತದೆ.
        ಅಲ್ಲಲ್ಲಿ ಕೆಲವರು ದಾರಿಯಲ್ಲಿ, ಬಯಲಲ್ಲಿ ಕಸ ಕಡ್ಡಿಗಳಿಂದ ಅಗ್ಗಿಷ್ಟಿಕೆ ಹಾಕಿ, ಅದರ ಸುತ್ತ ಕುಳಿತು ಮೈ ಬಿಸಿ ಮಾಡಿಕೊಳ್ಳುವ, ಇನ್ನು ಕೆಲವರು ಮುಂಜಾನೆ ಚುಮು ಚುಮು ಚಳಿಗೆ ಕಿವಿ ಮುಚ್ಚುವ ಟೋಪಿ ಹಾಕಿಕೊಂಡು ಬೇಡಿ ಸೇದುತ್ತಾ, ಮತ್ತೆ ಕೆಲವರು ಹಿಮ ಆವರಿತ ಬೆಳ್ಳಂ ಬೆಳಗ್ಗೆಯಲ್ಲೊಂದು ಬಿಸಿ ಬಿಸಿ ಟೀ ಲೋಟದೊಂದಿಗೆ ಚಳಿ ಕಾಯಿಸಿಕೊಳ್ಳುವ ಹಿರಿ ಜೀವಗಳ ಪರಿ ನೋಡಲು ಚಂದವೋ ಚಂದ.
        ಚಳಿಗಾಲಕ್ಕೆ ಎಲ್ಲರನ್ನು ಮೋಡಿ ಮಾಡುವ ಮಾಡುವ ಮಾಂತ್ರಿಕತೆ ಇದೆ. ಚಳಿಗೆ ಮನಸೋಲದವರು ಯಾರೂ ಇಲ್ಲ. ಮರಗಿಡಗಳಿಗೂ ಚಳಿಗಾಲವೆಂದರೆ ಬಹಳ ಅಚ್ಚುಮೆಚ್ಚು. ಮಾಗಿಯ ಚಳಿಯಲ್ಲಿ ಎಲೆಗಳನ್ನೆಲ್ಲ ಸಂಪೂರ್ಣವಾಗಿ ಉದುರಿಸಿಕೊಂಡು ಬರಿದಾದ ಮರಗಳು ವಸಂತ ಋತುವಿನ ಚಳಿಗೆ ಹೊಸ ಚೈತನ್ಯದೊಂದಿಗೆ ಮತ್ತೆ ಚಿಗುರಿ ಹೊಸ ಹುಟ್ಟನ್ನು ಪಡೆದು ನಳನಳಿಸಲು ಪ್ರಾರಂಭಿಸುತ್ತದೆ. ಮುಂಜಾವಿನ ಮಂಜು ಕೂಡ  ಎಲೆಗಳ ಮೇಲೆ ಹನಿ ಮುತ್ತುಗಳನ್ನಿಟ್ಟು ಚಿಗುರೋ ಹೂಗಳಿಗೆ ಕಿವಿ ಮಾತು ಹೇಳೋ ಕಾಲ. ಅದಕ್ಕೇ ಇರಬೇಕು ಎಂದಿಗಿಂತಲೂ ಮರಗಿಡಗಳು ಈ ಸಮಯದಲ್ಲೇ ಗಾಳಿಯ ಜೊತೆ ಹೆಚ್ಚು ಸರಸ ಸಲ್ಲಾಪವಾಡುತ್ತಿರುತ್ತವೆ.
        ಪ್ರೇಮಿಗಳಿಗಿದುವೇ ಚೈತ್ರಕಾಲ. ಎಲ್ಲೋ ದೂರದಲ್ಲಿರುವ ಪ್ರೇಯಸಿ, ಪ್ರಿಯಕರನ ಮನಸ್ಸಿನ ಚಳಿಗೆ ತನ್ನ ಮಾತುಗಳಿಂದಲೇ ಬೆಚ್ಚಗಿನ ಹೊದಿಕೆಯಾಗುತ್ತಾಳೆ.  ಇತ್ತ ಹುಡುಗನಿಗೂ ಮೈಯ ಚಳಿಗೂ ಬೆಚ್ಚನೆಯ ಅನುಭವ. ಚಳಿಗಾಲದಲ್ಲಿ ಪ್ರೇಮಿಗಳಿಗೆ ಚಳಿ ತರುವ ಸನಿಹದಲ್ಲಿರುವಷ್ಟು ಆನಂದ ಬೇರ್ಯಾವುದರಲ್ಲೂ ಇಲ್ಲ. ಭಾವನೆಗಳೇ ಇವರಿಗೆ ಬಿಸಿಲ ಶಾಖ.
ಅಂತು ಇಂತು ಚಳಿರಾಯ ಎಲ್ಲರ ಮೈ ಸವರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ. ಸೂರ್ಯ ರಥವೇರಿ ಬಂದೊಡನೆ ಚಳಿರಾಯನ ಕಣ್ಣಲ್ಲಿ ನೀರು. ಆದರೆ ಗೆಳೆಯ ಚಂದಿರನ ಮೇಲೆ ಭರವಸೆ. ತಣ್ಣಗೆ ಬೀಸಲು  ಇರುಳನ್ನು ಹೊತ್ತು ತರುವವನೆಂದು. ಕಾಳದ ಕೈಯ್ಯಲ್ಲಿ ತನ್ನ ದಾಳವಿದ್ದರೂ, ಚಳಿರಾಯನಲ್ಲಿ ಹುಚ್ಚು ಆಸೆಗಳಿಗೇನೂ ಕಡಿಮೆಯಿಲ್ಲ.
 

ಓ ಮೌನ ಮಾತಾಡೆಯಾ?

        ಹೃದಯದಲ್ಲಿ ಅಂಕುರಿಸಿರುವ ಭಾವನೆಗಳಿಗೆ ರೂಪು ಕೊಡುವ ತವಕ ಮನಸಲ್ಲಿ. ಆದರೆ ಕಣ್ಣ ಮುಂದೆ ನೀ ಬಂದಾಗ ಆಕಾಶದೆತ್ತರಕ್ಕೆ ಏರುವ ಎದೆಬಡಿತವೇ ನನ್ನನ್ನು ಮೂಕನನ್ನಾಗಿಸುವುದು. ನನ್ನ ಮನಸಲ್ಲಿ ಮೊಳೆತ ಪ್ರೇಮಕುಡಿ, ಆಸೆಗಳ ಗೋಪುರವನ್ನೇ ಸೃಷ್ಟಿಸುತ್ತಿದೆ.
        ಅದು ಯಾವಾಗ ನಿನ್ನ ನಮ್ಮೂರ ಜಾತ್ರೆಯಲ್ಲಿ ನಿನ್ನ ಗೆಳತಿಯರ ಜೊತೆ ನೋಡಿದೆನೋ, ಮುತ್ತುಗಳನ್ನು ಹೊರಚೆಲ್ಲುವ ತುಟಿಯಂಚಿನ ಆ ಮುಗುಳ್ನಗೆ ನನ್ನನ್ನು ನಿನ್ನ ಬಳಿ ಸೆಳೆದೇ ಬಿಟ್ಟಿತ್ತು. ಸೆಳೆದ ನಗುವನು ಬಾಚಿ ಹಿಡಿಯಲು ಬಯಸಿ ಹಿಂಬಾಲಿಸಬೇಕೆನ್ನುವಲ್ಲಿ ನೀನು ಮಾಯಾಜಿಂಕೆಯಂತೆ ಮರೆಯಾಗಿ ಹೋದೆ. ರಾಮನಂತೆ ಹುಡುಕಾಡಿದರೂ ಆ ಜನಸಂದಣಿಯಲ್ಲಿ ನನ್ನ ಕಣ್ಣಿಗೆ ನೀನು ಗೋಚರಿಸಲೇ ಇಲ್ಲ. ಆದರೆ ನಾ ಜಾಣ ನೋಡು, ನನ್ನ ಆಸೆಗಳ ಕುಂಚಗಳಿಂದ ಮನಸಿನ ಹಾಳೆಯಲ್ಲಿ ಅಳಿಸಲಾಗದ ಚಿತ್ರ ಬಿಡಿಸಿ ನಿನ್ನಾಗಮನಕ್ಕೆ ಕಾದು ಕುಳಿತೆ.
        ಮರೆತೇನಂದ್ರು ಮತ್ತೆ ಮತ್ತೆ ಕಾಡುವ ನೆನಪುಗಳಾಗುತ್ತಾ ಬಂದೆ. ಮೊಳಕೆಯೊಡೆದ ಪ್ರೇಮ ಒಂದೊಂದೆ ಬೇರುಗಳನ್ನು ಭೂಮಿಯೊಳಗೆ ಬಿಡುತ್ತಾ ಬಂದವು. ಒಮ್ಮೆಲೆ ಭೂಮಿ ನಡುಗಿದ ಅನುಭವ, ಪ್ರೇಮಗೋಪುರ ಕಳಚಿ ಬಿದ್ದಂತೆ ಆತಂಕ ಶುರುವಾಯಿತು ಎದೆಯಲ್ಲಿ. ಇದುವರೆಗೆ ಕಾಡಿರದ ಪ್ರಶ್ನೆಗಳು ಮನದಲಿ ನೃತ್ಯ ಮಾಡತೊಡಗಿದವು. ಯಾರು ನೀನು? ಮತ್ತೆ ಕಾಣಬಲ್ಲೆನೆ ಅವಳನ್ನು? ಎಲ್ಲಿಯವಳು? ಕಾಣದ ನಕ್ಷತ್ರವಾಗಿ ಬಿಡುವಳೇ! ಅವಳು ನನಗೆ.
        ದಿನಗಳೆದಂತೆ ಸುಂದರವಾಗಿ ಹೆಣೆದ ಕನಸುಗಳ ಜೊತೆ ಭಯದ ವಾತಾವರಣವೂ ಬೆಳೆಯತೊಡಗಿತು. ಮರುದಿನ ಕಾಲೇಜು ಪ್ರಾರಂಭ. ಉದ್ಯೋಗಕ್ಕೆ ಬೇಕಾದ ಉನ್ನತ ವ್ಯಾಸಂಗಕ್ಕೆ ಹೊಸ ಕಾಲೇಜಿಗೆ ಕಾಲಿಡುತ್ತಿರುವ ಸಂಭ್ರಮದ ರಾತ್ರಿ. ನಿನ್ನನ್ನು ಮತ್ತೆ ಕಾಣುವೆನೆಂಬ ಕನಸೂ ಕಾಣದ ನನಗೆ ನೀನು ಕಾಲೇಜಿನಲ್ಲಿ ಒಮ್ಮೆಲೆ ಕಣ್ಣೆದುರು ಬಂದಾಗ ಗರಿ ಮೂಡಿದ ಹಕ್ಕಿಯಂತಾಗಿ ಮನಸು ನಿನ್ನ ಸುತ್ತ ಹಾರತೊಡಗಿತÀ್ತು. ಆ ಕ್ಷಣದ ಸಂತೋಷಕ್ಕೆ ಪಾರವೇ ಇರಲಿಲ್ಲ.
ನಿನಗಿಂತ ಚಂದ ಯಾರೂ ಇಲ್ಲ. ನಿನ್ನ ಹೋಲಿಸಿಯೇನೆಂದರೂ ಯಾರೂ ನೆನಪಾಗುತ್ತಿಲ್ಲ. ಪುಟ್ಟ ಕಂದ ಅಮ್ಮ ಹಿಂಬಾಲಿಸುವಂತೆ, ತೋಯ್ದಾಡುವ ನಿನ್ನ ನೀಳ ಕೇಶದ ಬಿಂಕವನ್ನು ಸವಿಯುತ್ತಾ ಹಿಂದೆಯೇ ಬಂದೆ. ತರಗತಿಗೆ ಗಂಟೆ ಬಡಿದಾಗ ನಿನ್ನ ಸೌಂದರ್ಯ ಆಸ್ವಾದನೆಗೆ ನನ್ನಲ್ಲಿ ಪೂರ್ಣವಿರಾಮ ಬಿತ್ತು. ತರಗತಿಯಲ್ಲೂ ನಿನ್ನದೇ ನೆನಪು ನಾಜೂಕಾಗಿ ಹೆಣೆದ ನಿನ್ನ ಜಡೆಯ ಮೇಲಿನ ನನ್ನ ಕಣ್ಣ ನೋಟ ಮತ್ತೆ ಮತ್ತೆ ನೆನಪು ಮಾಡಲಾರಂಭಿಸಿದವು. ಮೈಮರೆಯಬೇಡ ಎಂದು ನೆನಪಿಸುವ ಮನೆಯ ಪರಿಸ್ಥಿತಿ. ಬಡತನದಲ್ಲೂ ವಿದ್ಯೆ ನೀಡುತ್ತಿರುವ ಅಪ್ಪ ಅಮ್ಮನ ಜವಾಬ್ದಾರಿ ಎಚ್ಚರಿಕೆಯ ಗಂಟೆಯಾಗಿತ್ತು. ನಿನ್ನ ಪ್ರೀತಿಯೊಂದಿಗೆ ಜೀವನದಲ್ಲೂ ವಿಜಯಶಾಲಿಯಾಗುವೆನೆಂಬ ನಿಶ್ಚಲ ಧೈರ್ಯ ಮೂಡಿತು. ಹುಚ್ಚುಕುದುರೆಯಾಗಿರುವ ಮನಸು, ನಿನ್ನ ನಗು ತುಂಬಿರುವ ಮುದ್ದು ಮಖವನ್ನು ನೋಡಲು ಕಾಲೇಜಿನ ಆವರಣವನ್ನೆಲ್ಲಾ ಹುಡುಕಾಡುತ್ತಿತ್ತು. ದಿನಗಳೆದಂತೆ ಮನದಲಿ ನೀನು ನನ್ನವಳು ಎನ್ನುವ ಭಾವನೆ. ಆದರೆ ನಮ್ಮಿಬ್ಬರ ಮೌನ ಭಯ ಮೂಡಿಸತ್ತಿತ್ತು. ಎಲ್ಲಿ ನನ್ನ ಪ್ರೀತಿ ನನ್ನಲ್ಲೇ ಜೀವಂತ ಸಮಾಧಿಯಾಗುತ್ತದೋ ಅನಿಸುತಿತ್ತು.
         ಮನದಲ್ಲಿ ಮೂಡಿರುವ ನನ್ನ ಭಾವನೆಗಳ ಜೊತೆ ನಿನ್ನ ಭಾವನೆಗಳನ್ನು ಬೆಸೆಯುವ ಆಸೆ. ಪ್ರೇಮ ಸಂಭಾಷಣೆಯಲ್ಲಿ ಮೈ ಮರೆತು ಆಕಾಶದಲ್ಲಿ ಹಾರಾಡುವ ಪ್ರೇಮಿಯಾಗಬೇಕು. ಕೆಂಪಗಿನ ನಿನ್ನ ಗಲ್ಲಕ್ಕೆ ಮುತ್ತನಿಟ್ಟು ನಾಚಿ ನೀರಾಗಿಸಿ ಆಣೆ ಮಾಡಿ ಮರೆಯಲಾರೆ ಎನ್ನುವ ಧೈರ್ಯ ನೀಡಬೇಕು ಎಂದೆನಿಸುವ ಆಸೆಗಳಿಗೆ ನಡುಕ ತರುವ ನಿನ್ನ ಸನಿಹ ಅಲ್ಪ ವಿರಾಮವಾಗಿದ್ದವು.
ಗೆಳತಿಯರ ಜೊತೆಗಾಡುವ ಮುತ್ತಗಳಂತಿರುವ ಚಿನಕುರುಳಿ ಮಾತುಗಳು, ಆ ನಗು, ಎಲ್ಲರ ಜೊತೆ ಮಾತನಾಡುವ ನಿನ್ನ ನನ್ನ ಜೊತೆ ಮಾತನಾಡದ ಆ ಮೌನ, ಸಖಿಯರ ಜೊತೆಗಿನ ಆ ವೈಯ್ಯಾರದ ನಡಿಗೆ, ನನ್ನ ಮನದ ಆಸೆಗಳಿಗೆ ನೀರುಣಿಸುವ ಪ್ರತ್ಯಕ್ಷಗಳು. ಮನದಲ್ಲಿ ತುಡಿತ ಅತಿಯಾಗಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಜೀವಕ್ಕೆ ಒಬ್ಬಂಟಿಯಾಗಿ ನಿಂತಿದ್ದ ನಿನ್ನನ್ನು ಕಂಡಾಗ ಪ್ರೀತಿಯನ್ನು ಹೇಳಿಯೇ ಬಿಟ್ಟ ಪ್ರೇಮಿಯಂತಾಗಿದ್ದೆ ನಾನು. ಮನದಿಂಗಿತವನ್ನು ಹೇಳಿ ಪ್ರೀತಿಯನ್ನು ಪಡೆಯಬೇಕೆಂದು ಓಡೋಡಿ ಬಂದೆ. ನಾನು ನಿನ್ನ ಬಳಿ ತಲುಪುವ ಮುನ್ನ ನಿನ್ನ ಗೆಳತಿಯ ಆಗಮನವಾಗಿತ್ತು. ಮಂಜಿನ ಹನಿ ಜಾರಿ ಇಳೆ ಸೇರಿದಂತಾಯಿತು. ಪ್ರೇಮದ ಬಡಿತ ಮರೆಯಾಯಿತು.
        ನನ್ನ ಮೌನದ ಹಿಂದಿರುವ ಪ್ರೀತಿ ನೀ ಅರಿತೆಯೋ? ಅಥವಾ ನಾನೇ ನಿನ್ನ ಕಂಗಳಲಿ ನನ್ನ ಮೇಲಿನ ಪ್ರೀತಿಯ ಕಂಡೆನೋ? ಗೊತ್ತಿಲ್ಲ. ನಮಗರಿವಿಲ್ಲದೆಯೇ ನಮ್ಮಿಬ್ಬರ ಕಣ್ಣುಗಳು ನೋಡಲಾರಂಭಿಸಿದವು. ಮೌನ ಸಂಭಾಷಣೆಯಲ್ಲೇ ಮುಗ್ಧ ಪ್ರೇಮಿಗಳಾದೆವು ನಾವು. ಉಳಿದ ಪ್ರೇಮಿಗಳಂತೆ ಬದುಕು ನಮ್ಮದಾಗಿರಲಿಲ್ಲ.
        ನನ್ನ ಭಾವನೆಗಳಿಗೆ ನಿನ್ನ ಮನಸ್ಸು ಸ್ಪಂಧಿಸಿದ ಕ್ಷಣ ನನಗಂತು ಅರಿತಿಲ್ಲ. ಆದರೆ ನಮ್ಮ ಕಣ್ಣ ಮಿಲನವಾದ ಗ್ರಂಥಾಲಯದ ಆ ಸಂಜೆ ವಾತಾವರಣವನ್ನು ಮರೆಯುವಂತಿಲ್ಲ. ನಮ್ಮ ಕಣ್ಣ ಮಿಲನಕ್ಕೆ ಗ್ರಂಥಾಲಯದ ಪ್ರೇಮಗ್ರಂಥಗಳೇ ಸಾಕ್ಷಿಯಾಗಿ ನಿಂತದ್ದವು. ಇಬ್ಬರಲ್ಲೂ ನೋಡುವ ತವಕ. ಮಾತನಾಡಲು ಆಸೆ. ಆದರೆ ಮನ ಬಿಚ್ಚಿಡಲು ಮನದ ತುಂಬಾ ಏನೋ ಅಳುಕು.
        ನಾವಾಡಿದ ಮಾತುಗಳೆಷ್ಟೋ? ತುರುಗಾಡಿದ ಸ್ಥಳಗಳೆಷ್ಟೋ? ಮೈಮರೆತು ಕಳಿತ ಉದ್ಯಾನವನಗಳೆಷ್ಟೋ? ಪ್ರೀತಿಯಿಂದ ನಾ ನಿನಗೆ ನೀಡಿದ ಸಿಹಿ ಚುಂಬನಗಳೆಷ್ಟೋ? ಬಿಸಿ ಅಪ್ಪುಗೆಯ ಸನಿಹಗಳೆಷ್ಟೋ? ನಿನಗಾಗಿ ಕಾದು ಕುಳಿತ ಕ್ಷಣಗಳೆಷ್ಟೋ? ಎಂದು ಲೆಕ್ಕ ಹಾಕಲು ತೊಡಗಿದರೆ ಏನೂ ಇಲ್ಲ. ಬರೀ ಮೌನವೇ ಎಲ್ಲಾ. ಇತಿಹಾಸವನ್ನೇ ನಿರ್ಮಿಸಿದ ಪ್ರೇಮಕಥೆಗಳು ಪುಸ್ತಕಗಳಲಿದ್ದರೆ ಅವುಗಳ ನೆನಪೇ ಬಾರದ ಲೋಕದಲ್ಲಿ ತೇಲಾಡುವ ಮನಸು ನಮ್ಮದು. ಮೌನದ ಹೊರತು ಖಾಲಿ ಹಾಳೆ ನಮ್ಮ ಪ್ರೀತಿ. ಆ ಮೌನದ ಪ್ರೀತಿ ಲೋಕಕ್ಕೂ ಕನಿಕರ ಹುಟ್ಟಸಿರಬಹುದು. ನಮ್ಮಿಬ್ಬರ ತೊಳಲಾಟಕ್ಕೆ ಗಾಳಿಯೇ ಮೌನವಾಗಿದ್ದಿತ್ತು.
        ನಮ್ಮ ಪ್ರೀತಿ ಮೌನದಲ್ಲೇ ಎರಡು ವರ್ಷಗಳನ್ನೇ ಕಳೆಯಿತು. ಜೀವನ ರೂಪಿಸುವ ಗುರಿ ತಲುಪಿದೆವು ಎಂಬ ಸಡಗರ ಒಂದೆಡೆ. ಕಾಲೇಜು ಬಿಟ್ಟು ಹೊರಡುವ ಮುನ್ನ ಹೇಳಿ ಬಿಡಲೇಬೇಕು ಎಂಬ ಆಶಾಭಾವನೆಯಿಂದ ನಾನು ನಿನ್ನ ಹಿಂದೆಯೇ ಓಡಿ ಬಂದೆ ಆದರೆ ನೀನು ಹೊರಟೇ ಬಿಟ್ಟೆ ನಿನ್ನ ಊರಿಗೆ ಹಿಂತಿರುಗಿಯೂ ನೋಡದೆ. ಮತ್ತೆ ನನ್ನಲ್ಲಿ ಆವರಿಸಿತು ಮೌನ. ಮೌನವೇ ಸಾಕ್ಷಿಯಾಯಿತು ಮಾತಿರದ ನಮ್ಮ ಪ್ರೀತಿಗೆ. ಮರೆಯಲಾರದ ನಿನ್ನ ನೆನಪು ಪತ್ರ ಬರೆಯಲು ಪ್ರೇರೇಪಿಸಿತು. ಬಿಳಿಹಾಳೆ ಹಿಡಿದು ಕುಳಿತೆ ಪದಗಳೇ ನೆನಪಾಗಲಿಲ್ಲ. ನನ್ನ ಪ್ರೀತಿಯನ್ನು ಹೇಳಲು ಕೊನೆಗೂ ಬರೆದೇ ಬಿಟ್ಟೆ ಚಂದದ ಪ್ರೇಮಪತ್ರವೊಂದನ್ನು. ಇಂತೀ ನಿನ್ನವ...
        ಕಾಳಿದಾಸನಂತೆ ಪ್ರೇಮಸಂದೇಶವನ್ನು ಮೇಘಗಳಲ್ಲಿ ಹೇಳಿ ಕಳುಹಿಸುವೆನೆಂದು ಹೊರಟೆ. ಆದರೆ ನಾ ದುರಾದೃಷ್ಟ ನೋಡು! ಅರಿಯದೇ ಹೋದೆ ನಾನು ನಿನ್ನ ವಿಳಾಸವನ್ನು. ಬಡ ಪ್ರೇಮಿಯಾಗಿಯೇ ಉಳಿದುಬಿಟ್ಟೆ ನಾನು. ತಣ್ಣನೆಯ ಗಾಳಿ ಮೆಲ್ಲನೆ ತಟ್ಟಿ ಎಚ್ಚರಿಸಿದಾಗ ಕಣ್ಣಂಚಿನಿಂದ ಹನಿ ಜಾರಿ ಕೆನ್ನೆ ಮೇಲೆ ಇಳಿದಿತ್ತು.
                                                         ನೀ ಹೋಗಿಯಾಗಿತ್ತು...

Thursday 16 February 2017

ಕನಸುಗಳ ರಾಯಭಾರಿ ನೀನು...


ಇನ್ನೂ ಸೂರ್ಯನ ಕಿರಣಗಳು ತಾಗಿರದ ಮುಂಜಾನೆಯ ಮಂಜಿನ ಹನಿಯಂತಿದ್ದ ನನ್ನ ಹೃದಯಕೆ, ಹೂ ಅರಳುವಷ್ಟು ಮೆಲ್ಲಗೆ, ತಂಗಾಳಿಯಷ್ಟು ತಣ್ಣಗೆ ಹೃದಯದ ಕದ ತಟ್ಟದೇ, ಪ್ರೀತಿಯ ಕಚಗುಳಿ ಇಟ್ಟವ ನೀನು. ನಿನ್ನ ಪ್ರೀತಿಯ ಬಾಹುಬಂಧನದಲ್ಲಿ ಸಿಲುಕಿದ ಪರಿಯ ಅರಿವೇ ನನಗಾಗಿಲ್ಲ. ಪ್ರೀತಿಯ ಸವಿ ಅರಿಯೋ ಹೊತ್ತಿಗೆ ನಿನ್ನ ಪ್ರೇಮದ ಅಮಲಿನ ಕಬಂದಬಾಹುವಿನಲ್ಲಿ ನಾನು ಬಂಧಿಯಾಗಿದ್ದೆ ಗೆಳೆಯ. ಗುಲಾಬಿಗೆ ಮುತ್ತಿಟ್ಟ ಇಬ್ಬನಿಯ ಹನಿಯಂತೆ ನೀನಿಟ್ಟ ಮೊದಲ ಚುಂಬನ ನನ್ನ ಮನಸಲ್ಲಿ ಹೂ ಅರಳಿದಂತೆ, ಕನಸುಗಳ ಎಸಳುಗಳ ಪೋಣಿಸಿ ಸೊಗಸಾದ ಚೆಂಗುಲಾಬಿಯ ನನ್ನ ಮುಡಿಯೇರಿಸಿದೆ. ನಾ ಮುಡಿದಿರುವ ಗುಲಾಬಿಗೆ ಸರದಾರನೂ ನೀನು. ಅದರೊಳಗಿನ ಸಾವಿರ ಕನಸುಗಳಿಗೆ ರಾಯಭಾರಿಯೂ ನೀನು. 
ಪ್ರೀತಿಯ ನಿವೇದನೆಯಿಲ್ಲ, ನಿವೇದನೆಯ ಉತ್ತರಕ್ಕಾಗಿ ಕಾದು ಕುಳಿತಿಲ್ಲ. ಮೌನದೆದೆಯಲಿ ಬಂಧಿಯಾಗಿಲ್ಲ. ವಿರಾಮವಿಲ್ಲದ ನಮ್ಮಿಬ್ಬರ ಸಂಭಾಷಣೆಯೇ ಎಲ್ಲಾ, ಪ್ರೀತಿಯ ಕೈಯ್ಯಲ್ಲಿ ನಾವು ಖೈದಿಗಳಾಗೋಕೆ. ಪ್ರತಿದಿನವೂ ಹೆಚ್ಚು ಹೆಚ್ಚೇ ಪ್ರೀತಿಸುವ, ಮುದ್ದು ಮಾಡುವ ನಿನ್ನೊಳಗೆ ನಾನು ಒಂದಾಗಲು ಹೆಚ್ಚು ಸಮಯ ತಗಲಲಿಲ್ಲ. ನನ್ನನ್ನು ಪ್ರೀಯಿಸುತ್ತೀಯ ಎಂದು ನೀನು ಕೇಳಲಿಲ್ಲ. ನಿನ್ನನ್ನು ಪ್ರೀತಿಸುತ್ತೇನೆಂದು ನಾನು ಹೇಳಲಿಲ್ಲ. ಆದರೂ ಯಾವುದೋ ಮೌನದೊಳಗೆ ಸಿಲುಕಿದ ಪ್ರೇಮಿಗಳು ನಾವು. ನೀ ನನ್ನ ಪ್ರಿಯತಮೇ, ನಾ ನಿನ್ನ ಪ್ರಿಯತಮ ಎಂದು ನಾವೆಂದೂ ಹೇಳಿಕೊಂಡಿಲ್ಲ. ಆದರೂ ಬಿಟ್ಟಿರಲಾರದಷ್ಟು ಬೆಸೆದುಕೊಂಡುಬಿಟ್ಟಿದೆ ನಮ್ಮೀರ್ವರ ಪ್ರೇಮಬಂಧನ.
ಬಂಧನ ಬೆಸೆದ ಘಳಿಗೆಯಂತು ನನಗೆ ನೆನಪಿಲ್ಲ. ಆದರೂ ಆ ಗಂಧರ್ವ ಘಳಿಗೆಗೆ ನನ್ನದೊಂದು ಸಲಾಮು. ಪ್ರೀತಿ ಎಂದರೆ ಹೇಗೆ? ಏನು? ಓದಿ ಮಾತ್ರವೇ ತಿಳಿದುಕೊಂಡಿದ್ದ ನನಗೆ, ನಿಜವಾದ ಪ್ರೀತಿಯ ಮಧು ಕುಡಿಯುವ ಭಾಗ್ಯ ನೀನಿತ್ತೆ ಇನಿಯ. ಮೊದಲ ಭೇಟಿ, ಗೆಳೆತನ, ಆತ್ಮೀಯತೆಗೆ ಬಲವಾದ ಅಡಿಪಾಯವಾಗಿತ್ತು. ಅದರ ಮೇಲೆ ಪ್ರೀತಿಯ ಅರಮನೆ ಕಟ್ಟ ಹೊರಟ ನಮಗೆ, ಆ ಅರಮನೆಗೆ ನೀನೆ ರಾಜ, ನಿನ್ನೆದೆಯಾಳುವ ಅರಸಿ ನಾನು. ನಾವು ಹೆಣೆಯುವ ಕನಸುಗಳೇ ನಮ್ಮ ರಾಜಕುಮಾರ. ಅವುಗಳ ಬೆಳವಣಿಗೆಯೇ ನಮಗಾನಂದ. 
ನೆನಪಿದೆಯಾ ನಿನಗೆ ಮಾತಲ್ಲೇ ಕಳೆದ ಆ ಕ್ಷಣಗಳು. ನಾನಂತು ಮಾತಿನ ಮಲ್ಲಿ. ಮಾತುಗಳನ್ನು ಹೆಣೆಯೋದು ಕಷ್ಟದ ಕೆಲಸ ನನಗಾಗಿರಲಿಲ್ಲ. ಆದರೆ ಆ ಮಾತುಗಳ ಮುತ್ತಿನ ಹಾರದ ನಡುವೆ, ಪ್ರೀತಿಯ ಬಂಗಾರದ ಮಣಿಗಳನ್ನು ಒಂದೊಂದಾಗಿ ಪೋಣಿಸುತ್ತಾ ಬಂದೆ ನೀನು. ಬಂಗಾರದ ಮುತ್ತುಗಳನ್ನು ಪೋಣಿಸಿ ಹೆಣೆದ ಹಾರದ ಜೊತೆಗೆ, ಪ್ರೀತಿ ಎದೆ ತಾಕಲು ಹೆಚ್ಚು ಅವಧಿ ಬೇಕಾಗಿರಲಿಲ್ಲ. ನಾವಿಬ್ಬರು ದೂರವಿದ್ದರೂ ಸನಿಹವಿದ್ದಷ್ಟೇ ಸಂತೋಷವನ್ನು ನಾ ಹೆಣೆಯುತ್ತಿದ್ದ ಕನಸುಗಳು ನೀಡುತ್ತಿದ್ದವು. ನನ್ನ ಬಿಡುವಿರದ ಮಾತುಗಳೇ ನಿನಗೆ ಬಲು ಇಷ್ಟ. ನೀ ಕೊಡುವ ಮುತ್ತುಗಳಿಗೆ, ಸಲುಗೆಯಿಂದ ನನ್ನ ನಡುವನ್ನು ಬಳಸುವ ಕೈಗಳಿಗೆ, ಬಿಸಿಯಪ್ಪುಗೆಯ ಆಲಿಂಗನಕೆ, ಮಾತುಗಳೆಲ್ಲಾ ಮೌನದ ಮುಂದೆ ತಲೆಬಾಗಿದೊಡನೆ ನಿನಗೆಲ್ಲಿಲ್ಲದ ಭಯ ಆತಂಕ. ನನ್ನೀ ನಾಚಿಕೆಯ ಮೌನವನು ತಾಳಲಾರದ ನಿನ್ನ ಮನಸು ಪಟ ಪಟ ಎಂದು ನುಡಿವ ನನ್ನ ಮಾತುಗಳಿಗಾಗಿಯೇ ಹಪಹಪಿಸುತ್ತದೆಂದು ನನಗೆ ಗೊತ್ತು ಕಣೋ.
ಆ ಹಪಾಹಪಿಕೆಯ ಅರಿತು ತುಟಿಯಂಚಿನಿಂದೊಂದು ಮುಗುಳ್ನಗೆ ಬೀರಿದೆನೆಂದರೆ, ಆಗ ಮೂಡುವ ನನ್ನ ಕೆನ್ನೆ ಮೇಲಿನ ಗುಳಿಯನ್ನು ನೋಡುವುದೇ ನಿನಗೊಂಥರಾ ಖುಷಿ. ನನ್ನ ಕೆನ್ನೆ ಮೇಲೆ ಬೀಳುವ ಗುಳಿಯನ್ನು ನೋಡುವಾಸೆಯಿಂದ ಅದೆಷ್ಟೋ ಬಾರಿ ಕಚಗುಳಿಯಿಟ್ಟು ನಗಿಸಿದವ ನೀನು. ಹಣೆಗೆ ನೀನಿಡುವ ಸಿಹಿ ಮುತ್ತುಗಳೇ ನಿನ್ನ ಹೆಸರಿನ ಸಿಂಧೂರ ನನಗೆ. ಸಲುಗೆಯ ಮಾತುಗಳೇ ನನ್ನ ಕನಸುಗಳಿಗೆ ಮುಂಗಾರಿನ ಮಳೆ. ನಾ ಹೆಣೆದಿಟ್ಟಿರುವ ಕನಸುಗಳಿಗೆ ಲೆಕ್ಕವಿಲ್ಲ ಕಣೋ. ಲೆಕ್ಕವಿಲ್ಲದಷ್ಟು ಕನಸುಗಳಿಗೆ ರಾಯಭಾರಿಯಾಗಿರುವೆ ನೀನೀಗ. ನೀನಿಲ್ಲದೆ ನನ್ನ ಕನಸುಗಳಿಲ್ಲ. ಕನಸುಗಳಿಲ್ಲದೆ ಪ್ರೀತಿಯಿಲ್ಲ ಪುಟ್ಟ. ಕನಸುಗಳನ್ನು ನನಸಾಗಿಸುವ ಭರವಸೆಯೊಂದಿಗೆ ಪ್ರತಿಕ್ಷಣವೂ ನಿನ್ನೊಂದಿಗೆ ಪ್ರೀತಿಯ ಅಂಬಾರಿಯಲ್ಲಿ ಹೆಜ್ಜೆಗಳಿಗೆ ಪ್ರೀತಿ ಗೆಜ್ಜೆಯ ನಾದವಾಗಿ ಬರುತ್ತಿರುವೆ. 
ಪುಟ್ಟದೊಂದು ಊರು, ಅಲ್ಲಿರುವ ಸಣ್ಣದೊಂದು ಮನೆಯಲ್ಲಿ ನಾನು ನೀನು ಮಾತ್ರವೇ ಚೊಕ್ಕದಾದ ಸಂಸಾರದ ನಾವೆಗೆ ತಿಳಿಯಾಗಿರುವ ನೀರಿನಲ್ಲಿ ಹುಟ್ಟು ಹಾಕುತ್ತಾ ಸಾಗಬೇಕು. ನನ್ನ ಮಡಿಲಲ್ಲಿ ಕಣ್ಣುಮುಚ್ಚಿ ಕೀಟಲೆ ಮಾಡುವ ಮಗು ನೀನಾಗಿ, ನಾ ಮೈಮರೆತು ತಾಯಂತೆ ಹಣೆಗೊಂದು ಮುತ್ತನಿಡಬೇಕು. ಉಕ್ಕಿ ಬರುವ ದುಃಖವನ್ನು ಬಿಗಿದಿಟ್ಟು ಚಡಪಡಿಸುವ ನನಗೆ, ನಿನ್ನೆದೆಯೆ ತೊಟ್ಟಿಲಾಗಿ, ಬಾಚಿ ತಬ್ಬುವ ತೋಳುಗಳೇ ನಿರಾಳವೆನಿಸಬೇಕು. ಬಿಗಿದಿಟ್ಟ ದುಃಖ ಕಂಬನಿಯಾಗಿಳಿವಾಗ, ನನ್ನ ಕಂಬನಿಯ ಒರೆಸುವ ನಿನ್ನ ಕೈಯ್ಯ ಬೆರಳುಗಳಿಗೆ ಮುತ್ತನಿಡಬೇಕು. ನಮ್ಮ ಪ್ರೀತಿಯ ಸಂಕೇತವಾಗಿ ನಿನ್ನ ಮಗುವಿಗೆ ನಾನು ತಾಯಿಯಾಗಬೇಕು. ನಿನ್ನ ತೋಳಲ್ಲಿ ತಲೆಯಿಟ್ಟು ನಾ ಮಾಡುವ ಸುಖನಿದ್ರೆಯ ಕನಸಲ್ಲಿ ನೀನು ಬರಬೇಕು. ಪ್ರತಿದಿನವೂ ಪ್ರೀತಿ, ಮುದ್ದು ಮುದ್ದಾದ ಮಾತುಗಳು, ಪ್ರಣಯದ ತುಂಟಾಟಗಳು ಮಾತ್ರವೇ ಇರಬೇಕು. ಊಟಕ್ಕೆ ಉಪ್ಪಿನಕಾಯಿಯಂತೆ ಸಣ್ಣ ಪುಟ್ಟ ಜಗಳಗಳು ನಮ್ಮ ಮುನಿಸಿಗೆ ಕಾರಣವಾಗಬೇಕು. ಮುನಿಸನ್ನು ಕರಗಿಸುವ ಪ್ರೀತಿಯನ್ನು ನೀನು ಹೊತ್ತು ತರಬೇಕು. ನೀ ತಂದ ಬೆಟ್ಟದಷ್ಟು ಪ್ರೀತಿಗೆ ನಾ ನಾಚಿ ನೀರಾಗಬೇಕು. 
ನಡುವನ್ನು ಬಳಸುವ ನಿನ್ನ ಕೈಯ್ಯಲ್ಲಿ ನಾ ಬಂಧಿಯಾಗುವ ಆಸೆ ಕಣೋ. ಆದರೆ ಈ ಎಲ್ಲಾ ಆಸೆಗಳು ಕನಸಲ್ಲೇ ನಾಚಿ ನೀರಾಗಿಸುತ್ತವೆ ನನ್ನ. ಪ್ರತಿದಿನವೂ ನಮ್ಮ ನಡುವೆ ಮಾತಿನ ಹೊಳೆಯೇ ಹರಿದು ಬರುತ್ತದೆ. ಒಂದು ದಿನ ನಾ ಕಟ್ಟಿದ ಕನಸು ಇದ್ದೇ ಇರುತ್ತಿತ್ತು. ಮಾತಿನ ಮಧ್ಯದಲ್ಲಿ ಒಂದು ಕನಸು ಹೇಳೇ ಕೋತಿ ಎನುವಾಗ ಮನಪಟಲದಲ್ಲಿ ಪುಳಕವೊಂದು ಜನ್ಮ ತಾಳುವುದು, ಓ ನನ್ನ ಜೀವವೇ. 

ನಾ ಹೇಳುವ ಕನಸುಗಳಿಗೆ ಮುತ್ತಿನ ಸುಂಕ ನೀ ತೆರುವಾಗ, ತೆರಿಗೆ ವಸೂಲಿ ಮಾಡದೆ ಬಿಡುವ ಮನಸ್ಸು ನನದಲ್ಲ. ನೀ ಕೊಡುವ ಸಿಹಿ ಮುತ್ತುಗಳ ಆಸೆಯೇ, ನಿನ್ನಲ್ಲಿ ಕನಸುಗಳ ನೆಪ ಹೇಳುವ ತುಂಟಾಟ ಸೃಸ್ಟಿಸಿದೆ. ಯಾಕೆಂದರೆ ನಿನ್ನ ಮುತ್ತುಗಳಿಗೆ ನನ್ನ ಪ್ರತ್ಯುತ್ತರ ಮುತ್ತಗಳೇ ಅಲ್ಲವೇ... ಹಾಗೋ ಹೀಗೋ ನನ್ನೊಡಲ ಕನಸುಗಳ ದೂರದ ಊರಿನ ರಾಜಕುಮಾರ ನೀನು ನನಗೆ...

ಏನೆಂದು ಹೆಸರಿಡಲಿ...

ಸ್ನೇಹ ಎನ್ನಲೇ, ಇಲ್ಲ ಇದ ನಾ ಪ್ರೀತಿ ಎನ್ನಲೇ ಗೆಳೆಯ. ಏನೆಂದು ಉತ್ತರಿಸಲಿ? ಉತ್ತರಿಸಲಾಗದ ಪ್ರಶ್ನೆಯೊಂದು ಮನಸನ್ನು ಕೆದಕುತ್ತಲೇ ಇದೆ. ಉತ್ತರಿಸಬಲ್ಲೆ ಎನಿಸಿದರೂ ಆ ಉತ್ತರ ಏನು? ಎಂಬ ತಳಮಳ, ತವಕ ಎಲ್ಲವೂ ಇದೆ. ಒಂದೊಮ್ಮೆ ಇದು ಸ್ನೇಹ ಎಂದು ದೃಢವಾಗಿ ನಿಂತರೆ ಹಲವಾರು ಪ್ರಶ್ನೆಗಳು ದಾಳಿ ಮಾಡತೊಡಗುತ್ತವೆ. ನಾವಿಬ್ಬರು ಸ್ನೇಹ ಎಂಬ ಸೂರಿನಡಿ ಆಶ್ರಯಿತರಾದರೇ ಈ ಎಲ್ಲಾ ಭಾವನೆ, ತುಡಿತಗಳಿಗೆ ಎಡೆಯಿರುತಿತ್ತೇ? ನಿನ್ನ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ನೀನಿಲ್ಲ ಎಂಬ ಗಾಢವಾದ ಸಂಬಂಧ ಬೆಸೆದುಕೊಂಡಂತಿದೆ ನಮ್ಮಿಬ್ಬರ ನಡುವೆ. ಸ್ನೇಹ ಎನ್ನುವುದಕ್ಕಿಂತ ಮಿಗಿಲಾದ ಭಾವವೊಂದು ನಮ್ಮಿಬ್ಬರನ್ನು ಜೊತೆಸೇರಿಸಲು ಯತ್ನಿಸುತ್ತಿದೆಯಾ? ಮನಸ್ಸಿನಾಳದ ತುಮುಲಗಳಿಗೆ ಸಮಧಾನಿಸಲಾರದಷ್ಟು ದುಗುಡ ನೆಲೆಯಾಗಿದೆ. ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿರುವ ನನಗೆ, ಉತ್ತರ ನೀನಾಗುವೆಯಾ ಇನಿಯಾ? 

ಸ್ನೇಹ ಎಂಬ ನೆರಳಿನಡಿ ಪ್ರೀತಿ ಎಂಬ ಆಸರೆಯಲ್ಲಿ ನಮಗರಿವಿಲ್ಲದಂತೆಯೇ ಸಾಗುತ್ತೆದ್ದೇವೆಯೇನೋ ಎನಿಸುತಿದೆ. ಹೆಸರಿಲ್ಲದ ಬಂಧ ನಮ್ಮಿಬ್ಬರದು. ಬುದ್ಧಿಯ ಮಾತು ಕೇಳದ ಮನಸಿನ ಆಸೆಗಳು. ಹುಚ್ಚು ಆಸೆಗಳೆಂದೆನಿಸಿದರೂ ಅವುಗಳನ್ನು ಸವಿಯುವ ಅವಕಾಶಗಳಿಂದ ತಪ್ಪಿಸಿಕೊಳ್ಳಲಾರಷ್ಟು ಬಂಧಿಯಾಗಿಸಿದೆ. ನಮ್ಮೀರ್ವರ ಅಂತರ ಸದಾ ಭೇಟಿಯ ನೆಪಗಳನ್ನೇ ಹುಡುಕುತ್ತಿವೆ. ಪ್ರತಿದಿನವೂ ನೋಡುವ ಕಾತರವನ್ನು ಹೆಚ್ಚಿಸುತ್ತಲೇ ಇವೆ. ನೋಡಿದಷ್ಟೂ ಪ್ರತಿದಿನದ ಭೇಟಿಯೂ ಹೊಸತನದಿಂದಲೇ ಕೂಡಿರುತ್ತಿತ್ತು. ಆ ಹೊಸತನಕ್ಕಾಗಿಯೇ ಮನಸ್ಸು ಹಗಲು ರಾತ್ರಿ ಹಂಬಲಿಸುತ್ತಿದೆ. ನಿನ್ನೆ ತಾನೇ ಭೇಟಿಯಾಗಿ, ಮಾತನಾಡಿ, ಹರಟೆ ಹೊಡೆದು ವಿರಮಿಸಿದ್ದರೂ ಇಂದಿಗೆ ನಿನ್ನೆ ಎನ್ನುವುದು ಅದೆಷ್ಟೋ ದಿನಗಳ ಗಜಾಂತರವೆನಿಸುತಿದೆ ಮನಸಿಗೆ. ನೀನೆಲ್ಲೋ ದೂರದಲ್ಲಿದ್ದರೂ ಸನಿಹವಿದ್ದಷ್ಟೇ ಅನುಭವ. ಪ್ರತಿಕ್ಷಣ ನನ್ನ ಮನಸನ್ನು ಕೆಣಕುವ ನಿನ್ನ ಮುಖ, ನಗು, ಮಾತುಗಳೆಲ್ಲವೂ ಮತ್ತೆ ಮತ್ತೆ ನೋಡುವ ಕೇಳುವ ಆಸೆಗಳನ್ನು ಮನೆ ಮಾಡಿಸಿದೆ. ನಿನಗೋ ನನ್ನ ಮಾತು ಸಂದೇಶಗಳಿಲ್ಲದೆ ಕ್ಷಣಗಳೇ ಮುಂದೂಡುವುದಿಲ್ಲ. ಮಾತಲ್ಲೇ ಮೈಮರೆತು ಹೋದರೂ ಬೇಜಾರಿಲ್ಲ ನಿಂಗೆ. ಸದಾ ನನ್ನ ಸನಿಹವನ್ನೇ ಬಯಸುವ ನಿನ್ನ, ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಲಾಗದ ಅತೃಪ್ತಿ ನನ್ನಲ್ಲಿ. ನಿನ್ನ ಮನಸ್ಸು ನಾ ನಿನ್ನ ಪ್ರೇಮಿ ಎಂದು ದೃಢ ನಿರ್ಧಾರ ಹೊಂದಿದ್ದರೂ, ನನ್ನ ಮನಸ್ಸು ನಿನ್ನಾಸೆ ಕನಸುಗಳಿಗೆ ಅಚಲ ನಿರ್ಧಾರವ ತಿಳಿಸಲು ಹಿಂಜರಿಯುತ್ತಿದೆ. ನೀನು ಧೈರ್ಯದಿಂದ ನಿನ್ನೆಲ್ಲಾ ಆಕಾಂಕ್ಷೆಗಳನ್ನು ಪ್ರೇಮ ನಿವೇದನೆಯನ್ನು ನನ್ನ ಮುಂದಿಟ್ಟಿರುವೆ. ಆದರೆ ನಾ ನಿನ್ನ ಆ ಭಾವನೆಗಳಿಗೆಲ್ಲಾ ತಣ್ಣೀರೆರಚಿ ಸ್ನೇಹ ಎಂಬ ಮುಖವಾಡವನ್ನೇ ಧರಿಸಿದ್ದೇನೆ. ಆದರೆ ಆ ಸ್ನೇಹದ ಮುಖವಾಡ ಕಳಚಿ ಬೀಳುವ ಸಮಯ ಬಹಳ ಸನಿಹದಲ್ಲಿದೆಯೋ ಎನುತಿದೆ ಮನಸು. 

ನಾನು ನಿನ್ನ ಆಸೆಗಳನ್ನೆಲ್ಲಾ ಆ ಕ್ಷಣದಲ್ಲಿ ಚಿವುಟಿ ಹಾಕಿದರೂ ನಿನ್ನ ಮನಸು ಇಂದಿಗೂ ನನ್ನ ಮೇಲಿಟ್ಟಿರುವ ಅಂದಿನ ಅದೇ ಪ್ರೀತಿಗೆ ನಾ ಚಿರಋಣಿ. ಸ್ನೇಹ ಎಂಬ ಮುಖವಾಡ ಹೊತ್ತಿರುವ ನನ್ನೊಳಗಿನ ಭಾವನೆಗಳನ್ನು ಬಿಚ್ಚಿಟ್ಟು ನಿನ್ನೊಡಲ ಸೇರುವ ಅಭಿಲಾಷೆಯ ಹೊರಚೆಲ್ಲುವ ಆ ದಿನ ಎಲ್ಲಿದೆಯೋ ನಾ ತಿಳಿದಿಲ್ಲ. ಪ್ರತಿದಿನವೂ ನಾವಾಡುವ ಮಾತುಗಳು, ಹರಟೆಗಳು, ದಿನವಿಡೀ ರವಾನೆಯಾಗುವ ಮೊಬೈಲ್ ಸಂದೇಶಗಳು, ಎರಡು ಹೃದಯಗಳಂತರವನ್ನು ಸಂಕುಚಿಸಿದೆ ಎನ್ನುವುದಂತು ಸತ್ಯ. ನಾ ಸೋಲಲಾರೆ ಎನ್ನುವ ನನ್ನೀ ಅಹಂ, ಮನಸ್ಸಲ್ಲಿ ಚಿಗುರಿರುವ ಆಸೆ, ಪ್ರೀತಿಯನ್ನೆಲ್ಲಾ ಬಿಚ್ಚಿಡಲು ಬಿಡದೆ, ಬಚ್ಚಿಡಲು ಪ್ರೇರೇಪಿಸುತ್ತಿದೆ. 

ಇತ್ತೀಚೆಗೆ ನಾವಾಡುವ ಮಾತುಗಳೆಷ್ಟೋ ಲೆಕ್ಕವಿಲ್ಲ. ಅರ್ಥವಿಲ್ಲದ ಮುದ್ದು, ಪೆದ್ದು ಮಾತುಗಳೇ ಅಧಿಕ. ಅದರಲ್ಲೂ ಬಿಟ್ಟಿರಲಾರದಷ್ಟೂ ಅನ್ಯೋನ್ಯತೆ. ದೂರವಿದ್ದಷ್ಟೂ ನೋಡುವ, ಮುಖಾಮುಖಿಯಾಗುವ ತವಕ. ಜೊತೆಗಿದ್ದ ಕ್ಷಣಗಳು ವಿದಾಯ ಹೇಳಲು ಏನೋ ಒಂಥರಾ ಬೇಸರ. ಒಂದು ಕ್ಷಣ ಭೇಟಿಯಾದರೆ ಸಾಕು ಎಂದು ಹಂಬಲಿಸುವ ಮನಗಳಿಗೆ ನಾವೆದುರಾಗ ಸಿಗುವ ಸಂತೋಷಕ್ಕಿಂತ ವಿರಮಿಸುವಾಗ ಸಿಗುವ ದುಃಖವೇ ಹೆಚ್ಚು. ನಾ ನೋವು ಎಂದರೆ, ನಿನ್ನೆದೆಯಲ್ಲಿ ತುಡಿತ, ಕಣ್ಣಲ್ಲಿ ನೀರು. 

ಇತ್ತೀಚೆಗೆ ನಿನ್ನ ಕಣ್ಣ ನೋಟವನ್ನು ಎದುರಿಸಲಾರದ್ದಾಗಿದ್ದೇನೆ. ಮೊದ ಮೊದಲು ನಿನ್ನಲ್ಲಿದ್ದ, ನನ್ನ ಕಣ್ಣಲ್ಲಿ ನಿನ್ನ ದೃಷ್ಟಿಯಿಡುವ ಭಯ ಈಗ ನನ್ನನ್ನಾವರಿಸಿದೆ. ನಿನ್ನ ಕಣ್ಣಲ್ಲಿ ಕಣ್ಣನಿಟ್ಟು ನೋಡುವ ಧೈರ್ಯ ನನ್ನಲಿಲ್ಲ. ನಿನ್ನ ಕಣ್ಣಲ್ಲಿರುವ ಪ್ರೀತಿ, ನನ್ನ ಕಣ್ಣಲ್ಲಿರುವ ನಿನ್ನ ಮೇಲಿನ ಪ್ರೀತಿಯ ಇನ್ನೆಲ್ಲಿ ತುಳುಕಿಸಿ ಬಿಡುವುದೋ ಎನ್ನುವ ಭಯ ಕಾಡಿದೆ. ಆದರೂ ನಾ ನಿನ್ನ ನೋಡದೆ ಇರಲಾರೆನು. ನಿನ್ನೆಲ್ಲಾ ಹಾವಭಾವಗಳನ್ನು ಕದ್ದು ನೋಡುವ ಆಸೆ ಹೆಚ್ಚಾಗಿದೆ. ಬುದ್ಧಿ, ಮನಸ್ಸು ಎಲ್ಲವೂ ನೀನೇ ಬೇಕೆನ್ನುತ್ತಿದೆ.
ಅಂದು ನಾ ನಿನ್ನ ಮುಂದೆ ಸೋಲದೇ ಇದ್ದರೂ, ಇಂದು ನಿನ್ನ ಕಾಳಜಿ, ಪ್ರೀತಿಗೆ ನನ್ನ ಮನ ಸೋತು ಹೋಗಿದೆ ಕಣೋ. ಇನ್ನು ಬಚ್ಚಿಡಲಾರೆ ನನ್ನೆದೆಯ ಪ್ರೀತಿಯನು, ಒಮ್ಮೆ ಹೇಳಿಬಿಡಲೇ ನನ್ನೆಲ್ಲಾ ಆಸೆಗಳನ್ನು, ನನಗಾಗಿ ತುಡಿಯುವ ಮನಸನ್ನು ಇನ್ನಷ್ಟು ಕಾಯಿಸಲಾರೆ. ನಿನ್ನ ಮುಂದೆ ಮತ್ತೊಮ್ಮೆ ಸೋತು, ನಿನ್ನ ಪ್ರೀತಿಗೆ ಒಡತಿಯಾಗಿ ಮೆರೆಯುವ ಕನಸಾ ನನಸಾಗಿಸುವೆಯಾ? ಆಕಾಶದೆತ್ತರಕ್ಕೆ ಕೂಗಿ ಹೇಳುವ ಆಸೆಯಾಗಿದೆ. ನನ್ನೆಲ್ಲಾ ನಿರ್ಧಾರಗಳಿಗೆ ಒಡೆಯನಾಗಿ ನೀ ಬರುವೆಯಾ? ಸೋತು ಗೆದ್ದಿರುವ ಅನುಭವವ ನೀ ತರುವೆಯಾ? 

ನನಗರಿವಿಲ್ಲದಂತೆಯೇ ನಿನ್ನ ಪ್ರೀತಿಯಲ್ಲಿ ಬಂಧಿಯಾಗಿಹೆನು ನಾ. ಅದು ತಿಳಿದರೂ ನೀ ಮೌನವಾಗಿರುವುದಾ ನಾ ಅರಿತೆನೋ ಗೆಳಯ. ನಿನ್ನ ಕಣ್ಣ ಮುಚ್ಚಾಲೆ ಆಟವ ಬಯಲಿಗೆಳೆವ ಕಾತುರದಲ್ಲಿ ನಾನಿರುವೆ. ಹೆಸರಿಲ್ಲದ ಈ ಚಂದ ನಮ್ಮ ಅನುಬಂಧಕ್ಕೆ ಹೊಸದೊಂದು ಹೆಸರಿಡುವ ಆಸೆ ಹುಟ್ಟಿದೆ. ನಿನ್ನಾಸೆಗಳನ್ನು ಈಡೇರಿಸಲು ತುಡಿಯುತಿದೆ ನನ್ನೀ ಮನಸ್ಸು. ಸ್ನೇಹಕ್ಕೆ ಪರದೆ ಎಳೆದು, ಪ್ರೀತಿಯ ಪುಟ ತೆರಯಲು ಬಯಸಿ, ನೀನಿತ್ತ ಮುತ್ತಿನ ಬೇಡಿಕೆಯ ಪೂರೈಸಲು ಕಾದಿರುವೆ ಮನಸೇ...
                       

ಬಿನ್ನಾಣಗಿತ್ತಿ ನನ್ನಾಕೆ


ನನ್ನವಳ ನಡು ಚಂದ, ನನ್ನವಳ ನಡೆ ಚಂದ, ನನ್ನವಳ ನಗು ಚಂದವೋ.  ನನಗೋ ಅವಳ ನಗುಮುಖ ಕಾಣುವುದೆಂದರೆ ಎಲ್ಲಿಲ್ಲದ ಸಂತೋಷ. ಯಾಕೆಂದರೆ ದಿನವಿಡೀ ಆಫೀಸಿನಲ್ಲಿ ಕೈತುಂಬಾ ಸಂಬಳ ನೀಡದ ಕೆಲಸ ಮಾಡಿ, ತಲೆತುಂಬಾ ಸಮಸ್ಯೆಗಳನ್ನು ತುಂಬಿಕೊಂಡು ಮನೆಗೆ ಹಿಂತಿರುಗುವಾಗ ಮನೆಯ ಗೇಟಿನ ಬಳಿ ನಗುಮುಖ ಹೊತ್ತುಕೊಂಡು ನನಗಾಗಿಯೇ ಕಾದು ಕುಳಿತಿರುವವಳು ಮುದ್ದಿ ಹುಡುಗಿ ನನ್ನಾಕೆ. ಸೊಂಟ ಬಳುಕಿಸುತ ಮುಂದೆ ನಡೆವ ನನ್ನವಳ ಪುಟ್ಟ ಮಗುವಿನಂತ ನಾ ಹಿಂಬಾಲಿಸುವೆ. 
ಆರಾಮಾಗಿ ಸೋಫಾದಲ್ಲಿ ಕುಳಿತು ಅಮ್ಮ ಕೊಡುವ ಬಿಸಿ ಬಿಸಿ ಕಾಫಿಯನ್ನು ಸವಿಯುತ್ತಾ ಕುಳಿತರೆ ಸಾಕು, ಆಗ ನೋಡಿ ನನ್ನವಳ ವೈಯ್ಯಾರ. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಮೆಲ್ಲಗೆ ಪಕ್ಕಕ್ಕೆ ಬಂದು ಕೂರುವಳು. ಕುಳಿತರೆ ಸಾಕೆ, ಸುಮ್ಮನೆ ಕೂರುವುದು ಅವಳಿಂದಾಗದ ಕೆಲಸ. ಆಗ ಶುರು ಮಾಡುವಳು ನನ್ನ ಮೈಗೆ ಅವಳ ಮೈ ಸವರಿಕೊಂಡು ಹತ್ತಿರ ಹತ್ತಿರ ಬಂದು ಮಡಿಲೇರುವ ಕೆಲಸ. ನನಗೂ ಆಕೆಯ ಮೈಯ ಸ್ಪರ್ಶ ಬೆಚ್ಚನೆಯ ಅನುಭವ. ಅವಳಿಗೂ ನನ್ನ ಮಡಿಲೆಂದರೆ ಬಲು ಪ್ರಿಯ. ಮಡಿಲು ಸೇರಿದೊಡನೆ ಒಂದು ಗಟ್ಟಿಯ ನಿದ್ದೆ ಅವಳದು. ಆ ನಿದ್ದೆಗಣ್ಣಲ್ಲೂ ತುಟಿಯಂಚಲ್ಲಿ ಸಣ್ಣನೆಯ ನಗು. ಆ ನಗುವೇ ನಮ್ಮೆಲ್ಲರನ್ನು ಮೂಕರನ್ನಾಗಿಸುವುದು. ಮನೆತುಂಬಾ ಅವಳದೇ ಹೆಜ್ಜೆ ಶಬ್ಧ. ಅವಳು ಬಂದ ಮೇಲೆಯೇ ಮನೆಯಲ್ಲಿ ಏನೋ ಒಂದು ಹುರುಪು. ಯಾಕೆಂದರೆ ಮನೆಯಲ್ಲಿ ಅಮ್ಮ ಒಬ್ಬರೇ ಇರುತ್ತಿದ್ದಾಗ ಅವಳಿಗೆ ಜೊತೆ ಯಾರೂ ಇರುತ್ತಿರಲಿಲ್ಲ. ಈಗ ನನ್ನವಳು ಆ ಕೊರತೆಯನ್ನು ನೀಗಿಸಿರುವಳು. 

ಅಮ್ಮನಿಗೂ ಅವಳೆಂದರೆ ಅಚ್ಚುಮೆಚ್ಚು. ಮನೆತುಂಬಾ ನನ್ನಾಕೆಯ ಚೊಚ್ಚಲಹೆರಿಗೆಯ ಸಂಭ್ರಮ. ಎಲ್ಲರೂ ನಿರೀಕ್ಷಿಸುತ್ತಿದ್ದಂತೆ ಒಂದು ಮುಂಜಾನೆ ಬಣ್ಣದಲ್ಲೂ ತನ್ನಂತೆ ಇರುವ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು. ಮನೆಯವರೆಲ್ಲರಲ್ಲೂ ಸಂತೋಷ ಮನೆಮಾಡಿತ್ತು.  ಬಣ್ಣದಲ್ಲಿ ಬಿಳಿಯಾಗಿರುವ ಅವಳದು ಮನಸ್ಸೂ ಕೂಡ ಅಷ್ಟೇ ಶುಭ್ರ. ಅವಳ ಒಳ್ಳೆ ಮನಸಿಗೆ ಅಕ್ಕ ಪಕ್ಕದ ಮನೆಯವರೂ ಹೊಗಳುವವರೇ. ಅವಳನ್ನು ಪಡೆದ ನಾವು ಪುಣ್ಯವಂತರು. ಒಂದು ದಿನವೂ ನನ್ನ ಮೇಲೆ ರೇಗಿದವಳಲ್ಲ. ಒಂದು ಪಕ್ಷ ನಾನು ಕೋಪಿಸಿಕೊಂಡು ಬೈದರೂ ಅವಳು ತಿರುಗಿ ಬೈದವಳಲ್ಲ. ಹಾಲಿನಂತ ಮನಸ್ಸು ಅವಳದು. ಅಷ್ಟೇ ಅಲ್ಲ ಅವಳಿಗೆ ಹಾಲೆಂದರೆ ಅಚ್ಚುಮೆಚ್ಚು. ಅದಕ್ಕೇ ಅವಳು, ಅಮ್ಮ ಹಾಲನ್ನು ಎಲ್ಲೇ ಬಚ್ಚಿಟ್ಟರೂ ಮಿಯಾಂ ಎಂದು ಕಣ್ಣು ಮುಚ್ಚಿ ಚಪ್ಪರಿಸಿಯೇ ಬಿಡುವಳು.

Tuesday 14 February 2017

                                                    ಅನುರಾಗದಲೆಗಳ ಓಲೆ...


 ಆಸೆ ಹೊತ್ತು ತರುವ ಜೇನು ನೀನಾದರೆ, ಮಧುವ ನೀಡೋ ಹೂವು ನಾನಾಗಿರಬೇಕು. ಅದರ ಹೊರತಾಗಿ ನೀ ಬೇರೆ ಹೂವಿನತ್ತ ಲಗ್ಗೆಯಿಟ್ಟೆಯೆಂದರೆ ಎಲ್ಲಿಲ್ಲದ ಕೋಪ ನನಗೆ. ನೀ ನನ್ನವನಾಗಿಯೇ ಇರಬೇಕು ಎನ್ನುವ ಸ್ವಾರ್ಥ ಹುಟ್ಟಿಕೊಂಡಿದೆ. ಇದನ್ನು ನೀ ಅಸೂಯೆ ಎಂದರೂ ಬೇಜಾರಿಲ್ಲ. ಯಾಕೆ ಹೀಗಾಗ್ತಿದೆ ಎನ್ನುವುದೇ ಗೊತ್ತಿಲ್ಲ. ಆದರೂ ಒಳಮನಸ್ಸಲ್ಲಿ ಬಲವಾದ ಒಂದು ಕಾರಣವೊಂದಿದೆ ಎನ್ನುವುದಂತು ಸತ್ಯ. ಬೇಡ ಬೇಡವೆಂದರೂ ಎದೆಯೊಳಗೆ ಬಚ್ಚಿಟ್ಟ ಅಲೆ, ದಡಕ್ಕಪ್ಪಳಿಸಿದಂತೆ, ಮನದೊಳಗೆ ಭೋರ್ಗರೆದು ಹೃದಯದ ದಡಕ್ಕಪ್ಪಳಿಸಲು ಹವಣಿಸುತ್ತಲೇ ಇದೆ. ಎಲ್ಲಿ ತೆರೆಗಳು ಮನದ ಭಾವನೆಗಳನ್ನೆಲ್ಲ ದಡಕ್ಕೆ ತಂದೆಸೆಯುತ್ತವೋ ಎನ್ನುವ ಭಯ ಕಾಡುತ್ತಿದೆ. ಆದರೂ ಆ ಭಯದ ಜೊತೆ, ಸಾಗರದಲೆಗಳೇ ಆ ಕೆಲಸ ಮಾಡಿಬಿಟ್ಟರೇ ಚೆನ್ನಾಗಿತ್ತು ಎನಿಸಿತ್ತು. ಯಾಕೆ ಗೊತ್ತಾ? ಆ ಭಾವನೆಗಳನ್ನು ನಿರಾಳವಾಗಿ ನಿನ್ನ ಮುಂದೆ ಬಿಚ್ಚಿಡುವ ಧೈರ್ಯ ನನ್ನಲಿಲ್ಲ. ನಿನಗನಿಸಬಹುದು ಅಷ್ಟೊಂದಿದ್ದ ಧೈರ್ಯ ಈಗೆಲ್ಲಿ ಹೋಯ್ತು ಎಂದು. ಆದರೆ ಈಗ ಧೈರ್ಯ ಎನ್ನುವ ಜಾಗವನ್ನು ನಾಚಿಕೆಯೊಂದು ಆಕ್ರಮಿಸಿದಂತಿದೆ. ಹಾಗಾಗಿ ಈ ಅಕ್ಷರಗಳನ್ನು ಪೋಣಿಸಿ ನಿನಗೆ ಪ್ರೇಮ ಮಾಲೆ ಹಾಕುವ ಕೆಲಸ ನನ್ನ ಕೈಗೊದಗಿ ಬಂದಿದೆ ಕಣೋ. ಆ ಭಾಗ್ಯವ ನೆನೆದು ಇದೋ ನೀ ಓದುತ್ತಿರುವ ನನ್ನ ಪ್ರೇಮಪತ್ರ ನಿನ್ನ ಮುಂದಿದೆ.
ಆದರೂ ನಿನ್ನಷ್ಟು ಧೈರ್ಯವಂತೆ ನಾನಲ್ಲ. ಸ್ನೇಹಿತರಾಗಿ ಜೊತೆಗೇ ಇದ್ದು, ಮಾತು, ಹರಟೆ, ಮೋಜು, ಮಸ್ತಿ, ಜಗಳ ಮತ್ತೆ ಸಮಾಧಾನಗಳಲ್ಲಿ ಬಂಧ ಬೆಸೆದುಕೊಂಡ ನಮ್ಮಲ್ಲಿ ಪ್ರೀತಿ ಎಂಬ ಎರಡಕ್ಷರ ದಾಳಿ ಇಡುತ್ತೇ ಎನ್ನುವ ಕಲ್ಪನೆಯೇ ಇರಲಿಲ್ಲ ಕಣೋ. ಹಠಾತ್ತಾಗಿ ಒಂದು ದಿನ ನೀನು ಬಂದು “ ನಾನಿನ್ನ ಪ್ರೀತಿಸ್ತಿದೀನಿ ಕಣೇ, ನಿನ್ನ ಕಂಡ್ರೆ ನಂಗೆ ತುಂಬಾ ಇಷ್ಟ. ನೀನು ನನ್ನ ಪ್ರೀತಿಸ್ತೀಯಾ?”  ಎಂದಾಗ ನನ್ನ ಸಿಟ್ಟು ನೆತ್ತಿಗೇರಿತ್ತು ನೆನಪಿದ್ಯಾ? ನೀನು ಅದನ್ನೆಲ್ಲಾ ಮರೆಯಲ್ಲಾ ಅನ್ನೋದು ನನಗೊತ್ತಿದೆ.
      ನೀನು ನಿನ್ನ ಬಂಡು ಧೈರ್ಯದಿಂದ ನಿನ್ನ ಮನಸಲ್ಲಿರೋದನ್ನೆಲ್ಲಾ ಒಂದೇ ಉಸಿರಲ್ಲಿ ಹೇಳಿಬಿಟ್ಟೆ. ಆಗ ನಿನ್ನ ಮೇಲೆ ನನಗೆ ಉಕ್ಕಿ ಬಂದ ಕೋಪ ಅಸ್ಟಿಷ್ಟಲ್ಲ. ಸ್ನೇಹ ಎನ್ನುವ ಸಲುಗೆಯನ್ನು ದುರುಪಯೋಗ ಪಡಿಸಿಕೊಂಡೆ ನೀನು. ನಾನಿನ್ನು ನಿನ್ನ ಜೊತೆ ಸ್ನೇಹಿತೆಯಾಗಿ ಹೇಗೇ ಮಾತಾಡೋದು ಎನ್ನುವ ಚಿಂತೆ ಕಾಡಿತ್ತು. ನಿನ್ನ ಪ್ರೀತಿಯನ್ನು ತ್ಯಜಿಸಿದ ಮಾತ್ರಕೆ ನಿನ್ನ ಸ್ನೇಹವನ್ನು ಕಳೆದುಕೊಳ್ಳುವ ಮನಸ್ಸು ನನ್ನದಾಗಿರಲಿಲ್ಲ. ಅದರಂತೆಯೇ ನೀನು ಸಲೀಸಾಗಿ ಆ ಅನುಮಾನಕ್ಕೆ ಪರದೆ ಎಳೆದಿದ್ದೆ. ನಾನು ನಿನ್ನನ್ನು ತಿರಸ್ಕರಿಸಿದಕ್ಕಾಗಿ ನನ್ನ ಮೇಲೆ ಕೋಪವೇ ಮಾಡಿಕೊಳ್ಳದೇ ಮತ್ತೆ ಅದೇ ಸ್ನೇಹಿತನ ಸಲುಗೆಯಿಂದ ನನ್ನಲ್ಲಿ ಮಾತು ಮುಂದುವರಿಸಿದ್ದೆ.
      ಪ್ರೀತಿಯನ್ನು ಬದಿಗೊತ್ತಿ, ಸ್ನೇಹಪಲ್ಲಕ್ಕಿಯಲ್ಲೇ ಸಾಗುತ್ತಿದ್ದೇವೆ. ಆದರೆ ಅದು ಶಾಂತವಾಗಿದ್ದ ನನ್ನೆದೆಯ ಕೂಪದೊಳಗೆ ಕಲ್ಲೆಸೆದು ತರಂಗಗಳನ್ನು ಸೃಷ್ಟಿಸಿದಂತಾಗಿದೆ. ತರಂಗಗಳು ದಡ ತಟ್ಟುತ್ತಿದ್ದಂತೆ, ನಿನ್ನ ಮೇಲಿನ ಅಭಿಪ್ರಾಯಗಳಲ್ಲೇನೋ ಬದಲಾವಣೆಯಾದಂತೆ ಭಾವ. ಪ್ರತಿದಿನವೂ ಏನೋ ಹೊಸತನ. ನಿನ್ನ ಸಂದೇಶಕ್ಕಾಗಿಯೇ ಚರವಾಣಿಯನ್ನು ಮತ್ತೆ ಮತ್ತೆ ಪರೀಕ್ಷಿಸುವ ಹುಚ್ಚು ಮನಸ್ಸು ನನ್ನದಾಗಿಬಿಟ್ಟಿದೆ. ಸಂದೇಶಗಳ ಸಂಖ್ಯೆ ಎಣಿಸೋ ಹುಚ್ಚು ಆಸೆ ಬೇರೇ. ಇದುವರೆಗೆ ಇಲ್ಲದ ಉತ್ಸಾಹ ನನ್ನಲ್ಲೀಗ. ಯಾಕೋ ಈ ತರಾ?
      ಪ್ರೀತಿ ವಿಷಯದಲ್ಲಿ ನೀನು ನಿನ್ನಷ್ಟಕ್ಕೆ ಮೌನದಿಂದಿರುವುದೇ ಈ ಎಲ್ಲಾ ನನ್ನ ಬದಲಾವಣೆಗಳಿಗೆ ಕಾರಣ ಎನಿಸುತಿದೆ. ಈ ನಿನ್ನ ಪ್ರೀತಿಯೆಂಬ ತಣ್ಣನೆಯ ಮೌನ ಗಾಳಿ, ನನ್ನೆದೆಯ ಬಯಲಲ್ಲಿ ಪ್ರೀತಿ ಮೊಳಕೆಯ ತಳಿರಾಗಿಸಿದೆ ಕಣೋ. ನಗುವಿನಲೆಗಳಿಗೆ ಮೇಲ್ಪುಟಿಯೋ ಮುತ್ತು ಹನಿಗಳಂತೆ, ನಾನು ಸಂತೋಷದಲ್ಲಿರೋವಾಗ ಆ ಸಂತೋಷವನ್ನು ಮತ್ತಷ್ಟು ಹೆಚ್ಚು ಮಾಡೋನು ನೀನಾಗ್ಬೇಕು, ಹುಣ್ಣಿಮೆ ಬೆಳಕಿಗೆ ಹಾತೊರೆಯೋ ಸಾಗರದಲೆಗಳಂತೆ, ನನ್ನ ಪ್ರೀತಿಗೆ ಹಂಬಲಿಸೋ ಪುಟ್ಟ ಜೀವ ನೀನಾಗ್ಬೇಕು, ನಾವು ಭೇಟಿಯಾಗುವ ಪ್ರತಿ ಸಲನೂ, ಕೊನೇ ಕ್ಷಣದವರೆಗೂ ನಾನು ನಿನ್ನ ಜೊತೆ ಜೊತೆಯಾಗಿ ಇರ್ತೀನಿ ಎನ್ನುವ ಭರವಸೆ ತುಂಬುವ, ಸಿಹಿ ಮುತ್ತು ಮತ್ತು ಬೆಚ್ಚಗಿನ ಅಪ್ಪುಗೆ ನಿನ್ನಿಂದ ಬೇಕು, ಚಿಂತೆ ಮರೆಯೋಕೆ ನಾ ಒರಗೋ ಹೆಗಲು ನಿಂದಾಗ್ಬೇಕು, ಕೈಗೆ ಕೈ ಬೆಸೆದು ಸಾಗರದಂಡೆಯ ಮರಳಿನ ಮೇಲೆ ತುಸು ದೂರ ಹೆಜ್ಜೆಗೆ ಹೆಜ್ಜೆಗಳನ್ನು ಸೇರಿಸೋ ಆಸೆಗಳಿಗೆ ಒಡತಿ ನಾನಾಗಿ ಬಿಟ್ಟದ್ದೀನಿ ಕಣೋ. ಇದಂತು ಸತ್ಯ. ನನ್ನ ಮನಸ್ಸು ನನ್ನಲ್ಲಿಲ್ಲ ಕಣೋ. ನನ್ನಲ್ಲಿರೋ ಅಹಂನಿಂದಲೋ, ಅಥವಾ ಇಲ್ಲದ ಧೈರ್ಯದಿಂದಲೋ ಮನಸಲ್ಲಿ ಹುಟ್ಟಿರುವ ನಿನ್ನ ಪ್ರೇಮ ನಿವೇದನೆಗೆ ನನ್ನ ಉತ್ತರವೋ, ಅಥವಾ ನನಗೆ ನಿನ್ನ ಮೇಲೆ ಅಂಕುರಿಸಿರುವ ಪ್ರೀತಿಯನ್ನೋ, ಉಸಿರು ಬಿಗಿ ಹಿಡಿದಾದರೂ ಹೇಳೋಣವೆಂದರೂ ಸಾಧ್ಯವಾಗುತ್ತಿಲ್ಲ ಪುಟ್ಟಾ. ಮುಖಾಮುಖಿಯಾಗಿ ಪ್ರೀತಿ ನಿವೇದನೆ ನನ್ನಿಂದ ಅಸಾಧ್ಯದ ಮಾತು. ಅದಕ್ಕಾಗಿ ಈ ಪುಟ್ಟ ಪತ್ರ. ಇಷ್ಟರವರೆಗೆ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದ ಪ್ರೀತಿ, ಆಸೆಗಳನ್ನೆಲ್ಲಾ ಈ ಪತ್ರದೊಳಗಿಟ್ಟು ಕಳಿಸಿದ್ದೀನಿ ಕಣೋ. ನಾನು ಕೊಟ್ಟ ಅದೇ ಉತ್ತರ ನಿನ್ನಿಂದ ಇರಲಾರದು ಎನ್ನುವ ಭರವಸೆಯೊಂದಿಗೆ, ಬಿಳಿ ಹಾಳೆಯಲ್ಲಿ, ನನ್ನೆಲ್ಲಾ ಪ್ರೀತಿಯನ್ನು, ಅಕ್ಷರದ ರೂಪದಲ್ಲಿ ನಿನ್ನ ಮುಂದಿಟ್ಟಿದ್ದೀನಿ.
ನಿನ್ನ ಉತ್ತರಕ್ಕಾಗಿ ಹವಣಿಸುತ್ತಿರುವ,
ಹಾತೊರೆಯುವ ನಿನ್ನ, ಪೆದ್ದು ಮನಸ್ಸಿನ,
ತರ್ಲೆ ಹುಡುಗಿ