Wednesday 2 August 2017

ಬಲು ರುಚಿಕರ ಕುಂಟಾಲ ಹಣ್ಣು


          ವರ್ಷದಲ್ಲಿ ಒಂದೇ ಬಾರಿ ಹಣ್ಣು ಬಿಡುವ ಇದು, ಮಳೆಗಾಲವನ್ನು ತನ್ನ ಹಣ್ಣಿನ ಪರ್ವಕಾಲಕ್ಕೆ ಆಯ್ಕೆ ಮಾಡಿಕೊಂಡಿದೆ. ಎಲ್ಲರಿಗೂ ಬಲು ಇಷ್ಟದ ಹಣ್ಣು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗಂತು ಅತಿ ಪ್ರಿಯವಾದ ಹಣ್ಣು ಈ ಕುಂಟಾಲ ಹಣ್ಣು. ಒಥಿಡಿಣಚಿಛಿeಚಿe ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು Syzygium caryophyllatum L.  ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುವ ಇದು, ಕೇರಳ, ಕರ್ನಾಟಕ, ತಮಿಳುನಾಡಿನ ಘಟ್ಟ ಪ್ರದೇಶಗಳಲ್ಲಿ ಕಾಡಿನಂತೆ ಬೆಳೆದು ನಿಂತಿವೆ. ಆದರೆ ಇದರ ತವರೂರು ಶ್ರೀಲಂಕಾದ ಪಶ್ಚಿಮ ಘಟ್ಟದ ಒಳ ಹೊರ ತಪ್ಪಲು, ಜಾವ, ಬರ್ನಿಯಾ ದ್ವೀಪಗಳು. ಪೊದೆಯಂತೆ ಬೆಳೆದು ಕಾಡನ್ನೇ ಸೃಷ್ಟಿಸುವ ಕುಂಟಾಲ ಗಿಡ ಕುರುಚಲು ಸಸ್ಯಗಳ ಜಾತಿಗೆ ಸೇರಿದೆ. ಇದನ್ನು ಕನ್ನಡದಲ್ಲಿ ಕುಂಟಾಂಗಿಲ, ಕುಂಟು ನೇರಳೆ, ನಾಯಿನೇರಳೆ, ಸಂಸ್ಕøತದಲ್ಲಿ ಭೂಮಿಜಂಬು, ತುಳುವಲ್ಲಿ ಕುಂಟಲ ಎಂದು ಕರೆಯಲಾಗುತ್ತದೆ.
          ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ ಋತು ಪ್ರಾರಂಭ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಗಿಡ ಮರಗಳೆಲ್ಲವೂ ಹೂವಿನಿಂದ ಕಂಗೊಳಿಸುವ ದೃಶ್ಯ. ಅಂದಿನಿಂದ ಪಕ್ಷಿಗಳ ಜೊತೆಗೂಡಿ ಮಕ್ಕಳೂ ಕೂಡ ಹೂ ಕಾಯಾಗಿ, ಕಾಯಿ ಹಣ್ಣಾಗಲು ದಿನ ಲೆಕ್ಕ ಹಾಕಲು ಶುರು ಮಾಡುತ್ತಾರೆ. ಯಾಕೆಂದರೆ ಇದರ ಹಣ್ಣುಗಳು ಸವಿಯಲು ಅತ್ಯಂತ ರುಚಿಕರ ಮತ್ತು ಅದನ್ನು ತಿಂದೊಡನೆ ತಿಂದವರ ಬಾಯಿಯೂ ನೇರಳೆ ಮಯವಾಗಿಬಿಡುತ್ತದೆ. ಮಕ್ಕಳಿಗಂತು ನಾಲಗೆಯ ಬಣ್ಣವನ್ನು ಕಡುವಾಗಿಸಿಕೊಳ್ಳುವಲ್ಲಿ ಪೈಪೋಟಿ.
          ಕುಂಟಾಲ ಮರಗಳು ಸಣ್ಣ ಪೊದೆಯಾಗಿಯೂ ಹಬ್ಬಿಕೊಳ್ಳುತ್ತವೆ. ಕೆಲವೊಂದು ಮರವಾಗಿ ಎತ್ತರಕ್ಕೂ ಬೆಳೆದು ನಿಲ್ಲುತ್ತವೆ. ಕುಂಟಾಲ ಮರದ ಎಳೆ ಚಿಗುರು ತಿನ್ನಲು ರುಚಿಕರವೂ ಹೌದು. ಜೊತೆಗೆ ಪರಿಮಳ ಭರಿತವೂ ಹೌದು. ಬಾಲ್ಯದಲ್ಲಿ ಅಮ್ಮ ಕುಂಟು ನೇರಳೆಯ ಎಳೆಚಿಗುರಿನಿಂದ ಜೀರಿಗೆ, ಹಾಲು ಸೇರಿಸಿ ಆಹಾ! ಘಮ್ಮೆನ್ನುವ ರುಚಿಯಾದ ಕಾಫಿ ಮಾಡಿಕೊಡುತ್ತಿದ್ದ ನೆನಪು. ಅದು ಮಾತ್ರವಲ್ಲದೆ ಶಾಲೆಯಿಂದ ಮನೆಗೆ ಹೋಗಿ ಬರುವ ದಾರಿಯಲ್ಲಿ ಸಿಗುವ ಕುಂಟು ನೇರಳೆಯ ಚಿಗುರನ್ನು ಗೆಳಯರೆಲ್ಲಾ ಸೇರಿ ಬಾಯೊಳಗೆ ಹಾಕಿ ಜಗಿಯುತ್ತಾ ಬರುತ್ತಿದ್ದೆವು.
          ಮರವು ಗೊಂಚಲಾಗಿ ಬಿಳಿ ಬಣ್ಣದ ಹೂಗಳನ್ನು ಬಿಟ್ಟು, ಸುವಾಸನೆ ರಹಿತವಾಗಿವೆ. ಹಸಿರಾಗಿರುವ ಕಾಯಿಗಳಿಗಿಂತ, ಕಣ್ಣು ಕುಕ್ಕುವಂತೆ ಕಡು ನೇರಳೆ ಬಣ್ಣದಿಂದ ಕಂಗೊಳಿಸುವ ಹಣ್ಣನ್ನು ಗೊಂಚಲು ಗೊಂಚಲಾಗಿ ನೋಡುವಾಗ, ಬಾಯಿಯಲ್ಲಿ ನೀರೂರಿ, ಒಮ್ಮೆಲೆ ಗೊಂಚಲಿನ ಎಲ್ಲಾ ಹಣ್ಣುಗಳನ್ನು ಬಾಯೊಳಗೆ ಹಾಕಿ ಬಿಡುವ ಮನಸ್ಸಂತು ಖಂಡಿತಾ ಆಗುವುದು. ವಯಸ್ಸಿನ ಅರಿವನ್ನೂ ಮರೆಸಿಬಿಡುತ್ತವೆ. ಸಣ್ಣ ಸಣ್ಣ ಹಣ್ಣುಗಳಾಗಿರುವುದರಿಂದ ಏಕಕಾಲದಲ್ಲಿ ಬಾಯಿ ತುಂಬಾ ಸುಮಾರು ಹತ್ತು ಹಣ್ಣುಗಳನ್ನು ಹಾಕಿಕೊಂಡು ರುಚಿ ಸವಿಯಬಹುದು.
          ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಕಾಯಿಗಳು ಹಣ್ಣಾಗಲು ಶುರುವಾಗುತ್ತವೆ. ಮಳೆ ನೀರು ಬಿದ್ದ ಮೇಲೆ ಒಮ್ಮೆಲೆ ಎಲ್ಲಾ ಕಾಯಿಗಳು ಹಣ್ಣಾಗತೊಡಗುತ್ತವೆ. ಆಗ ನೋಡಬೇಕು, ಮರದ ತುಂಬಾ ಕಪ್ಪು ಮಣಿ ಪೋಣಿಸಿದಂತೆ, ಮಣಿ ಮೇಲೆ ಮಳೆ ಹನಿ ನಿಂತು ಸುಂದರವಾಗಿ ಮಿನುಗುವ ಸೊಬಗು. ಮಳೆ ಬೀಳುವ ಮೊದಲು ಬಲಿತ ಹಣ್ಣುಗಳು ಬಹಳ ರುಚಿಕರ. ಮಳೆ ನೀರು ಬಿದ್ದ ಮೇಲೆ ಹಣ್ಣುಗಳೆಲ್ಲವೂ ಮಳೆ ನೀರು ತುಂಬಿ, ಉಬ್ಬಿ ನೋಡಲು ಗುಂಡು ಗುಂಡಾಗಿ ಹೊಳೆಯುತ್ತಾ, ಹೊಳೆಯುತ್ತಾ ಕಣ್ಮನಗಳನ್ನು ಸೆಳೆಯುತ್ತವೆ. ಆದರೆ ರುಚಿ ಕಳೆದುಕೊಂಡು ನೀರು ತುಂಬಿ ಸಪ್ಪೆಯಾಗಿರುತ್ತವೆ. ಆದರೆ ಪೂರ್ತಿ ರುಚಿ ಕಳೆದುಕೊಳ್ಳುವುದಿಲ್ಲ. ಎಲ್ಲಾ ಮರದ ಹಣ್ಣುಗಳು ಒಂದೇ ರೀತಿಯಾದ ರುಚಿ ಹೊಂದಿರುದಿಲ್ಲ, ಕೆಲವು ಸಿಹಿಯಾದರೆ, ಕೆಲವು ಹುಳಿಯಾಗಿರುತ್ತವೆ. ಇನ್ನು ಕೆಲವು ರಸಭರಿತವಾಗಿರುತ್ತವೆ. ಮಳೆ ನೀರು ತುಂಬಿದ ಕುಂಟಾಲ ಹಣ್ಣು ತಿನ್ನು ಎನ್ನುತ್ತಿರುತ್ತವೆ, ತಿಂದರೆ ಶೀತ, ಕೆಮ್ಮು, ಗಂಟಲು ನೋವು ನಮ್ಮ ಬೆನ್ನು ಹಿಡಿಯುವುದು. ಸ್ವಲ್ಪ ತಿನ್ನುವುದರಲ್ಲಿ ಯಾವುದೇ ದೋಷವಿಲ್ಲ.
                    ತಿರುಳಿನಿಂದ ಕೂಡಿರುವ ಈ ಕುಂಟಾಲ ಹಣ್ಣಿನೊಳಗೆ ಸಣ್ಣದೊಂದು ಬೀಜ. ಆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅದರಿಂದಲೂ ಕಾಫಿ ಮಾಡಿ ಕುಡಿಯಬಹುದು. ಚಿಗುರೆಲೆಯಿಂದ ಜೀರಿಗೆ ಸೇರಿಸಿ ಹಾಲು ಹಾಕಿ ಮಾಡಿದ ಕಾಫಿಯ ಮುಂದೆ ಉಳಿದೆಲ್ಲವೂ ಶೂನ್ಯ. ಹಿಂದೆ ಹಳ್ಳಿಯವರು ನಿರ್ವಿಷವಾಗಿ ದೊರೆಯುತ್ತಿದ್ದ ಈ ಕುಂಟಾಲದ ಚಿಗುರಿನಿಂಲೇ ಕಾಫಿ ಮಾಡಿ ಕುಡಿಯುತ್ತಿದ್ದರು. ಆರೋಗ್ಯಕರವೂ ಆಗಿತ್ತು. ಇಂದಿಗೂ ಹಳ್ಳಿ ಭಾಗದಲ್ಲಿ ಈ ರೀತಿಯ ಕಾಫಿ ಮಾಡಿ ಕುಡಿಯುವವರಿದ್ದಾರೆ. ಕುಂಟಾಲ ಚಿಗುರೆಲೆಯಿಂದ ಕಷಾಯ ಮಾಡಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ. ವಸಡು ಗಟ್ಟಿಯಾಗುತ್ತದೆ. ಜೊತೆಗೆ ಬಾಯಿ ವಾಸನೆಯನ್ನು ಹೋಗಲಾಡಿಸುವ ಉತ್ತಮ, ರಾಸಾಯನಿಕ ಮುಕ್ತ ಮೌತ್ ಫ್ರೆಶ್‍ನರ್ ಕೂಡ, ಎಂಬುದು ಹಳ್ಳಿಗರ ನಂಬಿಕೆ. ಇದರ ಚಿಗುರಿನಿಂದ ಮಾಡಿದ ಚಟ್ನಿಯು ಬಲು ರುಚಿಕರ. ಸಣ್ಣ ಮಕ್ಕಳ ನಾಲಗೆಯಿಂದ ಅಗ್ರ ನಿವಾರಿಸಲು ಕೇಪುಳ, ನೆಕ್ಕರೆ, ಮತ್ತು ಇತರ ಚಿಗುರುಗಳ ಜೊತೆಗೆ ಕುಂಟಾಲದ ಚಿಗುರನ್ನೂ ಸೇರಿಸಿ ಜಜ್ಜಿ ರಸ ತೆಗೆದು ಶುದ್ಧ ಬಟ್ಟೆಗೆ ರಸವನ್ನು ಹಾಕಿ ನಾಲಗೆಯನ್ನು ಉಜ್ಜುತ್ತಾರೆ. ಕಫದೋಷಕ್ಕೂ ಇದನ್ನು ಉಪಯೋಗಿಸುತ್ತಾರೆ. ದೇಹದಿಂದ ನಂಜಿನಂಶವನ್ನು ಹೋಗಲಾಡಿಸುತ್ತದೆ. ಇದರ ರೆಂಬೆಗಳನ್ನು ಬಳ್ಳಿ ತರಕಾರಿಗಳಿಗೆ ಆಧಾರಗಳಾಗಿ ಬಳಸಲಾಗುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಾದಾಗ ಇದರ ಚಿಗುರೆಲೆಯ ಕಷಾಯವೇ ಔಷಧಿಯಾಗಿತ್ತು ಎನ್ನುತ್ತಾರೆ ಹಿರಿಯರು.
          ಕಾಡುಗಳೇ ನಾಶವಾಗುತ್ತಿರುವ ಈ ಹೊತ್ತಲ್ಲಿ, ಹೆಚ್ಚಿನವರಿಗೆ ಇದು ಅಪರೂಪವಾಗಿ ಬಿಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಪೇಟೆ ಹಣ್ಣುಗಳ ಮಧ್ಯೆ ಈ ಕಾಡು ಹಣ್ಣುಗಳಿಗೆ ಬೆಲೆಯೇ ಇಲ್ಲವಾಗಿದೆ. ಮತ್ತು ಅಪರಿಚಿತವಾಗಿವೆ.

No comments:

Post a Comment