Wednesday 2 August 2017

ಬಿದಿರಿನ ಕುಡಿ ಕಣಿಲೆ

          ಕೃಷ್ಣನ ಕೈಯ್ಯಲ್ಲಿರುವ ಕೊಳಲಿನಿಂದ ಹಿಡಿದು, ಬಿಳಿಹಾಳೆಗಳು, ಪೀಠೋಪಕರಣಗಳು, ಮನೆಗಳು, ಕರಕುಶಲವಸ್ತುಗಳ ನಿರ್ಮಾಣದ ವರೆಗೆ ವಿವಿಧ ಕ್ಷೇತ್ರದಲ್ಲಿ ಉಪಯೋಗಿಸಲ್ಪಡುವ ಬಿದಿರು ಆಹಾರವಾಗಿಯೂ ಉಪಯೋಗಿಸಲ್ಪಡುತ್ತವೆ. ಕರಾವಳಿಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಆಹಾರದಲ್ಲಿ ಬಳಸಲಾಗುತ್ತಿರುವ ವಿಶೇಷ ತರಕಾರಿ ಕಳಲೆ. ಆದರೆ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿನ, ಅದ್ಭುತ ಆಹಾರ ಪದಾರ್ಥ ಎಂದರೆ ಎಳೆ ಬಿದಿರು. ತುಳುವಿನಲ್ಲಿ ಕಣಿಲೆ ಎನ್ನುವ ಇದು ಘಟ್ಟಪ್ರದೇಶ, ಮಲೆನಾಡಿನಲ್ಲಿ ಪುಷ್ಕಳವಾಗಿ ದೊರೆಯುವ ಸಸ್ಯರಾಶಿ.
          ವರ್ಷಋತುವಿನ ನೆಂಟನಿವನು. ಮಳೆಯೊಂದಿಗೆ ಆಗಮಿಸುವ ಇದು ಸಪ್ಟಂಬರ್ ತಿಂಗಳವರೆಗೆ ಲಭ್ಯವಿರುತ್ತದೆ. ದಟ್ಟವಾಗಿ ಬೆಳೆದ ಬಿದಿರ ಮೆಳೆಗಳ ಬುಡದಲ್ಲಿ, ಮಳೆ ಬಿದ್ದು ಮಣ್ಣು ಮೆದುವಾದಂತೆ ಹೊರ ಬರುವ ಬಿದಿರ ಮೊಳಕೆಗಳು ನೋಡಲೂ ಬಹಳ ಆಕರ್ಷಣೀಯವಾಗಿ ಕಾಣಿಸುತ್ತವೆ. ಮೊಳಕೆ ಬಂದ ಒಂದರಿಂದ ಎರಡು ವಾರಗಳ ನಂತರದಲ್ಲಿ ತಿನ್ನಲು ಯೋಗ್ಯವಾದ ಕಳಲೆಯಾಗಿ ದೊರೆಯುತ್ತದೆ.
          ಶ್ರಾವಣ ಮಾಸ(ಸೋನ ತಿಂಗಳು) ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರು ಗುಡ್ಡ ಕಾಡುಗಳಲ್ಲಿರುವ ಬಿದಿರ ಮೆಳೆಗಳ ಬುಡದಲ್ಲಿರುತ್ತಾರೆ. ಕಣಿಲೆಯನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ. ಇದು ಸುಲಭವಾಗಿ ಕಣ್ಣಿಗೆ ಗೋಚರಿಸಿದರೂ ಕೈಗೆಟಕುವುದು ಕಷ್ಟ. ವರ್ಷವಿಡೀ ಸೊಂಪಾಗಿ ಬೆಳೆದ ಬಿದಿರು ತನ್ನ ಮುಳ್ಳಿನ ಕೊಂಬೆಗಳನ್ನು ಸ್ವತಂತ್ರವಾಗಿ ಎಲ್ಲೆಂದರಲ್ಲಿ ತನಗಿಷ್ಟ ಬಂದಂತೆ ಚಾಚಿಕೊಂಡಿರುತ್ತದೆ. ಹೀಗೆ ಚಾಚಿಕೊಂಡ ಮುಳ್ಳಿನ ಕೊಂಬೆಗಳ ನಡುವೆ ಒಂದೊಂದೆ ಕೊಂಬೆಗಳನ್ನು ಬಿಡಿಸುತ್ತಾ, ಮುಳ್ಳಿನಿಂದ ದೇಹವನ್ನು ರಕ್ಷಿಸುತ್ತಾ ಪೊದೆಯೊಳಗೆ ನುಗ್ಗುವುದೇ ಒಂದು ಸಾಹಸದ ಕೆಲಸ.
          ಮಳೆಗಾಲದಲ್ಲಿ ಊರೆಲ್ಲಾ ತಿರುಗಿ, ಕಾಣಿಸಿದ ಎಲ್ಲಾ ಬಿದಿರ ಮೆಳೆಗಳನ್ನೆಲ್ಲಾ ತಡಕಾಡಿ ಕಣ್ಣಿಗೆ ಗೋಚರಿಸಿದ ಕಣಿಲೆಗಳನ್ನೆಲ್ಲಾ ಕೊಯ್ದು ಕೊಂಡ್ಹೋಗಿ ಪೇಟೆಯಲ್ಲಿ ಮಾರಾಟ ಮಾಡುವ ಸಾಹಸಿಗರು ಹಲವರಿದ್ದಾರೆ. ಪಟ್ಟಣಗಳಲ್ಲಿ ಕಣಿಲೆ ಸಿಗದಿರುವುದರಿಂದ, ಇವುಗಳಿಗೆ ಬೇಡಿಕೆ ಹೆಚ್ಚು. ದರ ಕೂಡ ಅಧಿಕವಾಗಿರುತ್ತದೆ. ಕಣಿಲೆಯನ್ನು ಇಷ್ಟ ಪಡುವ ಪಟ್ಟಣಿಗರು ಎಷ್ಟೇ ಹಣವಾದರೂ ಕೊಟ್ಟು ಖರೀದಿಸುತ್ತಾರೆ. ಹೀಗೆ ಮಳೆಗಾಲದಲ್ಲಿ ಕಣಿಲೆಯಿಂದ ಸಂಪಾದನೆ ಮಾಡಿಕೊಳ್ಳುವರು ಕೆಲವು ಚಾಣಾಕ್ಷರು. ಹೆಚ್ಚಾಗಿ ಪುರುಷರು ಕಣಿಲೆಯನ್ನು ಕಡಿದು ತಂದರೆ, ಮಹಿಳೆಯರು ಸಂತೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಬಂಡವಾಳವಿಲ್ಲದೆ, ಲಾಭ ಪಡೆಯುವ ಉದ್ಯೋಗವಿದು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಕಣಿಲೆ ವ್ಯಾಪಾರಿಗಳನ್ನು ಕಾಣುವುದು ಅತಿ ವಿರಳ. ಅದಕ್ಕೆ ಲಾರಣವೂ ಇದೆ. ಬಿದಿರನ್ನು ಕಡಿಯುವುದು ಕಾನೂನಿನ ರೀತಿಯಲ್ಲಿ ಅಪರಾಧವೂ ಹೌದು. ಮಾತ್ರವಲ್ಲದೆ ಬಿದಿರ ಕಣಿಲೆ ಪಡೆಯಬೇಕಾದರೆ ಹರಸಾಹಸವೇ ಮಾಡಬೇಕಾಗುತ್ತದೆ. ಅಂತಹ ಸಾಹಸಕ್ಕೆ ಕೈ ಹಾಕುವ ಮನಸ್ಸಿನವರೂ ಕಡಿಮೆಯಾಗಿದ್ದಾರೆ. ಇಷ್ಟಲ್ಲದೆ ಸಸ್ಯರಾಶಿಗಳಲ್ಲಿ ಅತೀವೇಗವಾಗಿ ಬೆಳೆಯುವ ಸಸ್ಯ ಬಿದಿರು ಎನಿಸಿಕೊಂಡಿದ್ದರೂ, ಅತಿಯಾದ ಬಳಸುವಿಕೆಯಿಂದ ಸಂತತಿ ನಾಶವಾಗುತ್ತಾ ಬಂದಿದೆ. ಹಾಗಾಗಿ ಕಣಿಲೆ ಅಪರೂಪವಾಗಿ ಬಿಟ್ಟಿವೆ.
          ಇಂಗ್ಲೀಷ್‍ನಲ್ಲಿ ಬ್ಯಾಂಬೂ ಶೂಟ್ಸ್ ಎಂದು ಕರೆಯಲ್ಪಡುವ ಬಿದಿರಿನ ಕುಡಿಗೆ ಕಳಲೆ, ಕಳಿಲು ಎಂತಲೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಮಳೆ ನೀರು ಮಾಡುತ್ತಿದ್ದಂತೆ ಹಳ್ಳಿಗರು ಬೇಸಾಯದಲ್ಲಿ ತೊಡಗುತ್ತಿದ್ದರು. ಜೊತೆಗೆ ಬಿಡದೇ ಮಳೆ ಸುರಿಯುತ್ತಿದ್ದ ಕಾರಣ, ತರಕಾರಿಗಾಗಿ ಪಟ್ಟಣ್ಣಕ್ಕೆ ಹೋಗಲು ಸಮಯವಿರುತ್ತಿರಲಿಲ್ಲ. ಆಗ ಹಳ್ಳಿಗರೆಲ್ಲಾ ಕಾಡಿನಲ್ಲಿ ದೊರೆಯುವ ಸಸ್ಯ ತರಕಾರಿಗಳನ್ನೇ ಅವಲಂಬಿಸುತ್ತಿದ್ದರು. ಅವುಗಳಲ್ಲಿ ಕಣಿಲೆಯೂ ಒಂದು. ಮಳೆಗಾಲದ ವಿಶೇಷ ಆಹಾರವಾಗಿ ಕಳಲೆಯನ್ನು ಬಳಸುತ್ತಿದ್ದರು. ವಿವಿಧ ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹೀಗೆ ಕಣಿಲೆ ಆಹಾರದಲ್ಲಿ ಬಳಕೆಯಾಯಿತು ಎನ್ನುತ್ತಾರೆ. ಕಣಿಲೆ ಖಾದ್ಯಗಳು ಆರೋಗ್ಯಕರವೂ ಹೌದು. ಯಾಕೆಂದರೆ ಕಣಿಲೆ ಉಷ್ಣಾಂಶ ಹೊಂದಿರುವುದರಿಂದ ಮಳೆಗಾಲದಲ್ಲಿ ಶಿತದಿಂದ ಶರೀರವನ್ನು ಬೆಚ್ಚಗೆಯಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ್ಯವಾದ ತರಕಾರಿ ಇದು. ಹಾಗೆಂದು ಅತಿಯಾಗಿ ತಿನ್ನುವಂತಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ.
ವರ್ಷಋತುವಿನಲ್ಲಿ ಬಿದಿರಿಗೆ ಬಿಡುವಿಲ್ಲದ ಕೆಲಸ. ತನ್ನ ವಂಶವನ್ನು ವೃದ್ಧಿಗೊಳಿಸುವ, ಒಂದು ಬಿದಿರಿನ ಮೆಳೆಯಲ್ಲಿ ಸುಮಾರು 5 ರಿಂದ 10 ಕಣಿಲೆಗಳು ಮೂಡುತ್ತವೆ. ಭಾದ್ರಪದ ಮಾಸದಲ್ಲಿ ಕಣಿಲೆಯನ್ನು ಕೊಯ್ಯಬಾರದು ಎಂಬ ನಂಬಿಕೆಯಿದೆ. ಅದು ಅಳಿಯುತ್ತಿರುವ ಸಂತತಿಯನ್ನು ಉಳಿಸುವ ನಿಟ್ಟಿನಿಂದಲೂ ಆಗಿರಬಹುದು. ಕತ್ತಿಯಿಂದ ಕತ್ತರಿಸಿದ ಕಣಿಲೆಯನ್ನು ಅದರ ಬಿಳಿಯ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಬೇಕು. ಹೊರಗಿನ ಕವಚ ತೆಗೆದಂತೆ ಒಳಗೆ ಬಿಳಿಯ ತಿರುಳು ಹೆಚ್ಚಾಗುತ್ತಾ ಹೋಗುತ್ತದೆ. ಗಟ್ಟಿ ಇರುವ ಭಾಗವನ್ನು ಕತ್ತರಿಸಿ ಎಸೆಯಬೇಕು. ಕಣಿಲೆಯನ್ನು ಕತ್ತಿಯಿಂದ ಸಣ್ಣಕ್ಕೆ ಕೊಚ್ಚಿಯೂ ಉಪಯೋಗಿಸಬಹುದು. ಸುಂದರವಾಗಿ ಚಕ್ರಾಕಾರವಾಗಿಯೂ ತುಂಡರಿಸಿ ಬಳಸಬಹುದು. ಕಣಿಲೆಯ ಕಚ್ಛಾ ಭಾಗಗಳನ್ನು ದನ ಕರುಗಳಿಗೆ ಹಾಕುವಂತಿಲ್ಲ. ಯಾಕೆಂದರೆ ಕತ್ತಿಯಿಂದ ಕಡಿಯುವುದರಿಂದ, ಕಬ್ಬಿಣ ಮುಟ್ಟಿದ ಬಿದಿರು ವಿಷ ಎನ್ನುತ್ತಾರೆ ತಿಳಿದವರು.
          ಕೊಚ್ಚಿದ ಕಣಿಲೆಯನ್ನು ಅವತ್ತೇ ಉಪಯೋಗಿಸುವಂತಿಲ್ಲ. ಮೂರು ದಿನ ನೀರಲ್ಲಿ ಹಾಕಿಟ್ಟು, ನಂತರ ಖಾದ್ಯದಲ್ಲಿ ಬಳಸುವುದು. ನೀರಲ್ಲಿ ಹಾಕಿಟ್ಟ ಪ್ರತಿದಿನವೂ ನೀರು ಬದಲಾಯಿಸಬೇಕು. ನೀರಲ್ಲಿ ಹಾಕಿಡುವುದರಿಂದ ಅದರಲ್ಲಿನ ವಿಷ ತೊಳೆದುಹೋಗುವುದು. ಅವತ್ತೇ ಉಪಯೋಗಿಸಬೇಕು ಎನ್ನುವವರು ಕಣಿಲೆಯನ್ನು ಬೇಯಿಸಿ ನೀರು ತೆಗೆದು ನಂತರ ಉಪಯೋಗಿಸಬಹುದು. ಕಣಿಲೆ ಉಷ್ಣಾಂಶವಾಗಿರುವುದರಿಂದ ಹೆಚ್ಚಾಗಿ ಕಣಿಲೆಯ ಜೊತೆಗೆ ಮೊಳಕೆ ಬರಿಸಿದ ಹೆಸ್ರು ಕಾಳನ್ನು ಹಾಕಿ, ವಿವಿದ ರುಚಿಯಾದ ಖಾದ್ಯಗಳನ್ನು ತಯಾರಿಸುತ್ತಾರೆ. ಕಣಿಲೆಯಿಂದ ಉಪ್ಪಿನಕಾಯಿ, ಪಲ್ಯ, ಸಾಂಬಾರು ಇತ್ಯಾದಿಗಳನ್ನು ಮಾಡುತ್ತಾರೆ.
          ಬಿದಿರು ಹೂ ಬಿಡುವ ಸಸ್ಯರಾಶಿ. ಒಮ್ಮೆ ಒಂದು ಬಿದಿರಿನ ಮೆಳೆ ಹೂಬಿಟ್ಟರೆ ನಂತರ ಆ ಬಿದಿರುಗಳೆಲ್ಲಾ ಸಾಯುತ್ತವೆ. ಹೂಬಿಟ್ಟ ಬಿದಿರಿನ ಮೆಳೆಯಲ್ಲಿ ಮತ್ತೆಂದೂ ಕಣಿಲೆ ಹುಟ್ಟುವುದಿಲ್ಲ. ಇತ್ತೀಚೆಗೆ ಹೆಚ್ಚಿನ ಬಿದಿರ ಮೆಳೆಗಳು ಹೂಬಿಟ್ಟು ಸಾಯುತ್ತಿವೆ. ಹಾಗಾಗಿ ಕಣಿಲೆಯ ಸಂಖ್ಯೆಯೂ ಕಡಿಮೆಯಾಗಿವೆ ಎನ್ನಬಹುದು.

No comments:

Post a Comment