Wednesday 2 August 2017

ಕರಾವಳಿಯಲ್ಲಿ ನರ್ತೆ ವಿಶೇಷತೆ

         
ಪೃಥ್ವಿಯ ಪ್ರಾಣಿ ಸಮ್ರಾಜ್ಯದಲ್ಲಿ ಬೆನ್ನೆಲುಬುಗಳಿಲ್ಲದ ಪ್ರಾಣಿಗಳ ಪ್ರಧಾನ ವರ್ಗ ಮೃದ್ವಂಗಿಗಳದು. ಹೆಸರೇ ಸೂಚಿಸುವಂತೆ ಈ ವರ್ಗದ ಪ್ರಾಣಿಗಳದು ಮೆತ್ತನೆಯ ಮುದ್ದೆಯಂತಹ ಶರೀರ, ಅಸ್ಥಿಪಂಜರ ರಹಿತ ದೇಹ ನಿರ್ಮಿತಿ. ತಮ್ಮ ಇಡೀ ಶರೀರವನ್ನು ಆವರಿಸುವಂತೆ, ತಮ್ಮ ಶರೀರ ರಕ್ಷಣೆಗೂ ಆಹಾರ ಗಳಿಕೆಗೂ, ಚಲನಶೀಲತೆಗೂ ಒಪ್ಪವಾಗುವಂತೆ ಗಟ್ಟಿಯಾದ ಬಾಹ್ಯ ಕವಚವೊಂದು ರಚನೆಗೊಂಡಿರುತ್ತದೆ. ಆ ಚಿಪ್ಪಿನೊಳಗೆ ಬದುಕುತ್ತವೆ. ಹೀಗೆ ಬೇಸಿಗೆಯಲ್ಲಿ ಮಣ್ಣಿನಡಿಯಲ್ಲಿ ಮಾಯವಾಗಿ, ಮುಂಗಾರು ಮಳೆ ಪ್ರಾರಂಭವಾಗಿ, ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದಂತೆ, ಮಣ್ಣು ಮೆದುವಾಗತೊಡಗುತ್ತದೆ. ಆಗ ಮೆಲ್ಲಗೆ ಮಣ್ಣಿನಿಂದ ಹೊರಬಂದು, ಒಂದುಕಡೆಯಿಂದ ಇನ್ನೊಂದು ಕಡೆಗೆ ನೀರಿನ ಹರಿವಿನೊಂದಿಗೆ ಸಂಚರಿಸಲು ಶುರು ಮಾಡುವುದೇ ಸುಂದರ ಮೃದ್ವಂಗಿ ನರ್ತೆ. ಕರಾವಳಿಯ ಆಡುಭಾಷೆ ತುಳುವಿನಲ್ಲಿ ಇದು ನರ್ತೆ ಎಂದೇ ಚಿರಪರಿಚಿತ. ಗಾತ್ರದಲ್ಲಿ ತುಂಬಾ ಚಿಕ್ಕದಿದ್ದರೆ ಅವುಗಳನ್ನು ಗುಳ್ಳ ಎಂದು ಕರೆಯುತ್ತಾರೆ.
          ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ, ಗದ್ದೆ ಬದುಗಳಲ್ಲಿ, ನೀರಿನ ಚಿಕ್ಕ ಕಣಿವೆಗಳ ಬದಿಯಲ್ಲಿ, ಮಾತ್ರ ಕಾಣಸಿಗುವ ನರ್ತೆಗಳಿಗೆ ಎಲೆ, ಕೆಸರು, ಮಣ್ಣು, ಪಾಚಿಗಳೇ ಆಹಾರ. ಹುಲ್ಲು ತೋಪುಗಳಲ್ಲಿ ಅಂಟಿಕೊಂಡು, ನಿಧಾನವಾಗಿ, ತನ್ನ ಅಂಟು ದೇಹಕ್ಕೆ ರಕ್ಷಣಾ ಕವಚವನ್ನು ಸುತ್ತಿಕೊಂಡು ಸಾಗುವ ಇವುಗಳು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಆಕರ್ಷಣೀಯ ಮೃದ್ವಂಗಿ. ಆದರೀಗ ಮಳೆಗಾಲದಲ್ಲಿಯೂ ಅಪರೂಪದ ಜೀವಿಯಾಗಿ ಬಿಟ್ಟಿವೆ ಇವುಗಳು.    
          ಹಟ್ಟಿ ಗೊಬ್ಬರ ಹಾಕುತ್ತಿದ್ದ ಒಂದು ಕಾಲದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನರ್ತೆ, ಈಗ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಅದರ ಸಂತತಿ ಅಳಿವಿನಂಚಿನಲ್ಲಿದೆ. ಇಷ್ಟೇ ಅಲ್ಲದೆ ಅವುಗಳು ಭೂಮಿ ಮೇಲೆ ಬಂದು ಸಂತಾನಭಿವೃದ್ಧಿ ಮಾಡುವ ಅವಧಿಯಲ್ಲೇ ಅವುಗಳನ್ನು ಹಿಡಿದು, ನಾವು ಆಹಾರವಾಗಿ ಬಳಸುವುದರಿಂದ ಹಾಗೂ ಗದ್ದೆಗಳೇ ಮಾಯವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ನರ್ತೆ ಅಪರೂಪದ ಅತಿಥಿಯಾಗಿ ಪರಿಣಮಿಸಿದೆ.
          ಗದ್ದೆಯಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಬದುಕುವ ಇವುಗಳು ಮಣ್ಣಿನ ಒಳಗೂ ಕ್ರಿಯಾಶೀಲವಾಗಿರುವುದರಿಂದ ರೈತನಿಗೆ ತುಂಬಾ ಸಹಕಾರಿಯಾಗಿದ್ದವು. ಹಾಗಾಗಿ ಇವುಗಳನ್ನು ಗದ್ದೆಯಲ್ಲಿ ಬಿಟ್ಟು ಬೆಳೆಸುತ್ತಿದ್ದರು. ಹೀಗೆ ಪರೋಕ್ಷವಾಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ, ಉತ್ತಮ ಬೆಳೆ ಬರುವಲ್ಲಿ ಇದೂ ಒಂದು ಕಾರಣವಾಗುತ್ತಿತ್ತು. ಆದ್ದರಿಂದ ನರ್ತೆಯನ್ನು ರೈತನ ಮಿತ್ರ ಎಂದೇ ಕರೆಯುತ್ತಿದ್ದರು. ಆದರೆ ಇದು ರೈತನಿಗೆ ಶತ್ರುವೂ ಹೌದು. ಯಾಕೆಂದು ಕೇಳುತ್ತೀರಾ? ನರ್ತೆ ಇರುವ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡಿ, ಮೊಳಕೆಯೊಡೆಯುತ್ತಿದ್ದಂತೆ ನರ್ತೆಗಳು ಮೊಳಕೆ ತಿನ್ನಲು ಶುರು ಹಚ್ಚುತ್ತವೆ. ಬೆಳೆ ನಾಶಮಾಡುತ್ತವೆ. ಹಾಗಾಗಿ ಹೆಚ್ಚಿನ ಭಾಗಗಳಲ್ಲಿ ಉಳುಮೆ ಸಮಯದಲ್ಲಿಯೇ ನರ್ತೆಗಳನ್ನು ಗದ್ದೆಯಿಂದ ತೆಗೆದು ಹೊರಹಾಕಿ, ನಂತರ ಬಿತ್ತನೆ ಮಾಡುತ್ತಾರೆ. ಇಲ್ಲದಿದ್ದಲ್ಲಿ ನರ್ತೆ ಇರುವ ಗದ್ದೆಯಲ್ಲಿ ಹೆಚ್ಚಾಗಿ ನೇಜಿ ನೆಡುವುದನ್ನೇ ರೂಢಿಸಿಕೊಂಡಿರುತ್ತಾರೆ. 15 ರಿಂದ 20 ವರ್ಷಗಳವರೆಗೆ ಬದುಕಬಲ್ಲ ನರ್ತೆ, ನೀರಿನಿಂದ ಬೇರ್ಪಡಿಸಿದ ಎರಡು ಮೂರು ದಿನಗಳವರೆಗೆ ಮಾತ್ರವೇ ಜೀವಂತವಾಗಿರುತ್ತವೆ. ಈಗ ಗದ್ದೆ ಉಳುಮೆಗೆ ರೈತರು ಯಂತ್ರೋಪಕರಣಗಳನ್ನು ಅವಲಂಭಿಸಿರುವುದರಿಂದ, ಒಂದು ರೀತಿಯಲ್ಲಿ ರೈತರೇ ಇದರ ನಾಶಕರಾಗಿದ್ದಾರೆ.
          ಉದ್ದ ಮೀಸೆಯನ್ನು ಹೊರಹಾಕುತ್ತಾ, ಮಳೆಹನಿ ಬೀಳುತ್ತಿದ್ದಂತೆ, ಗದ್ದೆಗಳಲ್ಲಿ ಅಲ್ಲಿ ಇಲ್ಲಿ ನರ್ತೆಗಳು ಕಾಣತೊಡಗುತ್ತದೆ. ಉಲುಮೆ ಮಾಡಿದ ನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ.  ನೇಜಿ ನೆಡುವ ಹೊತ್ತಲ್ಲಿ ಮಹಿಳೆಯರೆಲ್ಲಾ ನೇಜಿ ನೆಡುತ್ತಾ ತಮ್ಮ ಸೆರಗಿನಲ್ಲಿ ನರ್ತೆಗಳನ್ನು ಆಯ್ದು ತುಂಬಿಸುವ ವೈಖರಿ ಬೇರೆಲ್ಲೂ ನೋಡಲು ಸಿಗದ ವೈಭವ. ಆದರೆ ಅದೆಲ್ಲಾ ಈಗ ತಾಂತ್ರಿಕ ಯುಗದ ಸೆರೆಯಾಗಿಬಿಟ್ಟಿವೆ. ಆದರೆ ಇತ್ತೀಚೆಗೆ ಉಳುಮೆ ಮಾಡಿದ ಹೊಲದಿಂದ ಪಾಳುಬಿದ್ದ ಗದ್ದೆಯಲ್ಲಿ ಹೆಚ್ಚು ದೊರೆಯುತ್ತದೆ. ರಾಸಾಯನಿಕಗಳ ಹಾವಳಿಯಿಂದ ಆ ಗದ್ದೆಗಳು ದೂರವಿರುವುದೇ ಇದಕ್ಕೆ ಪ್ರಮುಖ ಕಾರಣ. ಉಳುಮೆ ಮಾಡದ ಹೊಲಗಳಲ್ಲಿ ನೀರು ತಿಳಿಯಾಗಿರುವುದರಿಂದ ಬಹುಬೇಗನೆ ನರ್ತೆಗಳು ಕಣ್ಣಿಗೆ ಗೋಚರಿಸುತ್ತವೆ. ತಂಪಾದ ಜಾಗವನ್ನು ನರ್ತೆಗಳು ಬಯಸುವುದರಿಂದ, ಸೂರ್ಯನ ಬಿಸಿಲು ಬೀಳುತ್ತಿದ್ದಂತೆ, ಹುಲ್ಲಿನೆಡೆಗೋ, ಮಣ್ಣಿನಡಿಗೋ ಹೋಗಿ ಅವಿತುಕುಳಿತುಕೊಳ್ಳುತ್ತವೆ. ರಾತ್ರಿಯ ಹೊತ್ತಲ್ಲಿ ಎಲ್ಲವೂ ಹೊರಬರುತ್ತವೆ. ಮುಂಜಾವಿನಲ್ಲಿ ಮತ್ತು ಇಳಿಸಂಜೆ ಹೊತ್ತಲ್ಲಿ ತಂಪು ವಾತಾವರಣಕ್ಕೆ ಮಣ್ಣಿನೊಳಗೆ, ಹುಲ್ಲಿನೆಡೆಯಲ್ಲಿ ಅವಿತುಕುಳಿತ ನರ್ತೆಗಳೆಲ್ಲವೂ ಮೆಲ್ಲಗೆ  ಹೊರಬರತೊಡಗುತ್ತವೆ ನರ್ತೆಗಳು ಮೂರು ನಾಲ್ಕು ಒಂದಕ್ಕೊಂದು ಅಂಟಿಕೊಂಡು ಇರುವುದನ್ನು ನೋಡಲು ಬಲು ಸೊಗಸು. ಬೆಳ್ಳಂಬೆಳಗ್ಗಿನ ಹೊತ್ತಲ್ಲೇ ಹೆಚ್ಚಿನವರು ನರ್ತೆಗಳನ್ನರಸಿ ಗದ್ದೆಗಿಳಿಯುತ್ತಾರೆ. ಆರಾಮವಾಗಿ ಚಿಪ್ಪಿನೊಳಗಿಂದ ತನ್ನ ದೇಹವನ್ನು ಹೊರಹಾಕಿ ವಿರಮಿಸುತ್ತಾ ವಿಹಾರ ಮಾಡುತ್ತಿರುವ ನರ್ತೆಗಳಿಗೆ ಮಾನವನ ಸುಳಿವು ಬೇಗನೆ ತಿಳಿಯುತ್ತದೆ. ನೀರಿನಲ್ಲಾಗುವ ಶಬ್ಧ ಮತ್ತು ಬೇರೆ ವಸ್ತುಗಳಿಂದ ಅಥವಾ ಕೈಗಳಿಂದ ಅವುಗಳನ್ನು ಸ್ಪರ್ಶಿಸುತ್ತಿದ್ದಂತೆ, ಬಸವನಹುಳು, ಸಹಸ್ರಪದಿಗಳಂತೆ ಇವುಗಳೂ ನಾಚಿಕೆಯಿಂದಲೋ, ಜೀವ ಭಯದಿಂದಲೋ ತಕ್ಷಣ ದೇಹವನ್ನು ತನ್ನ ಗಟ್ಟಿಯಾದ ಶಂಖಾಕೃತಿಯ ಚಿಪ್ಪಿನೊಳಗೆ ಹಾಕಿ ಮುಚ್ಚಳದಿಂದ ಗಟ್ಟಿಯಾಗಿ ಮುಚ್ಚಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ತನ್ನ ದೇಹವನ್ನು ಮಾತ್ರವೇ ರಕ್ಷಾ ಕವಚದೊಳಗೆ ಭದ್ರ ಮಾಡಿಕೊಳ್ಳುತ್ತವೆಯೇ ಹೊರತಾಗಿ ಮನುಷ್ಯನಿಂದ ತಪ್ಪಿಸಿಕೊಂಡು ತಕ್ಷಣ ಮಣ್ಣಿನೊಳಗೆ ಸೇರಿಕೊಳ್ಳುವ ಸಾಮಥ್ರ್ಯ ನರ್ತೆಗಳಿಗಿಲ್ಲ. ನೀರಿನಲ್ಲೂ, ಮಣ್ಣಿನೊಳಗೂ ಜೀವಿಸಬಲ್ಲ ಇದೊಂದು ಉಭಯವಾಸಿ ಪ್ರಾಣಿ.
          ಹಿಂದಿನ ಕಾಲದಲ್ಲಿ ಕರಾವಳಿ ಭಾಗದ ಕೆಲವೆಡೆ, ಮಳೆಗಾಲದ ಸಮಯದಲ್ಲಿ ಹೆಚ್ಚಿನ ಮನೆಗಳಲ್ಲಿ ದಿನನಿತ್ಯದ ವಿಶೇಷ ಆಹಾರ ಇದಾಗಿತ್ತು. ಇಂದಿಗೂ ನರ್ತೆಯ ರುಚಿ ಬಲ್ಲ ಕೆಲವರು, ನರ್ತೆ ಹುಡುಕಾಟಕ್ಕಿಳಿಯುತ್ತಾರೆ. ಇವುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕೆಸರೇ ಆಹಾರವಾಗಿರುವ ಇದನ್ನು ಗದ್ದೆಯಿಂದ ಆಯ್ದ ತಕ್ಷಣ ಆಹಾರವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಆಯ್ದ ನರ್ತೆಗಳನ್ನು ಒಂದು ಪಾತ್ರದಲ್ಲಿ ಹಾಕಿ, ನೀರನ್ನು ಹಾಕಿ ಮುಚ್ಚಳದಿಂದ ಎರಡು ದಿನಗಳವರೆಗೆ ಹಾಗೇ ಬಿಡಬೇಕು. ಎರಡು ದಿನದಲ್ಲಿ ನರ್ತೆಯೊಳಗಿದ್ದ ಕೆಸರು, ಪಾಚಿ ಬೇರ್ಪಟ್ಟಿರುವುದನ್ನು ಕಾಣಬಹುದು. ನಂತರ ಇದನ್ನು ಶುಚಿಗೊಳಿಸಿ ಖಾದ್ಯದಲ್ಲಿ ಬಳಸುವುದು ವಾಡಿಕೆ. ಖಾಲಿ ನೀರಿನಲ್ಲಿ ಬೇಯಿಸಿದಾಗ ಚಿಪ್ಪಿನ ಮುಚ್ಚಳ ಸುಲಭವಾಗಿ ತೆಗೆಯಲು ಸಾಧ್ಯ. ಚಿಪ್ಪಿನೊಳಗಿಂದ ಮಾಂಸವನ್ನು ತೆಗೆದು ಅಥವಾ ಚಿಪ್ಪಿನೊಂದಿಗೆ ನರ್ತೆಯನ್ನು ವಿವಿಧ ಖಾದ್ಯಗಳಲ್ಲಿ ಬಳಸಬಹುದು. ಇಂದಿಗೂ ಕರಾವಳಿ ಭಾಗದಲ್ಲಿ ನರ್ತೆಯಿಂದ ಬಗೆ ಬಗೆಯ ರುಚಿ ರುಚಿಯಾದ ಖಾದ್ಯಗಳನ್ನು ಮಾಡುವವರಿದ್ದಾರೆ. ಇದೊಂದು ಮಳೆಗಾಲದ ಒಳ್ಳೆಯ ಆಹಾರವೂ ಹೌದು. ಸೌತೆನರ್ತೆ, ಬಸಲೆನರ್ತೆ, ನರ್ತೆಪುಂಡಿ, ನರ್ತೆಗಸಿ ಇತ್ಯಾದಿಗಳಿಂದ ನರ್ತೆ ಇಂದಿಗೂ ಜನರ ಬಾಯಲ್ಲಿ ನೀರೂರಿಸುತ್ತದೆ. ಇದರ ರುಚಿ ತಿಂದವನೇ ಬಲ್ಲ. ನರ್ತೆ ಖಾದ್ಯ ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಹೌದು. ನರ್ತೆಯ ಖಾದ್ಯ ಸೊಂಟನೋವು, ಬೆನ್ನುನೋವು, ಮುಂತಾದ ನೋವುಗಳಿಗೆ ಸಿದ್ಧೌಷಧ ಎನ್ನುವುದು ಹಳ್ಳಿಗರ ನಂಬಿಕೆ. ಹಳ್ಳಿ ಪ್ರದೇಶದಲ್ಲಿ ಸಾಮಾನ್ಯವೆನಿಸಿಕೊಂಡಿರುವ ನರ್ತೆ, ಪೇಟೆಗಳಲ್ಲಿ ಬಲು ಬೇಡಿಕೆಯನ್ನು ಉಳಿಸಿಕೊಂಡಿದೆ. ಹಳ್ಳಿಯ ಕೆಲ ಮಹಿಳೆಯರು ಮಳೆಗಾಲದಲ್ಲಿ ನರ್ತೆಗಳನ್ನು ಹಿಡಿದು ಮಾರಾಟ ಮಾಡುವುದನ್ನೂ ಒಂದು ಉದ್ಯೋಗವನ್ನಾಗಿಸಿಕೊಂಡಿರುವರು. ಎಲ್ಲಾ ಕಾಲದಲ್ಲಿ ಸಿಗದೆ, ಮಳೆಗಾಲದಲ್ಲಿ ಮಾತ್ರ ಸಿಗುವುದರಿಂದ ಹೆಚ್ಚಿನ ಬೇಡಿಕೆಯನ್ನು ಇದು ನಿರ್ಮಿಸಿಕೊಂಡಿದೆ. ಹಾಗೂ ಉಳಿದ ಮೀನು, ಮರುವಾಯಿಗಳಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುವುದೇ ಒಂದು ವಿಶೇಷ.
          ಗದ್ದೆ ಬದುಗಳಲ್ಲಿ ಬೆಳೆದ ಹುಲ್ಲುಗಳ ಎಡೆಯಲ್ಲಿ, ಬಿಲಗಳಲ್ಲಿ ರಾಶಿ ರಾಶಿ ಮೊಟ್ಟೆಗಳನ್ನಿಟ್ಟು ತನ್ನ ಸಂತತಿಯನ್ನು ಬೆಳೆಸತೊಡಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮೊಟ್ಟೆಗಳ ಗುಂಪು, ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಸುಮಾರು 200 ರಿಂದ 300 ಮೊಟ್ಟೆಗಳನ್ನಿಟ್ಟು ಸಂತತಿಯನ್ನು ವೃದ್ಧಿಸುತ್ತವೆ ಇವುಗಳು.
ನರ್ತೆಯನ್ನು ತಿಂದ ನಂತರ ಚಿಪ್ಪನ್ನು ಎಸೆಯುವ ಬದಲು ಅದರಿಂದ ಕಲಾತ್ಮಕ ಚಿತ್ರಗಳನ್ನು ಬರೆಯಬಹುದು. ಚಿಪ್ಪುಗಳನ್ನು ಪೋಣಿಸಿ ಉದ್ದನೆಯ ಹಾರಗಳಾಗಿ ಮಾಡುತ್ತಾರೆ. ಚಿಪ್ಪಿನ ಮುಚ್ಚಳದಿಂದ ವಿವಿಧಾಕೃತಿಗಳನ್ನು ಬರೆದು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುವರು. ಇವುಗಳು ನೋಡಲು ತುಂಬಾ ಆಕರ್ಷಣೀಯವಾಗಿರುವುದು. ಜೊತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತವೆ.

No comments:

Post a Comment