Tuesday 14 February 2017

                                                    ಅನುರಾಗದಲೆಗಳ ಓಲೆ...


 ಆಸೆ ಹೊತ್ತು ತರುವ ಜೇನು ನೀನಾದರೆ, ಮಧುವ ನೀಡೋ ಹೂವು ನಾನಾಗಿರಬೇಕು. ಅದರ ಹೊರತಾಗಿ ನೀ ಬೇರೆ ಹೂವಿನತ್ತ ಲಗ್ಗೆಯಿಟ್ಟೆಯೆಂದರೆ ಎಲ್ಲಿಲ್ಲದ ಕೋಪ ನನಗೆ. ನೀ ನನ್ನವನಾಗಿಯೇ ಇರಬೇಕು ಎನ್ನುವ ಸ್ವಾರ್ಥ ಹುಟ್ಟಿಕೊಂಡಿದೆ. ಇದನ್ನು ನೀ ಅಸೂಯೆ ಎಂದರೂ ಬೇಜಾರಿಲ್ಲ. ಯಾಕೆ ಹೀಗಾಗ್ತಿದೆ ಎನ್ನುವುದೇ ಗೊತ್ತಿಲ್ಲ. ಆದರೂ ಒಳಮನಸ್ಸಲ್ಲಿ ಬಲವಾದ ಒಂದು ಕಾರಣವೊಂದಿದೆ ಎನ್ನುವುದಂತು ಸತ್ಯ. ಬೇಡ ಬೇಡವೆಂದರೂ ಎದೆಯೊಳಗೆ ಬಚ್ಚಿಟ್ಟ ಅಲೆ, ದಡಕ್ಕಪ್ಪಳಿಸಿದಂತೆ, ಮನದೊಳಗೆ ಭೋರ್ಗರೆದು ಹೃದಯದ ದಡಕ್ಕಪ್ಪಳಿಸಲು ಹವಣಿಸುತ್ತಲೇ ಇದೆ. ಎಲ್ಲಿ ತೆರೆಗಳು ಮನದ ಭಾವನೆಗಳನ್ನೆಲ್ಲ ದಡಕ್ಕೆ ತಂದೆಸೆಯುತ್ತವೋ ಎನ್ನುವ ಭಯ ಕಾಡುತ್ತಿದೆ. ಆದರೂ ಆ ಭಯದ ಜೊತೆ, ಸಾಗರದಲೆಗಳೇ ಆ ಕೆಲಸ ಮಾಡಿಬಿಟ್ಟರೇ ಚೆನ್ನಾಗಿತ್ತು ಎನಿಸಿತ್ತು. ಯಾಕೆ ಗೊತ್ತಾ? ಆ ಭಾವನೆಗಳನ್ನು ನಿರಾಳವಾಗಿ ನಿನ್ನ ಮುಂದೆ ಬಿಚ್ಚಿಡುವ ಧೈರ್ಯ ನನ್ನಲಿಲ್ಲ. ನಿನಗನಿಸಬಹುದು ಅಷ್ಟೊಂದಿದ್ದ ಧೈರ್ಯ ಈಗೆಲ್ಲಿ ಹೋಯ್ತು ಎಂದು. ಆದರೆ ಈಗ ಧೈರ್ಯ ಎನ್ನುವ ಜಾಗವನ್ನು ನಾಚಿಕೆಯೊಂದು ಆಕ್ರಮಿಸಿದಂತಿದೆ. ಹಾಗಾಗಿ ಈ ಅಕ್ಷರಗಳನ್ನು ಪೋಣಿಸಿ ನಿನಗೆ ಪ್ರೇಮ ಮಾಲೆ ಹಾಕುವ ಕೆಲಸ ನನ್ನ ಕೈಗೊದಗಿ ಬಂದಿದೆ ಕಣೋ. ಆ ಭಾಗ್ಯವ ನೆನೆದು ಇದೋ ನೀ ಓದುತ್ತಿರುವ ನನ್ನ ಪ್ರೇಮಪತ್ರ ನಿನ್ನ ಮುಂದಿದೆ.
ಆದರೂ ನಿನ್ನಷ್ಟು ಧೈರ್ಯವಂತೆ ನಾನಲ್ಲ. ಸ್ನೇಹಿತರಾಗಿ ಜೊತೆಗೇ ಇದ್ದು, ಮಾತು, ಹರಟೆ, ಮೋಜು, ಮಸ್ತಿ, ಜಗಳ ಮತ್ತೆ ಸಮಾಧಾನಗಳಲ್ಲಿ ಬಂಧ ಬೆಸೆದುಕೊಂಡ ನಮ್ಮಲ್ಲಿ ಪ್ರೀತಿ ಎಂಬ ಎರಡಕ್ಷರ ದಾಳಿ ಇಡುತ್ತೇ ಎನ್ನುವ ಕಲ್ಪನೆಯೇ ಇರಲಿಲ್ಲ ಕಣೋ. ಹಠಾತ್ತಾಗಿ ಒಂದು ದಿನ ನೀನು ಬಂದು “ ನಾನಿನ್ನ ಪ್ರೀತಿಸ್ತಿದೀನಿ ಕಣೇ, ನಿನ್ನ ಕಂಡ್ರೆ ನಂಗೆ ತುಂಬಾ ಇಷ್ಟ. ನೀನು ನನ್ನ ಪ್ರೀತಿಸ್ತೀಯಾ?”  ಎಂದಾಗ ನನ್ನ ಸಿಟ್ಟು ನೆತ್ತಿಗೇರಿತ್ತು ನೆನಪಿದ್ಯಾ? ನೀನು ಅದನ್ನೆಲ್ಲಾ ಮರೆಯಲ್ಲಾ ಅನ್ನೋದು ನನಗೊತ್ತಿದೆ.
      ನೀನು ನಿನ್ನ ಬಂಡು ಧೈರ್ಯದಿಂದ ನಿನ್ನ ಮನಸಲ್ಲಿರೋದನ್ನೆಲ್ಲಾ ಒಂದೇ ಉಸಿರಲ್ಲಿ ಹೇಳಿಬಿಟ್ಟೆ. ಆಗ ನಿನ್ನ ಮೇಲೆ ನನಗೆ ಉಕ್ಕಿ ಬಂದ ಕೋಪ ಅಸ್ಟಿಷ್ಟಲ್ಲ. ಸ್ನೇಹ ಎನ್ನುವ ಸಲುಗೆಯನ್ನು ದುರುಪಯೋಗ ಪಡಿಸಿಕೊಂಡೆ ನೀನು. ನಾನಿನ್ನು ನಿನ್ನ ಜೊತೆ ಸ್ನೇಹಿತೆಯಾಗಿ ಹೇಗೇ ಮಾತಾಡೋದು ಎನ್ನುವ ಚಿಂತೆ ಕಾಡಿತ್ತು. ನಿನ್ನ ಪ್ರೀತಿಯನ್ನು ತ್ಯಜಿಸಿದ ಮಾತ್ರಕೆ ನಿನ್ನ ಸ್ನೇಹವನ್ನು ಕಳೆದುಕೊಳ್ಳುವ ಮನಸ್ಸು ನನ್ನದಾಗಿರಲಿಲ್ಲ. ಅದರಂತೆಯೇ ನೀನು ಸಲೀಸಾಗಿ ಆ ಅನುಮಾನಕ್ಕೆ ಪರದೆ ಎಳೆದಿದ್ದೆ. ನಾನು ನಿನ್ನನ್ನು ತಿರಸ್ಕರಿಸಿದಕ್ಕಾಗಿ ನನ್ನ ಮೇಲೆ ಕೋಪವೇ ಮಾಡಿಕೊಳ್ಳದೇ ಮತ್ತೆ ಅದೇ ಸ್ನೇಹಿತನ ಸಲುಗೆಯಿಂದ ನನ್ನಲ್ಲಿ ಮಾತು ಮುಂದುವರಿಸಿದ್ದೆ.
      ಪ್ರೀತಿಯನ್ನು ಬದಿಗೊತ್ತಿ, ಸ್ನೇಹಪಲ್ಲಕ್ಕಿಯಲ್ಲೇ ಸಾಗುತ್ತಿದ್ದೇವೆ. ಆದರೆ ಅದು ಶಾಂತವಾಗಿದ್ದ ನನ್ನೆದೆಯ ಕೂಪದೊಳಗೆ ಕಲ್ಲೆಸೆದು ತರಂಗಗಳನ್ನು ಸೃಷ್ಟಿಸಿದಂತಾಗಿದೆ. ತರಂಗಗಳು ದಡ ತಟ್ಟುತ್ತಿದ್ದಂತೆ, ನಿನ್ನ ಮೇಲಿನ ಅಭಿಪ್ರಾಯಗಳಲ್ಲೇನೋ ಬದಲಾವಣೆಯಾದಂತೆ ಭಾವ. ಪ್ರತಿದಿನವೂ ಏನೋ ಹೊಸತನ. ನಿನ್ನ ಸಂದೇಶಕ್ಕಾಗಿಯೇ ಚರವಾಣಿಯನ್ನು ಮತ್ತೆ ಮತ್ತೆ ಪರೀಕ್ಷಿಸುವ ಹುಚ್ಚು ಮನಸ್ಸು ನನ್ನದಾಗಿಬಿಟ್ಟಿದೆ. ಸಂದೇಶಗಳ ಸಂಖ್ಯೆ ಎಣಿಸೋ ಹುಚ್ಚು ಆಸೆ ಬೇರೇ. ಇದುವರೆಗೆ ಇಲ್ಲದ ಉತ್ಸಾಹ ನನ್ನಲ್ಲೀಗ. ಯಾಕೋ ಈ ತರಾ?
      ಪ್ರೀತಿ ವಿಷಯದಲ್ಲಿ ನೀನು ನಿನ್ನಷ್ಟಕ್ಕೆ ಮೌನದಿಂದಿರುವುದೇ ಈ ಎಲ್ಲಾ ನನ್ನ ಬದಲಾವಣೆಗಳಿಗೆ ಕಾರಣ ಎನಿಸುತಿದೆ. ಈ ನಿನ್ನ ಪ್ರೀತಿಯೆಂಬ ತಣ್ಣನೆಯ ಮೌನ ಗಾಳಿ, ನನ್ನೆದೆಯ ಬಯಲಲ್ಲಿ ಪ್ರೀತಿ ಮೊಳಕೆಯ ತಳಿರಾಗಿಸಿದೆ ಕಣೋ. ನಗುವಿನಲೆಗಳಿಗೆ ಮೇಲ್ಪುಟಿಯೋ ಮುತ್ತು ಹನಿಗಳಂತೆ, ನಾನು ಸಂತೋಷದಲ್ಲಿರೋವಾಗ ಆ ಸಂತೋಷವನ್ನು ಮತ್ತಷ್ಟು ಹೆಚ್ಚು ಮಾಡೋನು ನೀನಾಗ್ಬೇಕು, ಹುಣ್ಣಿಮೆ ಬೆಳಕಿಗೆ ಹಾತೊರೆಯೋ ಸಾಗರದಲೆಗಳಂತೆ, ನನ್ನ ಪ್ರೀತಿಗೆ ಹಂಬಲಿಸೋ ಪುಟ್ಟ ಜೀವ ನೀನಾಗ್ಬೇಕು, ನಾವು ಭೇಟಿಯಾಗುವ ಪ್ರತಿ ಸಲನೂ, ಕೊನೇ ಕ್ಷಣದವರೆಗೂ ನಾನು ನಿನ್ನ ಜೊತೆ ಜೊತೆಯಾಗಿ ಇರ್ತೀನಿ ಎನ್ನುವ ಭರವಸೆ ತುಂಬುವ, ಸಿಹಿ ಮುತ್ತು ಮತ್ತು ಬೆಚ್ಚಗಿನ ಅಪ್ಪುಗೆ ನಿನ್ನಿಂದ ಬೇಕು, ಚಿಂತೆ ಮರೆಯೋಕೆ ನಾ ಒರಗೋ ಹೆಗಲು ನಿಂದಾಗ್ಬೇಕು, ಕೈಗೆ ಕೈ ಬೆಸೆದು ಸಾಗರದಂಡೆಯ ಮರಳಿನ ಮೇಲೆ ತುಸು ದೂರ ಹೆಜ್ಜೆಗೆ ಹೆಜ್ಜೆಗಳನ್ನು ಸೇರಿಸೋ ಆಸೆಗಳಿಗೆ ಒಡತಿ ನಾನಾಗಿ ಬಿಟ್ಟದ್ದೀನಿ ಕಣೋ. ಇದಂತು ಸತ್ಯ. ನನ್ನ ಮನಸ್ಸು ನನ್ನಲ್ಲಿಲ್ಲ ಕಣೋ. ನನ್ನಲ್ಲಿರೋ ಅಹಂನಿಂದಲೋ, ಅಥವಾ ಇಲ್ಲದ ಧೈರ್ಯದಿಂದಲೋ ಮನಸಲ್ಲಿ ಹುಟ್ಟಿರುವ ನಿನ್ನ ಪ್ರೇಮ ನಿವೇದನೆಗೆ ನನ್ನ ಉತ್ತರವೋ, ಅಥವಾ ನನಗೆ ನಿನ್ನ ಮೇಲೆ ಅಂಕುರಿಸಿರುವ ಪ್ರೀತಿಯನ್ನೋ, ಉಸಿರು ಬಿಗಿ ಹಿಡಿದಾದರೂ ಹೇಳೋಣವೆಂದರೂ ಸಾಧ್ಯವಾಗುತ್ತಿಲ್ಲ ಪುಟ್ಟಾ. ಮುಖಾಮುಖಿಯಾಗಿ ಪ್ರೀತಿ ನಿವೇದನೆ ನನ್ನಿಂದ ಅಸಾಧ್ಯದ ಮಾತು. ಅದಕ್ಕಾಗಿ ಈ ಪುಟ್ಟ ಪತ್ರ. ಇಷ್ಟರವರೆಗೆ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದ ಪ್ರೀತಿ, ಆಸೆಗಳನ್ನೆಲ್ಲಾ ಈ ಪತ್ರದೊಳಗಿಟ್ಟು ಕಳಿಸಿದ್ದೀನಿ ಕಣೋ. ನಾನು ಕೊಟ್ಟ ಅದೇ ಉತ್ತರ ನಿನ್ನಿಂದ ಇರಲಾರದು ಎನ್ನುವ ಭರವಸೆಯೊಂದಿಗೆ, ಬಿಳಿ ಹಾಳೆಯಲ್ಲಿ, ನನ್ನೆಲ್ಲಾ ಪ್ರೀತಿಯನ್ನು, ಅಕ್ಷರದ ರೂಪದಲ್ಲಿ ನಿನ್ನ ಮುಂದಿಟ್ಟಿದ್ದೀನಿ.
ನಿನ್ನ ಉತ್ತರಕ್ಕಾಗಿ ಹವಣಿಸುತ್ತಿರುವ,
ಹಾತೊರೆಯುವ ನಿನ್ನ, ಪೆದ್ದು ಮನಸ್ಸಿನ,
ತರ್ಲೆ ಹುಡುಗಿ

No comments:

Post a Comment