Tuesday, 28 February 2017

ಪ್ರೇಮವೊಂದು ಚಿಗುರಿದೆ ಮನದಲಿ


          ಹುಣ್ಣಿಮೆಯ ದಿನದ ತಣ್ಣನೆಯ ಗಾಳಿ ಮೈಯ ಬಳಸಲು ಬೀಸಿ ಸುಳಿಯುತಿದೆ. ಚಳಿಯನ್ನು ಸಹಿಸದೆ ಬೆಚ್ಚನೆಯ ಹೊದಿಕೆ ಹೊದ್ದು ಮಲಗೋಣವೆಂದರೆ ಕಣ್ಣಿಗೆ ನಿದ್ದೆಯೇ ಆವರಿಸುತ್ತಿಲ್ಲ. ಅತ್ತ ತಿರುಗಿ ಇತ್ತ ತಿರುಗಿ, ಒತ್ತಾಯಪೂರ್ವಕವಾಗಿ ಕಣ್ಣು ಮುಚ್ಚಿ ನಿದ್ರಾದೇವಿಯನ್ನು ಬಳಿ ಸೆಳೆಯಲು ಪ್ರಯತ್ನಿಸಿದರೂ ನಿದ್ರೆ ನನ್ನ ಬಳಿಗೆ ಸುಳಿಯತ್ತಿಲ್ಲ. ಯಾಕೆ? ಏನಾಗಿದೆ ನನಗೆ? ಮನದ ಅಚಲ ನಿರ್ಧಾರಗಳಿಗೆ ಎನೋ ಹೊಡೆತ ಬಿದ್ದಂತೆ. ಯಾಕೆ ಹೀಗಾಯಿತು ನನಗೆ? ಮನಸಿನಲ್ಲಿ ಸಾವಿರಾರು ಆಲೋಚನೆಗಳ ಕಳವಳ ತುಂಬಿದೆ. ಅಂಗಳದಲ್ಲಿ ನಿಂತು ನಕ್ಷತ್ರ ಎಣಿಸೋಣವೆಂದರೆ ಬೆಳ್ಳನೆಯ ಬೆಳಕನ್ನು ಚೆಲ್ಲುತ್ತಿರುವ ತುಂಟ ಚಂದಿರ ನನ್ನನ್ನೇ ನೋಡಿ ತುಟಿಯಂಚಿನಲಿ ಸಣ್ಣನೆಯ ನಗು ಬೀರುವಂತೆ ತೋರುತ್ತಿದೆ. ಮನ ಅತ್ತ ಸೆಳೆದು ಹಿಡಿದಿದೆ. ನಿದ್ದೆಯ ಪರಿವೇ ಇಲ್ಲದೆ, ಮೌನದ ಗೊಂಬೆಯಾಗಿ ಮನಸು, ಕನಸುಗಳನ್ನು ಹೆಣೆಯುತ್ತಾ ಬಾಳ ಚಂದಿರನೆಡೆಗೆ ಜಾರಿತ್ತು. ಒಮ್ಮೆಲೆ ಕಲ್ಪನಾಲೋಕದಿಂದ ಹೊರಬಂದವಳು ಮಲಗೋಣವೆಂದು ಹೊರಟೆರೆ ರೆಪ್ಪೆ ಮುಚ್ಚಲು ಆ ಸುಂದರವಾದ ವದನ ಬಿಡದೇ ಕಚಗುಳಿ ಇಡುತ್ತಿದೆ. ಯಾಕೆ ಹೀಗೆ? ನನ್ನ ಕೊಠಡಿಯ ಬಿಟ್ಟು ಹೊರ ನಡೆಯಲು ಮನಸ್ಸಾಗುತ್ತಿಲ್ಲ. ಒಂದೆಡೆ ನಿಂತರೆ ಕೂತರೆ ಅಲ್ಲೇ ಶಿಲೆಯಾಗಿ ಬಿಡುವೆನು. ಏನೋ ಗಾಢ ಆಲೋಚನೆ.
           ಪ್ರತಿದಿನವಿದ್ದಂತೆ ಕಂಪ್ಯೂಟರ್ ಬೇಡ, ಫೇಸ್ ಬುಕ್ ಬೇಡ, ಊಟ ಬೇಡವೆನಿಸಿವೆ. ಮಧುರವಾದ ಭಾವನೆಗಳ ಲೋಕದಲ್ಲೇ ಮೈಮರೆತರೆ ಸಾಕು ಎನಿಸಿದೆ. ಅದೇನಾಯ್ತು ನಾ ಕಾಣೆ. ಪ್ರೀತಿ ಪ್ರೇಮವೆಂದರೆ ಕೋಪ ಮಾಡಿಕೊಳ್ಳುತ್ತಿದ್ದ ನಾನು, ಪ್ರೀತಿಯಲ್ಲಿ ಬಿದ್ದ ಸ್ನೇಹಿತ ಸ್ನೇಹಿತೆಯರಿಗೆ ಬುದ್ಧಿ ಹೇಳುತ್ತಿದ್ದೆ, ಅವರತ್ತ ಹಾಸ್ಯವನ್ನೂ ಮಾಡುತ್ತಿದ್ದೆ, ಅವರ ಪಿಸುಪಿಸು ಮಾತುಗಳನ್ನು ಕೇಳಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ಗೆಳತಿಯರ ಜೊತೆಗೂಡಿ ನಗುತ್ತಿದ್ದವಳು ನಾನು. ಆದರೆ ಹಾಗಿದ್ದ ನನ್ನನ್ನೇ ಅದೇ ಆ ಪ್ರೀತಿ ಕರಗಿಸಿ ಬಿಟ್ಟಿತೇ? ಪ್ರೀತಿಗೆ ನನ್ನಲ್ಲೂ ಪ್ರೇಮವಾಯಿತೇ? ಪ್ರೀತಿಯೇ ನನ್ನನ್ನು ತನ್ನ ಬಳಿ ಸೆಳೆಯಿತೋ, ನಾನೇ ಪ್ರೀತಿಗೆ ಶರಣಾದೆನೋ... ಒಂದೂ ಅರಿಯೆ.
          ನನ್ನ ಮನದಲ್ಲಿ ಪ್ರೀತಿಯ ಬೀಜ ಬಿತ್ತಿದ ಆ ಚೋರ ಯಾರು? ಹಾ... ಅವನೇ ಅವನೇ ಅದೇ ಆ ಪರೀಕ್ಷಾದಿನ ನಾನು ಓದುವುದರಲ್ಲಿ ಮಗ್ನವಾಗಿದ್ದೆ. ಒಂದು ಕ್ಷಣ ಪುಸ್ತಕದಿಂದ ಕಣ್ತೆಗೆದು ತಲೆಯೆತ್ತಿ ನೋಡಿದಾಗ, ಕಣ್ಣ ಮುಂದೆ ದೂರದಲ್ಲಿ ಕಂಡವನು ಅವನು. ನನ್ನತ್ತ ನೋಡಿ ಪರಿಚಯದ ನಗು ಚೆಲ್ಲಿದ. ಆದರೆ ನಾ ಕಾಣೆ ಆತ ಯಾರೋ... ಆ ನಗುವಲ್ಲೇನೋ ಸೆಳೆತ ಇತ್ತು. ಆಗ ಅಲ್ಲಿಂದ ಮರೆಯಾದ ನಗು ನನ್ನಲ್ಲಿ ಮತ್ತೆ ಆ ನಗು ಮೊಗವನ್ನು ನೋಡುವ ತವಕ ಹೆಚ್ಚಿಸುತ್ತಾ ಬಂತು. ಅತ್ತಿತ್ತ ಬೇರಾವುದೋ ಕಾರ್ಯದ ನಿಮಿತ್ತ ಹೋದರೂ ನನ್ನ ಕಣ್ಣುಗಳು  ಅವನನ್ನೇ ಹುಡುಕುತ್ತಿದ್ದವು. ಅವನನ್ನು ಕಾಣುವ ಆಸೆ ಸುಳ್ಳು ನೆಪವನ್ನು ಸೃಷ್ಟಿಸುತ್ತಿತ್ತು. ದಿನದಲ್ಲೊಂದು ಬಾರಿ ನೋಡಿದೆನೆಂದರೆ ಅದೇನೋ ಸಂತೋಷ ನೆಮ್ಮದಿ ಮನಸ್ಸಿಗೆ. ಮುಖ ನೋಡುವುದರಲ್ಲೇ ದಿನಗಳೆದ ನನಗೆ ಮತ್ತೆ ಮನೆಗೆ ತೆರಳಿದಾಗ ಸಾವಿರ ಪ್ರಶ್ನೆಗಳು ಮನಸ್ಸನ್ನು ಕೆದಕಲು ಆರಂಭಿಸುವುದು. ಅವನ್ಯಾರು? ಹೆಸರೇನು? ಏನೊಂದನೂ ನಾ ತಿಳಿಯೆನು. ಆದರೆ ಪ್ರೀತಿಯೊಂದು ಅರಳಿದೆ ಮನದಲಿ ಎಂಬುದನ್ನೊಂದು ನಾನರಿತೆ. ಚಿಗುರಿ ಮೊಗ್ಗು ಹೂವಾಗಿ ಅರಳಿದ ಪ್ರೀತಿಯ ದೇವನಿಗೆಂತು ಅರ್ಪಿಸುವೆನೋ ನನಗಂತು ಅರಿತ್ತಿಲ್ಲ.
          ಪ್ರೀತಿ ಹೇಳುವ ಮುನ್ನ, ಒಂದು ಮಾತಾದರೂ ಆಡಬೇಕು. ಮಾತಿಲ್ಲದೆ ಪ್ರೇಮ ಶುರುವಾಗುವುದೆಂತು? ಹೆಸರ ತಿಳಿಯುವ ಪ್ರಯತ್ನದಲಿ ನಾ ಸೋತುಹೋದೆ. ಹೇಗೆ ತಿಳಿಯಲಿ ಹೃದಯದಲಿ ಮನೆ ಮಾಡಿರುವವನ ನಾಮಧೇಯ? ಎದುರು ನೀ ಬಂದಾಗ ಕೇಳುವೆನೆಂದರೆ ಅತಿಯಾದ ಹೃದಯದ ಬಡಿತ ಬಾಯಿ ತೆರೆಯಲು ಬಿಡುವಂತಿಲ್ಲ. ನಾನೇನು ಮಾಡಲಿ? ಕೊನೆಗೆ ಫೇಸ್ ಬುಕ್ ಮೊರೆ ಹೋದೆ ಆದರೂ ಹೇಗೆ  ಪ್ರಶ್ನೆ ಮೂಡಿತು. ತರಗತಿಯ ನನ್ನ ಸಹಪಾಠಿಯ ಗೆಳೆಯ ಅವನು ಎಂಬುದನ್ನೊಂದು ಅರಿತುಕೊಂಡೆ. ಫೇಸ್ ಬುಕ್ ನಲ್ಲಿ ನನ್ನ ಸಹಪಾಠಿಯ ಗೆಳ್ಯರ ಗುಂಪಿನಲ್ಲಿ ಅವನ ಛಾಯಾಚಿತ್ರವನ್ನು ನೋಡುತ್ತಾ, ಹುಡುಕುತ್ತಾ ಹಿಡಿದೇ ಬಿಟ್ಟೆ ನನ್ನ ಮನಗೆದ್ದ ಚೆಲುವನ.  ಸೆಳೆದಾಯಿತು ನನ್ನ ಸ್ನೇಹಜಾಲಕ್ಕೆ. ಮಾತುಗಳು ಸಂದೇಶಗಳ ರೂಪದಲ್ಲಿ ಪ್ರಾರಂಭವಾದವು. ಅವನಿಗೆ ನನ್ನ ಮುಖ ಪರಿಚಯವಿಲ್ಲದೆಯೇ, ಫೇಸ್ ಬುಕ್ ಸಂದೇಶದಲ್ಲಿಯೇ ನಮ್ಮ ಸ್ನೇಹ ಬೆಳೆಯಿತು.
           ಕಾಲೇಜಿನಲ್ಲಿ ಎದುರಿಗೆ ಬಂದರೂ ಮಾತನಾಡಲು ಭಯ. ಏನೆಂದು ಮಾತು ಪ್ರಾರಂಭಿಸುವುದು, ನಾನು ಯಾರೆಂದು ಪರಿಚಯ ಮಾಡಿಸಿಕೊಳ್ಳಲಿ ಎಂಬುದರಲ್ಲಿ ದ್ವಂದ್ವ ನಿರ್ಣಯಗಳು. ನನ್ನಲ್ಲೇನೋ ಅಳುಕು. ಕೊನೆಗೊಂದು ದಿನ ನಾ ಧೈರ್ಯ ಮಾಡಿ ಶುಭಮುಹೂರ್ತದಲ್ಲಿ ಮಾತು ಆರಂಭಿಸಿ ನನ್ನಲ್ಲೇ ನೆಮ್ಮದಿ ತಂದುಕೊಂಡೆ. ಆದರೆ ಆ ಹೊತ್ತಿಗಾಗಲೇ ನಮ್ಮಿಬ್ಬರ ಸ್ನೇಹದ ಬೇರು ಭೂಮಿಯಾಳಕ್ಕೆ ಇಳಿದಾಗಿತ್ತು. ಮತ್ತೆ ಸ್ನೇಹದ ಬೇರನ್ನು ಕಿತ್ತು ಪ್ರೀತಿಯ ಬೀಜವನ್ನು ಬಿತ್ತಲು ಧೈರ್ಯ ಸಾಲದು ನನಗೆ. ಪ್ರೀತಿ ಹೇಳಲು ಹೋಗಿ, ಆತನ ಸ್ನೇಹವು ನನ್ನಿಂದ ಮರೆಯಾಗಿ ಹೋದರೆ ಆ ನೋವನ್ನು ತಾಳುವ ಗಟ್ಟಿ ಹೃದಯ ನನ್ನದಲ್ಲ. ದೂರದಲ್ಲೇ ನಿಂತು ಅವನ ಮೊಗವನ್ನು, ನಗುವನ್ನು ನೋಡುತ್ತಾ ನಿಂತರೆ ಅಲ್ಲೇ ಮೈಮರೆಯುವೆನು. ಸ್ನೇಹವೋ, ಪ್ರೀತಿಯೋ ಎಂಬ ಉಭಯಸಂಕಟ. ಮನಸ್ಸುಗಳ ಬೆಸೆಯುವ ಪ್ರೀತಿಗಿಂತ, ಆತ್ಮೀಯತೆ ಬೆಳೆಸುವ ಪವಿತ್ರ ಸ್ನೇಹವೇ ಶ್ರೇಷ್ಠವೆಂದೆನಿಸಿ, ಮನದಲಿ ಚಿಗುರಿರುವ ಪ್ರೀತಿಯನ್ನು ಹೊಸಕಿ ಹಾಕಲು ಆಗದೆ ಪ್ರೀತಿಯನ್ನು ಎದೆಯ ಗೂಡಿನಲ್ಲೇ ಬಚ್ಚಿಟ್ಟುಕೊಂಡು ಸ್ನೇಹವನ್ನು ಮೆರೆಯುವ ಪ್ರಯತ್ನದಲ್ಲಿ ನಾನಿರುವೆ.
ಕಾಲೇಜು ದಿನಗಳು ಮುಗಿಯುವ ವರೆಗೆ ಸ್ನೇಹಿತನಾಗಿರದೆ, ಜೀವನದುದ್ದಕ್ಕೂ ನೋವಲ್ಲೂ, ನಲಿವಲ್ಲೂ ಸಮನಾಗಿ ಬೆರೆತು ಜೊತೆ ಬರುವೆ ತಾನೆ...?
                                                                                                                                    ಇಂತಿ,
                                                                                                                                              ಕನಸು...


             

No comments:

Post a Comment