ಹನಿ ಜಾರಿ ಇಳೆ ಸೇರುವ ಮುನ್ನ...
ಯಾವುದೋ ಅಪರಿಚಿತ ನಂಬರ್‍ನಿಂದ ಬಂದ ಕರೆಯನ್ನು ಸ್ನೇಹವನ್ನಾಗಿ ಸ್ವೀಕರಿಸುವುದು ಪ್ರಸ್ತುತ ಸಮಾಜದಲ್ಲಿ ತಪ್ಪಾಗಿ ಬಿಟ್ಟೀತು ಎಂಬ ಅಳುಕು. ಆದರೆ ಮೊದಲೇ ನಿನ್ನ ಅಪರಿಚಿಯ ಧ್ವನಿಗೆ ನಾನು ಮಾರುಹೋಗಿದ್ದೆ. ಆ ಧ್ವನಿಯನ್ನೇ ಮತ್ತೆ ಮತ್ತೆ ಕೇಳಬೇಕೆಂಬ ಹಂಬಲ ನನ್ನಲ್ಲಿ ಸೃಷ್ಟಿಯಾಗಿತ್ತು. ಬಯಸಿ ಬಂದ ಸ್ನೇಹವನ್ನು ತಿರಸ್ಕರಿಸಲಾಗದೆ ನಿನ್ನ ಸ್ನೇಹಕ್ಕೆ ಶರಣಾಗಿಯೇ ಬಿಟ್ಟೆ. ನಾನೆಷ್ಟು ಧೈರ್ಯವಂತೆ ನೋಡು! ಯಾರೆಂದು ತಿಳಿಯದ, ಯಾವುದೋ ಊರಿನಿಂದ ಬಂದ ನಿನ್ನ ಕೇವಲ ಒಂದು ಫೋನ್ ಕರೆಯಿಂದ ಬಂದ ಸ್ನೇಹದ ಅಪ್ಲಿಕೇಶನನ್ನು ಸ್ವೀಕರಿಸಿದ್ದೆ. ಮುಖಪರಿಚಯವಿಲ್ಲದೆ ನಮ್ಮ ಸೇಹ ಎತ್ತರೆತ್ತರಕ್ಕೆ ಬೆಳೆಯಿತು. ಕಾಲ್ ಮಾಡಿದಾಗ, ಮೆಸ್ಸೇಜ್ ಮಾಡಿದಾಗ ಪ್ರತಿಕ್ರಿಯಿಸದೆ ಹೋದಾಗ, ಕೋಪ ಮಾಡಿಕೊಂಡು ಗಲಾಟೆ ಮಾಡಿಕೊಳ್ಳುವಷ್ಟು ಆಪ್ತವಾಗಿ ನಮ್ಮ ಸ್ನೇಹ ಬೆಳೆಯತೊಡಗಿತು. ನಮ್ಮ ಸ್ನೇಹ ಮತ್ತು ಕೋಪದ ಜಿದ್ದಾಜಿದ್ದಿಯಲ್ಲಿ ಯಾವಾಗಲೂ ಸ್ನೇಹವೇ ಮೇಲುಗೈ ಸಾಧಿಸುತಿತ್ತು.
ನೆನಪಿದೆಯಾ ನಿನಗೆ? ನಾನು ಹತ್ತು ಬಾರಿ ಕಾಲ್ ಮಾಡಿದಾಗಲೂ ನೀನು ಸ್ವೀಕರಿಸಲೇ ಇಲ್ಲ. ಅದಲ್ಲದೆ ಬೇರೆ ಆ ದಿನ ಭಾನುವಾರ, ನಿನಗೆ ರಜಾದಿನವಾಗಿತ್ತು. ಆದರೂ ನೀನು ನನ್ನ ಕರೆಗೆ ಸ್ಪಂಧಿಸಲೇ ಇಲ್ಲ. ನನ್ನ ಕೋಪ ಮಿತಿಮೀರಿತ್ತು. ನನ್ನ ಬುದ್ಧಿಯನ್ನು ಕೋಪದ ಕೈಗೆ ಕೊಟ್ಟು ನಿನ್ನ ನಂಬರನ್ನು ಡಿಲಿಟ್ ಮಾಡಿಯೇ ಬಿಟ್ಟಿದ್ದೆ. ಮತ್ತೆ ನೀನು ನನಗೆ ಯಾವುದೇ ಕಾಲ್ ಮೆಸ್ಸೇಜ್ ಮಾಡದೆ ಹದಿನೈದು ದಿನಗಳನ್ನು ಮುಂದೂಡಿದ್ದೆ. ಆದರೆ ಆ ದಿನಗಳಲ್ಲಿ ನಾನು ಎಷ್ಟೊಂದು ಚಡಪಡಿಸಿದ್ದೆ. ನಿನ್ನ ಒಂದೇ ಒಂದು ಕಾಲ್‍ಗಾಗಿ ಹಾತೊರೆಯುತ್ತಿದ್ದೆ ಗೊತ್ತಾ...? ಕೊನೆಗೊಂದು ದಿನ ನಿನ್ನಿಂದ ಬಂದ ಹಾಯ್... ಎಂಬ ಮೆಸ್ಸೇಜ್ ನನ್ನಲ್ಲಿ ಜೀವವೇ ತುಂಬಿತ್ತು. ನಂತರದ ದಿನಗಳಲ್ಲಿ ಯಾವುದೇ ಕಲ್ಮಶವಿಲ್ಲದ ಸ್ನೇಹ ನಮ್ಮಿಬ್ಬರದಾಯಿತು. ಎಲ್ಲೋ ಇರುವ ನೀನು ಇಲ್ಲಿರುವ ನನ್ನನ್ನು ನಮ್ಮಿಬ್ಬರ ಫೋನ್ ಸಂಭಾಷಣೆಯಲ್ಲೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ. ನನ್ನ ಅಳುವಿಗೆ ಮಾತಿನಲ್ಲೇ ತೋಳಿನ ಆಸರೆಂiÀi ಸಮಾಧಾನವನ್ನು ಕೊಡುತ್ತಿದ್ದವನು ನೀನು. ಯಾಕೋ ಗೊತ್ತಿಲ್ಲ ಕಣೋ ನಿನ್ನ ಪ್ರತಿಯೊಂದು ಮಾತುಗಳು ನನಗೆ ಒಂದಲ್ಲಾ ಒಂದು ರೀತಿಯಲ್ಲಿ ಮುನ್ನಡೆಯುವ ಹುರುಪನ್ನೇ ನೀಡುತ್ತಿದ್ದವು. ನಾ ಬಲ್ಲೆ ನನ್ನ ಮಾತುಗಳು ನಿನಗೆ ಎಷ್ಟು ಸ್ಪೂರ್ತಿದಾಯಕವಾಗಿದ್ದವು ಮತ್ತು ಮುಖ್ಯವಾಗಿದ್ದವು ಎಂದು. ಅಪ್ಪ ಅಮ್ಮ ಇಲ್ಲದೆ ಒಬ್ಬಂಟಿಯಾಗಿದ್ದ ನಿನಗೆ ನನ್ನ ಮಾತುಗಲೇ ಜೊತೆಯಾಗಿದ್ದವು. ಎಷ್ಟೋ ಸಾರಿ ನೀನೇ ಹೇಳುವ “ ನೀನು ನನ್ನ ಅಮ್ಮ ಕಣೇ, ಹುಷಾರಿಲ್ಲ ಎನ್ನುವುದೇ ತಡ ಮಾತಿನಲ್ಲೇ ಉಪಚರಿಸುತ್ತಿದ್ದೆ, ಕೋಪ ಮಾಡಿಕೊಂಡಾಗ ಮುದ್ದು ಮಾಡಿ ಕೋಪವನ್ನು ಕರಗಿಸುತ್ತಿದೆ, ನನ್ನನ್ನು ನಿಜವಾಗಿಯು ಅರಿತುಕೊಂಡವಳು ನೀನೇ ಕಣೇ...” ಈ ಮಾತುಗಳು ನನ್ನನ್ನು ಅಟ್ಟಕ್ಕೇರಿಸುತ್ತಿದ್ದವು.
ಅದೇನೇ ಇರಲಿ ನಿಜ ಹೇಳೋ ನಿನಗೇನಾಯಿತು? ಈ ಥರಾ ಏಕೆ ಹಠಾತ್ತಾಗಿ ನನ್ನ ಮೇಲಿನ ಭಾವನೆಗಳೇ ಬದಲಾಗಿ ಹೋದವು? ಆ ಕ್ಷಣ ನಾ ಮರೆಯುವಂತಿಲ್ಲ... ನಾನೇನೋ ಸಂಭ್ರಮದ ವಿಷಯ ಹೇಳಿ ನಕ್ಕು, ಇಬ್ಬರೂ ಸೇರಿ ಸಂತೋಷ ಪಡೋಣವೆಂದು ಕಾಲ್ ಮಾಡಿದಾಗ ನಿನ್ನ ಧ್ವನಿಯಲ್ಲೇನೋ ಬದಲಾವಣೆ. ಅದೇನೋ ನಾಚಿಕೆಯೋ, ಭಯವೋ, ಅಧಿಕಾರದ ಧ್ವನಿಯೋ ನನಗಂತು ಗೊತ್ತಿಲ್ಲ. ಆ ತಕ್ಷಣ “ ದಿವ್ಯ ನನ್ನನ್ನು ಮದುವೆ ಆಗ್ತಿಯೆನೇ” ಎನ್ನುವ ಪ್ರಶ್ನೆ ನನ್ನಲ್ಲಿದ್ದ ಸಂತಸವನ್ನು ಮರೆಮಾಚಿ, ಮೌನವೇ ಆವರಿಸಿ ಬಿಟ್ಟಿತು. ಆ ಕ್ಷಣ ನನ್ನನ್ನು ನಿರ್ಭಾವುಕಳನ್ನಾಗಿ ಮಾಡಿದ್ದೆ ಕಣೋ ನೀನು. ನಿನ್ನ ಆ ಪ್ರಶ್ನೆಗೆ ಏನೆಂದು ಉತ್ತರಿಸಲಿ ಎಂಬ ತಳಮಳ. ಒಂದು ವಾರಗಳ ಪರ್ಯಂತ ನಮ್ಮಿಬ್ಬರದು ಮೌನವ್ರತ ನಡೆದಿತ್ತು. ಗೊತ್ತಿದೆಯಾ? ಮರೆಯುವವನು ನೀನಲ್ಲ ಕಣೋ, ನನಗೂ ಗೊತ್ತು. ನಮ್ಮಿಬ್ಬರ ಮೌನ ಮುರಿಯಲು ಇಬ್ಬರಲ್ಲೂ ಚಡಪಡಿಕೆ. ಆದರೆ ಈಗ ನಮ್ಮಿಬ್ಬರ ಹರಟೆಗೆ ಮಿತಿಯೇ ಇಲ್ಲ. ನನ್ನ ಮಾತುಗಳಿಗೆ ಸಾಕ್ಷಿಯಾಗಿರುವ ನಮ್ಮ ಮನೆಯ ಹಟ್ಟಿ, ದನ, ಕರುಗಳಿಗೆ ಮಾತ್ರ ಗೊತ್ತು. ನಮ್ಮ ಪ್ರೀತಿಯ ಮಾತುಗಳು, ನಾನು ನಿನ್ನ ಪ್ರೀತಿಗೆ ಸಮ್ಮತಿಸಿದ ಪರಿ. ಆ ನಿನ್ನ ಪ್ರಶ್ನೆಗೆ ಉತ್ತರಿಸಿ ಸ್ನೇಹಲೋಕದಿಂದ ಪ್ರೇಮಲೋಕಕ್ಕೆ ಅಂಬೆಗಾಲಿಟ್ಟಿದ್ದೇವೆ. ಆದರೆ ಪ್ರೇಮಿಗಳನ್ನೆಲ್ಲಾ ದೂರ ಮಾಡುತ್ತಿರುವ ಈ ಸಮಾಜದ ಜಾತಿ ಎಂಬ ಚಕ್ರವ್ಯೂಹವನ್ನು ನಾವೆಂತು ಭೇದಿಸುವೆವು? ದೂರದ ಊರುಗಳಲ್ಲಿರುವ ನಾವು ಪರಸ್ಪರ ನೋಡದೆ ಪ್ರೀತಿಯ ಲೋಕದಲ್ಲಿ ಮೈಮರೆಯುತ್ತಿದೇವಲ್ಲೋ... ಇನ್ನೂ ಎಷ್ಟು ದಿನ ನಾನೊಂದು ತೀರ, ನೀನೊಂದು ತೀರವಾಗಿರುವುದು? ನಾವಿಬ್ಬರು ಮುಖಾಮುಖಿಯಾಗುವು ಆ ದಿನವೆಲ್ಲಿದೆ? ನೀನೇ ಹೇಳಬೇಕು... ಬಂದೇ ಬರುವೆ ಎನ್ನುವ ಆಶಾಭಾವನೆ ಹುಟ್ಟಿಸಿರುವೆ ನೀನು. ಹನಿ ಜಾರಿ ಇಳೆ ಸೇರುವ ಮುನ್ನ, ಹೂ ಬಾಡಿ ಹೋಗುವ ಮುನ್ನ ಬರುವೆ ತಾನೇ? ನಿನ್ನ ಕಂಗಳಲಿ ನನ್ನ ಪ್ರತಿಬಿಂಬ ನೋಡುವ ದಿನ ಬೇಗ ಬರಲಿ...
ನಿನಗಾಗಿಯೇ ಕಾಯುತ್ತಿರುವ...
ನಿನ್ನ ಮನದರಸಿ...
No comments:
Post a Comment