Thursday, 16 February 2017

ಏನೆಂದು ಹೆಸರಿಡಲಿ...

ಸ್ನೇಹ ಎನ್ನಲೇ, ಇಲ್ಲ ಇದ ನಾ ಪ್ರೀತಿ ಎನ್ನಲೇ ಗೆಳೆಯ. ಏನೆಂದು ಉತ್ತರಿಸಲಿ? ಉತ್ತರಿಸಲಾಗದ ಪ್ರಶ್ನೆಯೊಂದು ಮನಸನ್ನು ಕೆದಕುತ್ತಲೇ ಇದೆ. ಉತ್ತರಿಸಬಲ್ಲೆ ಎನಿಸಿದರೂ ಆ ಉತ್ತರ ಏನು? ಎಂಬ ತಳಮಳ, ತವಕ ಎಲ್ಲವೂ ಇದೆ. ಒಂದೊಮ್ಮೆ ಇದು ಸ್ನೇಹ ಎಂದು ದೃಢವಾಗಿ ನಿಂತರೆ ಹಲವಾರು ಪ್ರಶ್ನೆಗಳು ದಾಳಿ ಮಾಡತೊಡಗುತ್ತವೆ. ನಾವಿಬ್ಬರು ಸ್ನೇಹ ಎಂಬ ಸೂರಿನಡಿ ಆಶ್ರಯಿತರಾದರೇ ಈ ಎಲ್ಲಾ ಭಾವನೆ, ತುಡಿತಗಳಿಗೆ ಎಡೆಯಿರುತಿತ್ತೇ? ನಿನ್ನ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ನೀನಿಲ್ಲ ಎಂಬ ಗಾಢವಾದ ಸಂಬಂಧ ಬೆಸೆದುಕೊಂಡಂತಿದೆ ನಮ್ಮಿಬ್ಬರ ನಡುವೆ. ಸ್ನೇಹ ಎನ್ನುವುದಕ್ಕಿಂತ ಮಿಗಿಲಾದ ಭಾವವೊಂದು ನಮ್ಮಿಬ್ಬರನ್ನು ಜೊತೆಸೇರಿಸಲು ಯತ್ನಿಸುತ್ತಿದೆಯಾ? ಮನಸ್ಸಿನಾಳದ ತುಮುಲಗಳಿಗೆ ಸಮಧಾನಿಸಲಾರದಷ್ಟು ದುಗುಡ ನೆಲೆಯಾಗಿದೆ. ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿರುವ ನನಗೆ, ಉತ್ತರ ನೀನಾಗುವೆಯಾ ಇನಿಯಾ? 

ಸ್ನೇಹ ಎಂಬ ನೆರಳಿನಡಿ ಪ್ರೀತಿ ಎಂಬ ಆಸರೆಯಲ್ಲಿ ನಮಗರಿವಿಲ್ಲದಂತೆಯೇ ಸಾಗುತ್ತೆದ್ದೇವೆಯೇನೋ ಎನಿಸುತಿದೆ. ಹೆಸರಿಲ್ಲದ ಬಂಧ ನಮ್ಮಿಬ್ಬರದು. ಬುದ್ಧಿಯ ಮಾತು ಕೇಳದ ಮನಸಿನ ಆಸೆಗಳು. ಹುಚ್ಚು ಆಸೆಗಳೆಂದೆನಿಸಿದರೂ ಅವುಗಳನ್ನು ಸವಿಯುವ ಅವಕಾಶಗಳಿಂದ ತಪ್ಪಿಸಿಕೊಳ್ಳಲಾರಷ್ಟು ಬಂಧಿಯಾಗಿಸಿದೆ. ನಮ್ಮೀರ್ವರ ಅಂತರ ಸದಾ ಭೇಟಿಯ ನೆಪಗಳನ್ನೇ ಹುಡುಕುತ್ತಿವೆ. ಪ್ರತಿದಿನವೂ ನೋಡುವ ಕಾತರವನ್ನು ಹೆಚ್ಚಿಸುತ್ತಲೇ ಇವೆ. ನೋಡಿದಷ್ಟೂ ಪ್ರತಿದಿನದ ಭೇಟಿಯೂ ಹೊಸತನದಿಂದಲೇ ಕೂಡಿರುತ್ತಿತ್ತು. ಆ ಹೊಸತನಕ್ಕಾಗಿಯೇ ಮನಸ್ಸು ಹಗಲು ರಾತ್ರಿ ಹಂಬಲಿಸುತ್ತಿದೆ. ನಿನ್ನೆ ತಾನೇ ಭೇಟಿಯಾಗಿ, ಮಾತನಾಡಿ, ಹರಟೆ ಹೊಡೆದು ವಿರಮಿಸಿದ್ದರೂ ಇಂದಿಗೆ ನಿನ್ನೆ ಎನ್ನುವುದು ಅದೆಷ್ಟೋ ದಿನಗಳ ಗಜಾಂತರವೆನಿಸುತಿದೆ ಮನಸಿಗೆ. ನೀನೆಲ್ಲೋ ದೂರದಲ್ಲಿದ್ದರೂ ಸನಿಹವಿದ್ದಷ್ಟೇ ಅನುಭವ. ಪ್ರತಿಕ್ಷಣ ನನ್ನ ಮನಸನ್ನು ಕೆಣಕುವ ನಿನ್ನ ಮುಖ, ನಗು, ಮಾತುಗಳೆಲ್ಲವೂ ಮತ್ತೆ ಮತ್ತೆ ನೋಡುವ ಕೇಳುವ ಆಸೆಗಳನ್ನು ಮನೆ ಮಾಡಿಸಿದೆ. ನಿನಗೋ ನನ್ನ ಮಾತು ಸಂದೇಶಗಳಿಲ್ಲದೆ ಕ್ಷಣಗಳೇ ಮುಂದೂಡುವುದಿಲ್ಲ. ಮಾತಲ್ಲೇ ಮೈಮರೆತು ಹೋದರೂ ಬೇಜಾರಿಲ್ಲ ನಿಂಗೆ. ಸದಾ ನನ್ನ ಸನಿಹವನ್ನೇ ಬಯಸುವ ನಿನ್ನ, ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಲಾಗದ ಅತೃಪ್ತಿ ನನ್ನಲ್ಲಿ. ನಿನ್ನ ಮನಸ್ಸು ನಾ ನಿನ್ನ ಪ್ರೇಮಿ ಎಂದು ದೃಢ ನಿರ್ಧಾರ ಹೊಂದಿದ್ದರೂ, ನನ್ನ ಮನಸ್ಸು ನಿನ್ನಾಸೆ ಕನಸುಗಳಿಗೆ ಅಚಲ ನಿರ್ಧಾರವ ತಿಳಿಸಲು ಹಿಂಜರಿಯುತ್ತಿದೆ. ನೀನು ಧೈರ್ಯದಿಂದ ನಿನ್ನೆಲ್ಲಾ ಆಕಾಂಕ್ಷೆಗಳನ್ನು ಪ್ರೇಮ ನಿವೇದನೆಯನ್ನು ನನ್ನ ಮುಂದಿಟ್ಟಿರುವೆ. ಆದರೆ ನಾ ನಿನ್ನ ಆ ಭಾವನೆಗಳಿಗೆಲ್ಲಾ ತಣ್ಣೀರೆರಚಿ ಸ್ನೇಹ ಎಂಬ ಮುಖವಾಡವನ್ನೇ ಧರಿಸಿದ್ದೇನೆ. ಆದರೆ ಆ ಸ್ನೇಹದ ಮುಖವಾಡ ಕಳಚಿ ಬೀಳುವ ಸಮಯ ಬಹಳ ಸನಿಹದಲ್ಲಿದೆಯೋ ಎನುತಿದೆ ಮನಸು. 

ನಾನು ನಿನ್ನ ಆಸೆಗಳನ್ನೆಲ್ಲಾ ಆ ಕ್ಷಣದಲ್ಲಿ ಚಿವುಟಿ ಹಾಕಿದರೂ ನಿನ್ನ ಮನಸು ಇಂದಿಗೂ ನನ್ನ ಮೇಲಿಟ್ಟಿರುವ ಅಂದಿನ ಅದೇ ಪ್ರೀತಿಗೆ ನಾ ಚಿರಋಣಿ. ಸ್ನೇಹ ಎಂಬ ಮುಖವಾಡ ಹೊತ್ತಿರುವ ನನ್ನೊಳಗಿನ ಭಾವನೆಗಳನ್ನು ಬಿಚ್ಚಿಟ್ಟು ನಿನ್ನೊಡಲ ಸೇರುವ ಅಭಿಲಾಷೆಯ ಹೊರಚೆಲ್ಲುವ ಆ ದಿನ ಎಲ್ಲಿದೆಯೋ ನಾ ತಿಳಿದಿಲ್ಲ. ಪ್ರತಿದಿನವೂ ನಾವಾಡುವ ಮಾತುಗಳು, ಹರಟೆಗಳು, ದಿನವಿಡೀ ರವಾನೆಯಾಗುವ ಮೊಬೈಲ್ ಸಂದೇಶಗಳು, ಎರಡು ಹೃದಯಗಳಂತರವನ್ನು ಸಂಕುಚಿಸಿದೆ ಎನ್ನುವುದಂತು ಸತ್ಯ. ನಾ ಸೋಲಲಾರೆ ಎನ್ನುವ ನನ್ನೀ ಅಹಂ, ಮನಸ್ಸಲ್ಲಿ ಚಿಗುರಿರುವ ಆಸೆ, ಪ್ರೀತಿಯನ್ನೆಲ್ಲಾ ಬಿಚ್ಚಿಡಲು ಬಿಡದೆ, ಬಚ್ಚಿಡಲು ಪ್ರೇರೇಪಿಸುತ್ತಿದೆ. 

ಇತ್ತೀಚೆಗೆ ನಾವಾಡುವ ಮಾತುಗಳೆಷ್ಟೋ ಲೆಕ್ಕವಿಲ್ಲ. ಅರ್ಥವಿಲ್ಲದ ಮುದ್ದು, ಪೆದ್ದು ಮಾತುಗಳೇ ಅಧಿಕ. ಅದರಲ್ಲೂ ಬಿಟ್ಟಿರಲಾರದಷ್ಟೂ ಅನ್ಯೋನ್ಯತೆ. ದೂರವಿದ್ದಷ್ಟೂ ನೋಡುವ, ಮುಖಾಮುಖಿಯಾಗುವ ತವಕ. ಜೊತೆಗಿದ್ದ ಕ್ಷಣಗಳು ವಿದಾಯ ಹೇಳಲು ಏನೋ ಒಂಥರಾ ಬೇಸರ. ಒಂದು ಕ್ಷಣ ಭೇಟಿಯಾದರೆ ಸಾಕು ಎಂದು ಹಂಬಲಿಸುವ ಮನಗಳಿಗೆ ನಾವೆದುರಾಗ ಸಿಗುವ ಸಂತೋಷಕ್ಕಿಂತ ವಿರಮಿಸುವಾಗ ಸಿಗುವ ದುಃಖವೇ ಹೆಚ್ಚು. ನಾ ನೋವು ಎಂದರೆ, ನಿನ್ನೆದೆಯಲ್ಲಿ ತುಡಿತ, ಕಣ್ಣಲ್ಲಿ ನೀರು. 

ಇತ್ತೀಚೆಗೆ ನಿನ್ನ ಕಣ್ಣ ನೋಟವನ್ನು ಎದುರಿಸಲಾರದ್ದಾಗಿದ್ದೇನೆ. ಮೊದ ಮೊದಲು ನಿನ್ನಲ್ಲಿದ್ದ, ನನ್ನ ಕಣ್ಣಲ್ಲಿ ನಿನ್ನ ದೃಷ್ಟಿಯಿಡುವ ಭಯ ಈಗ ನನ್ನನ್ನಾವರಿಸಿದೆ. ನಿನ್ನ ಕಣ್ಣಲ್ಲಿ ಕಣ್ಣನಿಟ್ಟು ನೋಡುವ ಧೈರ್ಯ ನನ್ನಲಿಲ್ಲ. ನಿನ್ನ ಕಣ್ಣಲ್ಲಿರುವ ಪ್ರೀತಿ, ನನ್ನ ಕಣ್ಣಲ್ಲಿರುವ ನಿನ್ನ ಮೇಲಿನ ಪ್ರೀತಿಯ ಇನ್ನೆಲ್ಲಿ ತುಳುಕಿಸಿ ಬಿಡುವುದೋ ಎನ್ನುವ ಭಯ ಕಾಡಿದೆ. ಆದರೂ ನಾ ನಿನ್ನ ನೋಡದೆ ಇರಲಾರೆನು. ನಿನ್ನೆಲ್ಲಾ ಹಾವಭಾವಗಳನ್ನು ಕದ್ದು ನೋಡುವ ಆಸೆ ಹೆಚ್ಚಾಗಿದೆ. ಬುದ್ಧಿ, ಮನಸ್ಸು ಎಲ್ಲವೂ ನೀನೇ ಬೇಕೆನ್ನುತ್ತಿದೆ.
ಅಂದು ನಾ ನಿನ್ನ ಮುಂದೆ ಸೋಲದೇ ಇದ್ದರೂ, ಇಂದು ನಿನ್ನ ಕಾಳಜಿ, ಪ್ರೀತಿಗೆ ನನ್ನ ಮನ ಸೋತು ಹೋಗಿದೆ ಕಣೋ. ಇನ್ನು ಬಚ್ಚಿಡಲಾರೆ ನನ್ನೆದೆಯ ಪ್ರೀತಿಯನು, ಒಮ್ಮೆ ಹೇಳಿಬಿಡಲೇ ನನ್ನೆಲ್ಲಾ ಆಸೆಗಳನ್ನು, ನನಗಾಗಿ ತುಡಿಯುವ ಮನಸನ್ನು ಇನ್ನಷ್ಟು ಕಾಯಿಸಲಾರೆ. ನಿನ್ನ ಮುಂದೆ ಮತ್ತೊಮ್ಮೆ ಸೋತು, ನಿನ್ನ ಪ್ರೀತಿಗೆ ಒಡತಿಯಾಗಿ ಮೆರೆಯುವ ಕನಸಾ ನನಸಾಗಿಸುವೆಯಾ? ಆಕಾಶದೆತ್ತರಕ್ಕೆ ಕೂಗಿ ಹೇಳುವ ಆಸೆಯಾಗಿದೆ. ನನ್ನೆಲ್ಲಾ ನಿರ್ಧಾರಗಳಿಗೆ ಒಡೆಯನಾಗಿ ನೀ ಬರುವೆಯಾ? ಸೋತು ಗೆದ್ದಿರುವ ಅನುಭವವ ನೀ ತರುವೆಯಾ? 

ನನಗರಿವಿಲ್ಲದಂತೆಯೇ ನಿನ್ನ ಪ್ರೀತಿಯಲ್ಲಿ ಬಂಧಿಯಾಗಿಹೆನು ನಾ. ಅದು ತಿಳಿದರೂ ನೀ ಮೌನವಾಗಿರುವುದಾ ನಾ ಅರಿತೆನೋ ಗೆಳಯ. ನಿನ್ನ ಕಣ್ಣ ಮುಚ್ಚಾಲೆ ಆಟವ ಬಯಲಿಗೆಳೆವ ಕಾತುರದಲ್ಲಿ ನಾನಿರುವೆ. ಹೆಸರಿಲ್ಲದ ಈ ಚಂದ ನಮ್ಮ ಅನುಬಂಧಕ್ಕೆ ಹೊಸದೊಂದು ಹೆಸರಿಡುವ ಆಸೆ ಹುಟ್ಟಿದೆ. ನಿನ್ನಾಸೆಗಳನ್ನು ಈಡೇರಿಸಲು ತುಡಿಯುತಿದೆ ನನ್ನೀ ಮನಸ್ಸು. ಸ್ನೇಹಕ್ಕೆ ಪರದೆ ಎಳೆದು, ಪ್ರೀತಿಯ ಪುಟ ತೆರಯಲು ಬಯಸಿ, ನೀನಿತ್ತ ಮುತ್ತಿನ ಬೇಡಿಕೆಯ ಪೂರೈಸಲು ಕಾದಿರುವೆ ಮನಸೇ...
                       

No comments:

Post a Comment