ಹನಿಯುದುರೋ ಮೋಡದಂತೆ...
ನಿಜ. ಮೊದಲ ಪ್ರೀತಿ ಮೋಡದೊಳಗೆ ಮರೆಯಾದ ಸೂರ್ಯನಂತೆ. ಸೂರ್ಯ ಮರೆಯಾಗಿ ನೆರಳು ಆವರಿಸುತ್ತಿದ್ದಂತೆ, ಮೋಡವನ್ನು ಸರಿಸಿಕೊಂಡು ಸೂರ್ಯ ಮತ್ತೆ ಪ್ರಖರವಾಗಿ ಉರಿಯಲಾರಂಭಿಸುತ್ತಿದ್ದ. ಅದೇ ರೀತಿ ಪ್ರತಿಯೊಬ್ಬ ಹುಡುಗ ಹುಡುಗಿಯರು ಹೇಳುವುದು ಮೊದಲ ಪ್ರೀತಿಯನ್ನು ಮರೆತು ಬಿಡುವುದು ಅಸಾಧ್ಯದ ಮಾತು. ಈ ಪ್ರಪಂಚದಲ್ಲಿ ಮೊದಲ ಪ್ರೀತಿಯ ನೆನಪುಗಳನ್ನು ಏದೆಯೊಳಗೆ ಮೂಟೆಕಟ್ಟಿಟ್ಟು, ಬಿಚ್ಚಿಡಲು ಆಗದೆ ಇರುವವರು ಸಾವಿರಾರು. ಮೊದ ಮೊದಲು ಮತ್ತೊಂದು ಮನಸ್ಸಿಗಾಗಿ, ನಮ್ಮ ಪುಟ್ಟ ಮನಸ್ಸಿನ ಪ್ರೀತಿಯ ಕವಲುಗಳನ್ನು ಬಿಚ್ಚಿಟ್ಟುಕೊಂಡ, ಆ ಸವಿ ಸವಿ ನೆನಪುಗಳು ಸಾವಿರ ಕಾಲಕ್ಕೂ ಮರೆಯಲಾರದ ನೆನಪು. ಬಿಟ್ಟು ಬಿಟ್ಟು ಹನಿಯುದುರಿಸುವ ಕಾರ್ಮೋಡದಂತೆ. ಬೇಡ ಬೇಡವೆಂದರೂ ಪದೇಪದೇ ಕಾಡುತ್ತಿರುತ್ತವೆ. ಆದರೆ ಈ ಎಲ್ಲಾ ಭಾವನೆಗಳು, ಮೊದಲ ಪ್ರೀತಿ ಕೈಗೆಟುಕದೆ ಹೋದರೆ ಮಾತ್ರವೇ, ಪ್ರಥಮ ಪ್ರೇಮದ ನೋವು, ನಲಿವು ತಿಳಿಯಲು ಸಾಧ್ಯ.
ಪ್ರಥಮ ಪ್ರೀತಿ ಜೊತೆಯಾಗೆದೆ ಇರಲು ಕಾರಣ ಬೇರೆ ಬೇರೆಯಾದರೂ ಅದರ ಹಿಂದಿನ ವೇದನೆ ಒಂದೇ. ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ಸರಿ ತೋರದೆ, ಅಲ್ಲಿ ಪ್ರೇಮಿಗಳನ್ನು ಬೇರ್ಪಡಿಸುವ ವೈರಿಗಳು ಅಪ್ಪ ಅಮ್ಮ. ಇದು ಒಂದಾದರೆ, ಮತ್ತೊಂದೆಡೆ ಹುಡುಗ ಹುಡುಗಿಯರ ಮನಸ್ಸುಗಳ ನಡುವಿನ ಬಿರುಕು, ಅವರಿಗವರೇ ನಂತರ ವೈರಿಗಳು. ಇನ್ನೊಂದೆಡೆ ಜಾತಿ ಅಡ್ಡ ಬಂದುಬಿಡುವುದು. ಇದೆಂಥಾ ವಿಪರ್ಯಾಸ.
ಆದರೆ ನಮ್ಮಿಬ್ಬರ ನಡುವಿನ ಅಂತರಕ್ಕೆ ಕಾರಣ ಏನೆಂದು ತಿಳಿಯಲು ನಾನು ಈ ನಿಮಿಷದವೆರೆಗೂ ಅಸಮರ್ಥಳು. ಯಾವ ಕ್ಷಣದಲ್ಲಿ ನಮ್ಮಿಬ್ಬರ ಪ್ರೀತಿ ವಿನಿಮಯಕ್ಕೆ ಪೂರ್ಣ ವಿರಾಮ ಬಿತ್ತೋ ನಾನರಿಯೆ.
ಮೇಘಗಳ ಸಮ್ಮಿಲನಕೆ ಅರುಣರಾಗ ಮಿಡಿದ ಘಳಿಗೆ ನಮ್ಮಿಬ್ಬರ ಮನದಿಳೆಯಲ್ಲಿ ಪ್ರೇಮವರ್ಷಧಾರೆಯ ಸ್ಪರ್ಶವಾಗಿತ್ತು. ಆ ಮುಂಜಾನೆ ಸೂರ್ಯನಿಂದಲೇ ಪ್ರೇಮದಾವರೆಯ ದಳಗಳು ಚಿಗುರೊಡೆದಿದ್ದವು. ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲೇ ನನ್ನೆದೆಯಲ್ಲಿ ಪ್ರೇಮಾಂಕುರವಾಗಿತ್ತು. ನಿನಗದು ಮೊದಲ ಪ್ರೀತಿ ಅಲ್ಲದೇ ಇರಬಹುದು. ಆದರೆ ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವನು ನೀನೇ ಮೊದಲಿಗ.
ನಮ್ಮಿಬ್ಬರ ಭೇಟಿ ಒಡನಾಟವು ಹತ್ತರ ಹರೆಯಕ್ಕೆ ಕಾಲಿಟ್ಟಿದ್ದರೂ ಪ್ರೀತಿಯ ಸ್ವಾತಿ ಮಳೆ ಸುರಿದೇ ಇರಲಿಲ್ಲ. ಅದ್ಯಾವ ಘಳಿಗೆಯಲ್ಲಿ ಸ್ವಾತಿಹನಿಯೊಂದು ಚಿಪ್ಪೊಳಗೆ ಬಿತ್ತೋ, ಹನಿಯನ್ನು ಚಿಪ್ಪು ಬಚ್ಚಿಟ್ಟುಕೊಂಡ ಕ್ಷಣವೇ ಪ್ರೀತಿಯ ಮುತ್ತಿನ ಜನನವಾಗಿತ್ತು. ನಮ್ಮಿಬ್ಬರ ನಡುವಿದ್ದ ಸಲಿಗೆಯ ಮರೆಮಾಚಿ ನಾಚಿಕೆ ಮನೆಮಾಡಿತ್ತು. ಪ್ರಥಮದ ಮಾತುಗಳಿಗೆ ತಡವರಿಸುತ್ತಿದ್ದ ತುಟಿಗಳು, ಅಂತರವನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುತ್ತಾ ಬಂದವು. ಅಂತರ ಸರಿಯುತ್ತಿದ್ದಂತೆ ಮನಸ್ಸಲ್ಲಿ ಸಾವಿರಾರು ಆಸೆ, ಕನಸುಗಳ ಗೋಪುರವೇ ಸೃಸ್ಟಿಯಾಗಿತ್ತು. ತಡವರಿಸುತ್ತಿದ್ದ ತುಟಿಗಳಿಗೆ ನಂತರದಲ್ಲಿ ಮಾತುಗಳನ್ನು ಮಿತಗೊಳಿಸಲು ಗೊತ್ತಿರಲೇ ಇಲ್ಲ. ವಿರಾಮವಿಲ್ಲದೇ ಸಾಗುತ್ತಿದ್ದ ಮಾತು ಕೊನೆಗೊಂದು ದಿನ ಮಾತಿಗೂ ಸೇರಿಸಿ ಪ್ರೀತಿಗೂ ಪೂರ್ಣವಿರಾಮವಿಟ್ಟುಕೊಳ್ಳುತ್ತೇ ಎನ್ನುವ ಸತ್ಯದ ಅರಿವು ನನಗಾಗಲೇ ಇಲ್ಲ. ಮಿಂಚು ಹೊಡೆದಂತೆ, ಸುಳಿವಿಲ್ಲದಂತೆ ಘಟಿಸಿ ಹೋಗಿತ್ತು.
ನಮಗರಿವಿಲ್ಲದಂತೆ ದಿನದಲ್ಲಿ ಅದೆಷ್ಟು ಸಂದೇಶಗಳು ರವಾನೆಯಾಗುತ್ತಿದ್ದವೋ, ಅದೆಷ್ಟು ಹೊತ್ತು ಮಾತಿನ ಹರಟೆ ನಡೆಯುತ್ತಿತ್ತೋ ಗೊತ್ತಿಲ್ಲ. ಮೌನದೊಳಗೆ ಸೇರದೆಯೇ ಮಾತನಾಡುತ್ತಲೇ ನನ್ನೊಳಗೆ ಒಂದಾಗುವ ನೀನು, ಹೊತ್ತು ತರುವ ಆ ಪ್ರೀತಿಯ ಕೆನೆಗಾಗಿ ಕೃಷ್ಣನಂತೆ ತವಕಿಸುತ್ತಿದ್ದೆ. ಆಗೆಲ್ಲಾ ವಿಶಾಲವಾದ ಈ ನನ್ನ ಹೃದಯದಲ್ಲಿ ನಿನ್ನದೇ ಸಿಂಹಪಾಲು.
ದೂರ ದೂರವಿದ್ದರೂ ಮಾತು, ಗಲಾಟೆ, ಹುಸಿ ಮುನಿಸು, ಚರ್ಚೆ, ಮತ್ತದೇ ಪ್ರೀತಿಯ ಮಹಾಪೂರಗಳಿಗೆಲ್ಲಾ ಎಡೆಯಿತ್ತು. ಆದರೆ ಈಗ ಅದೆಲ್ಲಾ ನನ್ನ ಕಣ್ಣೆದುರೆ ಮತ್ತೊಬ್ಬರ ಪಾಲಾಗಿದೆ. ಪ್ರೀತಿಯ ಒಂದು ವರ್ಷದಲ್ಲಿ ಕೇವಲ ಮೂರು ಭಾರಿಯ ನಮ್ಮಿಬ್ಬರ ಮುಖಾಮುಖಿ ಭೇಟಿ ಇಷ್ಟು ಗಾಢತೆಯನ್ನು ಸೃಷ್ಟಿಸಿದ್ದು ನಿಜಕ್ಕೂ ವಿಸ್ಮಯ. ಆ ಮೂರು ದಿನಗಳನ್ನು ಕೇವಲ ಎನ್ನುವ ಹಾಗಿಲ್ಲ. ಯಾಕೆಂದರೆ ಆ ಮೂರು ದಿನಗಳಲ್ಲಿ ನಾವಿಬ್ಬರು ಮಾತನಾಡಲು ಪಟ್ಟ ಪಾಡು ಮರೆಯಲಾರದ ನೆನಪು. ಆ ಮೂರು ಭೇಟಿ ನನ್ನ, ನಿನ್ನ ಮನೆಯಲ್ಲಿಯೇ ಆಗಿದ್ದ ಕಾರಣ ಮನೆಯವರ ಕಣ್ಣು ತಪ್ಪಿಸಿ ಮಾತನಾಡಲು ಹರಸಾಹಸ ಪಟ್ಟಿದ್ದೆವು, ನಮ್ಮಿಬ್ಬರ ಮೊದಲ ಭೇಟಿಯಲ್ಲಿ ನೀ ನೀಡಿದ ಪ್ರೇಮದ ಕಾಣಿಕೆ ತಾಳಿಭಾಗ್ಯವನ್ನೇ ನೀಡಿದಂತ್ತಿತ್ತು. ಆ ಮೂರು ದಿನಗಳು ನಮ್ಮಿಬ್ಬರ ಪ್ರೀತಿಗೆ ಪುಷ್ಠಿಯನ್ನು ಒದಗಿಸಿದ್ದವು, ನಿನಗಿದು ನೆನಪಿದೆಯೋ ನಾನರಿಯೆ.
ನೀ ಹರಿಸಿದ ಪ್ರೀತಿಯ ಧಾರೆ, ನನ್ನೆದೆಯಲ್ಲಿ ಅದೆಷ್ಟು ಹಸಿರನ್ನು ಚಿಗುರಿಸಿದ್ದವು, ಮದುವೆ ಎಂಬ ದೊಡ್ಡ ಕನಸನ್ನೇ ಸೃಷ್ಟಿಸಿ, ಬೆಳೆಸಿ ಪೋಷಣೆ ಮಾಡುತ್ತಾ ಬಂದಿತ್ತು. ನಾ ನಿನ್ನ ಮಡದಿಯಾಗಿ ಕನಸುಗಳ ಕವಲುಗಳನ್ನೇ ಹೆಣೆದಿದ್ದೆ. ಪ್ರೀತಿಗದುವೇ ಬೇರು. ಮದುವೆ ಎಂಬ ಬಂಧನ ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುತ್ತದೆ, ಆ ಮದುವೆ, ನಾ ನಿನ್ನ ಮಡದಿ ಎಂಬ ಕನಸುಗಳನ್ನೇ ಹೆಣೆಯುತ್ತಾ ಪ್ರೀತಿಯನ್ನು ಪೋಷಿಸಿದವಳು ನಾನು. ಆದರೆ ನಿನಗದು ತಿಳಿಯಲೇ ಇಲ್ಲ. ನೀ ಹರಿಸಿದ ಪ್ರೀತಿಯ ಧಾರೆ ನನ್ನೆದೆಯಲ್ಲಿ ಬತ್ತಿಹೋದರೂ, ಮಳೆ ಸುರಿದಿದೆ ಎನ್ನುವುದಕ್ಕೆ ಕುರುಹು ಈಗಲೂ ಇದೆ.
ಖಾಲಿಯಾದ ಬರಡು ಭೂಮಿಯಲ್ಲೂ ಈ ಪ್ರೀತಿ ಹರುಷದ ಬೀಜ ಬಿತ್ತುವುದಂತೆ, ಹಸಿರ ಹರಿಸುವುದಂತೆ, ಆದರೆ ಅದ್ಯಾಕೋ ನನ್ನ ಜೀವನದಲ್ಲಿ ಸುಳ್ಳಾಗಿ ಹೋಯ್ತು, ಮರುಭೂಮಿಯಲ್ಲಿ ನೀರ ಚಿಲುಮೆಯಂತೆ ಬಂದ ಪ್ರೀತಿ, ಕೊನೆಗೆ ಬರಡಾಗಿ ಹೋಯಿತು.
ಬಿಡುವಿಲ್ಲದೆ ಮಾತನಾಡುತ್ತಿದ್ದವರಿಗೆ ಅಂತರ ನಿರಂತರವಾಗಿ, ಮಾತು ಮೌನವಾಗಿ ಹೋಯ್ತು. ಸುರಿಯುವ ಮಳೆಹನಿಗಾಗಿ ಭೂಮಿ ಕಾದಂತೆ, ಸೇರುವ ನದಿಗಳಿಗಾಗಿ ಸಾಗರ ತವಕಿಸಿದಂತೆ, ಬಿಡುವಿಲ್ಲದೆ ಹರಟುವ ದಿನ ಮತ್ತೆ ಬರುತ್ತವೆ ಎಂದು ಕಾಯುತ್ತಿದ್ದ ನನಗೆ, ನಿನ್ನ ಪ್ರೀತಿ ಮರೀಚಿಕೆಯಾಗಿಯೇ ಉಳಿಯಿತು. ಆ ದಿನಗಳಲ್ಲಿ ತಲೆದಿಂಬುಗಳೊರೆಸಿದ ನನ್ನ ಕಣ್ಣ ಹನಿಗಳೆಷ್ಟೋ, ಕಣ್ಣೆವೆ ಮುಚ್ಚದ ರಾತ್ರಿಗಳೆಷ್ಟೋ, ಮೈಮರೆತು ದುಃಖಿಸಿದ ಕ್ಷಣಗಳೆಷ್ಟೋ ಅಗಣಿತ. ಅರಳುವ ಹೂವಿಗೂ ಕೂಡ ದುಂಬಿಯ ಜೊತೆ ನಂಟಿದೆಯಂತೆ, ಆದರೆ ಅದೆಷ್ಟು ಹೊತ್ತು? ಹೂವು ಬಾಡಿ ಮುದುಡುವವರೆಗೆ, ಅಥವಾ ಹೂವಲ್ಲಿರೋ ಮಕರಂದ ಕರಗುವವರೆಗೆ, ಅದೇ ರೀತಿ ನನ್ನ ಬಾಳು.
ನಿನಗದು ಸಂತಸದ ದಿನಗಳು. ಅಪ್ಪ ಅಮ್ಮ ಸೇರಿ ಚಂದದೊಂದು ಹುಡುಗಿಯನ್ನು ಹುಡುಕಿ ಮದುವೆ ನಿಶ್ಚಿತಾರ್ಥವನ್ನು ಮಾಡಿಬಿಟ್ಟರು. ಆದರೆ ನನಗದು ಹೃದಯ ಕರಗುವ ವಿಷಯ. ಅತ್ತು ಅತ್ತು ಕಣ್ಣೀರಿಟ್ಟು, ಕಣ್ಣೀರನ್ನು ಮರೆಮಾಚಿ, ಹೃದಯವ ಬಿಗಿಹಿಡಿದು ಅತ್ತರೂ, ನೀನಿನ್ನು ನನ್ನವನಲ್ಲ, ಎನ್ನುವ ಸತ್ಯ ಅರಗಿಸಿಕೊಳ್ಳುವ ಹೊತ್ತಿಗೆ ಕಣ್ಣೀರು ಬತ್ತಿಹೋಗಿತ್ತು. ನನ್ನ ಸ್ಥಾನದಲ್ಲಿ ಮತ್ತೊಬ್ಬಳನ್ನು ಕನಸಿನಲ್ಲಿಯೂ ಸಹಿಸದ ನನಗೆ ನೈಜತೆಯಲ್ಲಿ ಒಪ್ಪಿಕೊಳ್ಳುವುದು ಅನಿವಾರ್ಯ. ಅತ್ತು ರಂಪಾಟ ಮಾಡಿ ನನ್ನವನನ್ನು ಅಲ್ಲಲ್ಲ ನಿನ್ನನ್ನು ಪಡೆದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲವೆನಿಸಿತ್ತು.
ನನ್ನ ಕಣ್ಣೆದುರೇ ಮತ್ತೊಂದು ಹುಡುಗಿಗೆ ತಾಳಿ ಕಟ್ಟುವ ಘಳಿಗೆ ನನ್ನೆದೆಯ ನೆನಪುಗಳಿಗೆ ಕಾವು ಕೊಟ್ಟಂತಾಗಿತ್ತು. ಆ ಸಪ್ತಪದಿ ತುಳಿದು ನಿನ್ನೆದೆಯ ಅರಸಿಯಾಗಬೇಕಿದ್ದ ನಾನು, ಅವಳೋಂದಿಗಿನ ನಿನ್ನ ಸಪ್ತಪದಿಗೆ ಸಾಕ್ಷಿಯಾಗಿ ನಿಂತಿದ್ದೆ. ಉಕ್ಕಿ ಬರುತ್ತಿದ್ದ ಅಳೂವಿಗೂ, ಜಿನುಗುತ್ತಿದ್ದ ಕಣ್ಣೀರಿಗೂ ಹೊರಬರುವ ಸ್ವಾತಂತ್ರಯವೇ ಇರಲಿಲ್ಲ. ಬಿಗಿದಿಟ್ಟ ಕಣ್ಣೀರಿಗೂ ಬೇಸರವಾಗಿತ್ತು.
ನಿಜ ತಾನೇ, ಆ ದಿನಗಳನ್ನು, ನೆನಪುಗಳನ್ನು ಮರೆತುಬಿಡಲು ಸಾಧ್ಯನಾ...? ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲೂ ನಾನು ಸೋತು ಹೋದೆ. ನಿನ್ನೊಂದಿಗಿನ ಎಲ್ಲಾ ನೆನಪುಗಳನ್ನು ಮೂಟೆ ಕಟ್ಟಿ ಬೀಗ ಜಡಿದು ಸಾಗರದ ಪಾತಾಳಕ್ಕೆಸೆದರೂ ಅವುಗಳು ನನ್ನನ್ನು ಕಾಡುವುದನ್ನು ಬಿಡಲೇ ಇಲ್ಲ. ಯಾವುದೂ ಬೇಡವೆಂದು ಕ್ಷಣಹೊತ್ತು ಮರೆತರೆ, ಕಪ್ಪೇರಿದ ಮೋಡ ಮತ್ತೆ ಹನಿಯುದುರಿಸಿ, ನೆನಪುಗಳನ್ನು ಕೆದಕತೊಡಗುತ್ತವೆ. ನಾ ಭೂಮಿ ಮೇಲಿರುವವರೆಗೂ, ಕಪ್ಪೇರಿದ ಮೋಡ, ಅರುಣರಾಗಕೆ ನವಿಲು ಗರಿಬಿಚ್ಚಿ ನಲಿಯುವುದು ಸಹಜವಾದಷ್ಟು...ನನ್ನೆದೆಯ ನೆನಪುಗಳು ಮೊಳಕೆಯೊಡೆಯುದು ಅಷ್ಟೇ ಸಹಜ...
No comments:
Post a Comment